ಬೆಟ್ಟದ ಜೀವ-ಇದು ನನ್ನ ಅನಿಸಿಕೆ

ಅರ್ಚನಾ ಹೆಬ್ಬಾರ್ ಹೊಸಮಠದವರು. ಅವರ ಊರಿನ ಸುತ್ತಲು ಚಿತ್ರೀಕರಿಸಿರುವ ಬೆಟ್ಟದ ಜೀವ ಚಿತ್ರವನ್ನು ನೋಡಿ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಎಲ್ಲರಿಗೂ ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗಿದೆ.

ಕಾರಂತರ ’ಬೆಟ್ಟದ ಜೀವ’ ಕಾದಂಬರಿ ನನ್ನ ಅತೀ ಪ್ರಿಯವಾದ ಕಾದಂಬರಿಗಳ ಪೈಕಿ ಒಂದು. ನಾನು ಅದನ್ನು ’ನೋಡಿದ್ದು ’ ಮೂರನೇ ತರಗತಿಯಲ್ಲಿರುವಾಗ ನನ್ನ ಗುರುಗಳ ಬಳಿ. ’ಓದಿದ್ದು ’ ಕಾಲೇಜಿಗೆ ಬಂದ ಮೇಲೆ. ನನ್ನ ಆಪ್ತ ಗೆಳತಿಯೋರ್ವಳು ಅದರ ಬಗ್ಗೆ ವಿಮರ್ಶೆ ಬರೆದು, ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದಾಗ ನಾನು ಕಾದಂಬರಿಯನ್ನೂ ಆಕೆ ಬರೆದ ವಿಮರ್ಶೆಯನ್ನೂ ಜತೆ ಜತೆಯಾಗಿಯೇ ಓದಿದೆ.

’ಬೆಟ್ಟದ ಜೀವ ’ ಕಾಡಿನ ಮಧ್ಯೆ ಗೂಡು ಕಟ್ಟಿಕೊಂಡು ಪ್ರಕೃತಿಯ ಜತೆ ಜತೆಗೆ ಸಾಗಿಸುವ ಗೋಪಾಲಯ್ಯನವರು ಮತ್ತು ಅವರ ಪತ್ನಿ ಶಂಕರಿಯ ಕಥೆ.ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಚಿತ್ರಿತವಾಗಿದೆ. ಕಾದಂಬರಿ ನಡೆಯುವ ಸ್ಥಳ ನನ್ನ ಹುಟ್ಟೂರಾದ ಹೊಸಮಠದ ಆಸುಪಾಸು-ಪಂಜ ಮತ್ತು ಸುಬ್ರಹ್ಮಣ್ಯ. ಮತ್ತು ಅದರಲ್ಲಿ ಕಾಣಸಿಗುವ ಪ್ರಕೃತಿಯ ವರ್ಣನೆಗಳನ್ನು ನಾನು ಪ್ರತ್ಯಕ್ಷವಾಗಿ ಕಾಣುತ್ತಾ ಬೆಳೆದವಳಾದ ಕಾರಣ ಈ ಕಾದಂಬರಿ ನನ್ನ ಮನಸ್ಸಿಗೆ ಮತ್ತಷ್ಟು ಆಪ್ತವಾದದ್ದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೆ ಮುಗಿಯಲಿಲ್ಲ. ಸಮಾನ ಮನಸ್ಕ ಸ್ನೇಹಿತರು ಭೇಟಿಯಾದಾಗ ’ಬೆಟ್ಟದ ಜೀವ’ ನುಸುಳುವುದುಂಟು.ಹೇಗೆ ಅಂತೀರಾ ? ” ಬೆಟ್ಟದ ಜೀವದಲ್ಲಿ ಬರುವ ಥರ ದೊಡ್ಡ ಗಿಂಡಿಯಲ್ಲಿ ಕಾಫಿ ಕುಡಿಯಬೇಕು ಎಂತಲೋ ಅಥವಾ ’ಬೆಟ್ಟದ ಜೀವದಲ್ಲಿ ಬರುವ ಥರ ಎಣ್ಣೆ ಸ್ನಾನ ಮಾಡಬೇಕು’ಎಂತಲೋ ಮಾತು ’ಪರಮ ಸುಖದ ’ ಕಲ್ಪನೆಗಳಲ್ಲಿ ಒಂದಾಗಿ ಹೋಗುತ್ತದೆ!!

ಬೆಟ್ಟದ ಜೀವ ಇಷ್ಟೆಲ್ಲಾ ಆಗಿರುವಾಗ ಈ ಸಿನೆಮಾ ಬಂದಾಗ ನನಗೆ ಇದನ್ನು ನೋಡಲೇಬೇಕೆಂದು ಅನಿಸಿದುದರಲ್ಲಿ ಅಚ್ಚರಿಯೇನೂ ಇಲ್ಲ. ಕಾದಂಬರಿ ಮತ್ತು ಚಲನಚಿತ್ರ ಎರಡೂ ವಿಭಿನ್ನ ಮಾಧ್ಯಮಗಳು. ಕಾದಂಬರಿಯು ಕೆಲವೊಂದು ಸಂಗತಿಗಳನ್ನು ಅತ್ಯುತ್ಕೃಷ್ಟವಾಗಿ ಅಭಿವ್ಯಕ್ತಿಗೊಳಿಸಿದರೆ ಮತ್ತೆ ಕೆಲವು ವಿಚಾರಗಳನ್ನು ಚಲನಚಿತ್ರ ಸೊಗಸಾಗಿ ಧ್ವನಿಸೀತು. ’ಬೆಟ್ಟದ ಜೀವ’ ದ ನಿರೂಪಣೆ ಮತ್ತು ಕಥಾನಾಯಕನ ಆಲೋಚನೆಗಳನ್ನು ಚಲನಚಿತ್ರದಲ್ಲಿ ಯಾವ ರೀತಿ ತೋರಿಸಿಯಾರೆಂದು ನನಗೆ ಕುತೂಹಲವಿತ್ತು.

ಸಿನೆಮಾದಲ್ಲಿ ಕೆಲವು ಕಡೆ ಮೂಲ ಕಥೆಗಿಂತ ಕೊಂಚ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಚಳುವಳಿಯು ಕಥೆಯ ಜತೆ ಜತೆಗೆ ಸಾಗುತ್ತದೆ. ಚಳುವಳಿಯಲ್ಲಿ ಭಾಗವಹಿಸಿದ ಶಿವರಾಮು ಓಡುತ್ತಾ ಓಡುತ್ತಾ ದೇರಣ್ಣ ಮತ್ತು ಬಟ್ಯನನ್ನು ಭೇಟಿಯಾಗುವುದು ಮತ್ತು ಅವರ ಮೂಲಕ ಭಟ್ಟರ ಮನೆ ತಲುಪುವುದರಿಂದ ಕಥೆ ಶುರುವಾಗುತ್ತದೆ. ಮಗನ ಅಗಲಿಕೆಯಿಂದ ಕಂಗಾಲಾಗಿರುವ ದಂಪತಿಗಳು ಶಿವರಾಮುವಿನಲ್ಲಿ ಮಗನನ್ನು ಕಾಣುತ್ತಾರೆ. ಊಟ,ತಿಂಡಿ ನೀಡಿ ಉಪಚರಿಸುತ್ತಾರೆ. ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಅವರ ಮಗನು ಮದುವೆಯಾಗಿ ಅವರಿಂದ ದೂರವಾಗಿರುತ್ತಾನೆ. ಆದರೆ ಇಲ್ಲಿ ಎರಡು-ಮೂರು ಬೇರೆ ಕಾರಣಗಳು ಹೆಣೆದುಕೊಳ್ಳುತ್ತವೆ. ಭಟ್ಟರು ತಮ್ಮ ಸ್ವಂತ ಮಗಳು-ಅಳಿಯನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದ ಲಕ್ಷ್ಮಿ, ನಾರಾಯಣರ ಮನೆಗೆ ಹೋದಾಗ ಲಕ್ಷ್ಮಿಯು “ಶಂಭು ( ಭಟ್ಟರ ಮಗ) ,ತನ್ನ ಜತೆ ಸಲುಗೆ ಮೀರಿ ವರ್ತಿಸಿದ ವಿಚಾರವನ್ನು ಅರುಹುತ್ತಾಳೆ. ಆದರೆ ತಾನು ಅದಕ್ಕೆ ಯಾವ ಪ್ರೋತ್ಸಾಹವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟುಹೋದ ’ ಎಂದು ಹೇಳುತ್ತಾಳೆ.

ಭಟ್ಟರ ಪತ್ನಿ- “ತಾನು ಮಗನಿಗೆ ಚಿನ್ನವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟು ಹೋದನೆಂದು ಹಲುಬಿ,ಚಿನ್ನವನ್ನು ಶಿವರಾಮುವಿನ ಕೈಗೊಪ್ಪಿಸುವ ದೃಶ್ಯವಂತೂ ಮನಕಲಕುತ್ತದೆ. ಹೊನ್ನಿನ ಮೋಹಕ್ಕಿಂತಲೂ ಸಂತಾನದ ಮೋಹವೇ ಮಿಗಿಲೆಂದು ಆಕೆ ಹೇಳುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ಭಟ್ಟರು ಚಳುವಳಿಗೆಂದು ಮನೆ ಬಿಟ್ಟು ಹೋದ ಮಗನ ಸಂಗತಿಯನ್ನು ತಿಳಿಸುತ್ತಾರೆ. “ಪ್ರಕೃತಿಯನ್ನು ಮಣಿಸಿರುವ ತನಗೆ ಮಗನನ್ನು ಮಣಿಸಲು ಅಸಾಧ್ಯವಾಯಿತು ಎಂಬುವುದು ಬಲು ದೊಡ್ಡ ಕೊರಗಾಗುತ್ತದೆ. ಮಗನ ಛಾಯಾಚಿತ್ರವನ್ನು ನೋಡುವಾಗ ಅವರಾಡುವ ಮಾತು ” ವಾಸ್ತವದಲ್ಲಿ ಕಾಣಲಾಗದ್ದನ್ನು ನೆರಳಿನಾಟದಲ್ಲಿ ಕಾಣುವುದು ಹೇಗೆ” ಎನ್ನುವುದು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.

ಮೂಲ ಕಥೆಯಲ್ಲಿ ಶಿವರಾಮು ಅವರಿಗೆ ಜ್ವರ ಬರುವ ವಿಚಾರವಿದ್ದರೆ ಇಲ್ಲಿ ಅವರಿಗೆ ಕಾಲು ಉಳುಕುವುದು, ’ಮಾಂಕು’ ಬಂದು ಔಷಧಿ ನೀಡುವುದು, ನಾರಾಯಣ,ಲಕ್ಷ್ಮಿಯರು ಅವರನ್ನು ನೋಡಿಕೊಳ್ಳುವುದು ಇತ್ಯಾದಿ ಮಾರ್ಪಾಡು ಮಾಡಿದ್ದಾರೆ. ಹುಲಿಯನ್ನು ಕೊಲ್ಲಬೇಡಿರೆಂದು ಹೇಳುವುದು ’ಅಹಿಂಸಾತ್ಮಕ ಚಳುವಳಿಯ ’ ಒಂದು ರೂಪ ಎನ್ನಬಹುದು. ಅಂತೆಯೇ ’ಯಾವ ಜೀವಿಗೂ-ಮನುಷ್ಯನಿಗೂ,ಪ್ರಾಣಿಗೂ ತನ್ನ ಇಚ್ಛೆಯ ಪ್ರಕಾರ ಜೀವಿಸಲು ಬಿಡುವುದು, ಸ್ವಾತಂತ್ರ್ಯ ನೀಡುವುದು ಎಂಬ ಅರ್ಥವನ್ನೂ ಬಿಂಬಿಸುತ್ತದೆ. ಮಗನ ಅಗಲುವಿಕೆಯ ನೋವನ್ನು ಕಂಡ ಶಿವರಾಮು ತನ್ನ ಹೆತ್ತವರಲ್ಲಿ ಇಂಥ ನೋವನ್ನು ಉಂಟುಮಾಡಲಾರೆ ಎನ್ನುತ್ತಾ ತನ್ನ ಹೆತ್ತವರನ್ನು ನೋಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಭಟ್ಟ್ರು ಮಗನನ್ನು ಹುಡುಕಲು ಪುಣೆಗೆ ಹೊರಡುವಲ್ಲಿ ಕಥೆ ಕೊನೆಗೊಳ್ಳುತ್ತದೆ. ಚಲನಚಿತ್ರದಲ್ಲಿ ಆಧುನಿಕ ಕಾಲದಲ್ಲಿ ಮಧ್ಯ ವಯಸ್ಕ ಶಿವರಾಮು ಅವರು ಮಗನ ಜತೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬರುವುದು,ಅಲ್ಲಿಯ ಪ್ರಕೃತಿಯನ್ನು ಆರಾಧಿಸುವುದು, ಮತ್ತು ವೃದ್ಧ ದಂಪತಿಗಳ ಮಾತನ್ನು ಮೆಲುಕು ಹಾಕುವಲ್ಲಿ ಚಲನಚಿತ್ರಕ್ಕೆ ತೆರೆ ಬೀಳುತ್ತದೆ.

ಇಡೀ ಚಿತ್ರದ ಚಿತ್ರೀಕರಣ ಬಹಳ ಸೊಗಸಾಗಿದೆ. ಕಾಡು,ಬೆಟ್ಟ,ಗುಡ್ಡ,ನದಿ ಇವುಗಳ ಅನನ್ಯ ಸೌಂದರ್ಯವನ್ನು ಅತ್ಯಂತ ಸೊಗಸಾಗಿ ಚಿತ್ರೀಕರಣ ಮಾಡಿದ್ದಾರೆ. ಭೂತದ ಕೋಲ, ತೋಟ ಇವೆಲ್ಲ ತುಳುನಾಡಿನಲ್ಲಿ ಹುಟ್ಟಿ ಬೆಳೆದವರನ್ನೆಲ್ಲಾ ’ನಾಸ್ತಾಲ್ಜಿಯಾಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.ಭಟ್ಟರು, ಅವರ ಪತ್ನಿಯ ಅಭಿನಯವಂತೂ ಮನೋಜ್ನವಾಗಿದೆ. ದೇರಣ್ಣ,ಬಟ್ಯ ಅವರು ಹಾಡುವ ಹಾಡುಗಳು, ಅವರ ಮುಗ್ಧತೆಯಂತೂ ಕಣ್ಣಿಗೆ ಕಟ್ಟುತ್ತದೆ. ಸಂಭಾಷಣೆಯಲ್ಲಿ ತುಳು,ದಕ್ಷಿಣ ಕನ್ನಡ ಮತ್ತು ಹವ್ಯಕ ಶೈಲಿಯ ಕನ್ನಡ ಕಂಡುಬರುತ್ತದೆ. ದಕ್ಷಿಣ ಕನ್ನಡ ಶೈಲಿಯ ಕನ್ನಡವನ್ನು ಇನ್ನಷ್ಟು ಆಡುಮಾತಿನ ಶೈಲಿಯಲ್ಲಿ ಮಾತನಾಡುತ್ತಿದ್ದರೆ ಇನ್ನೂ ಸೊಗಸಾಗಿರುತ್ತಿತ್ತೇನೊ!

ಇಷ್ಟೆಲ್ಲಾ ಆದ ಮೇಲೆ ಇನ್ನೊಂದು ವಿಚಾರ ಹೇಳಬೇಕು. ಹಳ್ಳಿಗಳಲ್ಲಿ ಮಕ್ಕಳು ಉದ್ಯೋಗ ನಿಮಿತ್ತ ಪೇಟೆ ಸೇರುತ್ತಿದ್ದಾರೆ. ಹಳ್ಳಿಗಳಲ್ಲಿ ಕಾಣುವುದು ವೃದ್ಧ ತಂದೆ ತಾಯಿಯರು ಮಾತ್ರ. ನಮ್ಮೊರಿಗೆ ಬಂದರೆ ನಿಮಗೆ ಪ್ರತಿ ಮನೆಯಲ್ಲೂ ’ಬೆಟ್ಟದ ಜೀವ’ಗಳು ಕಾಣಸಿಕ್ಕೇ ಸಿಗುತ್ತಾರೆ!!

LEAVE A REPLY

Please enter your comment!
Please enter your name here

spot_img

More like this

Bhairava: ಭೈರವನ ಕೊನೆ ಪಾಠ, ಶಿವರಾಜಕುಮಾರ್‌ ರ ಹೊಸ ಚಿತ್ರಪಟ

ಹಾಗೆ ನೋಡುವುದಾದರೆ ನಟ ಶಿವರಾಜಕುಮಾರ್‌ 2024 ರಲ್ಲಿಹೊಸ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಯಾಕೋ ಇಂಗ್ಲಿಷ್‌ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಬಳಸುವ ಬ್ಯುಸಿ ಪದ...

Kannada Classics: ಇಂದಿಗೂ ಕ್ಲಾಸಿಕ್‌ ಬೂತಯ್ಯನ ಮಗ ಅಯ್ಯು

ಕನ್ನಡದ ಕ್ಲಾಸಿಕ್‌ ಚಲನಚಿತ್ರಗಳು ಹಲವು. ಈ ಕ್ಲಾಸಿಕ್‌ ಗಳೆಂದು ಗುರುತಿಸುವಾಗ ಅದರಲ್ಲಿ ವಾಣಿಜ್ಯಾತ್ಮಕ, ಕಲಾತ್ಮಕ, ಬ್ರಿಡ್ಜ್‌ ಸಿನಿಮಾ ಎಂದೆಲ್ಲ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ವಿಭಾಗಗಳ...

Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು...

ಮೊಟ್ಟೆ ಬೆಳೆದು ಒಡೆದು ಹೊರಬಂದರೆ ಮರಿ. ಇದೂ ರೂಪಾಂತರವೇ. ಈಗ ಇಂಥದೊಂದು ಮೊಟ್ಟೆ ಕಥೆ ಹೇಳಿದ ರಾಜ್‌ ಬಿ ಶೆಟ್ಟಿಯವರು ರೂಪಾಂತರಗೊಳ್ಳುತ್ತಿದ್ದಾರೆ. ತಮ್ಮ...