ರವಿರಾಜ್ ಗಲಗಲಿ ಬರೆದ ನಿಶಾಂತ್ ಸಿನಿಮಾದ ಬರಹವಿದು. ಶ್ಯಾಂ ಬೆನಗಲ್ ನಿರ್ದೇಶಿಸಿದ್ದ ಚಿತ್ರ, ಗೋವಿಂದ ನಿಹಲಾನಿಯವರ ಛಾಯಾಗ್ರಹಣ. ಒಂದು ಅದ್ಭುತ ಚಿತ್ರದ ಬಗೆಗಿನ ಲೇಖನವಿದು.
ಆ ಪುಟ್ಟ ಹಳ್ಳಿಯಲ್ಲಿ ಮೌನವೇ ಸರ್ವತ್ರ ಸಾಧನ, ಮೌನವೇ ಭಾಷೆ, ಮೌನದ್ದೇ ಸಂವಹನ. ಗ್ರಾಮದ ಜಮೀನ್ದಾರ ಸಹೋದರರು ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಮೌನವೇ ಉತ್ತರ. ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ 1976 ರಲ್ಲಿ ನಿರ್ದೇಶಿಸಿದ ನಿಶಾಂತ್ ಚಿತ್ರದ ಒನ್ ಲೈನ್ ಕತೆಯಿದು.
ನಿಶಾಂತ್ ಅರ್ಥಾತ್ ರಾತ್ರಿಯ ಕೊನೆ, ಚಿತ್ರದಲ್ಲೆಲ್ಲ ಕತ್ತಲೆ ಬೆಳಕಿನ ಆಟವನ್ನಾಡಿದ್ದಾರೆ ಶ್ಯಾಂ. 1945 ರಲ್ಲಿ ಆಂಧ್ರ ಪ್ರದೇಶದ ಗ್ರಾಮವೊಂದರಲ್ಲಿ ನಡೆಯುವ ಜಮೀನ್ದಾರರ ದೌರ್ಜನ್ಯ ಇಲ್ಲಿ ಕತೆಯಾಗಿದೆ. ಆ ಹಳ್ಳಿಯಲ್ಲಿ ಜಮೀನ್ದಾರರು ಹೇಳಿದ್ದೆ ಮಾತು, ಆಡಿದ್ದೇ ಆಟ. ಹಿರಿಯಣ್ಣ ಹಾಗೂ ಇಬ್ಬರು ಸಹೋದರರ ಜಮೀನ್ದಾರರ ಕುಟುಂಬ ಅಕ್ಷರಶ: ಹಳ್ಳಿಯನ್ನು ನರಕವಾಗಿಸುತ್ತಾರೆ. ಸಂತೆಯಲ್ಲಿ ಕೋಳಿ ಮಾರುವವಳ ಬುಟ್ಟಿಗೆ ಜಮೀನ್ದಾರರ ಸಹೋದರರು ಕೈ ಹಾಕಿದರೆ ಬುಟ್ಟಿಯಲ್ಲಿನ ಕೋಳಿಗಳು ಅವರ ಹೊಟ್ಟೆ ಹಸಿವು ತಣಿಸಿದರೆ, ಕೋಳಿ ಮಾರುವಾಕೆ ದೇಹದ ಹಸಿವು ಪೂರೈಸಬೇಕು. ಹಿರಿಯಣ್ಣ (ಅಮರೀಶ್ ಪುರಿ), ಕಿರಿಯವ (ಡಾ.ಮೋಹನ್ ಅಗಾಸೆ), ಚಿಕ್ಕ ಸಹೋದರ (ಅನಂತ್ ನಾಗ್) ಸುತ್ತ ಚಿತ್ರದ ಕತೆ ಸುತ್ತುತ್ತದೆ.
ಗ್ರಾಮಕ್ಕೆ ಬರುವ ಶಾಲಾ ಮಾಸ್ತರ್(ಗಿರೀಶ್ ಕಾರ್ನಾಡ್) ಹೆಂಡತಿ ಸುಶೀಲಾ (ಶಬಾನಾ ಆಜ್ಮಿ) ಜಮೀನ್ದಾರ ಸಹೋದರರ ಕಣ್ಣಿಗೆ ಬೀಳುತ್ತಾಳೆ. ಅದೊಂದು ದಿನ ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗುವ ಜಮೀನ್ದಾರರು ಆಕೆಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಆಸೆ ಪೂರೈಸಿಕೊಳ್ಳುತ್ತಾರೆ. ಅದು ಜಮೀನ್ದಾರರ ವಿಷಯವಾಗಿರುವುದರಿಂದ ಯಾರೂ ಬಾಯಿ ಬಿಡುವುದಿಲ್ಲ. ಪೊಲೀಸರು, ಕಲೆಕ್ಟರ್ ಕಚೇರಿ ಹೀಗೆ ಕಂಡ ಕಂಡಲೆಲ್ಲ ಅಲೆದಾಡಿ ಪತ್ನಿಯನ್ನು ವಾಪಸ್ ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾಗುತ್ತವೆ. ಇತ್ತ ಜಮೀನ್ದಾರರ ಮನೆಯ ವಾತಾವರಣಕ್ಕೆ ಹೊಂದಿಕೊಂಡ ಸುಶೀಲಾ ಪ್ರತಿರೋಧದ ಶಕ್ತಿ ಕಳೆದುಕೊಳ್ಳುತ್ತಾಳೆ. ಜಮೀನ್ದಾರನ ಕಿರಿಯ ಸಹೋದರ (ನಾಸಿರುದ್ದೀನ್ ಶಾ)ಆಕೆಯಲ್ಲಿ ಅನುರಕ್ತನಾಗುತ್ತಾನೆ.
ಒಮ್ಮೆ ದೇವಾಲಯದ ಎದುರು ಮಾಸ್ತರ್ ಹಾಗೂ ಆತನ ಪತ್ನಿ ಮುಖಾಮುಖಿಯಾಗುತ್ತಾರೆ. ನನ್ನನ್ನು ಅಪಹರಿಸಿಕೊಂಡು ಹೋದರೂ ನೀವು ಬಿಡಿಸಲು ಏಕೆ ಯತ್ನಿಸಿಲ್ಲ ಎಂದು ಪ್ರಶ್ನಿಸುವ ಸುಶೀಲಾ ಜಮೀನ್ದಾರನ ಮನೆಗೆ ವಾಪಸ್ಸಾಗುತ್ತಾಳೆ. ದೇವಾಲಯದ ಪೂಜಾರಿಯಿಂದ ನೈತಿಕ ಸ್ಥೈರ್ಯ ಪಡೆಯುವ ಶಾಲಾ ಮಾಸ್ತರ್ ಉತ್ಸವದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಿ ದಂಗೆ ಏಳುತ್ತಾನೆ. ಗ್ರಾಮಸ್ಥರ ಆಕ್ರೋಶಕ್ಕೆ ಜಮೀನ್ದಾರ ಹಾಗೂ ಆತನ ಇಬ್ಬರು ಸಹೋದರರು ಹಾಗೂ ಕೊನೆಯ ಸಹೋದರನ ಪತ್ನಿ ರುಕ್ಮಿಣಿ ಕೊಲೆಯಾಗುತ್ತಾರೆ. ಕೊನೆಯ ಸಹೋದರ (ನಾಸಿರುದ್ದೀನ್ ಶಾ)ನೊಂದಿಗೆ ಸುಶೀಲಾ ಪರಾರಿಯಾಗುತ್ತಾಳೆ. ಜಮೀನ್ದಾರರೊಂದಿಗೆ ಹೋರಾಟದಲ್ಲಿ ಕೈಗೆ ಗುಂಡು ಬಡಿದು ಗಾಯಗೊಂಡ ಮಾಸ್ತರ್ ಪತ್ನಿಯನ್ನು ಹುಡುಕುತ್ತ ಅಸಹಾಯಕನಾಗಿ ನಿಲ್ಲುತ್ತಾನೆ. ಕತ್ತಲಿಗೆ ಕೊನೆಯಿದೆ, ಬೆಳಗು ಬಂದೇ ಬರುತ್ತದೆ ಎಂಬುದನ್ನು ಹಲವು ದೃಶ್ಯಗಳ ಮೂಲಕ ಶ್ಯಾಂ ಚಿತ್ರದಲ್ಲಿ ನಿರೂಪಿಸುತ್ತಾರೆ.
ಚಿತ್ರದ ಮೊದಲ ದೃಶ್ಯವೇ ಮುಂಜಾವಿನಲ್ಲಿ ಮಂತ್ರ ಹೇಳುತ್ತ ದೇವಾಲಯದ ಬಾಗಿಲು ತೆಗೆಯುವ ಪೂಜಾರಿಯದ್ದು. ಅಸಹಾಯಕತೆ, ದೌರ್ಜನ್ಯಕ್ಕೆ ಬಲಿಯಾದ ಸುಶೀಲಾ ತನ್ನ ಮೇಲೆ ಮಮಕಾರ, ಪ್ರೀತಿ ತೋರಿಸಿದವನ ಹೆಂಡತಿ ರುಕ್ಮಿಣಿಯ ಗೆಳತಿಯೂ ಆಗುತ್ತಾಳೆ. ಸ್ವಾತಂತ್ರ್ಯಪೂರ್ವ ಜಮೀನ್ದಾರಿ ಪದ್ಧತಿಯ ದೌರ್ಜನ್ಯಗಳ ಬಗ್ಗೆ ಹಲವು ಚಿತ್ರಗಳು ತೆರೆ ಕಂಡಿದ್ದರೂ ನಿಶಾಂತ್ ಮಾತ್ರ ಈ ಪ್ರಯತ್ನಗಳಲ್ಲಿ ವಿಭಿನ್ನವಾಗುತ್ತದೆ. ಜಮೀನ್ದಾರರ ಆಟಾಟೋಪ, ದೃಶ್ಯಗಳ ಮಧ್ಯದ ಮೌನ, ಪರಿಣಾಮಕಾರಿ ಸಂಭಾಷಣೆ ಹಾಗೂ ಸರಳ ಸಂಗೀತ ಚಿತ್ರದ ಹೈಲೈಟ್. ದೌರ್ಜನ್ಯವನ್ನು ಹಿಂಸೆಯ ರೂಪದಲ್ಲಿ ಬಿಂಬಿಸದೇ ಮಾತು ಹಾಗೂ ಮೌನದ ಮೂಲಕ ರೂಪಿಸಿ ವಿಶಿಷ್ಟ ಅನುಭವ ನೀಡುತ್ತಾರೆ ಬೆನಗಲ್. ಅಂದ ಹಾಗೆ ಈ ಚಿತ್ರದಲ್ಲಿ ಪ್ರತಿಭಾವಂತರ ಪಡೆಯೇ ಇದೆ.
ಮರಾಠಿ ರಂಗಭೂಮಿಯ ಹೆಸರಾಂತ ನಟ, ನಿರ್ದೇಶಕ ಡಾ.ಮೋಹನ್ ಆಗಾಸೆ, ಕನ್ನಡದ ಖ್ಯಾತ ನಟ ಅನಂತ ನಾಗ್, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಕುಲಭೂಷಣ್ ಕರಬಂದಾ, ಅಂಕುರ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಾಧು ಮೆಹರ್ ಚಿತ್ರದಲ್ಲಿದ್ದಾರೆ. ಸ್ಮಿತಾ ಪಾಟೀಲರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಯೂ ಈ ಚಿತ್ರಕ್ಕಿದೆ. ಸಂಭಾಷಣೆ ಬರೆದ ಸತ್ಯದೇವ್ ದುಬೆ ಕೂಡ ಪೂಜಾರಿ ಪಾತ್ರದಲ್ಲಿದ್ದಾರೆ. ಖ್ಯಾತ ಲೇಖಕ ವಿಜಯ್ ತೆಂಡೂಲ್ಕರ್ ಕತೆ ಆಧಾರಿತ ಚಿತ್ರವನ್ನು ಆಂಧ್ರ ಪ್ರದೇಶದ ಪೂಚಂಪಲ್ಲಿಯಲ್ಲಿ ಚಿತ್ರಿಸಲಾಗಿದೆ.
ಪ್ರಶಸ್ತಿಗಳು : ಉತ್ತಮ ಹಿಂದಿ ಚಿತ್ರ, ಉತ್ತಮ ನಿರ್ದೇಶಕ, 1977, ಕ್ಯಾನೆಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚಿಕಾಗೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡಿದೆ.
ಸಂಗೀತ : ವನರಾಜ್ ಭಾಟಿಯಾ ನಿರ್ಮಾಪಕರು : ಮೋಹನ್ ಬಿಜಲಾನಿ, ಫ್ರೀನಾ ವರೇರಾ, ಛಾಯಾಗ್ರಹಣ : ಗೋವಿಂದ ನಿಹಲಾನಿ
Rate this:
Rate This