ತುಘಲಕ್ ನಿಂದ ಲೂಸಿಯಾದವರೆಗೆ ಒಂದು ವೇಷ, ಉಳಿದವರು ಕಂಡಂತೆ ಇಂದ ಸರಕಾರಿ ಶಾಲೆವರೆಗೆ ಮತ್ತೊಂದು ವೇಷ, ಬೆಲ್ ಬಾಟಮ್ ನಿಂದ ಹರಿಕಥೆ ಅಲ್ಲ ಗಿರಿಕಥೆವರೆಗೆ ಮಗದೊಂದು ವೇಷ. ಆಮೇಲೆ ಕಾಂತಾರದ ದೊಡ್ಡ ವೇಷ..ಈಗ ಇದಕ್ಕಿಂತಲೂ ದೊಡ್ಡ ವೇಷ ಹಾಕುತ್ತಿದ್ದಾರೆ. ಅಂದರೆ ಪಾತ್ರ.
ಅದು ಛತ್ರಪತಿ ಶಿವಾಜಿ ಮಹಾರಾಜ್.
ಭಾರತೀಯ ಇತಿಹಾಸದಲ್ಲಿ ಛತ್ರಪತಿ ಶಿವಾಜಿಗೆ ಬಹಳ ದೊಡ್ಡ ಸ್ಥಾನವಿದೆ. ಭಾರತೀಯ ಇತಿಹಾಸದ ಪ್ರಧಾನ ಅಧ್ಯಾಯ. ಅಂಥ ಛತ್ರಪತಿ ಶಿವಾಜಿ ಮಹಾರಾಜ್ ಕುರಿತ ಐತಿಹಾಸಿಕ ಸಿನಿಮಾದಲ್ಲಿ ಕನ್ನಡದ ರಿಷಭ್ ಶೆಟ್ಟಿ ಶಿವಾಜಿ ಮಹಾರಾಜ್ ಆಗಿ ಪಾತ್ರ ಮಾಡುತ್ತಿದ್ದಾರೆ.
ಯೋಗರಾಜರ ಮನದ ಕಡಲು ; ಪ್ಯಾನ್ ಇಂಡಿಯಾವಲ್ಲ, ಕನ್ನಡ ಸಿನಿಮಾ
ರಿಷಬ್ ನಟನಾಗಿಯೂ ಯಶಸ್ಸು ಕಂಡವರು, ನಿರ್ದೇಶಕರಾಗಿಯೂ ಹೆಸರು ಮಾಡಿದವರು. ಎರಡರಲ್ಲೂ ತಲ್ಲೀನರಾಗಿ ಕೆಲಸ ಮಾಡುವವರು.
ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವವನಲ್ಲ, ಕನ್ನಡ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಕ್ಕೆ ಕಳುಹಿಸುತ್ತೇನೆ ಎಂದವರು ರಿಷಭ್. ಈಗ ಕನ್ನಡದ ನಟ ಪ್ಯಾನ್ ಇಂಡಿಯಾ ಪಾತ್ರ (ಕ್ಯಾರೆಕ್ಟರ್) ಮಾಡುತ್ತಿದ್ದಾರೆ. ಈ ಸಿನಿಮಾದ ಹೆಸರು ದಿ ಪ್ರೈಡ್ ಆಫ್ ಭಾರತ್ :ಛತ್ರಪತಿ ಶಿವರಾಜ್ ಮಹಾರಾಜ್.
ಸಂದೀಪ್ ಸಿಂಗ್ ಸಹ ಚಾರಿತ್ರಿಕ ಹಾಗೂ ಜೀವನ ಕಥೆಯಾಧರಿತ ಸಿನಿಮಾಗಳ ನಿರ್ಮಾಣದ ಹಿಂದೆ ಕೆಲಸ ಮಾಡಿದವರು. ಮೇರಿ ಕಾಮ್, ಸರ್ಬಿಜಿತ್, ವೀರ ಸಾವರ್ಕರ್, ರಾಮ್ ಲೀಲಾದಂಥ ಚಿತ್ರಗಳ ಹಿಂದಿನ ಶಕ್ತಿಯಾಗಿದ್ದರು. ಅವರೀಗ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.
ಈಗಾಗಲೇ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಪ್ರಕಟಿಸಲಾಗಿದೆ. 2027 ರ ಜನವರಿ 17 ರಂದು ಈ ಸಿನಿಮಾ ವಿಶ್ವಾದ್ಯಂತ ವೀಕ್ಷಣೆಗೆ ಲಭ್ಯವಾಗಲಿದೆ.
ಒಬ್ಬ ರಾಷ್ಟ್ರೀಯ ನಾಯಕನ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಕ್ಕಿರುವುದೇ ಅದೃಷ್ಟ ಎಂದು ರಿಷಭ್ ಹೇಳಿದರೆ, ಈ ಪಾತ್ರಕ್ಕಾಗಿ ನನ್ನಲ್ಲಿದ್ದ ಏಕಮೇವ ಆಯ್ಕೆ ರಿಷಭ್. ಅದು ಈಡೇರಿದೆʼ ಎಂದಿದ್ದಾರೆ ರಿಷಭ್.
ಕಾಂತಾರದ ರಿಷಭ್ ಶಿವಾಜಿ ಪಾತ್ರದಲ್ಲಿ ಹೇಗೆ ಕಂಗೊಳಿಸುವರೋ ಕಾದು ನೋಡಬೇಕು.