ಮಹೇಶ್ ಪಿ. ಎಡಕ್ಕಾನ ಬರೆದಿರುವ ಈ ಬರಹ ಚಿತ್ರ “ಬರನ್” ಕುರಿತಾದದ್ದು. “ಬರನ್” ಚಿತ್ರದ ನಿರ್ದೇಶಕ ಮಜಿದ್ ಮಜಿದಿ. ತನ್ನ ಸೂಕ್ಷ್ಮ ಸಂವೇದನೆಯ ಚಿತ್ರಗಳಿಂದ ಹೆಸರಾಗಿರುವ ಮಜಿದ್ ಮಜಿದ್ ನಮ್ಮೊಳಗಿನ ಅಂತಃಕರಣ ವನ್ನು ಮತ್ತಷ್ಟು ಸೂಕ್ಷ್ಮಗೊಳಿಸುವವನು.
ಸಾಮಾಜಿಕ ಕಟ್ಟುಪಾಡುಗಳ ಮಧ್ಯೆ ಚಿತ್ರಿತವಾದ ಒಂದು ಸುಂದರ ಪ್ರೇಮಕಾವ್ಯವೇ ಬರನ್. ಪರ್ಷಿಯನ್ ಭಾಷೆಯಲ್ಲಿ ಬರನ್ ಎಂದರೆ ಮಳೆ ಎಂಬ ಅರ್ಥ. ಈ ಮಳೆ ಚಿತ್ರ ಇರಾನ್‌ನಲ್ಲಿ 2001 ರಲ್ಲೇ ಬಿಡುಗಡೆಗೊಂಡದ್ದು.
ಇದು ಎಂಗೇಜ್‌ಮೆಂಟ್ ಆಗಿರುವ ಹುಡುಗಿಯನ್ನು ಪ್ರೀತಿಸಿ, ಪ್ರೀತಿ ಮಧುರ ತ್ಯಾಗ ಅಮರ ಎಂದು ಸಂದೇಶ ಸಾರುವ ಚಿತ್ರವಂತೂ ಖಂಡಿತಾ ಅಲ್ಲ. ಇಲ್ಲಿ ಬರನ್ ನಾಯಕಿಯ ಹೆಸರು. ಆಕೆಗೆ ಹಲವಾರು ಸಾಮಾಜಿಕ ಕಟ್ಟುಪಾಡುಗಳಿವೆ. ಅಷ್ಟೇ ಏಕೆ ? ಹೆಣ್ಣಿಗೆ ಇಲ್ಲಿ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ. ವೈಚಾರಿಕ ನೆಲೆಯಲ್ಲಿ ಚಿತ್ರ ನೋಡುಗನನ್ನು ಚಿಂತನೆಗೆ ಹಚ್ಚಿದರೆ, ಭಾವನಾತ್ಮಕವಾಗಿಯೂ ಮನ ಮುಟ್ಟುತ್ತದೆ. ಇದರಲ್ಲಿ ಹದಿಹರೆಯದ ಮನಸುಗಳ ತಲ್ಲಣವಿದೆ, ಪ್ರತಿಯೊಬ್ಬರ ಮನದಲ್ಲೂ ಸ್ನೇಹಿತನಿದ್ದಾನೆ, ಅವರೆಲ್ಲರಲ್ಲೂ ಸಹಕಾರಿ ಮನೋಭಾವವಿದೆ. ದೃಶ್ಯದಾಳದಲ್ಲಿ ಅಧ್ಯಾತ್ಮದ ಸೆಲೆಯೂ ಇದೆ. ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತು ಪಡೆದಿದೆ.
ರಷ್ಯಾದ ಕಡೆಯಿಂದ ಯುದ್ಧ ಮತ್ತು ತಾಲಿಬಾನರ ಬೆದರಿಕೆಯಿಂದ ಅತಂತ್ರರಾದ ಅಫಘಾನಿಸ್ತಾನ ಪ್ರಜೆಗಳು ಇರಾನ್‌ಗೆ ವಲಸೆ ಬಂದು ಅಲ್ಲಿನ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಾ ತಮ್ಮ ಜೀವನದ ಬಂಡಿಯನ್ನು ಸಾಗಿಸಲು ಹೆಣಗಾಡುವ ಬಗೆ ಎಂಬುದು ಚಿತ್ರದ ಮೂಲ ಕಥಾವಸ್ತು.
ಈ ನಿರಾಶ್ರಿತರು ಅಧಿಕೃತ ಗುರುತಿನ ಚೀಟಿಯಿಲ್ಲದೆ ಶಿಬಿರದಿಂದ ಹೊರಹೋಗಬಾರದೆಂಬ ನಿಯಮ ಅಲ್ಲಿನದ್ದು. ಆದರೆ ಬದುಕು ಸಾಗಿಸಲು ದುಡಿಮೆ ಅನಿವಾರ್ಯ. ಇದರ ಲಾಭ ಪಡೆವ ಕಂಟ್ರ್ಯಾಕ್ಟರ್‌ಗಳು ಕಡಿಮೆ ಸಂಬಳಕ್ಕೆ ಈ ನಿರಾಶ್ರಿತರನ್ನು ದುಡಿಸಿಕೊಳ್ಳುತ್ತಾರೆ. ಅಂಥ ಒಬ್ಬ ಮೆಮರ್ ಎಂಬ ಕಟ್ಟಡ ನಿರ್ಮಾಣ ಕಂಟ್ರ್ಯಾಕ್ಟರ್ ಕೈಕೆಳಗೆ ಕೆಲ ನಿರಾಶ್ರಿತರು ದುಡಿಯುತ್ತಿರುತ್ತಾರೆ.
ಸ್ಥಳೀಯ ಯುವಕ ಲತೀಫ್‌ನನ್ನು ಆತನ ತಂದೆ ಕೆಲಸಕ್ಕೆಂದು ಮೆಮರ್ ಬಳಿ ಬಿಡುತ್ತಾನೆ. ಚಿತ್ರದ ನಾಯಕ ಲತೀಫ್ ನಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವವರಿಗೆ ಚಾ ಮಾಡಿಕೊಡುವ ಹಾಗೂ ಬ್ರೆಡ್ ಬನ್‌ಗಳನ್ನು ಅಂಗಡಿಯಿಂದ ತಂದುಕೊಡುವ ಆರಾಮದಾಯಕ ಕೆಲಸ. ಲತೀಫ್ ಬಿಸಿ ರಕ್ತದ ಯುವಕ, ವಾಚಾಳಿ. ಒಂದರ್ಥದಲ್ಲಿ ಅಖಾಡಕ್ಕಿಳಿಸಿದ ಕೊಬ್ಬಿದ ಹುಂಜದಂತೆ. ಆದರೆ ದುಡ್ಡಿನ ವಿಷಯದಲ್ಲಿ ಮಾತ್ರ ಬಹಳ ನಾಜೂಕು. ಪ್ರತಿಯೊಂದು ಪೈಸೆಯನ್ನೂ ಕೂಡಿಡುವ ಮನೋಭಾವದವ. ದುಡ್ಡಿನ ವಿಷಯದಲ್ಲಿ ಮೆಮರ್‌ಗೆ ಈತನ ಮೇಲೆ ನಂಬಿಕೆಯಿಲ್ಲ. ಎಲ್ಲಿ ಖರ್ಚು ಮಾಡಿಬಿಡುತ್ತಾನೋ ಎಂದು ಆತನ ವರ್ಷದ ಸಂಬಳವೆಲ್ಲವನ್ನೂ ತನ್ನಲ್ಲೇ ಇಟ್ಟುಕೊಂಡಿರುತ್ತಾನೆ.
ಆಫ್ಘನ್ ಪ್ರಜೆ ನಜಾಫ್ ಎಂಬಾತ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. ಈ ನಜಾಫ್ ತನ್ನ ಬದಲಿಗೆ ಮಗ ರೆಯಮತ್ ನನ್ನು ಸ್ನೇಹಿತನೊಡನೆ ಮೆಮರ್ ಬಳಿ ಕಳುಹಿಸುತ್ತಾನೆ. ಹಮತ್ ತುಂಬಾ ಸಣಕಲು ವ್ಯಕ್ತಿ. ಕ್ಲಿಷ್ಟಕರ ಕೆಲಸ ಆತನಿಂದ ಸಾಧ್ಯವಾಗದು. ಹಾಗಾಗಿ ಮೆಮರ್ ಆತನಿಗೆ ಅಡಿಗೆ ಮಾಡಿ ಮುಸುರೆ ತಿಕ್ಕುವ ಲತೀಫ್‌ನ ಕೆಲಸ ಕೊಡುತ್ತಾನೆ. ತನ್ನ ಆರಾಮದಾಯಕ ಕೆಲಸ ಕಿತ್ತುಕೊಂಡನಲ್ಲ ಎಂದು ಲತೀಫ್‌ಗೆ ಕೋಪ ಬರುತ್ತದೆ. ಅಡಿಗೆ ಸಾಮಾನು ತರಲೆಂದು ಅಂಗಡಿಗೆ ಹೋಗುವಾಗ ರೆಹಮತ್ ಕೆನ್ನೆಗೊಂದು ಬಾರಿಸುತ್ತಾನೆ. ಅಷ್ಟೇ ಅಲ್ಲ, ಪದೇ ಪದೇ ತನ್ನ ಕುಚೇಷ್ಟೆಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ಸತಾಯಿಸುತ್ತಿರುತ್ತಾನೆ.
ಇದೇ ಸಂದರ್ಭದಲ್ಲಿ ಲತೀಫ್‌ಗೊಂದು ಸತ್ಯ ತಿಳಿಯುತ್ತೆ. ರೆಹಮತ್ ಆಗಿ ಬಂದವನು ನಜಾಫ್‌ನ ಮಗ ಅಲ್ಲ ಮಗಳು ‘ಬರನ್’. ಕೆಲಸಕ್ಕಾಗಿ ವೇಷಮರೆಸಿಕೊಂಡಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆಯೇ ಈತನ ಮನದಲ್ಲಿ ಏನೋ ಒಂದು ರೀತಿಯ ತಳಮಳ, ತಲ್ಲಣ. ಆ ದ್ವೇಷದ ಭಾವನೆ ಹೋಗಿ ಅನುಕಂಪದ ಸೆಲೆಹುಟ್ಟಿಕೊಳ್ಳುತ್ತದೆ. ಆಕೆಗೆ ಬೆಂಗಾವಲಾಗಲು ನಿರ್ಧರಿಸುತ್ತಾನೆ. ಯಾರೇ ಆಕೆಯೊಡನೆ ಜಗಳಕ್ಕೆ ನಿಂತರೂ ಈತ ಅವಳ ಪರವೇ.
ಆದರೆ ಆಗಾಗ ಅಲ್ಲಿಗೆ ತಪಾಸಣೆಗೆಂದು ಇರಾನ್ ಇನ್ಸ್‌ಪೆಕ್ಟರ್ ಗಳು ಬರುತ್ತಿರುತ್ತಾರೆ. ಒಮ್ಮೆ “ರೆಹಮತ್” ಸಿಕ್ಕಿಬಿದ್ದ ಎನ್ನುವಷ್ಟರಲ್ಲಿ ಅವಳನ್ನು ರಕ್ಷಿಸಿದ ಲತೀಫ್ ಜೈಲಿಗೆ ಹೋಗಬೇಕಾಗುತ್ತದೆ. ಇದರಿಂದ ಆಫ್ಘನ್ ನಿರಾಶ್ರಿತರು ಕೆಲಸ ಮಾಡುತ್ತಿರುವುದನ್ನು ಪತ್ರೆ ಹಚ್ಚುವ ಇನ್ಸ್ ಪೆಕ್ಟರ್ , ಮೆಮನ್ ನಿಗೆ ಎಚ್ಚರಿಸುತ್ತಾರೆ. ಇದರ ಪರಿಣಾಮ ಮೆಮರ್ ಎಲ್ಲ ಆಫ್ಘನ್ ಕೆಲಸಗಾರನ್ನು ಕೆಲಸದಿಂದ ತೆಗೆದು ಹಾಕುತ್ತಾನೆ.
‘ಬರನ್’ ಬೇರೆಲ್ಲೋ ಕೆಲಸಕ್ಕೆ ಸೇರಿದ್ದಾಳೆ ಎಂಬ ಸುದ್ದಿ ನಜಾಫ್‌ನ ಸ್ನೇಹಿತನಿಂದ ಜೈಲಿನಿಂದ ವಾಪಸಾದ ಲತೀಫ್‌ಗೆ ತಿಳಿಯುತ್ತದೆ. ಈತ ಅವಳನ್ನು ಹುಡುಕಿಕೊಂಡು ನಿರಾಶ್ರಿತರ ಶಿಬಿರದತ್ತ ಬರುತ್ತಾನೆ. ಕೊನೆಗೂ ಆಕೆ ಕೆಲಸ ಮಾಡುವ ಜಾಗ ಕಂಡು ಹಿಡಿಯುತ್ತಾನೆ.
ನದಿಯಿಂದ ಕಲ್ಲು ಹೊತ್ತು ಹಾಕುವ ಕೆಲಸದಲ್ಲಿ ಆಕೆ ಕಷ್ಟಪಡುವುದನ್ನು ಕಂಡು ಮರುಗುತ್ತಾನೆ. ನಜಾಫ್‌ಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಮೆಮರ್ ಗೆ ಏನೋ ಸುಳ್ಳು ಹೇಳಿ ತನ್ನ ವರ್ಷದ ಸಂಬಳವನ್ನು ತಂದು ನಜಾಫ್‌ನ ಸ್ನೇಹಿತನ ಮೂಲಕ ನಜಾಫ್‌ಗೆ ಕೊಡುವಂತೆ ತಿಳಿಸುತ್ತಾನೆ. ಆದರೆ ಆತ ಲತೀಫ್‌ಗೆ ಪತ್ರ ಬರೆದಿಟ್ಟು ಹಣದೊಡನೆ ಆಫ್ಘನ್‌ಗೆ ಪರಾರಿಯಾಗುತ್ತಾನೆ. ಕೊನೆಗೆ ಲತೀಫ್ ತನ್ನ ಗುರುತಿನ ಚೀಟಿ ಮಾರಿ ಹಣ ಪಡೆದು ನಜಾಫ್‌ಗೆ ಕೊಡುತ್ತಾನೆ.
ಮರುದಿನವೇ ಅಫಘಾನಿಸ್ತಾನಕ್ಕೆ ತೆರಳುವುದೆಂದು ತೀರ್ಮಾನಿಸುತ್ತಾರೆ. ಬೆಳಗ್ಗೆ ಟ್ರಕ್‌ಗೆ ಸಾಮಾನು ಸರಂಜಾಮುಗಳನ್ನು ತುಂಬಿಸಲು ಲತೀಫ್ ನಜಾಫ್‌ಗೆ ಸಹಾಯ ಮಾಡುತ್ತಾನೆ. ಬರನ್‌ಗೆ ಆತನ ಸಹಕಾರಿ ಮನೋಭಾವ ಕಂಡು ಒಂದು ರೀತಿಯ ಒಲುಮೆ. ಅದೊಂದು ಕೊನೆಯ ದೃಶ್ಯ-ಬರನ್ ಟ್ರಕ್ ಹತ್ತಲು ಹೋಗುತ್ತಿರಬೇಕಾದರೆ ಕೆಸರಿನಲ್ಲಿ ಬೂಟು ಹೂತು ಹೋಗುತ್ತೆ. ಲತೀಫ್ ಅದನ್ನು ಎತ್ತಿ ಆಕೆ ಕಾಲಿಗೆ ತೊಡಿಸುತ್ತಾನೆ. ಆದರೆ ಬೂಟಿನ ಅಚ್ಚು ಕೆಸರಿನಲ್ಲಿ ಅಚ್ಚಾಗುತ್ತದೆ. ಲತೀಫ್ ಮನದಲ್ಲಿ ಅದು ಅಚ್ಚಳಿಯದ ನೆನಪಾಗುತ್ತದೆ. ಕೊನೆಯಲ್ಲಿ ಬರನ್ (ಮಳೆ) ಬರುವುದರೊಂದಿಗೆ ಇವರ ಪ್ರೀತಿಗೆ ಸಾಕ್ಷಿಯಾಗುತ್ತಾಳೆ.
ಚಿತ್ರ ನಮ್ಮನ್ನು ಆವರಿಸಿಕೊಳ್ಳುತ್ತದೆ. ಖುಷಿಯ ಸಂಗತಿಯೆಂದರೆ ಎಲ್ಲೂ ನಾಟಕೀಯ ಎನಿಸದೇ ಪ್ರತಿಯೊಬ್ಬರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಡತನವನ್ನು ಕರುಣಾಜನಕವಾಗಿಸದೇ, ಬದುಕಿನ ನೆಲೆಯಾಗಿ ಚಿತ್ರಿಸುವ ಮಜಿದ್ ಮಜಿದ್ ಇಲ್ಲಿಯೂ ಯಶಸ್ವಿಯಾಗುತ್ತಾನೆ. ಒಂದು ಉತ್ತಮ ಚಿತ್ರ. (ಲೇಖನ ಕೃಪೆ : ಸಾಂಗತ್ಯ)
ನಿರ್ದೇಶಕ: ಮಜಿದ್ ಮಜಿದಿ ಭಾಷೆ: ಪರ್ಷಿಯನ್
ದೇಶ: ಇರಾನ್ ಅವಧಿ: 94 ನಿಮಿಷ