ಬೆಂಗಳೂರು: ಆಗಲೇ ಬೆಂಗಳೂರು ಚಿತ್ರೋತ್ಸವದ ಎರಡು ದಿನ ಕಳೆದವು. ಉಳಿದಿರುವುದು ಐದೇ ದಿನಗಳು. ಅಷ್ಟರಲ್ಲಿ ಸ್ಮರಣೀಯ ಎನ್ನಿಸುವಂಥ ಕೆಲವು ಚಿತ್ರಗಳನ್ನಾದರೂ ನಮ್ಮ ನೆನಪಿನ ಬುಟ್ಟಿಗೆ ಸೇರಿಸಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಹೆಚ್ಚು ಹೋಮ್ ವರ್ಕ್ ಮಾಡಬೇಕು. ಸಿನಿಮಾಯೆ ಈ ದಿಸೆಯಲ್ಲಿ ಸಹಾಯ ಮಾಡಲು ಒಂದಿಷ್ಟು ಚಿತ್ರಗಳ ಪಟ್ಟಿ ನೀಡಿದೆ.

ಹಾಗೆಯೇ. ನಿತ್ಯವೂ ಒಂದಿಷ್ಟು ಒಳ್ಳೆಯ ಸಿನಿಮಾಗಳು ಇದ್ದೇ ಇರುತ್ತವೆ. ಲಕ್ಕಿ ಡಿಪ್ ರೀತಿ. ಕೆಲವೊಮ್ಮೆ ಲಕ್ಕಿ ಡಿಪ್. ಇನ್ನು ಕೆಲವೊಮ್ಮೆ ಹಾಗೆಯೇ ಅದೃಷ್ಟ ಒಲಿಯುತ್ತದೆ. ಆದರೆ ಲೆಕ್ಕಾಚಾರ ಹಾಕಿ ಹೊರಟರೆ ಹೆಚ್ಚು ಲಾಭ. ಏಷ್ಯನ್ ಸಿನಿಮಾದಲ್ಲಿ ನೋಡಲೇಬೇಕಾದ ಎರಡು ಸಿನಿಮಾಗಳಿವೆ. ಕನ್ನಡದಲ್ಲೂ ಒಳ್ಳೆಯ ಸಿನಿಮಾಗಳಿವೆ. ಚಿತ್ರಭಾರತಿಯಲ್ಲಿ ಪ್ರಯೋಗಾತ್ಮಕ ಚಿತ್ರಗಳಿದ್ದರೆ, ವಿಶ್ವ ಸಿನಿಮಾದ ಪೆಟ್ಟಿಗೆಯಲ್ಲಿ ಐದಾರು ನೋಡಲೇಬೇಕಾದ ಚಿತ್ರಗಳಿವೆ.
BIFFes: ಬೆಂಗಳೂರು ಚಿತ್ರೋತ್ಸವ: ರವಿವಾರ ಮುಗೀತು; ಸೋಮವಾರಕ್ಕೆ ಸಿನಿಮಾಯೆ ಶಿಫಾರಸು !

ವಿಶ್ವ ಸಿನಿಮಾಗಳನ್ನು ಮೊದಲು ನೋಡೋಣ. ಇದೊಂದು ಸಮ್ಮಿಶ್ರ ಸಿನಿಚೀಲ (ಮಿಕ್ಸ್ ಫಿಲ್ಮ್ ಬ್ಯಾಗ್) ಭಾವನಾತ್ಮಕದಿಂದ ಹಿಡಿದು ಸಮಕಾಲೀನ ಸಮಸ್ಯೆಗಳವರೆಗೂ ಸಿನಿಮಾಗಳಿವೆ. ಒಂದೆರಡು ಪ್ರಶಸ್ತಿ ಪಡೆದು ಒಂದು ಬಗೆಯ ಶಾಂತ ರೀತಿಯಲ್ಲಿ ಸಾಗುವ ನದಿಯ ರೀತಿಯ ಚಿತ್ರ ಬೇಕೆಂದರೆ ಹಾಂಕಾಂಗ್ ನ ಆಲ್ ಶಲ್ ಬಿ ವೆಲ್. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಅತ್ಯುತ್ತಮ ಮೂರನೇ ಚಿತ್ರ ಪ್ರಶಸ್ತಿಯೂ ಬಂದಿದೆ ಬರ್ಲಿನ್ ನಲ್ಲಿ. ಮತ್ತೊಂದು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯೂ ಬಂದಿದೆ. ನಷ್ಟವೇನೂ ಇಲ್ಲ. ಕಥೆ ಇಷ್ಟವಾದೀತು, ಇಲ್ಲವೇ ನಟಿಯ ನಟನೆ ಇಷ್ಟವಾದೀತು.


ಫ್ರಾನ್ಸ್ ನ ಶೆಫರ್ಡ್ ಸಿನಿಮಾ ತಪ್ಪಿಸಬೇಡಿ. ಚೆನ್ನಾಗಿದೆ. ಖುಷಿ ಕೊಡುತ್ತೆ. ಯುವಜನರಂತೂ ನೋಡಲೇಬೇಕಾದ ಸಿನಿಮಾ. ಅಭಿರುಚಿಗಳೇ ಇಲ್ಲದ ಬದುಕು ನಡೆಸುವವರಿಗೂ ಅಭಿರುಚಿಯ ಹಿನ್ನೆಲೆಯಲ್ಲಿ ಬದುಕನ್ನು ಕಂಡುಕೊಳ್ಳುವುದು- ಎಷ್ಟು ವ್ಯತ್ಯಾಸವಿದೆ ಎಂದು ಈ ಸಿನಿಮಾ ತೋರಿಸಬಲ್ಲದು.
ಸ್ವಲ್ಪ ಸಾಹಸಮಯ ಚಿತ್ರ. ಗೂಳಿಕಾಳಗ ಇತ್ಯಾದಿ ಇಷ್ಟವಿದ್ದರೆ ಆಫ್ಟರ್ ನೂನ್ಸ್ ಆಫ್ ಸಾಲಿಟ್ಯೂಡ್ ಸಿನಿಮಾ ಆಯ್ಕೆ ಮಾಡಿಕೊಳ್ಳಬಹುದು. ಸ್ಪೇನ್ ನ ಚಿತ್ರ. ಉರುಗ್ವೆಯ ಮತ್ತೊಂದು ಸಿನಿಮಾ ಜೀವನ ಪ್ರೀತಿ ಕುರಿತಾದದ್ದು. ಡಿಡ್ ನಾಟ್ ಯು ಲೆಟ್ ಮಿ ಗೊ ಚಿತ್ರ. ನೋಡಬಹುದಾದ ಚಿತ್ರ.
ಐರ್ಲ್ಯಾಂಡ್ ನ ಫೋರ್ ಮದರ್ಸ್ ರಿಪೀಟ್ ಷೋ. ನೋಡಿ. ಬಹಳ ವಿಭಿನ್ನವಾಗಿದೆ ಕಥಾವಸ್ತು. ನಿರ್ವಹಿಸಿರುವ ರೀತಿಗೂ ಮೆಚ್ಚುಗೆ ಇದೆ. ಜೆಕ್ ರಿಪಬ್ಲಿಕ್ ನಿಂದ ವಿಭಿನ್ನವಾದ ಸಿನಿಮಾಗಳು ಬರುತ್ತಿರುವುದು ನಿಜ. ಅದಕ್ಕೆ ಸಾಕ್ಷಿ ಎನ್ನುವಂತೆ ನಿನ್ನೆಯೂ ಒಂದು ಸಿನಿಮಾ ಇತ್ತು ಮಂಗಳವಾರವೂ ಒಂದಿದೆ. ಅವರ್ ಲವ್ಲಿ ಪಿಗ್ ಸ್ಲಾಟರ್ ಚಿತ್ರ ನೋಡಬಹುದು.

ಪ್ಯಾಲೆಸ್ತೀನ್ ಸಮಸ್ಯೆ, ನಿರಾಶ್ರಿತರ ಸಮಸ್ಯೆ ಮತ್ತಿತರ ಸಮಕಾಲೀನ ವಿಷಯಗಳ ಬಗ್ಗೆ ಆಸಕ್ತಿ ಇದ್ದರೆ ಟು ಅ ಲ್ಯಾಂಡ್ ಅನ್ ನೋನ್ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಥೆಯನ್ನು ನಿರ್ವಹಿಸಿದ ಬಗೆ ಚೆನ್ನಾಗಿದೆ. ಚಿತ್ರೋತ್ಸವವೊಂದರಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಸಿಂಗಾಪೂರ್ ನ ಆನ್ ಅನ್ ಫಿನಿಶ್ಡ್ ಫಿಲ್ಮ್ ಸಹ ಒಳ್ಳೆಯ ಚಿತ್ರದ ಪಟ್ಟಿಯಲ್ಲಿದೆ.

ಕನ್ನಡ ಸಿನಿಮಾ
ಈಗಾಗಲೇ ಪ್ರಶಸ್ತಿ ಗಳಿಸಿರುವ ಲಚ್ಚಿ ಮರು ಪ್ರದರ್ಶನವಿದೆ. ಕೆರೆಬೇಟೆ, ಅರಾಟದದ್ದೂ ಮರು ಪ್ರದರ್ಶನ. ದಡ ಸೇರದ ದೋನಿ, ಪಾರಜ್ಯ, ಬೆಳ್ಳಿ ಹೂ ಪ್ರಶಸ್ತಿಗೆ ಸೆಣಸುತ್ತಿವೆ. ಇದರೊಂದಿಗೆ ಗಾಯಕ ಸಿ. ಅಶ್ವಥ್ ರ ಕುರಿತಾದ ಸಿರಿಕಠದ ಒಡೆಯ ಚಿತ್ರವಿದೆ ಆಯ್ಕೆಗೆ.

ಏಷ್ಯನ್ ಸಿನಿಮಾ
ಈ ಪೆಟ್ಟಿಗೆಯಲ್ಲಿ ಇರಾನ್ ನ ದಿ ಕಂಟ್ರೋಲಬಲ್ ಕ್ರೌಡ್ ಕಥಾವಸ್ತು ವಿಭಿನ್ನವಾಗಿದೆ. ನೋಡಲು ಮರೆಯಬೇಡಿ. ಎಮೋಷನಲ್ ಚಿತ್ರ. ಇರಾನಿನ ನಿರ್ದೇಶಕರು ಚೆನ್ನಾಗಿ ನಿಭಾಯಿಸಬಲ್ಲರು. ಉಳಿದಂತೆ ಥೈಲ್ಯಾಂಡ್ ನ ದಿ ಪ್ಯಾರಡೈಸ್ ಅಫ್ ಥ್ರಾನ್ಸ್ ಚಿತ್ರ ಚೆನ್ನಾಗಿದೆ. ಬಾಂಗ್ಲಾದೇಶದ ಚಿತ್ರ ಸಾಬಾ, ದಕ್ಷಿಣ ಕೊರಿಯಾದ ಸಿಸ್ಟರ್ ಯುಜೊಂಗೊ ಚಿತ್ರವೂ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳು.

ಆಸ್ಕರ್ ನಾಮ ನಿರ್ದೇಶನ
ಆಸ್ಕರ್ ಗೆ ನಾಮ ನಿರ್ದೇಶನಗೊಂಡ ಚಿತ್ರ ನೋಡುವ ಮನಸ್ಸಿದ್ದರೆ ನೇಪಾಳದ ಚಿತ್ರ ಶಂಬಾಲ ನೋಡಬಹುದು. ಇತ್ತೀಚೆಗಷ್ಟೇ ಪ್ರಭಾಸ್,ಅಮಿತಾಬ್ ಬಚ್ಚನ್ ನಟನೆಯ ಕಲ್ಕಿ ಸಿನಿಮಾ ಬಂದಿರಲಿಲ್ಲವೇ? ಅದರಲ್ಲಿ ಬರುವ ಶಂಬಾಲವೇ ಈ ಚಿತ್ರದ ಕಥಾವಸ್ತು.
ಚಿತ್ರ ಭಾರತಿ
ಚಿತ್ರ ಭಾರತಿಯಲ್ಲಿ ಭಾರತೀಯ ಉಪ ಭಾಷೆ ಬಜ್ಜಿಕಾದ ಆಜೂರು ಚಿತ್ರವಿದ್ದರೆ, ಹಿಂದಿಯ ಸ್ವಾಹಾ, ಅಸ್ಸಾಮಿನ ರದೊರ್ ಪಕಿ, ತಮಿಳಿನ ಅಮರಾನ್, ಹಿಂದಿಯ ಹೂಮನ್ಸ್ ಇನ್ ದಿ ಲೂಪ್ ಚಿತ್ರಗಳಿವೆ. ಮೊದಲನೆಯದ್ದು ಬಿಟ್ಟು ಉಳಿದೆಲ್ಲವೂ ಪ್ರಶಸ್ತಿಗೆ ಸೆಣಸುತ್ತಿರುವ ಚಿತ್ರಗಳು.