Tuesday, April 22, 2025
spot_img
More

    Latest Posts

    ಚಿಲ್ಡ್ರನ್‌ ಆಫ್‌ ಹೆವೆನ್‌ : ಎಂದಿಗೂ ಮಾಸದ ಚಿತ್ರಪಟ

    ನಮ್ಮ ಕನ್ನಡ ಚಿತ್ರಗಳಲ್ಲಿ ವಿಷಾದವನ್ನು ಕಟ್ಟಿಕೊಡಲು ಬರುವುದೇ ಇಲ್ಲ ಎನ್ನುವುದು ನನ್ನ ತಕರಾರು. ನನ್ನ ದೃಷ್ಟಿಯಲ್ಲಿ ಎಂದಿಗೂ ದುಃಖ ವಿಷಾದವಲ್ಲ. ಅಳುವುದು ವಿಷಾದಕ್ಕೆ ಸಮನಲ್ಲ. ವಿಷಾದ ನಮ್ಮನ್ನು ಗಂಟಲು ಉಬ್ಬಿಸುವಂಥ ಸ್ಥಿತಿ. ಅಳು ಬಂದು ಧಾರೆಯಾಗಿ ಇಳಿಯುವಂಥ ಸ್ಥಿತಿ ; ಇಳಿಯುವುದಿಲ್ಲ. ಮನದೊಳಗೆಲ್ಲಾ ಒಂದು ತೀರಾ ತಣ್ಣನೆಯ ಸ್ಪರ್ಶವನ್ನು ಕೊಟ್ಟು ವಿಷಣ್ಣನಾಗಿಸಿಬಿಡುವಂಥದ್ದು. ಬಹಳಷ್ಟು ಬಾರಿ ಅತ್ತು ಹಗುರಾಗುವ ಪ್ರಕ್ರಿಯೆ ನಮ್ಮ ವಿಷಾದದ ಸನ್ನಿವೇಶಗಳಲ್ಲಿ ನಡೆಯುತ್ತದೆ. ವಾಸ್ತವವಾಗಿ ಅದಲ್ಲ. ಇರಾನಿ ಚಿತ್ರಗಳಲ್ಲಿ ಆ ವಿಷಾದಕ್ಕೆ ಕಲಾತ್ಮಕತೆಯ ಚೌಕಟ್ಟು ಕೊಡುತ್ತಾರೆ ಎನಿಸುವುದುಂಟು.

    ನಮ್ಮಲ್ಲಿ ವಿಷಾದವೆಂದರೆ ಗೊಳೋ ಎಂದು ಅಳಿಸಿಬಿಡುತ್ತೇವೆ. ಗಿರೀಶ್ ಕಾಸರವಳ್ಳಿಯವರ “ದ್ವೀಪ’ದಲ್ಲೂ ಸ್ಥಳಾಂತರದ ಅನಿವಾರ್ಯದಿಂದ ಹುಟ್ಟಿದ ವಿಷಾದ ಮಳೆಯಂತೆಯೇ ಅಳುವಾಗಿ ಮಾರ್ಪಡುತ್ತದೆ. ಇವುಗಳನ್ನೆಲ್ಲಾ ಬ್ಯಾಕ್‌ಡ್ರಾಪ್‌ನಲ್ಲಿಟ್ಟುಕೊಂಡು ನೋಡಿದಾಗ “ಸ್ವರ್ಗದ ಮಕ್ಕಳು’ ಅದ್ಭುತ ಚಿತ್ರವೆನಿಸುತ್ತದೆ. ಇದುವರೆಗೆ ಇದನ್ನು ಎಂಟು ಬಾರಿ ನೋಡಿದ್ದೇನೆ. ನೋಡಿದಾಗಲೆಲ್ಲಾ ಮನಸ್ಸಿನೊಳಗೆ ಹೊಸ ಹುರುಪು ತುಂಬಿದೆ. ಸುಂದರ ಚಿತ್ರ ಬದುಕಿಗೆ ಭಾಷ್ಯ ಬರೆಯಬಲ್ಲದು ಎಂಬುದೊಂದು ಮಾತಿದೆ. ಅದರಂತೆಯೇ ಇದು ಭಾಷ್ಯ ಬರೆದ ಚಿತ್ರವೇ ಹೌದು.

    ಮನುಷ್ಯ ಸಂಬಂಧಗಳಲ್ಲಿನ ಸೂಕ್ಷ್ಮತೆ, ನಾಜೂಕುತನವನ್ನು ಇರಾನಿ ನಿರ್ದೇಶಕರು ಅತ್ಯಂತ ನಯವಾಗಿ, ಸೊಗಸಾಗಿ ಕಟ್ಟಿಕೊಡಬಲ್ಲರು. ಅದರಲ್ಲೂ ಮಕ್ಕಳ ಮುಗ್ಧ ಭಾವನೆಗಳಲ್ಲಿನ ಹೂಗಳಂಥ ಕೋಮಲತೆಯನ್ನು ಹಾಗೆಯೇ ತಾಜಾ ತಾಜಾ ಆಗಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಚಿತ್ರದಲ್ಲಿ ಎಲ್ಲೆಲ್ಲೂ ಕಾಣುವುದು ಅಷ್ಟೇ, ಮನುಷ್ಯ ಸಂಬಂಧಗಳ ನಿರ್ವಹಣೆ. ಅದ್ರಲ್ಲೂ ನಿರ್ದೇಶಕ ತೋರಿದ ನಾಜೂಕುತನ. ಇದನ್ನು ಪುಷ್ಟೀಕರಿಸುವಂಥ ಎಷ್ಟೊಂದು ದೃಶ್ಯಗಳು ಬೇಕು ಆ ಚಿತ್ರದಲ್ಲಿ. ಪ್ರತಿ ಕ್ಷಣದಲ್ಲೂ ಆ ಕಾಳಜಿಯೇ ಇಡೀ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅಂಥ ಕೆಲವು ಸನ್ನಿವೇಶಗಳನ್ನು ಹೇಳುತ್ತೇನೆ. ಇಲ್ಲಿ ಜಹ್ರಾ ಎಂದರೆ ಶುಭ್ರ, ಹೂವ ಎಂದೆಲ್ಲಾ ಅರ್ಥವಿದೆ. ಇವು ಸ್ವರ್ಗದ ಹೂವುಗಳೇ !
     
    ಮೊದಲಿಗೆ ಅಲಿ (ಅಣ್ಣ)ಯ ಮನೆಯಲ್ಲಿ ಟೀ ಗೆ ಸಕ್ಕರೆ ಇರೋದಿಲ್ಲ. ಅವನಪ್ಪ ಮಸೀದಿಯಲ್ಲಿ ಟೀ ಸರಬರಾಜು ಮಾಡುವವ. ಅದಕ್ಕೆ ಮನೆಯಲ್ಲಿ ಕುಳಿತು ಸಕ್ಕರೆ ಪುಡಿ ಮಾಡುತ್ತಿರುತ್ತಾನೆ. ಆಗ ಅಲಿಯ ತಂಗಿ ಜಹ್ರಾ, ಈ ಸಕ್ಕರೆ ಇದೆಯಲ್ಲಾ ಎಂದು ಅಪ್ಪನಿಗೆ ಕೇಳುತ್ತಾಳೆ. ಆಗ ಅಪ್ಪ “ಇದು ಮಸೀದಿಯದ್ದು, ಹಾಗೆ ಬಳಸುವಂತಿಲ್ಲ’ ಎಂದು ಹೇಳುತ್ತಾನೆ. ಇದು ಪವಿತ್ರತೆ ಇತ್ಯಾದಿಗಿಂತಲೂ ಪ್ರಾಮಾಣಿಕತೆಯನ್ನು ಅನಾವರಣಗೊಳಿಸುವ ಸನ್ನಿವೇಶ.

    ಎರಡನೇ ಸನ್ನಿವೇಶದಲ್ಲಿ ತಾನು ಕಳೆದುಕೊಂಡ ಷೂ ತನ್ನ ಸಹಪಾಠಿಯೊಬ್ಬಳಲ್ಲಿ ಇದೆ ಎಂದು ಜಹ್ರಾಳಿಗೆ ತಿಳಿಯುತ್ತದೆ. ಜಹ್ರಾಳಲ್ಲಿ ಒಂದು ಬಗೆಯ ಸಿಟ್ಟು ಬರಿಸಿರುತ್ತೆ. ಆದರೆ ಒಮ್ಮೆ ಅಣ್ಣ ತಂದುಕೊಟ್ಟ ಮುದ್ದಿನ ಪೆನ್ನನ್ನು ಜಹ್ರಾ ತರುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಬಿಟ್ಟಿರುತ್ತಾಳೆ. ಅವಳ ಹಿಂದೆಯೇ ಬರುವ ಅವಳ ಸಹಪಾಠಿ ಹುಡುಗಿ ಅದನ್ನು ಎತ್ತಿಕೊಂಡು ಮರುದಿನ ಅವಳಿಗೆ ನೀಡುತ್ತಾಳೆ. ಆಗ ಜಹ್ರಾ ಅವಳನ್ನು ವಿಶ್ವಾಸದಿಂದ ನೋಡುವ ಬಗೆಯೇ ಅನನ್ಯ. ಇದೊಂದು ದೃಶ್ಯದಲ್ಲಿ ಇಬ್ಬರೊಳಗೂ ಕ್ಷೀಣಿಸಬಹುದಾದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾನೆ. ಅಂದಿನಿಂದ ಅವಳ ಬಗ್ಗೆ ಜಹ್ರಾ ಏನೂ ಅಂದುಕೊಳ್ಳುವುದಿಲ್ಲ.

    ಇಂಥದ್ದೇ ಇನ್ನೊಂದು ಸನ್ನಿವೇಶ ಹೇಳುತ್ತೇನೆ. ಅಲಿ ಚೆನ್ನಾಗಿ ಅಂಕ ಗಳಿಸಿದ್ದಕ್ಕೆ ಅವನ ಮೇಸ್ಟ್ರು ಒಂದು ಚೆನ್ನಾದ ಪೆನ್ನನ್ನು ಉಡುಗೊರೆಯಾಗಿ ಕೊಟ್ಟಿರುತ್ತಾರೆ. ಶಾಲೆಯಿಂದ ಬರುವಾಗ ಪಕ್ಕದ ಮನೆಗೆ ಹೋಗ್ತಾ ಇದ್ದ ಜಹ್ರಾ ಸಿಗುತ್ತಾಳೆ ರಸ್ತೆಯಲ್ಲಿ. ಅಲಿ, ತಗೊಳೆ ತಂಗಿ ಈ ಪೆನ್ನು ನಿನಗೆ ಎಂದು ತನ್ನ ಹೊಸ ಪೆನ್ನನ್ನು ಕೊಡುತ್ತಾನೆ. ಆಕೆಗೆ ನಂಬಿಕೆ ಬರುವುದಿಲ್ಲ. ಆ ಪೆನ್ನನ್ನು ಕೈಯಲ್ಲಿಟ್ಟುಕೊಂಡು ನೋಡಿ “ಚೆನ್ನಾಗಿದೆಯಲ್ಲೋ’ ಎನ್ನುತ್ತಾಳೆ. ಆಗ ಅಣ್ಣ ಅಲಿ “ಅದು ನಿನಗೇ’ ಎಂದಾಗ ಅಚ್ಚರಿ ಮತ್ತು ಆನಂದದಿಂದ “ನನಗಾ, ನನ್ನನನ್ಗಾ’ ಎಂದು ಕೇಳುತ್ತಾಳೆ. ಆಗ ಅಲಿ, “ಹೌದೇ, ನಿನಗೇ’ ಎಂದಾಗ ಅವಳ ಮುಖದಲ್ಲಿ ನಗೆ ನದಿಯಲ್ಲಿ ಚಿಕ್ಕದೊಂದು ಗಾಳಿ ಹೊರಡಿಸುವ ತರಂಗದಂತೆ ಅರಳುತ್ತದೆ. ಜತೆಗೆ, “ಅಣ್ಣಾ, ನಾನು ಅಪ್ಪನ ಬಳಿ (ಷೂ ಕಳೆದದ್ದನ್ನು) ಹೇಳುವುದಿಲ್ಲ’ ಎಂದು ಹೇಳುತ್ತಾಳೆ. ಆಗ ಅಣ್ಣ ಹೇಳುವ ವಿಶ್ವಾಸದ ಮಾತು “ನನಗೆ ಗೊತ್ತು ಕಣೆ. ನೀನು ಹಾಗೆ ಹೇಳುವುದಿಲ್ಲ’ ಎಂದು ಹೇಳಿ ಮನೆಗೆ ಹೋಗುತ್ತಾನೆ. ಇದು ಸಂಬಂಧಗಳ ನಿರ್ವಹಣೆ.

    ಅಪ್ಪನೊಂದಿಗೆ ಹೊಸ ಕೆಲಸ ಹುಡುಕಿಕೊಂಡು ಬಂದವನಿಗೆ ಕೆಲಸ ಸಿಗುವುದು ಅಂಥದೊಂದು ಸಂಬಂಧದ ಎಳೆಯಿಂದಲೇ. ಅಪ್ಪ-ಅಮ್ಮನಿಲ್ಲದೇ ಅಜ್ಜನೊಂದಿಗೆ ಬದುಕುವ ತಬ್ಬಲಿ ಮಗು ಮತ್ತು ಇವನೊಡನೆ ಸಂಬಂಧ ಬೆಳೆಯುವಂಥದ್ದು.”ನಿಮ್ಮ ಮನೆ ತೋಟದಲ್ಲಿ ಕೆಲಸವಿದೆಯೇ?’ ಎಂದು ಕೇಳುವಾಗ ಅತ್ತಲಿಂದ ಬಾಗಿಲ ಒಳಗಿಂಡಿಯಿಂದಲೇ ಆ ಮಗು “ನೀನ್ಯಾರು, ನಿನ್ನ ಹೆಸರೇನು, ಎಷ್ಟನೇ ಕ್ಲಾಸು’ ಹೀಗೆಲ್ಲಾ ಕೇಳಿ ಪರಿಚಯಿಸಿಕೊಳ್ಳುತ್ತದೆ. ನಂತರ ಅಪ್ಪ ಕೆಲಸ ಮಾಡುವಾಗ ಅಲಿ ಆ ಮಗುವಿನೊಂದಿಗೆ ಆಟವಾಡುತ್ತಾನೆ. ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ಮಧ್ಯೆ ಏರ್ಪಡುವ ಸಂಬಂಧ ಸೂಕ್ಷ್ಮ. ಮಲಗಿದ ಆ ಮಗುವನ್ನು ಬಿಟ್ಟು ಹೋಗುವಾಗ ಅವನೊಳಗೆ ಆವರಿಸಿಕೊಳ್ಳುವ ವಿಷಾದವನ್ನೂ ಮುಖದ ಭಾವ ಹೇಳುತ್ತದೆ. ಈ ಮೂಲಕ ನಗರದ ಸಂಬಂಧಗಳ ನೆಲೆಯನ್ನೂ ಅನಾವರಣಗೊಳಿಸುತ್ತಾನೆ.

    ಹೀಗೆ ಮನುಷ್ಯ ಸಂಬಂಧಗಳ ನಿರ್ವಹಣೆ ಕುರಿತೇ ಬರೆಯಲು ಬಹಳಷ್ಟಿದೆ. ಇಡೀ ಚಿತ್ರದಲ್ಲಿ ಅಣ್ಣ-ತಂಗಿಯರಿಬ್ಬರನ್ನೇ ಇಟ್ಟುಕೊಂಡು ಒಂದು ಸುಂದರವಾದ ಕಥೆ ಹೆಣೆಯುವ ಮಜಿದ್ ಮಜ್ದಿ ಎಷ್ಟು ಅದ್ಭುತವಾದ ನಿರ್ದೇಶಕ ಎನಿಸಿ ಬಿಡುತ್ತಾನೆ. ಪ್ರತಿ ಚಿತ್ರದಲ್ಲೂ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನೇ ಹೇಳುತ್ತಾ, ಅದನ್ನು ಹಾಗೆಯೇ ಗಟ್ಟಿಗೊಳಿಸುವ ಬಗೆಗೆ ಕೃತಜ್ಞತೆ ಹೇಳಲೇಬೇಕು. ಇವನ ಮತ್ತೊಂದು ಚಿತ್ರ (ಕಲರ್ ಆಫ್ ಪ್ಯಾರಡೈಸ್)ವೂ ಇಂಥ ನೆಲೆಯದ್ದೇ. ಹಾಗೆಯೇ ಪ್ರತಿ ಸನ್ನಿವೇಶಗಳಲ್ಲೂ ಅದನ್ನೇ “ಫೋಕಸ್’ ಮಾಡುತ್ತಾ, ಎಲ್ಲಿಯೂ ಅದು ಭಾರ ಅಥವಾ ರೇಜಿಗೆ ಹುಟ್ಟದಂತೆ ವಹಿಸುವ ಮುತುವರ್ಜಿಯನ್ನು ಗಮನಿಸಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಅಣ್ಣ-ತಂಗಿಯಂಥ ಸೂಕ್ಷ್ಮ ಸಂಬಂಧದ ಪೋಟ್ರೈಟ್ ಇದು.

    Latest Posts

    spot_imgspot_img

    Don't Miss