ಪುಣೆ: ಇನ್ನೈದು ದಿನಗಳಿವೆ ಪುಣೆ ಚಿತ್ರೋತ್ಸವದ ಗರಿ ಬಿಚ್ಚಲಿಕ್ಕೆ.
ಇದು ಇಪ್ಪತ್ತಮೂರನೇ ಉತ್ಸವ. ಫೆಬ್ರವರಿ 13 ರಿಂದ 20 ರವರೆಗೆ ಚಿತ್ರೋತ್ಸವ ಚಿತ್ರ ರಸಿಕರ ಮನ ತಣಿಸಲಿದೆ. ಅಂತಾರಾಷ್ಟ್ರೀಯ ಸಿನಿಮಾ ಹಾಗೂ ಮರಾಠಿ ಸಿನಿಮಾಗಳ ಸ್ಪರ್ಧೆ ಇದೆ. ವಿವಿಧ ಭಾಗಗಳಲ್ಲಿ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ವಿಶ್ವ ಸಿನಿಮಾ, ಸಮಕಾಲೀನ ಮರಾಠಿ ಸಿನಿಮಾ, ಭಾರತೀಯ ಸಿನಿಮಾ, ಡಾಕ್ಯುಮೆಂಟರಿ, ಎನ್ ಎ ಎಫ್ ಎ ಹಾಗೂ ಯುಎಸ್ ಎ ಕಿರುಚಿತ್ರಗಳೆಂಬ ವಿಭಾಗಗಳಲ್ಲಿ ಚಿತ್ರಗಳು ಸುಮಾರು 80 ಕ್ಕೂ ಹೆಚ್ಚು ದೇಶಗಳ 150ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನವಾಗಲಿವೆ. ಒಟ್ಟು ಹನ್ನೊಂದು ಸ್ಕ್ರೀನ್ಸ್ ಗಳು ಚಿತ್ರೋತ್ಸವಕ್ಕೆ ಸಜ್ಜಾಗಿವೆ. ಈಗಾಗಲೇ ಪ್ರತಿನಿಧಿಗಳ ನೋಂದಣಿ ಆರಂಭವಾಗಿದೆ. ಪ್ರತಿನಿಧಿ ಶುಲ್ಕ 800 ರೂ. ಗಳು ಮಾತ್ರ. ನೋಂದಣಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಬಹುದು.
ಉತ್ಸವಕ್ಕೆ ಬರೋಣ

ಈ ಬಾರಿ ಉತ್ಸವದ ಉದ್ಘಾಟನಾ ಚಿತ್ರ ಇಟಲಿಯ ಗ್ಲೋರಿಯಾ. ಮಾರ್ಗರಿಟ ವಿಸಾರಿಯೊ ನಿರ್ದೇಶಿಸಿರುವ ಚಿತ್ರ. ಸಮಾರೋಪ ಚಿತ್ರವಾಗಿ ಪ್ರದರ್ಶನಗೊಳ್ಳುತ್ತಿರುವುದು ಸ್ಪೇನ್ ನ ಪೆಡ್ರೊ ಅಲ್ಮದೊವರ್ ನ ದಿ ರೂಮ್ ನೆಕ್ಟ್ಸ್ ಡೋರ್ ಚಿತ್ರ ಎಂದು ತಿಳಿಸಿದ್ದಾರೆ ಉತ್ಸವ ಸಮಿತಿಯ ಅಧ್ಯಕ್ಷ ಜಬ್ಬಾರ್ ಪಟೇಲ್.
ಅಂತಾರಾಷ್ಟ್ರೀಯ ಸಿನಿಮಾಗಳ ಪ್ರಶಸ್ತಿ ಸಮಿತಿಯ ತೀರ್ಪುಗಾರರಾಗಿ ಚಿಲಿಯ ಮಾರ್ಕೊ ಬೇಕ್ಸ್, ಪೋರ್ಚುಗೀಸ್ ನ ಮಾರ್ಗರಿವ ಶಿಲ್, ಫಿನ್ ಲ್ಯಾಂಡ್ ನ ಪೆಟ್ರಿ ಕೊಟ್ವಿಕಾ, ಇರಾನಿನ ತಮಿನ್ಹೆ ಮಿಲಾನಿ, ಸೆರ್ಬಿಯಾದ ಜಾರ್ಜಿ ಸ್ಟಿಕೊವಿಕ್, ಶ್ರೀಲಂಕಾದ ಸುದಥ್ ಮಹಾದಿವುಲ್ವೆವಾ, ನಟಿ ಆರ್ಚನಾ ಹಾಗೂ ಸಿನಿಮಾ ನಿರ್ದೇಶಕ ಅನಿರುದ್ಧ್ ರಾಯ್ ಚೌಧರಿ ಕಾರ್ಯ ನಿರ್ವಹಿಸುವರು. ಈ ಸ್ಪರ್ಧೆಯಲ್ಲಿ ಭಾರತೀಯ ಚಿತ್ರ ನಿರ್ದೇಶಕ ಮಸ್ಲಾಮ್ ಅಲಿಯವರ ಇನ್ ರಿಟ್ರೀಟ್ ಇನ್ ರಿಟ್ರೀಟ್ ಚಿತ್ರವೂ ಸೇರಿದಂತೆ ಕೊರಿಯಾ, ಜಾರ್ಜಿಯಾ, ನಾರ್ವೆ, ಐವೊರಿ ಕೋಸ್ಟ್, ಕೆನಡಾ, ಸ್ವಿಟ್ಜರ್ ಲ್ಯಾಂಡ್, ಪೋರ್ಚುಗಲ್, ಈಕ್ವೆಡಾರ್, ಚೀನಾ, ರೊಮೆನಿಯಾ, ಗ್ರೀಕ್ ಹಾಗೂ ಉಕ್ರೇನಿಯಾದ ಚಿತ್ರಗಳು ಪ್ರಶಸ್ತಿಗೆ ಸೆಣಸುತ್ತಿವೆ.
BIFFES: ಬೆಂಗಳೂರು ವಿಶ್ವ ಚಲನಚಿತ್ರೋತ್ಸವದ ಮೂರು ವಿಭಾಗಗಳ ಸ್ಪರ್ಧೆಗೆ ಸಿನಿಮಾಗಳ ಆಹ್ವಾನ

ಸಿನಿಮಾಗಳ ಪ್ರದರ್ಶನದೊಂದಿಗೆ ಹಲವಾರು ಸಂವಾದಗಳು, ಮಾತುಕತೆ, ಚರ್ಚೆಗಳು ಇವೆ. ಕಾರ್ಯಾಗಾರಗಳೂ ನಡೆಯಲಿವೆ. ಫೆ 14 ರಂದು ಎಂಡಿ ಸ್ವಾತಿ ಮ್ಹಾಸೆ ಪಾಟೀಲ್ ಅವರೊಂದಿಗೆ ಚರ್ಚೆ, ಫೆ. 15 ರಂದು ಪ್ರಮುಖ ಸಾಕ್ಷ್ಯಚಿತ್ರಕಾರರಾದ ಉಮೇಶ್ ಕುಲಕರ್ಣಿ, ಅನುಪಮಾ ಶ್ರೀನಿವಾಸನ್, ಸಾರ್ವನಿಕ್ ಕೌರ್, ಕುಲದೀಪ್ ಬಾರ್ವೆಯವರ ಸಂವಾದವಿದ್ದರೆ, ವಿಜಯ್ ತೆಂಡುಲ್ಕರ್ ಸ್ಮರಣಾರ್ಥ ಉಪನ್ಯಾಸವನ್ನು ಹಿರಿಯ ನಟ ಬೊಮಾನ್ ಇರಾನಿ ಫೆ. 16 ರಂದು ಪೂರೈಸುವರು. ಫೆ. 17 ರಂದು ತಪನ್ ಸಿನ್ಹಾ ಅವರ ಕುರಿತಾಗಿ ಸ್ವಪನ್ ಕುಮಾರ್ ಮಲಿಕ್ ಹಾಗೂ ಗೌತಮ್ ಘೋಷ್ ಅವರ ಮಾತಿದೆ. ಫೆ 18 ರಂದು ಎಐ ಮೂಲಕ ಸಿನಿಮಾಗಳ ನಿರ್ಮಾಣ ಕುರಿತಾದ ವಿಶೇಷ ಕಾರ್ಯಾಗಾರವಿದೆ. ಪಾಕೊ ತೊರೆಸ್ ಇದನ್ನು ನಡೆಸಿಕೊಡುವರು. ಫೆ. 19 ರಂದು ಮರಾಠಿ ಚಲನಚಿತ್ರ ನಿರ್ಮಾಣದಲ್ಲಿನ ಸವಾಲುಗಳ ಕುರಿತಾಗಿ ಪರೇಶ್ ಮೊಕಾಶಿ, ಆದಿತ್ಯ ಸರ್ಪೋತ್ದರ್, ಆದಿನಾಥ್ ಕೊಥಾರೆ ಹಾಗೂ ಸುನಿಲ್ ಫದ್ತಾರೆಯವರ ಸಂವಾದವಿದೆ.
PIFF : ಪುಣೆ ಚಿತ್ರೋತ್ಸವ; ಇಲ್ಲಿವೆ ವಿಶ್ವ ಸಿನಿಮಾಗಳ ಪಟ್ಟಿ

ಉದ್ಘಾಟನೆ ಮತ್ತು ಸನ್ಮಾನ
ಪುಣೆಯ ಸ್ವರಗೇಟ್ ನ ಶ್ರೀ ಗಣೇಶ್ ಕಲಾ ಕ್ರೀಡಾ ರಂಗಮಂಚ್ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮ ಫೆಬ್ರವರಿ 13 ರಂದು ನಡೆಯಲಿದೆ.

ಪುಣೆ ಫಿಲ್ಮ್ ಫೌಂಡೇಷನ್, ಮಹಾರಾಷ್ಟ್ರ ಸರಕಾರದ ಸಂಸ್ಕೃತಿ ಸಚಿವಾಲಯ ಹಾಗೂ ದಾದಾಸಾಹೇಬ್ ಚಿತ್ರನಗರಿ ಸಂಸ್ಥೆಗಳು ಸಂಯುಕ್ತವಾಗಿ ಈ ಉತ್ಸವವನ್ನು ಆಚರಿಸುತ್ತಿವೆ.

ಈ ವರ್ಷದ ಥೀಮ್ ಶೋ ಮ್ಯಾನ್: ರಾಜ್ ಕಪೂರ್. ಈ ವರ್ಷ ರಾಜ್ ಕಪೂರ್ ಅವರ ಜನ್ಮಶತಮಾನೋತ್ಸವ ವರ್ಷ. ಭಾರತೀಯ ಚಿತ್ರರಂಗಕ್ಕೆ ರಾಜ್ ಕಪೂರ್ ಕೊಡುಗೆ ಅನನ್ಯ. ಈಗಿನ ಬಾಲಿವುಡ್ ಗೆ ಸೀಮಿತವಾದ ಹೀರೋಗಳಿಗಿಂತ ವಿಭಿನ್ನವಾಗಿ ಬೆಳೆದವರು ರಾಜ್ ಕಪೂರ್.
ಈ ಸಂದರ್ಭವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಸಂಘಟನೆಗಳು ಹಿರಿಯ ಕಲಾವಿದರಾದ ಶುಭಾ ಖೋಟೆ, ಅನುಪಮ್ ಖೇರ್ ಅವರನ್ನು ಚಿತ್ರೋತ್ಸವ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಿವೆ. ಇದರೊಂದಿಗೆ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿಯವರಿಗೆ ಎಸ್ ಡಿ ಬರ್ಮನ್ ಪುರಸ್ಕಾರ ಕೊಟ್ಟು ಅಭಿನಂದಿಸುತ್ತಿವೆ.