ಈ ಚಿತ್ರ ನಮ್ಮನ್ನು ಸೆಳೆಯುವುದು ಅದರೊಳಗಿನ ಮಾನವ ಸಂಬಂಧದ ಸೂಕ್ಷ್ಮ ಎಳೆ ಹಾಗೂ ಹೆಣೆಯುವಿಕೆಯಿಂದ. ಅಪ್ಪನ ಕಷ್ಟವನ್ನು ಹೇಳುತ್ತಾ, ಶ್ರೀಮಂತ ಸಮಾಜದಲ್ಲಿ ಮಧ್ಯಮ ವರ್ಗದವರ ಕನಸುಗಳ ಈಡೇರಿಸಿಕೊಳ್ಳುವಿಕೆಯ ಪರ್ಯಟನವನ್ನೂ ತಿಳಿಸುತ್ತದೆ. ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ (The Pursuit of Happyness) ಹಾಲಿವುಡ್ ಚಿತ್ರ. ಬದುಕಿನಲ್ಲಿ ಖುಷಿಯ ಹುಡುಕಾಟದ ಉದ್ದೇಶವೇನು ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಡುವ ಚಿತ್ರ.
ಚಲನಚಿತ್ರ ಬಿಡುಗಡೆಯಾದದ್ದು 2006 ರಲ್ಲಿ . ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ ಚಿತ್ರ. ಕ್ರಿಸ್‌ಗಾರ್ಡನರ್ ಎಂಬಾತನ ‘ಎ ಸ್ಟ್ರಗಲ್ ವಿಥ್ ಹೋಮ್‌ಲೆಸ್ ನೆಸ್’ ನ್ನು ಆಧರಿಸಿ ಗೇಬ್ರಿಯಲ್ ಮುಸೆನೊ ನಿರ್ದೇಶಿಸಿದ ಚಿತ್ರವಿದು.
ಒಬ್ಬ ಸೇಲ್ಸ್ ಮ್ಯಾನ್ ತನ್ನ ಬದುಕಿನ ಖುಷಿಗಾಗಿ ತನ್ನ ಮಗನನ್ನು ಸಾಕಲು ಕಸ್ಟಡಿಗೆ ತೆಗೆದುಕೊಳ್ಳುತ್ತಾನೆ. ಕಥಾನಾಯಕನ ಖುಷಿಯ ಹುಡುಕಾಟವದು. ಆದರೆ ತನ್ನ ವೃತ್ತಿಯಲ್ಲಿ ಸೋಲುವ ಆತ ತನ್ನ ಮಗನ ಸಾಕಲು ಹಣ ಹೊಂದಿಸಲು ಹೆಣಗಾಡುತ್ತಾನೆ. ಪ್ರತಿ ಹಂತದಲ್ಲೂ ಮಗನನ್ನು ಖುಷಿಯಾಗಿಡಬೇಕೆಂದು ಪ್ರಯತ್ನಿಸುವ ಕಥಾನಾಯಕನಿಗೆ ಬಹಳ ಕಠಿಣ ಪರಿಸ್ಥಿತಿ ಎದುರಿಸುತ್ತಾನೆ. ಆದರೂ ಭರವಸೆಯನ್ನು ಕಳೆದುಕೊಳ್ಳದ ಆತ, ಕೊನೆಯಲ್ಲಿ ಉದ್ಯೋಗವನ್ನು ಪಡೆದಾಗ ಆಗುವ ಖುಷಿಯೇ ಬೇರೆ. ಇಡೀ ಚಿತ್ರ ಮೆಲೋಡ್ರಾಮ ಎನಿಸಿದರೂ, ಎಲ್ಲೂ ಭಾವನೆಗಳ ಜಡಿಮಳೆಯಾಗುವುದಿಲ್ಲ. ಆ ರೀತಿಯಲ್ಲಿ ನಿರ್ದೇಶಕ ನವಿರಾಗಿ ನಿರೂಪಿಸಿದ್ದಾರೆ.
ಒಂದು ಕೌಟುಂಬಿಕ ಕಥೆಯಾಗಿ, ತೀರಾ ಎಮೋಷನಲ್ ಆಗಿಬಿಡಬಹುದಾದ ಅಪಾಯವನ್ನೂ ಸಾಕಷ್ಟರ ಮಟ್ಟಿಗೆ ನಿಯಂತ್ರಿಸಿ, ಭಾವನೆಗಳ ಜಡಿಮಳೆಯಲ್ಲಿ ಕಥೆ ಕಳೆದುಹೋಗದ ಹಾಗೆ ಎಚ್ಚರಿಕೆ ವಹಿಸಿರುವುದು ವಿಶೇಷ. ಈ ಲೇಖನವೂ ಇಷ್ಟವಾಗಬಹುದು : ಮರೀನಾ – ಸರಳ ನಿರೂಪಣೆಯಲ್ಲಿ ಬದುಕಿನ ಸರಳತೆಯ ಹೇಳುವ ಚಿತ್ರ
ಬ್ಲಾಕ್ ಬ್ಲಸ್ಟರ್ ಸಿನಿಮಾ
ಬ್ಲಾಕ್ ಬ್ಲಸ್ಟರ್ ಸಿನಿಮಾಗಳಲ್ಲಿ ಅಭಿನಯಿಸಿದವನಿಗೆ ಇಂಥದೊಂದು ಸೂಕ್ಷ್ಮ ಎಳೆಯ ಚಿತ್ರದಲ್ಲಿ ಪಾತ್ರ ನಿರ್ವಹಿಸಲು ಸಾಧ್ಯವೇ? ಅದರಲ್ಲೂಪ್ರಧಾನ ಪಾತ್ರದಲ್ಲಿ ನಿರ್ವಹಿಸಲು ಸಾಧ್ಯವೇ ಎಂಬುದನ್ನು ಹೆಸರಾಂತ ನಟ ವಿಲ್ ಸ್ಮಿತ್ ಸಾಧ್ಯವಾಗಿಸಿದ್ದಾರೆ. ಕಥಾನಾಯಕನೇ ಈ ಚಿತ್ರದ ಜೀವಾಳ. ಪ್ರತಿ ಸನ್ನಿವೇಶಗಳನ್ನೂ ಸಾಂದ್ರವಾಗಿ ಕಟ್ಟಿಕೊಡದಿದ್ದರೆ ಅದು ಪ್ರೇಕ್ಷಕನೊಳಗೆ ಇಳಿಯದು. ಆ ಅರಿವನ್ನು ಇಟ್ಟುಕೊಂಡು ಅಭಿನಯಿಸಿರುವುದು ವಿಲ್ ಸ್ಮಿತ್ ನ ಹೆಚ್ಚುಗಾರಿಕೆ.
ಕಥೆಯ ಎಳೆ ಸ್ಪೂರ್ತಿದಾಯಕವಾಗಿದ್ದರೂ, ಎಲ್ಲೋ ಹೀರೋನ ವೈಭವೀಕರಣವಾಗಿಯೋ ಅಥವಾ ತೀರಾ ಸಾಮಾನ್ಯ ಎಳೆಯಾಗಿ ರೂಪುಗೊಳ್ಳಬಹುದಾದ ಎಲ್ಲ ಅಪಾಯವೂ ಈ ಚಿತ್ರದಲ್ಲಿತ್ತು. ಆದರೆ ಅಪಾಯವನ್ನು ದಾಟಲು ನಿರ್ದೇಶಕ ಪರಿಶ್ರಮ ಪಟ್ಟಿರುವುದು ಚಿತ್ರದ ಹಲವು ದೃಶ್ಯಗಳಲ್ಲಿ ಮನದಟ್ಟಾಗುತ್ತದೆ. ಹಾಗೆಯೇ ವಿಲ್ ಸ್ಮಿತ್ ಸಹ ತನ್ನ ಎಂದಿನ ನಟನೆಯ ಜಾಡನ್ನು ಬಿಟ್ಟು, ಹೊಸದೊಂದು ಪಾತ್ರಕ್ಕೆ ಪುನರ್ ರೂಪಿಸಿಕೊಂಡಿರುವುದೂ ಅಭಿನಯದ ಭಾಷೆಯಲ್ಲೇ ಸ್ಪಷ್ಟವಾಗುತ್ತದೆ. ವಿಲ್ ಸ್ಮಿತ್ ಗೆ ಪೂರಕವಾಗಿ ಅವರ ಮಗ ಕರಾಟೆ ಕಿಡ್ ನ ಪ್ರಸಿದ್ಧ ಕಲಾವಿದೆ ಜೇಡ್ ಸ್ಮಿತ್ ಸಹ ಚೆನ್ನಾಗಿ ಅಭಿನಯಿಸಿದ್ದಾನೆ.
ಪಾತ್ರಕ್ಕೆ ಜೀವ ತುಂಬಿರುವ ಅಪ್ಪ-ಮಗ (ನಿಜ ಜೀವನದಲ್ಲೂ ಅವರಿಬ್ಬರು ಅಪ್ಪ-ಮಗ)ರ ಅಭಿನಯ ಅತ್ಯಂತ ಸೊಗಸಾಗಿದೆ. ಪಾತ್ರಗಳ ಅಗಾಧತೆ ನಮ್ಮನ್ನು ಆವರಿಸುವುದು ವಿಶೇಷ.
ಕಥೆಯ ಸರಳತೆ
ಕಥೆಯ ಸರಳ ಎಳೆ ಮತ್ತು ನೈಜ ನೆಲೆಯ ಎಳೆಗೆ ನಮ್ಮೊಳಗೆ ಬೆಳೆಯುವ ಶಕ್ತಿ ಇದೆ. ಆದ ಕಾರಣವೇ ಪಾತ್ರದೊಳಗೆ ನಾವು ಹೋಗಿ ಬಿಡುತ್ತೇವೆ. ನಿರ್ದೇಶಕ ಮತ್ತು ನಟರ ಎಚ್ಚರ ಪಾತ್ರಗಳಿಗೆ ಜೀವ ತುಂಬುತ್ತದೆ. ಯಾಕೆಂದರೆ, ಚಿತ್ರದ ಕಥೆ ತೀರಾ ಕಟು ವಾಸ್ತವಕ್ಕೆ ಹತ್ತಿರವಿರುವಾಗ, ಅದನ್ನು ಹಾಗೆಯೇ ಪ್ರಸ್ತುತಪಡಿಸಲು ಪ್ರಯತ್ನಿಸಿದರೆ ಸಾಕ್ಷ್ಯಚಿತ್ರವೂ ಆಗುವ ಸಾಧ್ಯತೆ ಇತ್ತು. ಆ ಅಪಾಯದಿಂದ ಇಡೀ ಚಿತ್ರವನ್ನು ಕಾಪಾಡಿರುವುದಕ್ಕೆ ಇಡೀ ತಂಡಕ್ಕೆ ಅಭಿನಂದನೆ ಸಲ್ಲಬೇಕು. ಮಾನವ ಸಂಬಂಧವನ್ನು ಎತ್ತಿ ಹಿಡಿಯುವ ಒಂದು ಒಳ್ಳೆಯ ಚಿತ್ರವನ್ನು ಹಲವು ಬಾರಿ ನೋಡಲಡ್ಡಿಯಿಲ್ಲ. ಇವುಗಳನ್ನೂ ಓದಿ : ಅಕಿರಾ ಕುರಸೋವಾ: ವಿಶ್ವ ಚಿತ್ರ ಜಗತ್ತಿನ ಪ್ರಖರ ಸೂರ್ಯ
ವಿಶೇಷ ಅಂಶಗಳು
ಈ ಮೂಲ ಕಥೆಯ ರೂವಾರಿ ಕ್ರಿಸ್ ಗಾರ್ಡನರ್, ತನ್ನ ಕಥೆ ಚಿತ್ರವಾಗುತ್ತದೆ ಎಂದಾಗ ಅಚ್ಚರಿ ಪಡಲಿಲ್ಲ. ಈ ಚಿತ್ರದ ಸಹಾಯಕ ನಿರ್ಮಾಪಕನೂ ಸಹ. ಆದರೆ, ಆ ಕಥಾನಾಯಕನ ಪಾತ್ರಕ್ಕೆ ವಿಲ್ ಸ್ಮಿತ್ ಆಯ್ಕೆಯಾಗಿದ್ದಾನೆ ಎಂದಾಗ ನಕ್ಕು ಬಿಟ್ಟಿದ್ದ. ಕೇವಲ ಜನಪ್ರಿಯ ಪಾತ್ರಗಳು, ಸಿನಿಮಾಗಳಲ್ಲಿ ಅಭಿನಯಿಸಿದ ವಿಲ್ ಗೆ ಈ ಸಿನಿಮಾ ಸಾಧ್ಯವಿಲ್ಲ. ಯಾಕಾದರೂ ಆಯ್ಕೆ ಮಾಡಿದರೋ ಎಂಬ ಪ್ರಶ್ನೆ ಕ್ರಿಸ್ ರಲ್ಲಿ ಉದ್ಭವಿಸಿತ್ತು. ಆದರೆ ಅವರ ಮಗಳು ಜಸಿಂತಾ, ‘ವಿಲ್ ಸ್ಮಿತ್ ಮುಹಮ್ಮದ್ ಆಲಿ [ಅಮೆರಿಕದ ಖ್ಯಾತ ಬಾಕ್ಸರ್] ಪಾತ್ರವನ್ನು ಮಾಡಬಹುದಾದರೆ, ನಿನ್ನ ಪಾತ್ರವನ್ನೂ ಮಾಡಬಲ್ಲ’ ಎಂದು ಹೇಳಿದ್ದಳು. ಚಿತ್ರ ಬಿಡುಗಡೆಗೊಂಡಾಗ ಜಸಿಂತಾಳ ಮಾತು ನಿಜವಾಗಿತ್ತು. ವಿಲ್ ಸ್ಮಿತ್ ಕ್ರಿಸ್ ಗಾರ್ಡನರ್ ಪಾತ್ರವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದರು.
ವಿಲ್ ಸ್ಮಿತ್ – ಕ್ರಿಸ್ ಗಾರ್ಡನರ್
ಜಡೇನ್ ಸ್ಮಿತ್ – ಜೂ. ಕ್ರಿಸ್ ಗಾರ್ಡನರ್
ಪ್ರಶಸ್ತಿಗಳು
ವಿಲ್ ಸ್ಮಿತ್- ಅತ್ಯುತ್ತಮ ನಟ ಪ್ರಶಸ್ತಿ ಆಸ್ಕರ್
ಬಿಇಟಿ ಅವಾರ್ಡ್ ನಾಮ ನಿರ್ದೇಶನ
ಬ್ಲ್ಯಾಕ್ ರೀಲ್ ಅವಾರ್ಡ್ ನಾಮ ನಿರ್ದೇಶನ
ಬ್ರಾಡ್‌ಕ್ಯಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ – ನಾಮ ನಿರ್ದೇಶನ
ಕಪ್ರಿ ಅವಾರ್ಡ್ – ಅತ್ಯುತ್ತಮ ಚಿತ್ರ
ಮತ್ತಷ್ಟು ಚಿತ್ರಗಳಲ್ಲಿ ಅತ್ಯುತ್ತಮ ನಟನೆಗೆ ನಾಮ ನಿರ್ದೆಶನ ಹಾಗೂ ಪ್ರಶಸ್ತಿಗೆ ಭಾಜನವಾಗಿದೆ.
ನಿರ್ದೇಶಕ : ಗೇಬ್ರಿಯಲೊ ಮುಸೆನೊ
ನಿರ್ಮಾಪಕರು : ವಿಲ್ ಸ್ಮಿತ್, ಟಾಡ್ ಬ್ಲ್ಯಾಕ್, ಜೇಮ್ಸ್ ಲಸಿಟರ್, ಡಿವೋನ್ ಫ್ರ್ಯಾಂಕ್ಲಿನ್, ಸ್ಟೀವ್ ಟಿಸ್
ಚಿತ್ರಕಥೆ : ಸ್ಟ್ರೀವನ್ ಕಾನ್ರಾಡ್
ಮೂಲ ಕಥೆ: ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್. ಕ್ರಿಸ್ ಗಾರ್ಡನರ್
ಸಿನೆಮಾಟೊಗ್ರಫಿ : ಪೆಡಾನ್ ಪಪಮಿಚೆಲ್
ಬಿಡುಗಡೆಗೊಂಡ ವರ್ಷ – 2006
ಭಾಷೆ : ಇಂಗ್ಲಿಷ್
ಚಿತ್ರ ಸಮಯ : 117 ನಿಮಿಷಗಳು
ವೆಚ್ಚ : 55 ದಶಲಕ್ಷ ಅಮೆರಿಕನ್ ಡಾಲರ್
ಗಳಿಕೆ : 307.1 ದಶಲಕ್ಷ ಅಮೆರಿಕನ್ ಡಾಲರ್