ಕಠ್ಮಂಡು: ನೇಪಾಳ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ (NFCA) ಪ್ರತಿ ವರ್ಷ ಆಯೋಜಿಸುವ ನೇಪಾಳ ಅಂತಾರಾಷ್ಟ್ರೀಯ ಸಿನಿಮೋತ್ಸವ (NIFF)ಕ್ಕೆ ಸಿನಿಮಾ ನಿರ್ದೇಶಕರು, ನಿರ್ಮಾಪಕರಿಂದ ಸಿನಿಮಾಗಳನ್ನು ಆಹ್ವಾನಿಸಿದ್ದು, ಸಿನಿಮಾ ಸಲ್ಲಿಕೆಗೆ ಕೊನೆ ದಿನಾಂಕವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ.
ಮಾರ್ಚ್ 20 ರಿಂದ 24, 2025 ರಲ್ಲಿ ನಡೆಯುವ ಚಿತ್ರೋತ್ಸವಕ್ಕೆ ಸಿನಿಮಾಗಳ ಆಯ್ಕೆ ಆರಂಭವಾಗಿದೆ. ಇದು 8 ನೇ ವರ್ಷದ ಉತ್ಸವವಾಗಿದೆ. ಚಿತ್ರೋತ್ಸವವು ಕಠ್ಮಂಡು, ಭಕ್ತಪುರ್ ಹಾಗೂ ಲಲಿತ್ ಪುರ್ ನಲ್ಲಿ ಏಕಕಾಲದಲ್ಲಿ ನಡೆಯಲಿದೆ.
IFFK: ಕೇರಳ ಚಿತ್ರೋತ್ಸವದಲ್ಲಿ ರವಿವಾರ ಸಿನಿಮಾಗಳೇ ಹೌಸ್ ಫುಲ್
ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಸ್ಪರ್ಧೆಯಿದೆ. ಅತ್ಯುತ್ತಮ ಕಥಾ ಚಿತ್ರಕ್ಕೆ ಗೌತಮ ಬುದ್ಧ ಪ್ರಶಸ್ತಿಯೊಂದಿಗೆ 1500 ಯುಎಸ್ ಡಾಲರ್ ಹಾಗೂ ಪಾರಿತೋಷಕವನ್ನು ನೀಡಲಾಗುವುದು. ಇದಲ್ಲದೇ ಮೌಂಟ್ ಎವರೆಸ್ಟ್ ಪ್ರಶಸ್ತಿ ಕಥಾ ಹಾಗೂ ಸಾಕ್ಷ್ಯಚಿತ್ರಗಳಿಗೆ, ಕಿರುಚಿತ್ರಗಳಿಗೂ ಪ್ರತ್ಯೇಕ ಪ್ರಶಸ್ತಿಗಳಿವೆ.
ರಾಷ್ಟ್ರೀಯ ಚಿತ್ರಗಳನ್ನು ಪ್ರೋತ್ಸಾಹಿಸಲು ಅತ್ಯುತ್ತಮ ಕಥಾ ಚಿತ್ರಕ್ಕೆ ಒಂದು ಲಕ್ಷ ಎನ್ ಪಿ ಆರ್ (ನೇಪಾಳಿ ರೂಪಾಯಿ) ಬಹುಮಾನ ಹಾಗೂ ಪಾರಿತೋಷಕ ನೀಡಲಾಗುತ್ತದೆ. ಈ ವಿಭಾಗದಲ್ಲೂ ಸಾಕ್ಷ್ಯಚಿತ್ರ ಹಾಗೂ ಕಿರುಚಿತ್ರಗಳಿಗೆ ಪ್ರತ್ಯೇಕ ಪುರಸ್ಕಾರಗಳಿವೆ.
ಯೋಗರಾಜರ ಮನದ ಕಡಲು ; ಪ್ಯಾನ್ ಇಂಡಿಯಾವಲ್ಲ, ಕನ್ನಡ ಸಿನಿಮಾ
ಕಥಾ ನಿರೂಪಿತ ಚಿತ್ರಗಳು 60 ರಿಂದ 120 ನಿಮಿಷದೊಳಗಿರಬೇಕು. ಕಿರುಚಿತ್ರಗಳು 30 ನಿಮಿಷ ಮೀರಬಾರದು ಹಾಗೂ ಸಾಕ್ಷ್ಯಚಿತ್ರಗಳು 90 ನಿಮಿಷದೊಳಗಿರಬೇಕು. 2023 ಜನವರಿ 1 ನಂತರ ನಿರ್ಮಿಸಿದ ಚಿತ್ರಗಳು ಪರಿಗಣಿಸಲಾಗುತ್ತದೆ. ಹಾಗೆಯೇ ಹಿಂದಿನ ಚಿತ್ರೋತ್ಸವದಲ್ಲಿ ಪ್ರದರ್ಶಿಸಿದ ಚಿತ್ರಗಳನ್ನೂ ಮತ್ತೊಮ್ಮೆ ಪರಿಗಣಿಸುವುದಿಲ್ಲ.
ಸಲ್ಲಿಕೆಯಾಗುವ ಪ್ರತಿ ಚಿತ್ರಗಳೂ ಇಂಗ್ಲಿಷ್ ಸಬ್ ಟೈಟಲ್ ಹೊಂದಿರಲೇಬೇಕು. ಆಯ್ಕೆಯಾದ ಸಿನಿಮಾಗಳ ಹೆಸರನ್ನು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿಗೆ ವೆಬ್‌ಸೈಟ್ ವೀಕ್ಷಿಸಿ.
ಸಿನಿಮಾ ಕಳುಹಿಸಲು ಮಾಹಿತಿ ಹಾಗೂ ಸಲ್ಲಿಕೆಗೆ ಚಿತ್ರೋತ್ಸವದ ವೆಬ್ ಸೈಟ್ ಅಥವಾ ಫಿಲ್ಮ್ ಫ್ರೀವೇ ಯನ್ನು ಸಂಪರ್ಕಿಸಬಹುದು.