- ಸಮರ್ಥ
ಒಂದೆರಡು ತಿಂಗಳಿಂದ ಕನ್ನಡ ಚಿತ್ರರಂಗ ಕೋಮಲ ಕೆಂಪಿನ ಬಣ್ಣಕ್ಕೆ ತಿರುಗುತ್ತಿದೆ. ಯಾವಾಗಲೂ ಬೀಭತ್ಸ ಎನಿಸುವ ರಕ್ತ ಕೆಂಪಿನಲ್ಲಿ ಹೊರಳಾಡುತ್ತಿದ್ದ ಚಿತ್ರರಂಗದಲ್ಲೀಗ ಕೋಮಲವೆನಿಸುವ, ಖುಷಿ ಎನಿಸುವ, ನವಿರೆನಿಸುವಂತ ಕೆಂಪು ಗುಲಾಬಿ ಅರಳುತ್ತಿದೆ.
ಸಾಮಾನ್ಯವಾಗಿ ಈ ಚೆಂಗುಲಾಬಿ, ಕೆಂಪು ಗುಲಾಬಿಗಳನ್ನೆಲ್ಲ ಹೇಳುವುದು ಪ್ರೀತಿಯ ಕುರಿತಾಗಿಯೇ. ಕೆಂಪು ಬಾವುಟಕ್ಕೆ ರಾಜಕೀಯ ಬಣ್ಣದ ಕೆಂಪು ಇರಬಹುದು, ಆದರೆ ಕೆಂಪು ಗುಲಾಬಿಗೆ ಇರುವುದು ಕೇವಲ ಪ್ರೀತಿಯ ನರುಗೆಂಪು.
ಒಂದೂವರೆ ತಿಂಗಳಲ್ಲಿ ಈ ಯಶಸ್ಸಿನ ರೇಖೆಯನ್ನು ಮುಟ್ಟಿರುವ ಹಾಗೂ ಮುಟ್ಟಲು ಹತ್ತಿರದಲ್ಲಿರುವ ಚಿತ್ರಗಳಲ್ಲಿ ಸಿಂಹಪಾಲು ಪ್ರೀತಿ, ಹಾಸ್ಯ ಮುಂತಾದ ಬದುಕಿಗೆ ಬೇಕೇ ಬೇಕಾದ ಭಾವನೆಗಳದ್ದು. ಕೆಂಪು ಗುಲಾಬಿ ಎನ್ನೋಣ. ಅವುಗಳದ್ದೇ ಸಾಮ್ರಾಜ್ಯ. ಇದು ಲಾಂಗುಗಳ ಸಮಾಧಿ ಮೇಲೆ ಲವ್ ನ ಗುಲಾಬಿಗಳು ಅರಳಿದಂತೆ ಅನಿಸುತ್ತಿದೆ.
Rishab Shetty:ರಿಷಭ್ ಶೆಟ್ಟರ ಹೊಸ ಅಡುಗೆ ಮತ್ತು ನವ ವೇಷ
ಯಶಸ್ವಿ ಚಿತ್ರ ಭೀಮದ ಬೆನ್ನಿಗೇ ಅರಳಿದ್ದು ನಟ ಗಣೇಶರ ಕೃಷ್ಣಂ ಪ್ರಣಯ ಸಖಿ ಎಂಬ ಕೆಂಪು ಗುಲಾಬಿ . ಸಂಗೀತ ನೆಲೆಯಲ್ಲೇ ಅರಳಿದ ಚಿತ್ರವನ್ನು ಇದೇ ಪ್ರೇಕ್ಷಕರು ಗೆಲ್ಲಿಸಿದರು. ದುಬಾಯಿ ಸೇರಿದಂತೆ ಬೇರೆಡೆ ಎಲ್ಲ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತು. ಗಣೇಶರೂ ಸ್ವಲ್ಪ ಕೇಂದ್ರ ಬಿಂದುವಿಗೆ ಬಂದರು.
ಅದರ ಬೆನ್ನಿಗೇ ಪ್ರಮೋದ್ ಶೆಟ್ಟಿ ಅವರ ಲಾಫಿಂಗ್ ಬುದ್ಧ ತೆರೆ ಕಂಡಿತು. ಮೊದ ಮೊದಲು ಸ್ವಲ್ಪ ನಿಧಾನ ಎನಿಸಿದರೂ ಸಿನಿಮಾದ ಬಗೆಗಿನ ನಿಜವಾದ ವೀಕ್ಷಕರ ಅಭಿಪ್ರಾಯ ಹೊರ ಬೀಳತೊಡಗಿದಾಗ ಚಿಗುರಿಕೊಂಡಿತು. ಇದನ್ನೂ ಯಶಸ್ಸಿನ ರೇಖೆಯತ್ತ ತಳ್ಳಿರುವುದು ಇದೇ ಪ್ರೇಕ್ಷಕರೇ.
ವೆನಿಸ್ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರಿಗೆ ಪುರಸ್ಕಾರ
ಇನ್ನು ಸೆ. 5 ರಂದು ಗಣೇಶ ಹಬ್ಬದ ಎರಡು ದಿನ ಮುಂಚೆ ಬಿಡುಗಡೆಕಂಡ ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ನಿರ್ಮಿಸಿದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವೂ ಯಶಸ್ಸಿನ ರೇಖೆಯತ್ತ ಮುನ್ನುಗ್ಗಿದೆ. ಸಿನಿಮಾ ಮಂದಿರಗಳು ಭರ್ತಿಯಾಗ ತೊಡಗಿವೆ. ಇದೂ ಸಹ ಸಾಧ್ಯವಾದದ್ದು ಇದೇ ಪ್ರೇಕ್ಷಕರಿಂದಲೇ.
ಈ ಇದೇ ಪ್ರೇಕ್ಷಕರಿಂದಲೇ ಎಂದು ಮೂರು ಬಾರಿ ಉಲ್ಲೇಖಿಸಿದ್ದಕ್ಕೆ ಕಾರಣವಿದೆ. ನಮ್ಮ ಕೆಲವು ಚಿತ್ರ ನಿರ್ಮಾಪಕರು, ನಿರ್ದೇಶಕರು ಯಾವುದೋ ಸೀಮೆ ದಾಟದ, ಸೀಮೆಗೂ ಇಲ್ಲದ ಚಿತ್ರವನ್ನು ನಿರ್ಮಿಸಿಕೊಂಡು ʼಕನ್ನಡ ಚಿತ್ರಗಳಿಗೆ ಜನ ಬರೋದಿಲ್ಲರಿ. ಬನ್ರೀ, ಕನ್ನಡ ಚಿತ್ರವನ್ನು ಬೆಳೆಸ್ರೀʼ ಎಂದು ತಾವೇ ದುಡ್ಡು ಕೊಟ್ಟು ಸಾಕುತ್ತಿರುವವರಂತೆ ಕರೆಯುವ ಧಿಮಾಕಿನ ಮಾತನ್ನು ಧಿಕ್ಕರಿಸುವವರೂ ಇದೇ ಪ್ರೇಕ್ಷಕರು. ಇಂಥ ಧಿಮಾಕಿನ ಮಾತನ್ನು ಬದಿಗೆ ಸರಿದು ಈಗ ಮೂರು ಸಿನಿಮಾಗಳನ್ನು ಗೆಲ್ಲಿಸುತ್ತಿರುವವರೂ ಇದೇ ಪ್ರೇಕ್ಷಕರಲ್ಲವೇ. ಅಂದರೆ ಚಿತ್ರವನ್ನು ತಿರಸ್ಕರಿಸುವ ಹಾಗೂ ಪುರಸ್ಕರಿಸುವ ಸ್ವಾತಂತ್ರ್ಯವಷ್ಟೇ ಅಲ್ಲ, ಪ್ರಬುದ್ಧತೆಯೂ ಇದೆ ಇದೇ ಪ್ರೇಕ್ಷಕರಿಗೆ.
ಇದೇ ಹಿನ್ನೆಲೆಯಲ್ಲಿ ಹೇಳಿದ್ದು, ಲಾಂಗುಗಳು ತಣ್ಣಗೆ ಮಲಗಿರಲಿ. ಅವುಗಳ ಸಮಾಧಿ ಮೇಲೆ ಕೆಂಪು ಗುಲಾಬಿ ಅರಳಲಿ. ಸುಮಾರು ಎರಡು ದಶಕಗಳಿಂದ ಎಷ್ಟು ಲಾಂಗುಗಳು ಝಳಪಿಸಿದವು, ಎಷ್ಟು ರಕ್ತದ ಕೋಡಿ ಹರಿಯಿತು. ತಮಾಷೆಯಲ್ಲ. ಎರಡು ದಶಕಗಳಲ್ಲಿ ಅಷ್ಟು ಮಳೆಯೇ ಸುರಿಯಲಿಲ್ಲ !
ಅಮೆರಿಕಾ ಅಮೆರಿಕ: ಭಾಗ ಎರಡರಲ್ಲಿ ನಾಗತಿಹಳ್ಳಿಯವರ ಕಥೆ ಎಳೆ ಏನು?
ಹಾಗೆ ನೋಡುವುದಾದರೆ ಕನ್ನಡ ಚಿತ್ರರಂಗ ಸದಾ ಗುಲಾಬಿಯ ತೋಟ. ಇಲ್ಲಿ ಮಚ್ಚು-ಲಾಂಗುಗಳ ಕಾರ್ಖಾನೆ ತೆರೆದದ್ದು ಇಲ್ಲವೇ ಇಲ್ಲ. ಚಿತ್ರರಂಗದ ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ ತಿಳಿಯುತ್ತದೆ. ಅಂಥದ್ದರಲ್ಲಿ ಮಾರುಕಟ್ಟೆಯಲ್ಲಿ ಏನು ಓಡುತ್ತೋ ಅದನ್ನೇ ಉತ್ಪಾದಿಸಬೇಕು ಎಂಬ ಈ ಕಾರ್ಖಾನೆಗಳ ಮನೋಧರ್ಮದಲ್ಲಿ ವರ್ತಿಸಿದ್ದರ ಪರಿಣಾಮ ಏನಾಗಿದೆ ಎಂದು ತಿಳಿದೇ ಇದೆ.
ಸೂಪರ್ ಸೀನಿಯರ್, ಸೀನಿಯರ್, ಜೂನಿಯರ್, ಸೆಮಿ ಜೂನಿಯರ್, ಮರಿ ಜೂನಿಯರ್ ..ಎಲ್ಲರೂ ಮುಗಿಬಿದ್ದವರಂತೆ ಲಾಂಗುಗಳನ್ನು ಹಿಡಿದರು. ಕೂಗಿದರು, ಕೊಚ್ಚಿದರು. ಎಲ್ಲ ಮಾಡಿ ನೈಜ ಸಿನಿಮಾ ಮತ್ತು ಅದರ ಅನುಭವವನ್ನೇ ಮಣ್ಣು ಹಾಕಿ ಮುಚ್ಚಿದರು. ʼಇಂಥ ಸಿನಿಮಾ ದುಡ್ಡು ಕೊಟ್ಟು ನೋಡಬೇಕೇ? ಎಷ್ಟೊಂದು ಹಿಂಸೆʼ ಎಂದು ದೂರ ಸರಿದು ನಿಂತು ಕೋಪಿಸಿಕೊಳ್ಳುವಷ್ಟು ಪ್ರೇಕ್ಷಕರ ಕಣ್ಣನ್ನು ಕೆಂಪಗಾಗಿಸಲಾಯಿತು. ಇದರ ಮಧ್ಯೆ ಆಗಾಗ್ಗೆ ಸಣ್ಣ ಮಿಂಚುಗಳು ಬಂದಿಲ್ಲವೆಂದಲ್ಲ. ಆದರೆ ಕವಿದ ಕಾರ್ಮೋಡದ ಕರಾಳತೆಗೆ ಈ ಸಣ್ಣ ಮಿಂಚು ಏನೂ ಸಾಕಾಗಲಿಲ್ಲ. ಜನರು ಮುಷ್ಕರ ಹೂಡಿದವರಂತೆ ಕುಳಿತರು. ಅದರ ಪರಿಣಾಮ ಗೊತ್ತೇ ಇದೆ.
ಹೀರೋಗಳ ಸಿನಿಮಾ ಥಿಯೇಟರುಗಳಲ್ಲಿ ಗೆದ್ದು ಹಣ ಮಾಡುವುದಕ್ಕಿಂತ ಮಾರುಕಟ್ಟೆಯ ಬೇರೆ ಮೂಲಗಳಿಂದ ಹಣ ಮಾಡಿ ಗೆದ್ದಂತೆ ಬೀಗಿದವು. ಉಳಿದವೆಲ್ಲ ಮಲಗಿದವು.
Jugari Cross: ಈ ಕ್ರಾಸೇ ಎಷ್ಟೊಂದು ನಿಗೂಢ! ಎಷ್ಟೊಂದು ತಿರುವು?
ಏನೋ, ಪ್ರೇಕ್ಷಕ ಮತ್ತೆ ಸಿನಿಮಾ ಮಂದಿರದತ್ತ ಹೊರಳತೊಡಗಿದ್ದಾನೆ. ಇದು ಸರಿ ಹೊತ್ತು. ಒಳ್ಳೆಯ ಗುಲಾಬಿಯ ಬೆಳೆಯಲು ಸಕಾಲ. ಅದಕ್ಕೇ ಮತ್ತೊಂದಿಷ್ಟು ಒಳ್ಳೆಯ ಸಿನಿಮಾಗಳು ಬರಲಿ. ಪ್ರೀತಿಗೆ ಇದ್ದ ಅಲ್ಪ ವಿರಾಮ ತೆಗೆದು ಲಾಂಗುಗಳ ಚರಿತ್ರೆಗೆ ಪೂರ್ಣ ವಿರಾಮ ಹಾಕೋಣ. ಗುಲಾಬಿಗಳ ಅರಳಿಸೋಣ, ಒಳ್ಳೆಯ ಚಿತ್ರಗಳನ್ನು ಗೆಲ್ಲಿಸೋಣ. ಯಾಕೆಂದರೆ ಈ ಚಳವಳಿ ಪ್ರೇಕ್ಷಕರಿಂದಲೇ ಆರಂಭವಾಗಬೇಕು, ಚಿತ್ರ ಜಗತ್ತಿನವರಿಂದಲ್ಲ.
ಯಾವಾಗಲೂ ಅಷ್ಟೇ, ಜಗತ್ತು ನಾವು ಸೋತದ್ದನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ, ಸತ್ತದ್ದನ್ನಲ್ಲ !