Don’t ask how I am feeling?…
ನನ್ನ ಅನುಭವಿಸುವ ಪರಿಯನ್ನು ಹೇಗೆಂದು ಕೇಳಬೇಡ…ಎಂಥಾ ಚೆಂದದ ಮಾತು. ಇರಾನಿಯನ್ ನಿರ್ದೇಶಕ ಮೊಹ್ಸೀನ್ ಮಖ್ಮಲ್ಬಫ್‌ನ ದಿ ಸೈಲೆನ್ಸ್ (ಸೊಕೋಟ್) ಚಿತ್ರ ಕಂಡ ಮೇಲೆ ಸದಾ ಉಳಿದುಕೊಳ್ಳುವ ಮಾತು.
ಬದುಕನ್ನು ಪ್ರತಿಯೊಬ್ಬರೂ ಅನುಭವಿಸುತ್ತಾರೆ, ಅವರದ್ದೇ ಆದ ಮಾದರಿಗಳಲ್ಲಿ, ಸಾಧನ-ವಿಧಾನಗಳಲ್ಲಿ. ಆದರೆ ಅನುಭವದ ತೀವ್ರತೆ, ಅನುಸರಿಸಿದ ವಿಧಾನ, ಬಳಸಿಕೊಂಢ ಸಾಧನ, ಮಾರ್ಗ ಮತ್ತು ಬಗೆ ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನ. ಅದು ಸಹಜವೂ ಸಹ. ಅದನ್ನು ಪ್ರಶ್ನಿಸಕೂಡದು. ಅವನು ಅನುಭವಿಸಿದ್ದಾನೆ, ಅನುಭವಿಸುತ್ತಿದ್ದಾನೆ ಎಂಬುದಷ್ಟೇ ಮುಖ್ಯ. ಅದು ಹೇಗೆ ಎಂಬುದು ಗೌಣ. ಆದ್ದರಿಂದ ನನ್ನೊಳಗಕಿನ ಅನುಭವದ ಕ್ಷಣವನ್ನು ಬಣ್ಣಿಸಲಾಗದು.
“ದಿ ಸೈಲೆನ್ಸ್’ ಹಿಡಿದು ಹೋಗುವ ಜಾಡು ಇದನ್ನೇ. ಒಮ್ಮೊಮ್ಮೆ ಮತ್ತೊಬ್ಬ ಇರಾನಿ ನಿರ್ದೇಶಕ ಮಜಿದ್ ಮಜ್ದಿಯ “ಕಲರ್ ಆಫ್ ಫ್ಯಾರಡೈಸ್’ ಮಾದರಿ ಎನಿಸುವುದಿದೆ. ಆದರೆ ಈ ಚಿತ್ರ ತೀರಾ ಭಿನ್ನ. ಏನನ್ನೋ ಹೇಳಬೇಕೆಂದು ಬಂದವ ಮಾತನ್ನು ಗಂಟಲಲ್ಲೇ ಉಳಿಸಿಕೊಂಡು ಮೌನದ ವ್ಯಾಖ್ಯಾನಕ್ಕೆ ತೊಡಗಿ ಮಾತಿಗಿಂತ ಹೆಚ್ಚಿನ ಅರ್ಥವನ್ನು ಅನಾವರಣಗೊಳಿಸುವ ಪರಿ ಈ ಚಿತ್ರದ್ದು. ಹಾಗಾಗಿ ನನಗೆ ಬಹಳ ಇಷ್ಟವಾಯಿತು. ಇದು ನನ್ನ ವಿಮರ್ಶೆಯಲ್ಲ. ನನಗೆ ಚಿತ್ರ ಇಷ್ಟವಾದ ಪರಿ ಮತ್ತು ಅದರೊಳಗಿನ ನೂರು ಸ್ವರಗಳನ್ನು ಬಿಡಿಸುವ ಪ್ರಯತ್ನವಷ್ಟೇ.
ಮಧುರ ಸ್ವರಗಳಲ್ಲಿ ಕಳೆದುಹೋಗುವವನ ಕಥೆ. ಖುರ್ಷದ್ ಪುಟ್ಟ ಬಾಲಕ ; ಅಂಧ. ಅವನ ತಾಯಿಯೊಂದಿಗೆ ತಜ್ ಕಿಸ್ತಾನದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ. ಚಿಕ್ಕಂದಿನಲ್ಲೇ ಮನೆ ನಿಭಾಯಿಸುವ ಹೊಣೆ. ಆತನಿಗೆ ಪಟ್ಟಣದ ಸಂಗೀತ ಉಪಕರಣಗಳಿಗೆ ಶ್ರುತಿ ಕೂಡಿಸುವ ಕೆಲಸ. ಅತ್ಯಂತ ಮಧುರವಾಗಿ ಹೇಳುವುದಾದರೆ ಉಪಕರಣಗಳಿಗೆ ಕಂಠ ತುಂಬುವವನು. ಐದು ದಿನದೊಳಗೆ ಬಾಡಿಗೆ ಕಟ್ಟದಿದ್ದರೆ ಮನೆಯಿಂದ ಹೊರ ಹಾಕುವುದಾಗಿ ಮಾಲೀಕ ಎಚ್ಚರಿಸಿರುತ್ತಾನೆ.
ಮಧುರ ಸ್ವರವೆಂದರೆ (ದನಿ) ಇವನಿಗೆ ಎಲ್ಲಿಲ್ಲದ ಹುಚ್ಚು. ಎಲ್ಲಿಯಾದರೂ ಮಧುರ ದನಿಯೊಂದು ಕೇಳಿಬಂದರೆ ಅದರ ಹಿಂದೆ ಹೋಗುತ್ತಾನೆ. ಅಕ್ಷರಶಃ ಕಳೆದುಹೋಗುತ್ತಾನೆ. ನಾನಿಲ್ಲಿ ಪೂರ್ತಿ ಕಥೆ ಹೇಳುವುದಿಲ್ಲ. ಚೆಂದದ ಒಂದೆರಡು ಚಿತ್ರಿಕೆ (ಇಮೇಜಸ್) ಗಳನ್ನಷ್ಟೇ ಹೇಳುತ್ತೇನೆ. ಅದು ನಿರ್ದೇಶಕನ ಸಾಮರ್ಥ್ಯವನ್ನು, ಸೂಕ್ಷ್ಮ ಗ್ರಹಿಕೆಯನ್ನು, ಮಾತುಗಳನ್ನು ಮೊಗೆ ಮೊಗೆದು ಮೌನವಾಗಿಸಿಬಿಡುವ ಕುಸುರಿಗಾರಿಕೆಯನ್ನು ಹೇಳುತ್ತದೆ.
ಚಿತ್ರಿಕೆ ಒಂದು-ಉಪಕರಣಗಳಿಗೆ ಕಂಠ ತುಂಬುವ ಕೆಲಸಕ್ಕೆ ಸಹಾಯ ಮಾಡುವಾಕೆ ಮತ್ತೊಬ್ಬಳು ಪುಟ್ಟ ಚೆಂದದ ಹುಡುಗಿ ನದೀರಾ. ಶ್ರುತಿ ಶುದ್ಧ ಪಡಿಸುವಾಗ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸರಿಯಿದೆಯೇ ? ಇಲ್ಲವೇ ? ಎಂದು ಹೇಳುವವಳು ನದೀರಾ. ಕಿವಿಗೆ ಜೋಡಿ ಚೆರಿ ಹಣ್ಣುಗಳನ್ನು ಜೋತು ಬಿಟ್ಟುಕೊಂಡು, ಮುಂದೆರೆಡು, ಹಿಂದೆರೆಡು ಉದ್ದದ ಜಡೆ ಹಾಕಿಕೊಂಡ ಮಧುರ ದನಿಯ ಹುಡುಗಿಯನ್ನು ನೋಡಲೇ ಚೆಂದ.
ಎರಡು- ಸಂಗೀತ ಶಾಲೆಯಿಂದ ಮಾಸ್ತರರು ಈ ವಾದ್ಯವನ್ನು ನಿಮ್ಮ ಮಾಲೀಕನಿಗೆ ಕೊಡು, ಇದು ಸರಿಯಿಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಅದನ್ನು ಹೊತ್ತುಕೊಂಡು ಬರುವಾಗ ಮಳೆ ಆರಂಭವಾಗುತ್ತದೆ. ಇವನು ಮಳೆಯಿಂದ ರಕ್ಷಿಸಿಕೊಳ್ಳಲು ಓಡತೊಡಗುತ್ತಾನೆ. ಕಲ್ಲೊಂದು ಕಾಲಿಗೆ ತಾಗಿ ಎಡವಿ ಬಿದ್ದಾಗ ಸಂಗೀತ (ತಾನ್‌ಪುರಿ) ಉಪಕರಣ ಕೊಂಚ ದೂರ ಅಂಗಾತವಾಗಿ ಬೀಳುತ್ತದೆ. ಅ ತಂತಿಯ ಮೇಲೆ ಬೀಳುವ ಪ್ರತಿ ಹನಿಯೂ ಲಯಬದ್ಧವೇ.
ಖುರ್ಷದ್‌ಗೆ ಸದಾ ಕಾಡುವುದು ಬೊ…ಬೊ…ಬೊ…ಬೊಮ್ ಎಂಬ ಲಯ. ಇದು ಮನೆ ಮಾಲೀಕ ಬಂದಾಗಲೆಲ್ಲಾ ಬಾಗಿಲ ಬಡಿಯುವ ಸದ್ದು. ಅದೇ ಅವನನ್ನು ನಾದದತ್ತ ಸೆಳೆಯುವ ನಾದ ಸಹ. ಇದನ್ನು ನಿರ್ದೇಶಕ ಪ್ರತಿ ಹಂತದಲ್ಲೂ ಅನುರಣಿಸುತ್ತಾನೆ. ಅದಕ್ಕೆ ಕಳೆಗಟ್ಟುವಂತೆ ಕ್ಲೈಮಾಕ್ಸ್ ಇದೆ. ಚಿತ್ರವನ್ನು ನೋಡುತ್ತಾ ಹೋದಂತೆ ಆವರಿಸಿಕೊಳ್ಳುತ್ತದೆ. ಅಂಧ ಬಾಲಕನೊಬ್ಬ ಹೇಗೆ ಶಬ್ದದ ಮೂಲಕ ಜಗತ್ತನ್ನು ಗ್ರಹಿಸುತ್ತಾ ಹೋಗುತ್ತಾನೆ ಎಂಬುದನ್ನು ಹೇಳುತ್ತದೆ ಎನ್ನಿಸುತ್ತದೆ ಚಿತ್ರ. ಆದರೆ ನೋಡಿದಷ್ಟು ಬಾರಿ ಹೊಸ ಅರ್ಥ ಸ್ಫುರಿಸುವ ಶಕ್ತಿ ಅದಕ್ಕಿದೆ.
ಫಿಲಾಸಫಿಕಲ್ ತಟಕ್ಕೂ ನಮ್ಮನ್ನು ಕರೆದೊಯ್ಯುವ ನಿರ್ದೇಶಕ, ಲಯದ (ರಿದಮ್) ನೆಲೆಯನ್ನೇ ಶೋಧಿಸುತ್ತಾ ಹೋಗುತ್ತಾನೆ. ಆವನ ಶೋಧನೆಯ ಬಗೆ ಹಲವು ಚಿತ್ರಿಕೆ (ಇಮೇಜ್) ಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಬಹಳ ಆಪ್ತವೆನಿಸುವುದು ಲಯದ ವಿವಿಧ “ಚಿತ್ರ’ಗಳು. ಪ್ರತಿಯೊಂದೂ ಲಯ ತಪ್ಪದೇ ಇವೆ ಎಂಬುದನ್ನು ಹೇಳಲು ಬಳಸಿಕೊಂಡ ಇಮೇಜ್‌ಗಳು ವಿಶಿಷ್ಟ ಹಾಗೂ ಆಪ್ತ.
ಹಲವು ಚಿತ್ರಿಕೆಗಳನ್ನೆಲ್ಲಾ ಒಟ್ಟು ಮಾಡಿಟ್ಟ ಗುಚ್ಚದಲ್ಲಿ ಎಷ್ಟೊಂದು ಬಣ್ಣ ? ಎಷ್ಟೊಂದು ಅರ್ಥ? ಅದಕ್ಕೆ ಖುರ್ಷದ್ ಸಂಕೇತವಷ್ಟೇ. ಅಂದರೆ ಬದುಕಿನಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಗುಂಗು-ನಾದ-ಹುಚ್ಚು (ಪ್ರಟ್ಟಿ ವಾಯ್ಸ್)ನ ಹಿಂದೆ ಹೊರಡುವವರೇ, ಕಳೆದು ಹೋಗುವವರೇ ಎಂಬುದನ್ನು ಹೇಳಲು ಯತ್ನಿಸುತ್ತಾನೆ.
ಅದೇ ಸಂದರ್ಭದಲ್ಲಿ ಕಣ್ಣಿನ ಚಂಚಲತೆಯನ್ನೂ ಹೇಳದೇ ಬಿಡುವುದಿಲ್ಲ. ದೃಶ್ಯ ನಮ್ಮನ್ನು ಚಂಚಲಗೊಳಿಸಬಲ್ಲದು, ಕಣ್ಣು ಮುಚ್ಚಿ ಜಗತ್ತನ್ನು ಅನುಭವಿಸುವುದು ಮತ್ತೂ ಚೆಂದ. ಅಂದರೆ ಬರೀ ಶಬ್ದ, ಸ್ಪರ್ಶದ ಗ್ರಹಿಕೆಯಲ್ಲಿ (ಬಸ್ಸಿನಲ್ಲಿ ಹೋಗುವಾಗ ಶಾಲಾ ಮಕ್ಕಳಿಬ್ಬರು ಮತ್ತು ಖುರ್ಷದ್ ನಡುವಿನ ಪ್ರಸಂಗ) ಸಾಧ್ಯ ಎಂಬ ಪ್ರಶ್ನೆಯೊಡ್ಡುತ್ತಾನೆ. ಒಟ್ಟಂದದಲ್ಲಿ ಒಂದು ವಿಶಿಷ್ಟವಾದ ಅನುಭವವನ್ನು ನೀಡುವ ಚಿತ್ರ, ಲಾಲ್‌ಬಾಗ್‌ನಂಥ ಹೂದೋಟದಲ್ಲಿ ಅರಳಿ ನಿಂತ ಹೂಗಳ ಮಧ್ಯೆ ಒಂದು ಸುತ್ತು ಹಾಕಿ ಬಂದಂತೆ ಅನಿಸುತ್ತದೆ. ಅದೇ ಕೋಮಲ ಭಾವ ಮತ್ತು ಬಣ್ಣ ತುಂಬಿಕೊಂಡ ಕಣ್ಣುಗಳು !
ಮೂರ್ತವಾದುದು ವಾಚ್ಯ, ಅಮೂರ್ತ ಕಾವ್ಯದಂತೆ. ನಿರ್ದೇಶಕ ಮೊಹಿಸಿನ್, ಅಮೂರ್ತದ ಸೌಂದರ್ಯಕ್ಕೇ ಭಾಷ್ಯ ಬರೆಯುತ್ತಾರೆ. ಎಲ್ಲೂ ವಾಚ್ಯವೆನಿಸದಂತೆ ಎಚ್ಚರಿಕೆ ಕಾಯ್ದುಕೊಳ್ಳುತ್ತಾರೆ. ಮಧ್ಯೆ ಮಧ್ಯೆ ಬಳಸಿಕೊಂಡ ಸಂಗೀತ ಸೂಕ್ತ, ಸಂಭಾಷಣೆ ಎಲ್ಲೂ ಬರಿಯ ಮಾತೆನ್ನಿಸುವುದಿಲ್ಲ, ಮನದ ಕವಿತೆಯಂತೆ ತೋರುತ್ತದೆ. ಪ್ರತಿಯೊಂದರಲ್ಲೂ ಲಯವನ್ನು ಬಯಸುವ ಖುರ್ಷದ್ ನಂತೆ ಲಯ ನಮ್ಮನ್ನು ಹಿಂಬಾಲಿಸುತ್ತದೆ.
ಸೈಲೆನ್ಸ್ 1996 ರಲ್ಲಿ ನಿರ್ಮಾಣವಾದದ್ದು. 76 ನಿಮಿಷಗಳ ಸಿನಿಮಾ. ಛಾಯಾಗ್ರಹಣವೂ ಚೆನ್ನಾಗಿದೆ (ಇಬ್ರಾಹಿಂ ಗಫೋರಿ). ಖುರ್ಷದ್ ನಾಗಿ ತಹ್ಮಿನೆ ನರ್ಮಾತೊವ, ನದೀರಾಳಾಗಿ ನದೀರೆ ಅಬ್ದಲೇವ, ದಾಸಯ್ಯನಾಗಿ ಅರಜ್ ಎಂ. ಮೊಹಮ್ಮದಿ ನಟಿಸಿದ್ದಾರೆ.
ಮೊಹಿಸಿನ್ ಬಡ ಕುಟುಂಬದಲ್ಲಿ ಟೆಹರಾನ್‌ನಲ್ಲಿ ಜನಿಸಿದ್ದು. ಚಿಕ್ಕದಿಂನಿಂದಲೇ ಶಾಲೆ ತ್ಯಜಿಸಿ ಇಸ್ಲಾಮಿಕ್ ಸಂಘಟನೆಗೆ ಸೇರಿಕೊಂಡರು. ನಂತರ ಬಂಧನಕ್ಕೊಳಗಾದಾಗ ವಯಸ್ಸು 17. ಐದು ವರ್ಷದ ನಂತರ ಇಸ್ಲಾಮಿಕ್ ಸರಕಾರ ಅಧಿಕಾರಕ್ಕೆ ಬಂದು ಇವರು ಬಿಡುಗಡೆಯಾದರು. ನಂತರ ಮೊಹಿಸಿನ್ ತೊಡಗಿಕೊಂಡಿದ್ದು ಬರಹ, ನಾಟಕ ಹಾಗೂ ಚಲನಚಿತ್ರ ನಿರ್ಮಾಣದಲ್ಲಿ. 1982 ರಿಂದ ಚಿತ್ರ ನಿರ್ಮಾಣ. 1987 ರಲ್ಲಿ ರೂಪಿಸಿದ ಪೆಡ್ಲರ್ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿತು. ನಂತರ 20 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿ, ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಬದುಕಿನ ಗತಿಯ ಹಲವು ಆಯಾಮಗಳನ್ನು ಹಿಡಿದುಕೊಡಲು ಪ್ರಯತ್ನಿಸುವುದೇ ಇವರ ವಿಶಿಷ್ಟತೆ. ಮೌನದಲ್ಲಿ ಅದ್ದಿ ತೆಗೆಯುವ ಸಾಮರ್ಥ್ಯ ಇವರದ್ದು.