ಬೂಸಾನ್ : ಏಷ್ಯಾದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ಬೂಸಾನ್ ಚಿತ್ರೋತ್ಸವದ 29 ನೇ ಆವೃತ್ತಿಯ ಕಲಾ ನಿರ್ದೇಶಕರಾಗಿ ಪಾಕ್ ದೊಸೀನ್ ಅವರನ್ನು ನೇಮಕಗೊಳಿಸಲಾಗಿದೆ.
ಪಾಕ್ ದೊಸೀನ್ ಅವರು ಈ ಆವೃತ್ತಿಯ ಕಲಾ ನಿರ್ದೇಶಕನ ಹೊಣೆ ನಿರ್ವಹಿಸುವರು.
ಈಗಾಗಲೇ ಚಿತ್ರೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಏಷ್ಯಾ ವಿಭಾಗವೂ ಸೇರಿದಂತೆ ವಿವಿಧ ವಿಭಾಗಗಳಿಗೆ ಸಿನಿಮಾಗಳನ್ನು ಆಹ್ವಾನಿಸಲಾಗಿದೆ.
ಚಿತ್ರೋತ್ಸವದ ಅಫಿಶಿಯಲ್ ಸೆಕ್ಷನ್ ವಿಭಾಗಕ್ಕೆ ಚಲನಚಿತ್ರಗಳನ್ನು ಜುಲೈ 17 ಹಾಗೂ ಕಿರುಚಿತ್ರಗಳಿಗೆ ಜೂನ್ 19 ಕೊನೆಯದಿನವಾಗಿದೆ.
ಏಷ್ಯಾ ವಿಭಾಗದಡಿ ಪೋಸ್ಟ್ ಪ್ರೊಡಕ್ಷನ್ ಫಂಡ್ ಹಾಗೂ ಡಾಕ್ಯುಮೆಂಟರಿ ಫಂಡ್ ಗೆ ಅರ್ಜಿ ಅಹ್ವಾನಿಸಲಾಗಿದೆ. ಇದಕ್ಕೆ ಎಪ್ರಿಲ್ 15, 2024 ಕೊನೆಯ ದಿನವಾಗಿದೆ.
ಈ ಚಿತ್ರೋತ್ಸವವು ಏಷ್ಯಾದಲ್ಲಿ ಬಹು ಮನ್ನಣೆ ಗಳಿಸಿದೆ. ಪ್ರತಿ ವರ್ಷ ನ್ಯೂ ಕರೆಂಟ್ ಅವಾರ್ಡ್ ಸೇರಿದಂತೆ ಹತ್ತಕ್ಕೂ ಹೆಚ್ಚು ಪುರಸ್ಕಾರಗಳನ್ನು ಪ್ರತಿಭಾವಂತ ಸಿನಿಮಾಕರ್ಮಿಗಳಿಗೆ ನೀಡುತ್ತಿದೆ.
ಕಳೆದ ಅಕ್ಟೋಬರ್ 4 ರಿಂದ 13 ರವರೆಗೆ ನಡೆದ ಉತ್ಸವದಲ್ಲಿ 269 ಚಲನಚಿತ್ರಗಳನ್ನು ವಿವಿಧ ವಿಭಾಗಗಳಡಿ ಪ್ರದರ್ಶಿಸಲಾಯಿತು. ಈ ಪೈಕಿ 209 ಸಿನಿಮಾಗಳನ್ನು ಅಧಿಕೃತವಾಗಿ 69 ದೇಶಗಳಿಂದ ಆಹ್ವಾನಿಸಲಾಗಿತ್ತು. ಜಾಂಗ್ ಕುನ್ ಜೇ ಅವರ ಬಿಕಾಸ್ ಐ ಹೇಟ್ ಕೊರಿಯಾ ಸಿನಿಮಾದಿಂದ ಉತ್ಸವ ಆರಂಭವಾಗಿತ್ತು. ನಿಂಗ್ ಹಾವೋ ಅವರ ದಿ ಮೂವಿ ಎಂಪರರ್ ಸಿನಿಮಾ ಸಮಾರೋಪ ಚಿತ್ರವಾಗಿ ಪ್ರದರ್ಶಿಸಲಾಯಿತು.
ಉತ್ಸವದ ಪ್ರಮುಖ ಪ್ರಶಸ್ತಿ ನ್ಯೂ ಕರೆಂಟ್ ಪ್ರಶಸ್ತಿಯನ್ನು ಬಾಂಗ್ಲಾದೇಶದ ಇಕ್ಬಾಲ್ ಎಚ್. ಚೌಧರಿಯವರ ದಿ ರೆಸ್ಲರ್ ಚಿತ್ರ ಪಡೆಯಿತು.
ಈ ಬಾರಿಯ 29 ನೇ ಆವೃತ್ತಿಯು ಬೂಸಾನ್ ಸಿನಿಮಾ ಸೆಂಟರ್ ನಲ್ಲಿ 2024 ರ ಅಕ್ಟೋಬರ್ 2 ರಿಂದ 11 ರವರೆಗೆ ನಡೆಯಲಿದೆ.