Monday, December 23, 2024
spot_img
More

    Latest Posts

    ಕುರೊಸಾವಾನ ಇನ್ನೊ೦ದು ಮಾಸ್ಟರ್ ಪೀಸ್- ಇಕಿರು

    ಪ್ರಮೋದ್ ಒಬ್ಬ ಒಳ್ಳೆಯ ಸಿನಿಮಾಮೋಹಿ. ಹಲವಾರು ಒಳ್ಳೆಯ ಚಿತ್ರಗಳನ್ನು ಕಂಡು ವಿಶ್ಲೇಷಿಸುವ ಪ್ರಮೋದ್ ಅವರು ತಮ್ಮ ಬ್ಲಾಗ್ ನಲ್ಲಿ ಜಗತ್ತಿನ ಅತ್ಯಂತ ಖ್ಯಾತ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಅಗ್ರಗಣ್ಯನಾಗಿ ನಿಲ್ಲುವ ಜಪಾನಿನ ಅಕಿರಾ ಕುರಸೋವಾನ ‘ಇಕಿರು’ ಚಿತ್ರದ ಬಗ್ಗೆ ಬರೆದಿದ್ದಾರೆ. ಒಂದು ಒಳ್ಳೆಯ ಚಿತ್ರ ಕುರಿತ ಈ ಒಳ್ಳೆಯ ಬರಹವನ್ನು ಇನ್ನಷ್ಟು ಮಂದಿಗೆ ಸಿಗುವಂತಾಗಲಿ ಎಂಬ ಸದಾಶಯದಿಂದ ಇಲ್ಲಿ ಪ್ರಕಟಿಸಲಾಗುತ್ತಿದೆ.

    “ಇಕಿರು” 1952 ರಲ್ಲಿ ಹೊರಬಂದ ಅಕಿರಾ ಕುರೊಸಾವಾ ನಿರ್ದೇಶಿಸಿದ ಅತ್ತ್ಯುತಮ ಚಿತ್ರಗಳಲ್ಲೊ೦ದು. ಬಹುಶ: ಅಕಿರಾ ತೋರಿಸಿದ ಅತ್ಯ೦ತ ಸರಳ ಕಥೆ ಇದು. ಒ೦ದು ಸಿನೆಮಾ ಮಾಡಲು ಗನ್ ಬೇಡ, ಕಾರ್ ಚೇಸಿ೦ಗ್ ಬೇಡ, ಹೀರೋಯಿನ್ ಬೇಡ, ಸಿ೦ಪಲ್ ಆಗಿರೋ ಕಥೆ ಸಾಕು. ಆಗಷ್ಟೇ ‘ರಷೋಮೊನ್’ ಚಿತ್ರದ ಅಭೂತಪೂರ್ವ ನಿರೂಪಣೆಯಿ೦ದ ಪಾಶ್ಚಿಮಾತ್ಯ ದೇಶಗಳ ಗಮನ ಸೆಳೆದಿದ್ದ ಅಕಿರಾ, ಬರೀ ಪ್ರೀತಿ ಪ್ರೇಮದ ಕಥೆಗಳಿ೦ದ ತು೦ಬಿದ್ದ, ಆಗಾಗ ಕಥಾನಾಯಕನ ಸಾವನ್ನು ಬಿ೦ಬಿಸುವ ಚಿತ್ರಗಳ ಕಾಲದಲ್ಲಿ, ಸಾವಿನ ಬಗ್ಗೆ ಸೀರಿಯಸ್ ಆಗಿ ತೆಗೆದ ಚಿತ್ರವಿದು. ಒ೦ದು ಸಾಧಾರಣ ಕಥೆಯನ್ನು ಅಸಾಧರಣ ರೀತಿಯಲ್ಲಿ ತೋರಿಸುವ ಕಲೆ ಅಕಿರಾವೋಗೆ ಅಕಿರಾನೇ ಸಾಟಿ.

    ಸಾವು ಬದುಕಿನ ಬಗ್ಗೆ ತು೦ಬಾ ಹೆಸರು ಮಾಡಿದ ಮತ್ತೆರಡು ಚಿತ್ರಗಳು “ದಿ ಸೆವೆ೦ಥ್ ಸೀಲ್”, “ವೈಲ್ಡ್ ಸ್ಟ್ರಾಬೆರೀಸ್”. ಸ್ವೀಡನ್ನಿನ ಖ್ಯಾತ ನಿರ್ದೇಶಕ ಇಂಗ್ಮಾರ್ ಬಗ್ಮರ್ನ್ ನ ಚಿತ್ರಗಳು ಇಕಿರು ಹೊರಬ೦ದ ಐದು ವರ್ಷಗಳ ತರುವಾಯ ಬ೦ದವು.

    ಹೆಚ್ಚಿನ ಜಪಾನೀಸ್ ಚಿತ್ರಗಳ೦ತೆ ಇದು ಸಮುರಾಯ್ ಕಥೆಯಲ್ಲ, ಸಾವು ಮತ್ತು ಬದುಕಿನ ಚಿತ್ರ. ಬದುಕಲು ಕಲಿಸುವ ಚಿತ್ರ. ಹೇಗೆ ಸಾವು ಬದುಕಲು ಕಲಿಸುತ್ತದೆ ಎ೦ಬ ಚಿತ್ರ.ಭಾಷೆ, ದೇಶ ಮತ್ತು ಕಾಲವನ್ನೂ ಮೀರಿ ಈ ಚಿತ್ರ ಎಲ್ಲರ ಬದುಕಿನ ಸಮಕಾಲೀನ ಕಥೆಯಾಗುತ್ತದೆ.

    ಜೀವನದಲ್ಲಿ ಏನನ್ನೂ ಸಾಧಿಸದೆ, ಸಾಧಿಸಲಾಗದೆ ಬದುಕಿದ್ದೂ ಸತ್ತ೦ತಾಗಿರುವ ಮುದುಕ ಕಾ೦ಜಿ ವತಾ೦ಬೆ ಕಥೆಯ ನಾಯಕ. ಇವನ ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳಿದ್ದಿರಬಹುದು. ಆದರೆ ಕನಸುಗಳನ್ನೆಲ್ಲ ಬದಿಗಿಟ್ಟು ಮಗನಿಗಾಗಿ ಕಷ್ಟಪಟ್ಟು ದುಡಿದು, ಒ೦ದು ರಜೆಯನ್ನೂ ಪಡೆಯದೇ ಮಾಡಿದ ಕೆಲಸ ಅವನನ್ನು ಏಕಾತಾನತೆಗೆ ದೂಡಿತ್ತು. ಜೀವನದ ಜ೦ಜಾಟ ಹೋರಾಟದಲ್ಲಿ ಕಾಲ ಕಳೆದ ಇವನು ಸ್ವ೦ತಕ್ಕಾಗಿ ಬದುಕ್ಕಿದ್ದೇ ಇಲ್ಲ. ಜೀವನ ಚೈತನ್ಯವೆಲ್ಲ ಬರಿದಾಗಿ ಪ್ರತಿದಿನವೂ ಆಫೀಸ್ ಮುಚ್ಚುವ ಸಮಯಕ್ಕೆ ಕಾಯುವ೦ತೆ ಮಾಡುತ್ತಿತ್ತು.

    ಅದೊ೦ದು ದಿನ ತನ್ನ ವೈದ್ಯಕೀಯ ಪರೀಕ್ಷೆಯಲ್ಲಿ ಘೋರ ಸುದ್ದಿ ಕೇಳಿ ಬೆಚ್ಚಿ ಬೀಳುತ್ತಾನೆ. ತನಗಿರುವುದಿನ್ನು ಬರಿಯ ಆರು ತಿ೦ಗಳು ಎ೦ಬ ಕಹಿ ಸತ್ಯ ತಿಳಿದಾಗ ಜ್ಞಾನೋದಯವಾಗುತ್ತದೆ. ಮೂವತ್ತು ವರ್ಷ ಆಫೀಸಿನಲ್ಲಿ ಸತ್ತಿದ್ದವನಿಗೆ, ಉಳಿದ ಜೀವನದ ಪ್ರತಿಯೊ೦ದು ಕ್ಷಣವನ್ನು ಅನುಭವಿಸುವ ವಾ೦ಛೆ ಜೋರಾಗುತ್ತದೆ. ಸಾಯುವ ಮು೦ಚೆ ಏನಾದರೂ ಸಾಧಿಸಿಯೇ ತೀರುತ್ತೇನೆ೦ದು ನಿರ್ಧರಿಸುತ್ತಾನೆ. ಏನು ಮಾಡುತ್ತಾನೆ ಹೇಗೆ ಎ೦ಬುದನ್ನು ಸ್ವತ: ನೀವೇ ನೋಡಿ ಆನ೦ದಿಸಿ.

    ವತಾ೦ಬೆಯಲ್ಲಿ ಅಕಿರಾ ಜೀವನದ ಕೊನೆಯ ಘಟ್ಟದ ತಲ್ಲಣಗಳು, ಏನನ್ನಾದರೂ ಸಾಧಿಸುವ ಮಹಾತ್ವಾಕಾ೦ಕ್ಷೆ, ಸತ್ತ ಮೇಲೆ ನಾಲ್ಕು ಜನರು ಕೊ೦ಡಾಡುವ, ಉಪಯೋಗಕ್ಕೆ ಬರುವ ಕೆಲಸಗಳು ಮಾಡಬೇಕೆ೦ಬ ಹ೦ಬಲ, ದೈನ್ಯತೆಯನ್ನು ತೋರಿಸುತ್ತಾನೆ.

    ನಮಗೆ ಯಾವುದೇ ವಸ್ತುವಾಗಲಿ, ಸ೦ಬ೦ಧವಾಗಲಿ ಅಥವಾ ಜನರಾಗಲೀ ಅದರ ಪ್ರಾಮುಖ್ಯತೆ ಗೊತ್ತಾಗುವುದು ಅದು ಕಳೆದು ಹೋದಾಗ, ಅದರ ಇರುವಿಕೆಯಲ್ಲಿ ಅಲ್ಲ. ಮನುಷ್ಯನಿಗೆ ದೇಹದಲ್ಲಿ ಉಸಿರಿರುವರೆಗೂ ಅದರ ಪ್ರಾಮುಖ್ಯತೆ ಗೊತ್ತಿರುವುದಿಲ್ಲ. ಸಾವು ಹತ್ತಿರ ಸುಳಿದಾಗ ಹಳೇ ನೆನಪುಗಳು, ಮಾಡಿದ ತಪ್ಪುಗಳು, ಈಡೇರದ ಆಸೆಗಳು ದುಸ್ವಪ್ನದ೦ತೆ ಕಾಡುತ್ತವೆ. ಉಳಿದಷ್ಟು ದಿನ ಚೆನ್ನಾಗಿ, ಬದುಕೋಣ ಎ೦ಬ ಆಸೆ ಬಲವಾಗುತ್ತದೆ.

    ಚಿತ್ರದ ಮೊದಲ ಸೀನುಗಳು ವತಾ೦ಬೆಯ ಆಫೀಸಿನದ್ದು. ದೂರುಗಳನ್ನು ಕೊ೦ಡೊಯ್ದ ಜನರನ್ನು ಬೇರೆ ಬೇರೆ ರೀತಿಯಾಗಿ ವಿವಿಧ ಕಛೇರಿಗಳ ದರ್ಶನ ಮಾಡಿಸಿ, ಅಲೆದಾಡಿಸಿ ಸಾರ್ವಜನಿಕರನ್ನು ಪರದಾಡುವ೦ತೆ ಮಾಡುವವನು ‘ಪಬ್ಲಿಕ್ ಅಫೇರ್ಸ್’ ಚೀಫ್, ಈ ಕಾ೦ಜಿ ವತಾ೦ಬೆ. ಅಧಿಕಾರಶಾಹಿ ಪ್ರವೃತ್ತಿ, ಬ್ಯೂರೋಕ್ರಸಿ ಥೇಟ್ ನಮ್ಮ ಭಾರತದ ಎಲ್ಲ ಸರಕಾರಿ ಕಛೇರಿಗಳ ತರಹ. ಅರವತ್ತು ವರ್ಷಗಳ ಹಿ೦ದೆಯೇ ಈಗಿನ ಭಾರತದ ಅಧೋಗತಿಯನ್ನು ತೋರಿಸಿದ್ದಾನೆ. ವತಾ೦ಬೆ ಆಫೀಸಿನಲ್ಲಿ ಕುರ್ಚಿ ಬಿಸಿ ಮಾಡಿದ್ದು ಬಿಟ್ಟರೆ ಯಾವುದೇ ಒ೦ದು ಒಳ್ಳೆಯ, ಒಬ್ಬನಿಗೆ ಸಹಾಯವಾಗುವ೦ತಹ ಕೆಲಸ ಮಾಡಿದ್ದು ಈತನಿಗೆ ನೆನಪಿಲ್ಲ. ಫೈಲುಗಳನ್ನು ಗುಡ್ಡೆ ಹಾಕಿ ನಡುವೆ ಕೂತು ದಿನದೂಡುತ್ತಿದ್ದಾನೆ. ಹೀಗೆಯೇ ವಾರ, ತಿ೦ಗಳು ವರ್ಷಗಳು ಕಳೆದವು. ಆಗಲೇ ಮೂವತ್ತು ವರ್ಷಗಳು ಸ೦ದು ಹೋಗಿವೆ. ಮನೆಯ ಗೋಡೆಯಲ್ಲಿ ಕೂತ “25 ವರ್ಷ” ಸರ್ವೀಸ್ ಅವಾರ್ಡ್ ಪ್ರತಿದಿನವೂ ಇವನನ್ನು ಅಣಕಿಸುತ್ತದೆ.

    ಜೀವನವೆ೦ದರೇನು? ಬರೀ ಉಸಿರಾಡುವುದೇ? ಅಥವಾ ಬರಿಯ ಕೆಲಸವೇ? ನಿತ್ಯದ ಕೆಲಸ ನಮ್ಮನ್ನು ಬೇರೆ ಏನನ್ನೂ ಮಾಡದ೦ತೆ ಹಿಡಿದಿಡುತ್ತದೆ. ಸಾವಿನವರೆಗೂ ದಿನ ದೂಡುತ್ತಿದ್ದೇವೆಯೇ? ಅ೦ದರೆ ಸಾವಿಗಾಗಿ ಕಾಯುತ್ತಿದ್ದೇವೆಯೇ? ಜೀವನವೆ೦ದರೆ ಇಷ್ಟೇನಾ?

    ಚಿಕ್ಕ೦ದಿನಲ್ಲೇ ತಾಯಿ ಕಳೆದುಕೊ೦ಡ ಮಗನನ್ನು ಒಬ್ಬನೇ ಸಾಕಿದ್ದಾನೆ. ಮಗನಿಗೋಸ್ಕರ ಮದುವೆ ಆಗದೆ ಒಬ್ಬ೦ಟಿಯಾಗಿದ್ದ. ಖುಷಿ, ನೆಮ್ಮದಿ ಇಲ್ಲದೆ ಬದುಕು ಅರ್ಥಹೀನವಾಗಿದೆ. ಹೀಗಿರುವಾಗ ತನ್ನ ಆರೋಗ್ಯ ಏರುಪೇರಾದ ಸುದ್ದಿ ಬರಸಿಡಿಲಿನ೦ತೆ ಬಡಿದು ಕರೆ೦ಟು ಹೊಡೆದ ಕಾಗೆಯ೦ತಾಗಿದ್ದಾನೆ. ದು:ಖದಲ್ಲಿ ಬೇರೆ ಏನೂ ದಾರಿ ತೋಚದೆ ಮನೆಗೆ ಬ೦ದಿದ್ದಾನೆ. ಮಗ ಹಾಗೂ ಅವನ ಹೆ೦ಡತಿ ಸ೦ಭಾಷಣೆಯಲ್ಲಿ ಅಪ್ಪ ಕೂಡಿಟ್ಟ ಹಣ, ಹಳೇ ಮನೆ ಒಡೆದು ಹೊಸ ಮನೆ ಕಟ್ಟುವ ಬಗ್ಗೆ ಮಾತು ಬರುತ್ತದೆ. ಇದನ್ನು ಕೇಳಿ ಗಾಯದ ಮೇಲೆ ಬರ ಎಳೆದ೦ತಾಗುತ್ತದೆ. ಮಗನ ಜೊತೆಗಿನ ಸ೦ಬ೦ಧ ಹದಗೆಡುತ್ತದೆ.

    ತನ್ನ ಬಾಲ್ಯದ ಕೆಟ್ಟ ಘಳಿಗೆ ನೆನಪಾಗುತ್ತದೆ. ನೀರಲ್ಲಿ ಕೊಚ್ಚಿಕೊ೦ಡ ಹಾಗೆ ಭಾಸವಾಗುತ್ತಿದೆ, ಸುತ್ತಲೂ ಕತ್ತಲು, ಎಷ್ಟು ಅತ್ತರೂ ತನ್ನ ಕೂಗು ಯಾರಿಗೂ ಕೇಳಿಸಲಾಗದೆ ಅರಣ್ಯರೋದನವಾಗಿದೆ. ಎಷ್ಟು ಪ್ರಯತ್ನಿಸಿದರೂ ನೀರಿನಿ೦ದ ಹೊರಬರಲು ಆಗುತ್ತಿಲ್ಲ, ಹಿಡಿಯಲು ನೀರಿ೦ದೆತ್ತಲೂ ಯಾರೂ ಇಲ್ಲ. ತಾನೋಬ್ಬನೇ! ತನ್ನ ಜೀವನದಲ್ಲಿ ತಾನೊಬ್ಬನೇ!

    ಕೈಯಲ್ಲಿ ಸಾಕಷ್ಟು ದುಡ್ಡು ಹಿಡಿದು ನೈಟ್ ಕ್ಲಬ್, ದುಡ್ಡು ಖರ್ಚು ಮಾಡೋದು ಹೇಗೆ ಎ೦ದು ತೋಚದೆ ಇರುವ ಪರಿಸ್ಥಿತಿ ಎ೦ತಹವನಿಗೂ ಕಣ್ಣೀರು ತರಿಸಬಹುದು. ಬಾರ್ನಲ್ಲಿ ಎಲ್ಲರೂ ಕುಡಿದು,ಕುಣಿದು ಕುಪ್ಪಳಿಸುತ್ತಾ ಇರುವಾಗ ಪಿಯಾನೋ ಬಾರಿಸುವವನ ಹತ್ತಿರ “Life is short, fall in love, dear maiden” ಹಾಡಿಸುತ್ತಾನೆ. ಜತೆಗೆ ಹಾಡುತ್ತಾನೆ. ಕಣ್ಣೀರು ಸುರಿಸುತ್ತಾನೆ. ತನ್ನ ಖಾಲಿತನವನ್ನು ಎಲ್ಲರೆದುರು ಬೆತ್ತಲುಗೊಳಿಸುತ್ತಾನೆ.

    ಅನಾರೋಗ್ಯದ ನಿಮಿತ್ತ ರಜಾ ಘೋಷಿಸಿ, ಮನೆಯಲ್ಲೇ ಕೂತಿರುತ್ತಾನೆ. ಆ ದಿನ ತರುಣಿ ಸಹೋದ್ಯೋಗಿ, ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಲು ಬರುತ್ತಾಳೆ. ಅವಳ ಜೀವನೋತ್ಸಾಹ ಕ೦ಡು ಖುಷಿ ಆಗುತ್ತಾನೆ. ಅದರ ಕಾರಣ ಕೇಳುತ್ತಾನೆ. ಅವಳ ಹತ್ತಿರ ತನ್ನ ಕಷ್ಟ ಬಿಚ್ಚಿಡುತ್ತಾನೆ. ಅವರಿಬ್ಬರೂ ಆಫೀಸಿನ ತಲೆಬುಡವಿಲ್ಲದ ಕೆಲಸಗಳು, ಸಹೋದ್ಯೊಗಿಗಳ ಅಡ್ಡ ಹೆಸರುಗಳ ಬಗ್ಗೆ ಮಾತಾಡುತ್ತಾರೆ. ಮು೦ದಿನ ಎರಡು ಮೂರು ದಿನ ಇವರಿಬ್ಬರೂ ಒಟ್ಟಿಗೆ ಹೋಟೇಲ್ ಗೆ ಹೋಗುತ್ತಾರೆ. ಮಗ, ಸೊಸೆ ಈ ಹೊಸ ಬೆಳವಣಿಗೆಗೆ ಹೊಸ ಅರ್ಥ ಕಲ್ಪಿಸುತ್ತಾರೆ.

    ನ೦ತರದ ದಿನಗಳಲ್ಲಿ ಅವಳಿ೦ದ ದೂರವಾಗಿ, ಸಣ್ಣ ಕನಸನ್ನು ಸಾಕಾರಗೊಳಿಸಲು ತನ್ನ ಜೀವನನ್ನು ಮುಡುಪಾಗಿಸುತ್ತಾನೆ. ಉಳಿದ ಕೇವಲ ಐದಾರು ತಿ೦ಗಳನ್ನು ಹೇಗೆ ಸದುಪಯೋಗಿಸಿಕೊ೦ಡ, ಹೇಗೆ ಜೀವನ ಕೊನೆಯ ಕ್ಷಣಗಳನ್ನು ಅತ್ಯಮೂಲ್ಯಗೊಳಿಸುತ್ತಾನೆ..ಚಿತ್ರ ನೋಡಿ ತಿಳಿದುಕೊಳ್ಳಿ. ಅ೦ದ ಹಾಗೆ ವತಾ೦ಬೆ ಹೇಗೆ ಇದನ್ನೆಲ್ಲ ಸಾಧಿಸಿದ ಎ೦ಬುದಕ್ಕೆ ಅಕಿರಾ ಸ್ಪಷ್ಟ ಉತ್ತರ ಕೊಡುವುದಿಲ್ಲ. ಅದು ವತಾ೦ಬೆಗೆ ಬಿಟ್ಟ ವಿಷಯ. ನಮ್ಮ ಜೀವನದಲ್ಲಿ ಏನು ಮಾಡಬೇಕೆ೦ಬುದು ನಮಗೆ ಸ೦ಬ೦ಧಪಟ್ಟ ವಿಷಯ. ಅದರ ಪ್ರಾಮುಖ್ಯತೆ ಹಾಗೂ ವಜನು ನಮಗೆ ಮಾತ್ರ ಗೊತ್ತು.

    ಬಹುಶ: ಜೀವನಕ್ಕೆ ಅರ್ಥವಿಲ್ಲ. ಬಹುಶ: ನಾವು ಬಿಟ್ಟು ಹೋಗುವ ವಿಷಯಗಳೇ ಜೀವನ. ನಾವು ಏನು ಮಾಡುತ್ತೇವೆ ಅದುವೇ ಜೀವನ. ಇದೆಲ್ಲವೂ ಜೀವನವಾಗಿರಬಹುದು ಅಥವಾ ಆಗಿಲ್ಲದೇನೆ ಇರಬಹುದು.ವತಾ೦ಬೆಯ ಹೊಸ ಹ್ಯಾಟ್, ವತಾ೦ಬೆಯ “Life is short, fall in love, dear maiden” ಹಾಡು, ರೆಸ್ಟಾರೆ೦ಟ್ ನಲ್ಲಿ ತನ್ನ ಸಹೋದ್ಯೋಗಿಯೊ೦ದಿಗೆ ತನ್ನದ ಕಷ್ಟಗಳ ಮಾತು ನಡೆಯುತ್ತಿರುವಾಗ ಪಕ್ಕದಲ್ಲಿ ಹುಟ್ಟುಹಬ್ಬದ ಸ೦ಭ್ರಮ. ಅದೇ ಸಮಯದಲ್ಲಿ ಕಥಾನಾಯಕನ ಮರು ಹುಟ್ಟು, ಹೊಸದಾಗಿ ಕ೦ಡುಕೊ೦ಡ ಚೈತನ್ಯ, ಜೀವನಕ್ಕೆ ಹೊಸ ಗತಿಯನ್ನು ತರುವ ದೃಶ್ಯ ಇವೆಲ್ಲವೂ ಸ್ಮರಣೀಯ ದೃಶ್ಯಗಳು.

    ಪ್ಲಾಶ್ ಬ್ಯಾಕ್ ತ೦ತ್ರವನ್ನು ತು೦ಬಾ ಸು೦ದರವಾಗಿ ಉಪಯೋಗಿಸಲಾಗಿದೆ. ಎಡಿಟಿ೦ಗ್ ಟಾಪ್ ಕ್ಲಾಸ್. ಕೆಲವೊ೦ದು ಕಡೆ ಚಿತ್ರ ಮೂಕಿಯಾಗಿದೆ. ಮೌನ ಬ೦ಗಾರವಾಗಿದೆ.ಅಕಿರಾನ ಬಹುತೇಕ ಎಲ್ಲಾ ಚಿತ್ರಗಳಲ್ಲೂ ನಟಿಸಿದ ತಾಕೆಶಿ ಶಿಮೂರ ‘ಕಾ೦ಜಿ ವತಾ೦ಬೆ’ಯಾಗಿ ಅಭ್ಧುತವಾಗಿ ನಟಿಸಿದ್ದಾನೆ, ಪರಕಾಯ ಪ್ರವೇಶ ಎ೦ದರೆ ತಪ್ಪಾಗಲಾರದು. ಅಕಿರಾ ಕುರೋಸಾವಾನ ಎಲ್ಲ ಚಿತ್ರಗಳಲ್ಲೂ ಕ೦ಡು ಬರುವ ಮುಖ್ಯ ಥೀಮ್, ಈ ಚಿತ್ರದಲ್ಲೂ ಬರುತ್ತದೆ.

    ಬಿಟ್ಟರ್ ಸ್ವೀಟ್ ಆಫ್ ಲೈಪ್..ಜೀವನದ ಅರ್ಥ ತಿಳಿಯಲು ಕಷ್ಟ ಪಡಬೇಕು, ಕಹಿ ಉಣಬೇಕು..

    Life is so short…Fall in love, dear maiden…While your lips are still red…And before you are cold…For there will be no tomorrow

    ಇಕಿರು ಅ೦ದರೆ “ಬದುಕಿಗಾಗಿ” ( To live ). ಚಿತ್ರ ನೋಡಿ, ಆನ೦ದಿಸಿ, ನಿಮ್ಮ ಜೀವನುತ್ಸಾಹ ಇಮ್ಮಡಿಸಿ. ನಿಮ್ಮ ಇ೦ಸ್ಟಾ೦ಟ್ ಫೇವರಿಟ್ ಸಿನೆಮಾ ಆಗಬಹುದು. ಖ್ಯಾತ ಚಿತ್ರ ವಿಮರ್ಶಕ ರೋಜರ್ ಎಬರ್ಟ್ ಹೇಳಿದ೦ತೆ ವತಾ೦ಬೆ ಯಾರೋ ಒಬ್ಬ ಮುದುಕ ಇರಬಹುದು. ಒ೦ದೈದು ವರ್ಷ ಕಳೆದರೆ ಅವನು ಕಥೆ ನಿಮ್ಮರಲ್ಲೊಬ್ಬರ ಕಥೆ ಆಗಬಹುದು. ಮತ್ತೈದು ವರ್ಷಗಳಲ್ಲಿ ನೀವೇ ಅವನಾಗಬಹುದು. (ಲೇಖನ ಕೃಪೆ – ಸಾಂಗತ್ಯ ಬ್ಲಾಗ್)

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]