ಕೇಸರಿ ಹರವೂ ಪರಿಸರ ಸಂಬಂಧಿ ಹೋರಾಟಗಳಲ್ಲಿ ಭಾಗಿಯಾದವರು. ಸಾಕ್ಷ್ಯಚಿತ್ರಗಳ ಮೂಲಕ ತಮ್ಮ ಪರಿಸರ ಪ್ರೀತಿಯನ್ನು ತೋರ್ಪಡಿಸುತ್ತಲೇ, ಪರಿಸರ ಪ್ರೀತಿ ಹೆಚ್ಚಿಸಲು ದುಡಿಯುತ್ತಿರುವವರು. ಅವರ ‘ಅಘನಾಶಿನಿ ಮತ್ತು ಮಕ್ಕಳು” ಸಾಕ್ಷ್ಯಚಿತ್ರದ ಮೂಲಕ ಅಘನಾಶಿನಿ ಪರಿಸರದಲ್ಲಿ ಆದ ಪರಿಸರ ನಾಶವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದರು. “ಭೂಮಿಗೀತ” ಅವರ ಚಲನಚಿತ್ರವೂ ಕನ್ನಡ ಚಿತ್ರರಂಗದಲ್ಲಿ ಭಿನ್ನವಾದ ನೆಲೆಯನ್ನು ಪ್ರತಿಪಾದಿಸಿತ್ತು.
ನಿರ್ದೇಶಕ ಕೇಸರಿ ಹರವೂ ಅವರ ಸಾಕ್ಷ್ಯಚಿತ್ರ ನಗರ-ನದಿ-ಕಣಿವೆ ಸರಣಿಯಲ್ಲಿ ವಿಥ್ ಹರ್ ಗುಂಡ್ಯ ಹೇಳುವ ಕಥೆಯೇ ಬೇರೆ.
“ನಗರ-ನದಿ ಕಣಿವೆ” ಸರಣಿಯಲ್ಲಿ ರೂಪಿತವಾಗಿರುವ 35 ನಿಮಿಷಗಳ ಸಾಕ್ಷ್ಯಚಿತ್ರ ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಗುಂಡ್ಯ ಜಲವಿದ್ಯುತ್ ಯೋಜನೆಯ ಸಾಧಕ ಬಾಧಕಗಳ ಕುರಿತಾದದ್ದು.
ಸಾಕ್ಷ್ಯಚಿತ್ರದಲ್ಲಿ ಗುಂಡ್ಯ ಜಲ ವಿದ್ಯುತ್ ಯೋಜನೆಯ ಬಾಧಕಗಳನ್ನು ಚೆನ್ನಾಗಿ ಪಟ್ಟಿ ಮಾಡಿಕೊಡುತ್ತದೆ. ಸ್ಥಳೀಯ ಸಾಮಾಜಿಕತೆ, ಆರ್ಥಿಕತೆ ಹಾಗೂ ಪರಿಸರ ನಾಶವಾದದ್ದರ ಗಂಭೀರತೆಯನ್ನು ವಿವರಿಸುತ್ತದೆ. ಈ ನಿಟ್ಟಿನಲ್ಲಿ ಜಾಗತಿಕ ಆರ್ಥಿಕತೆಯ ಕಬಂಧ ಬಾಹು ಹೇಗೆ ಗುಂಡ್ಯದಂಥ ಪ್ರದೇಶದ ಸ್ಥಳೀಯ ಆರ್ಥಿಕತೆ, ಸಾಮಾಜಿಕತೆ ಹಾಗೂ ಪರಿಸರದ ಚಿತ್ರಣವನ್ನೇ ಬದಲಿಸಿಬಿಡುತ್ತದೆ ಎಂಬುದರ ವಿವರಣೆ ಇದರಲ್ಲಿದೆ.
ಗುಂಡ್ಯ ಜಲ ವಿದ್ಯುತ್ ಯೋಜನೆ ಆರಂಭವಾದಾಗ ಕೇಸರಿ ಹರವೂ ಮತ್ತಿತರ ಹಲವರು ಯೋಜನೆ ವಿರೋಧಿಸಿ ಹೋರಾಟಕ್ಕಿಳಿದಿದ್ದರು. ಯೋಜನೆಯ ಪರಿಣಾಮ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ 2011 ರಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಿಸಲಾಗಿತ್ತು.
ಗುಂಡ್ಯದ ಸುತ್ತಮುತ್ತಲಿನ 46 ಹಳ್ಳಿಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವೆಡೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಯೂಟ್ಯೂಬ್ ನಲ್ಲಿ ಲಭ್ಯವಿರುವ ನಾಲ್ಕು ನಿಮಿಷಗಳ ಫೂಟೇಜ್ ನಲ್ಲಿ ಯೋಜಿತ ಪ್ರದೇಶದ ಜೈವಿಕ ವೈವಿಧ್ಯತೆಯನ್ನು ಮಾತ್ರ ಹೇಳಲಾಗಿದೆ.
ಸಾಕ್ಷ್ಯಚಿತ್ರದ ಬಗ್ಗೆ ಸ್ಥೂಲ ನೋಟ
ಎರಡು ನೂರು ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಯೊಂದನ್ನು ಹಾಸನ ಹಾಗೂ ದಕ್ಷಿಣಕನ್ನಡ ಜಿಲ್ಲೆಗಳ ಪಶ್ಚಿಮಘಟ್ಟದ ಗುಂಡ್ಯ ನದಿ ಕಣಿವೆಯಲ್ಲಿ ಸ್ಥಾಪಿಸುವ ಗುರಿಯನ್ನು ಕೆಪಿಸಿಎಲ್ ಹೊಂದಿದೆ. ದಟ್ಟ ನಿತ್ಯಹರಿದ್ವರ್ಣ ಅರಣ್ಯ, ನದೀಪಾತ್ರ, ಖಾಸಗಿ ಕೃಷಿ ಹಿಡುವಳಿ ಸೇರಿದಂತೆ ಸುಮಾರು 708.27 ಹೆಕ್ಟೇರ್ ಭೂಮಿ ಮುಳುಗಡೆಯಾಗಲಿದೆ. 12 ಗ್ರಾಮಗಳ 209 ಕುಟುಂಬಗಳು ಮತ್ತು 980 ಜನರು ಸ್ಥಳಾಂತರಗೊಳ್ಳಲಿದ್ದಾರೆ. ಇದು ಕೆಪಿಸಿಎಲ್‌ನ ಅಂದಾಜು. ಯೋಜನೆ ಪೂರ್ಣಗೊಂಡ ನಂತರ ನಿಜಕ್ಕೂ ಎಷ್ಟು ಭೂಮಿ, ಅರಣ್ಯ ಮುಳುಗಡೆಯಾಗುತ್ತದೆ ಎನ್ನುವುದು ಖಾತರಿಯಿಲ್ಲ.
ಇದು ಮೊದಲ ಹಂತದ ವರದಿ ಅಷ್ಟೇ. ನಂತರ ಇನ್ನೆಷ್ಟು ಹಂತಗಳಿವೆ, ಅವುಗಳಿಂದಾಗುವ ಒಟ್ಟು ಮುಳುಗಡೆ ಎಷ್ಟು, ಪರಿಸರ ಹಾಗೂ ಸಾಮಾಜಿಕತೆಯ ಮೇಲಾಗುವ ಒಟ್ಟೂ ಪರಿಣಾಮಗಳೇನು? – ಈ ವಿವರಗಳನ್ನು ಕೆಪಿಸಿಎಲ್ ಒದಗಿಸಿಲ್ಲ.
ಕಾಲದಿಂದಲೂ ಅರಣ್ಯದ ಸಣ್ಣ ಉತ್ಪಾದನೆಗಳು, ಗದ್ದೆ, ಏಲಕ್ಕಿ ತೋಟಗಳಲ್ಲಿ ತಮ್ಮ ಜೀವನ ಸಂಸ್ಕೃತಿಯನ್ನು ರೂಪಿಸಿಕೊಂಡಿರುವ ಈ ಮಲೆನಾಡಿನ ಸಣ್ಣ ರೈತರಿಗೆ ಇಲ್ಲಿಂದ ಸ್ಥಳಾಂತರವಾದರೆ ಉಂಟಾಗುವ ಅಭದ್ರತೆಯ ಆತಂಕವಿದೆ. ಇವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇವರೊಂದಿಗೆ ಭೂರಹಿತ ಕೃಷಿಕಾರ್ಮಿಕರೂ ಇದ್ದಾರೆ.
ದೊಡ್ಡ ಹಿಡುವಳಿದಾರರಿಗೆ ಮುಳುಗಡೆ ಪ್ರದೇಶದಲ್ಲಿ ಸಾಕಷ್ಟು ಏಲಕ್ಕಿ ತೋಟ, ಗದ್ದೆ, ಜೊತೆಗೆ ಒತ್ತುವರಿ ಅರಣ್ಯ ಜಮೀನೂ ಇದೆ. ಆಧುನಿಕತೆ, ನಗರೀಕರಣದ ಪ್ರಭಾವಕ್ಕೊಳಗಾಗಿರುವ ಇವರುಗಳಿಗೆ ಮಲೆನಾಡ ಬದುಕು ಈಗ ದುಸ್ತರವಾಗಿ ಕಾಣುತ್ತಿದೆ. ಯೋಜನೆಯ ಹೆಸರಿನಲ್ಲಿ ಒಂದಷ್ಟು ಪರಿಹಾರ ದೊರಕುವುದಾದರೆ ಒಳಿತಲ್ಲವೇ ಎಂಬ ಆಲೋಚನೆ ಅವರದು. ಅವರು ಸಣ್ಣ ರೈತರನ್ನೂ ಪುಸಲಾಯಿಸುತ್ತಿದ್ದಾರೆ.
ದೇಶ ತನ್ನ ರಾಷ್ಟ್ರೀಯ ಆರ್ಥಿಕ ನೀತಿಯನ್ನು ಒಂದು ಉದಾರ, ಜಾಗತಿಕ ನೀತಿಗೆ ಬದಲಿಸಿಕೊಳ್ಳುತ್ತಿರುವ ಪ್ರಕ್ರಿಯೆಯಲ್ಲಿ ನಮ್ಮ ಪರಿಸರ, ಸಾಮಾಜಿಕತೆ ಹಾಗೂ ಸ್ಥಳೀಯ ಆರ್ಥಿಕತೆಗಳ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳೇನು ? ಸ್ಥಳೀಯರಿಗೆ ತಮ್ಮ ಪರಿಸರದ ಮಹತ್ವವನ್ನು ನೆನಪಿಸಿ, ಅದರ ಸಂರಕ್ಷಣೆಗೆ ಮುಂದಾಗುವಂತೆ ಪ್ರೇರೇಪಿಸುವ ಸಣ್ಣ ಪ್ರಯತ್ನವೇ ಈ ಸಾಕ್ಷ್ಯಚಿತ್ರ “ನಗರ ಮತ್ತು ನದಿಕಣಿವೆ”.
(ಲೇಖನ ಸೌಜನ್ಯ : ಸಾಂಗತ್ಯ ಬ್ಲಾಗ್)