Friday, April 25, 2025
spot_img
More

    Latest Posts

    Jugari Cross: ಈ ಕ್ರಾಸೇ ಎಷ್ಟೊಂದು ನಿಗೂಢ! ಎಷ್ಟೊಂದು ತಿರುವು?

    ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್‌ ಸಿನಿಮಾ ಆಗುತ್ತಿದೆ ಎನ್ನುವುದು ಸುದ್ದಿ ಹಳತು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಈಗ ತಿರುವಿಗೆ ಬಂದು ನಿಂತಿರುವವರು ಹೊಸಬರು ಎಂಬುದು ಸುದ್ದಿಯಾಗಲಿಕ್ಕೆ ಮತ್ತೊಂದು ಕಾರಣವೆನ್ನಿ. ಈ ಕ್ರಾಸ್‌ ನ ರೋಚಕತೆಯೇ ಆಸಕ್ತಿಕರವಾದುದು. ಒಂದು ಸಸ್ಪೆನ್ಸ್‌ ಸಿನಿಮಾದಲ್ಲಿ ಇರಬಹುದಾದ ರೋಚಕತೆ ಈ ತಿರುವಿನಲ್ಲೇ ಇದೆ !

    ಅಂದ ಹಾಗೆ ಜುಗಾರಿ ಕ್ರಾಸ್‌ ನಾಟಕವಾಗಿದೆ. ಸಮುದಾಯ ತಂಡ ಸೇರಿದಂತೆ ಹಲವು ತಂಡಗಳು ಪ್ರಯತ್ನಿಸಿವೆ. ಸಿನಿಮಾಕ್ಕೆ ಬರುವ ಪ್ರಯತ್ನಗಳೂ ನಡೆದು ಕೆಲ ವರ್ಷಗಳೇ ಕಳೆದಿವೆ. ಕೆಲವೊಮ್ಮೆ ರಂಗಭೂಮಿಯಿಂದ ದೊಡ್ಡ ಪರದೆಗೆ ಬರಬೇಕೆಂದು ಅವರಿವರಲ್ಲಿ ಶಿಫಾರಸು ಮಾಡಿಸಿಕೊಂಡು ಬಂದು ಸಣ್ಣ ಪಾತ್ರ ಮಾಡಿ ಕಾಣೆಯಾದವರು ಬಹಳಷ್ಟು ಮಂದಿ ಇದ್ದಾರೆ. ಇನ್ನು ಕೆಲವರು ದೊಡ್ಡ ಪರದೆಗೆ ಬರಲು ಪ್ರಯತ್ನಿಸಿ ಸಣ್ಣದೊಂದು ಅವಕಾಶ ಸಿಕ್ಕು, ಇನ್ನೇನು ದೊಡ್ಡ ಬ್ಯಾನರ್‌ ನಲ್ಲಿ (ನಟ-ನಟಿಯರಿಗೆ ಹೆಚ್ಚಾಗಿ ಇಂಥದೊಂದು ಭಾವನೆ ಇದೆ. ದೊಡ್ಡ ಬ್ಯಾನರ್‌ ಅಥವಾ ದೊಡ್ಡ ಸಂಸ್ಥೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೆ ಜೀವನವೇ ಒಂದು ಹಂತಕ್ಕೆ ಬಂದಿತು ಎಂಬ ಭಾವ. ಇದರಲ್ಲಿ ಸಂಪೂರ್ಣ ಸತ್ಯವಿಲ್ಲ.

    ಆದರೂ ಈ ಭಾವನೆ ಇಲ್ಲವೆಂದಲ್ಲ, ಇರುವುದೂ ತಪ್ಪಲ್ಲ) ಅವಕಾಶ ಸಿಕ್ಕಿತು, ಶೂಟಿಂಗ್‌ ಶುರುವಾಯಿತು ಎನ್ನುವಾಗ ಯಾವುದೋ, ಯಾರದ್ದೋ ಕಾರಣಕ್ಕೆ ಸಿನಿಮಾ ʼಶೈತ್ಯಾಗಾರʼ ದಲ್ಲಿ ಉಳಿದು ಬಿಡುತ್ತದೆ. ತಂಗಳು ಪೆಟ್ಟಿಗೆ ಎನ್ನುವುದು ಸೂಕ್ತವಲ್ಲ ಎನಿಸಿತು. ಈ ಶೈತ್ಯಾಗಾರ ಪದವೇ ಸೂಕ್ತ. ಯಾಕೆಂದರೆ ಕೊಳೆಯದಂತೆ ಇಡುವ ಸಂಗತಿ. ಒಂದೆಡೆ ಐಡಿಯಾವೂ ಕೊಳೆಯಬಾರದು, ಇನ್ನೊಂದೆಡೆ ಪ್ರಯತ್ನವೂ ಪ್ರಗತಿಯಲ್ಲಿದೆ ಎನ್ನಬೇಕಲ್ಲ ! ಹೀಗೆಯೇ ಜುಗಾರಿ ಕ್ರಾಸ್‌ ಹಲವು ಬಾರಿ ಸುದ್ದಿಯಾಗಿತ್ತು.

    Jugari Cross: ಪೂಚಂತೇ ಅವರ ಲೋಕದ ಆರನೇ ಸಿನಿಮಾ ಇದು !

    ಜುಗಾರಿ ಕ್ರಾಸ್‌ ನ ಕಥೆ ಎಲ್ಲರಿಗೂ ತಿಳಿದೇ ಇದೆ. ರೋಚಕವಾದ ಕಥೆ. ತೇಜಸ್ವಿಯವರನ್ನು ಓದಿದವರೆಲ್ಲ ಇದನ್ನು ಓದದೇ ಇರಲಾರರು. ತೇಜಸ್ವಿಯವರಿಗೆ ಎಷ್ಟು ಅಭಿಮಾನಿಗಳು ಇದ್ದಾರೋ ಅದಕ್ಕಿಂತ ಹೆಚ್ಚು ಅಭಿಮಾನಿಗಳು ಈ ಕೃತಿಗಿದ್ದಾರೆ. ಬ್ಲಡ್‌ ಡೈಮಂಡ್‌, ಕೆಜಿಎಫ್‌ ಮೊನ್ನೆ ಬಂದ ತಂಗಲನ್‌ ಇಂಥ ಸಿನಿಮಾಗಳು ಕಥಾವಸ್ತುವಿನ ಯಾವುದೋ ಒಂದು ಕೋನದಲ್ಲಿ ಸ್ವಲ್ಪ ಹೋಲಿಕೆ ಕಾಣಬಹುದೇನೋ. ಈ ಕೋನವೂ ಬಹಳ ಸಣ್ಣದು. ಲಘುವೂ ಅಲ್ಲ, ಲಂಬವೂ ಅಲ್ಲ. ಇವೆರಡದ್ದಕ್ಕಿಂತ ಇನ್ನೂ ಚಿಕ್ಕದೆನ್ನಿ.

    ಒಂದೇ ಸಾಲಿನಲ್ಲಿ ಹೇಳಿ ಮುಗಿಸುವುದಾದರೆ ರೈತ ದಂಪತಿಯ ಕಥೆ. ಅರಣ್ಯ ಸಂಪತ್ತಿನ ಲೂಟಿಯನ್ನು ವಿವರಿಸುತ್ತಾ, ಜನರು ಪ್ರಕೃತಿಯನ್ನುತಮ್ಮದೇ ಸಂಪತ್ತೆಂದು ತಿಳಿದು ದೋಚುವ ಲಾಲಸಿತನವನ್ನುತೆರೆದಿಡಲು ಬಯಸುವಂಥದ್ದೇ ಜುಗಾರಿ ಕ್ರಾಸ್.‌ ಆದರೆ ಇದನ್ನು ಸಿನಿಮಾಕ್ಕೆ ಒಗ್ಗಿಸುವ ಪ್ರಯತ್ನದ ರೋಚಕೆತೆಯೇ ಬೇರೆ. ಪ್ರಯತ್ನ ಕೈಬಿಟ್ಟು ತಿರುವಿನಲ್ಲಿ ಕಾಣೆಯಾದವರೇ ಹೆಚ್ಚು.

    ನಿರ್ದೇಶಕ ಕೋಡ್ಲು ರಾಮಕೃಷ್ಣ ಬಹಳ ವಿಭಿನ್ನವಾದ ಕಥಾವಸ್ತುಗಳನ್ನು ಕೊಟ್ಟಂತ ನಿರ್ದೇಶಕ. ಉದ್ಭವವೇ ಒಂದು ಉದಾಹರಣೆ. ಅವರೂ ಈ ಜುಗಾರಿ ಕ್ರಾಸ್ ನ ಬೆನ್ನು ಹತ್ತಿದ್ದರು. ನಟ ಶಿವರಾಜಕುಮಾರ್‌, ಸೌಂದರ್ಯ ಮತ್ತಿತರರ ತಾರಾಗಣದಲ್ಲಿ ಚಿತ್ರ ಮಾಡುವ ಸಿದ್ಧತೆಯೂ ನಡೆದಿತ್ತು. ಸಿನಿಮಾಕ್ಕೆ ದುಡ್ಡು ಹಾಕಲು ನಾರಾಯಣ್‌ ಸಹ ಸಿದ್ಧರಾಗಿದ್ದರು. ನಟರಿಗೆ, ತಾಂತ್ರಿಕ ವರ್ಗದವರಿಗೂ ಮುಂಗಡವೂ ನೀಡಿ ದಿನಾಂಕಗಳನ್ನು ಕಾದರಿಸಿಲಾಗಿತ್ತು. ಒಂದು ಮಾಹಿತಿ ಪ್ರಕಾರ ಸುಮಾರು 25 ಲಕ್ಷ ರೂ. ವರೆಗೂ ವೆಚ್ಚವಾಗಿತ್ತಂತೆ. ಎಲ್ಲವೂ ಸರಿ ಇದೆ, ಇನ್ನೇನು ಆರಂಭವಾಗಬೇಕು ಎನ್ನುವಾಗ ಇದೇ ತಿರುವಿನಲ್ಲಿ ಕಾಣೆಯಾದರು.

    ಹೀಗೇ ಮತ್ತೊಬ್ಬ ನಿರ್ದೇಶಕ ಟಿ.ಎಸ್.‌ ನಾಗಾಭರಣ ಅವರೂ ಇದೇ ತಿರುವಿಗೆ ಬಂದು ನಿಂತರು. ಅಗಾಧವಾಗಿ ಎಲ್ಲವನ್ನೂ ಕಂಡು ಹೀಗೇ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಅವರೂ ಕಾಣೆಯಾದರು ! ಚಿರಂಜೀವಿ ಸರ್ಜಾ ಅವರನ್ನು ಪಾತ್ರಕ್ಕೆ ಬಳಸುವ ಇರಾದೆ ಇತ್ತು ನಾಗಾಭರಣರಿಗೆ. ಚಿತ್ರದ ಮುಹೂರ್ತವೂ ನಡೆದಿತ್ತು. ಯಾಕೋ ಏನೋ? ಸಿನಿಮಾದ ಕೆಲಸ ಸಾಗಲಿಲ್ಲ. ಎಂ. ಚಂದ್ರು ಇದಕ್ಕೆ ನಿರ್ಮಾಪಕರಾಗಿದ್ದರು. ನಾಗಾಭರಣರು ಈ ಚಿತ್ರ ಪ್ರಯತ್ನದಿಂದ ಕಾಣೆಯಾದರು !

    ಇದರ ಮಧ್ಯೆಯೂ ಹಲವರು ಸಿನಿಮಾ ಹಕ್ಕುಗಳಿಗೆ ಕಾದಿರಿಸಿಕೊಂಡಿದ್ದ ಕಥೆಯೂ ಇದೆ. ಆದರೆ ಸಿನಿಮಾವಾಗಿ ಪರದೆಯ ಮೇಲೆ ಇನ್ನೂ ಬಂದಿಲ್ಲ. ಈಗ ಕರಾವಳಿ ಸಿನಿಮಾದಲ್ಲಿ ತೊಡಗಿರುವ ಗುರುರಾಜ್‌ ಗಾಣಿಗ ಹೊಸ ಪ್ರಯತ್ನಕ್ಕೆ ಹಾಕಿದ್ದಾರೆ. ಖಂಡಿತಾ, ಜುಗಾರಿ ಕ್ರಾಸ್‌ ನಲ್ಲಿನ ರೋಚಕತೆ ದೊಡ್ಡ ಪರದೆಯ ಮೇಲೆ ಬರಬೇಕು. ಪ್ರೇಕ್ಷಕರೂ ಅದನ್ನು ಕಂಡು ಖುಷಿ ಪಡಬೇಕು, ಸಂಭ್ರಮಿಸಬೇಕು. ಅದಕ್ಕೇ ಜುಗಾರಿ ಕ್ರಾಸ್‌ ಸಿನಿಮಾಕ್ಕೆ ಎಂಬ ಶೀರ್ಷಿಕೆ ಕಂಡಾಗಲೆಲ್ಲ ಜನರು ಸಂಭ್ರಮಿಸುತ್ತಾರೆ. ಹಾಗಾಗಿಯೇ ಜುಗಾರಿ ಕ್ರಾಸ್‌ ಮತ್ತೆ ಸುದ್ದಿಯಲ್ಲಿದೆ.

    ಅಮೆರಿಕಾ ಅಮೆರಿಕ: ಭಾಗ ಎರಡರಲ್ಲಿ ನಾಗತಿಹಳ್ಳಿಯವರ ಕಥೆ ಎಳೆ ಏನು?

    ನಮ್ಮ ನಿರ್ದೇಶಕರಿಗೆ, ಚಿತ್ರ ನಿರ್ಮಾಪಕರಿಗೆ ಮತ್ತೊಂದು ಸಮಸ್ಯೆ ಇದೆ. ಈ ರೋಚಕತೆ ಎಂದ ಕೂಡಲೇ ನಾಯಕ ನಟನಿಂದ ಎಷ್ಟು ಉದ್ದದ ಲಾಂಗ್‌ ಹಿಡಿಸುವುದು, ಹೇಗೆ ಕೊಚ್ಚಿ ಹಾಕಿಸುವುದು ಎಂದೆಲ್ಲ ಬೀಭತ್ಸ ಐಡಿಯಾಗಳನ್ನು ಯೋಚಿಸುತ್ತಾರೆ. ಹಿಂದೆಲ್ಲ ಬಂದ ಸಿನಿಮಾಗಳಿಗಿಂತ ಎಷ್ಟು ಪಟ್ಟು ಬೀಭತ್ಸವಾಗಿರಬೇಕು ಎಂದು ಯೋಚಿಸುವುದೂ ಇದೆ. ಆ ರೋಚಕತೆ ಖಂಡಿತಾ ಕನ್ನಡ ಪ್ರೇಕ್ಷಕರಿಗೆ ಬೇಕಿಲ್ಲ. ಇದೊಂದು ಮಾತನ್ನು ಗುರುರಾಜ್‌ ನೆನಪಿಟ್ಟುಕೊಂಡರೆ ಸಿನಿಮಾ ಗೆಲ್ಲಬಹುದು.

    ಕೊನೆಯದೊಂದು ಮಾತು ಕೇಳಿ. ತೇಜಸ್ವಿಯವರ ಕೃತಿ ಆಧರಿಸಿದ ಐದು ಸಿನಿಮಾಗಳಲ್ಲಿ ಒಂದೂ ಸೋತಿಲ್ಲ. ಈ ಸೋಲು ಎನ್ನುವುದು ಜನರಿಗೆ ಇಷ್ಟವಾಗುವ ನೆಲೆಯಲ್ಲಿ. ಮೊದಲ ಮೂರು ಸಿನಿಮಾಗಳು ಜನರಿಗೆ ಇಷ್ಟವಾದವು, ದೊಡ್ಡ ದೊಡ್ಡ ಪುರಸ್ಕಾರಗಳನ್ನು ಪಡೆದವು.

    ವೆನಿಸ್‌ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್‌ ಕಾಸರವಳ್ಳಿಯವರಿಗೆ ಪುರಸ್ಕಾರ

    ಇನ್ನೆರಡೂ ಸಹ ಗಳಿಕೆಯಲ್ಲೂ ಗೆದ್ದವು, ಪ್ರಶಸ್ತಿಯಲ್ಲೂ ಹಿಂದೆ ಬೀಳಲಿಲ್ಲ. ಅಂದರೆ ತೇಜಸ್ವಿಯವರ ಕಥೆಯಲ್ಲೇ ಪುಟಿದೇಳುವ ಗುಣವಿದೆ. ನಿರ್ದೇಶಕರಾದವರು ಅದನ್ನು ಗೆಲ್ಲುವ ಹಂತಕ್ಕೆ ಕೊಂಡೊಯ್ಯಬೇಕಷ್ಟೇ. ಒಟ್ಟಿನಲ್ಲಿ ಪ್ರಯತ್ನ ಯಶಸ್ವಿಯಾಗಲಿ, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಒಳ್ಳೆಯ ಸಿನಿಮಾ ಸಿಗಲಿ.

    Latest Posts

    spot_imgspot_img

    Don't Miss