Sunday, December 22, 2024
spot_img
More

    Latest Posts

    ಸಿನಿಮಾ ಒಂದು ಕಲೆಯೇ? ಅಲ್ಲವೇ?

    ಡಾ. ಕೆ. ಶಿವರಾಮಕಾರಂತರು ಎಲ್ಲ ಕ್ಷೇತ್ರಗಳ ಬಗ್ಗೆಯೂ ತಮ್ಮ ನೋಟವನ್ನು ಹರಿಸಿದ್ದಾರೆ. ಅವರ ಆಸಕ್ತಿಯೇ ದಿಗಲು ಹುಟ್ಟಿಸುವಂಥದ್ದು. ಸಿನಿಮಾ ಕುರಿತು ಅವರು ಬರೆದ ಒಂದು ಲೇಖನ ನಮ್ಮನ್ನು ಹಲವು ದಿಕ್ಕುಗಳೆಡೆಗೆ ಆಲೋಚನಾಮುಖಿಯಾಗಲು ಪ್ರಚೋದಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ “ಕಲಾ ಪ್ರಬಂಧಗಳು” ಕುರಿತಾದ ಕೃತಿಯಿಂದ ಆಯ್ದದ್ದು ಇಲ್ಲಿ ಪ್ರಕಟಿಸಲಾಗುತ್ತಿದೆ. ಎಲ್ಲರೂ ಓದಿ ಅಭಿಪ್ರಾಯಿಸಿ.

    ನಾವು ಬಯಸಲಿ ಬಯಸದಿರಲಿ, ಚಲನಚಿತ್ರ ಪ್ರದರ್ಶನ ಇಂದು ಜಗತ್ತಿನ ಉದ್ದಕ್ಕೂ ಪ್ರಚಾರಕ್ಕೆ ಬಂದಿದೆ. ಪೂರ್ವದಿಂದಲೂ ನಮ್ಮ ಸಂಸ್ಕೃತಿ ಯೊಡನೆ ಬೆರೆತು ಬಂದ ಕೆಲವು ಲಲಿತಕಲೆ ಗಳಷ್ಟೇ, ಎಷ್ಟೋ ಕಡೆ ಅವಕ್ಕಿಂತ ಅಡಕವಾದ ವ್ಯಾಮೋಹವನ್ನು ಅದು ನಮ್ಮಲ್ಲಿ ಉಂಟು ಮಾಡಿದೆ. ನಗರವಾಸಿಗಳಿಗೆ, ಚಲನಚಿತ್ರಗಳನ್ನು ಆಗಾಗ ನೋಡುವ ಚಟ ನಿತ್ಯಜೀವನದ ಒಂದು ಅಂಗವಾಗಿ ಪರಿಣಮಿಸಿದೆ. ನಿತ್ಯವೂ ವರ್ತಮಾನ ಪತ್ರಗಳನ್ನು ಓದುವ ಚಾಳಿಯಂತೆ, ಚಲನಚಿತ್ರ ಪ್ರೇಕ್ಷಣೆ ಒಂದು ಚಾಳಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಹಳ್ಳಿಗಳಿಗೂ ಇದು ಪಸರಿಸಿದೆ. ರಷ್ಯಾ ದೇಶದಲ್ಲಿ ಇದರ ಪ್ರಚಾರ ಕಂಡುಬಂದಷ್ಟು ಇನ್ನೆಲ್ಲಿಯೂ ಕಂಡುಬರುವುದಿಲ್ಲ. ಊಟ ಶಾರೀರಕ ಆಹಾರವಾಗಿರುವಂತೆ ಹಲವರ ಪಾಲಿಗೆ ಇದು ಮಾನಸಿಕ ಆಹಾರವಾಗಿದೆ. ಕಾವ್ಯ, ಕಾದಂಬರಿಗಳಷ್ಟೇ ಪ್ರಾಮುಖ್ಯ ಸ್ಥಾನವನ್ನು ಇದು ವಹಿಸಿದೆ. ಹಲವೊಂದು ಕಾವ್ಯ ಕಾದಂಬರಿಗಳಲ್ಲಿ ಅಯೋಗ್ಯ ವಿಷಯಗಳಿವೆ ಎಂಬ ಕಾರಣದಿಂದ, ಕಾವ್ಯ ವರ್ಗವನ್ನೇ ಹೇಗೆ ದೂರಲು ಬರಲಾರದೋ, ಹಾಗೆಯೇ ಇಂದು ಕಂಡುಬರುವ ಅಯೋಗ್ಯ, ಅಸಭ್ಯ ಚಿತ್ರಗಳ ದೆಸೆಯಿಂದಲೇ, ಅವುಗಳನ್ನು ಹಳಿಯಲು ಬರಲಾರದು. ವೇಶ್ಯೆಯರ ಕೈಯಲ್ಲಿ ಗಾನನರ್ತನಗಳು ಕಾಮಸಾಧನೆಗಾಗಿ ಉಪಯೋಗಿಸಲ್ಪಡುತ್ತವೆಂದು ನಾವು ಗಾನ ನರ್ತನಗಳನ್ನೇ ದೂರಬಹುದೇ ! ಕಲೆಗಳು ಮನುಷ್ಯರ ಜೀವನಕ್ಕೆ ಅತಿ ಅವಶ್ಯ. ಶ್ರೇಷ್ಠ ಸಂಸ್ಕೃತಿಯು ಶ್ರೇಷ್ಠ ಕಲೆಗಳಿಲ್ಲದೆ ಬದುಕದು.

    ಹೀಗೆಂದಾಗ- ಈ ಮಾತುಗಳು ಗಾನ, ನರ್ತನಗಳಂತಹ ಲಲಿತಕಲೆಗಳಿಗೆ ಅನ್ವಯಿಸಬಲ್ಲುವೇ ಹೊರತು, ಚಲನಚಿತ್ರದಂತಹ ಮಾನಸಿಕ ಮದ್ಯಪಾನಕ್ಕೆ ಅನ್ವಯಿಸಲಾರದೆಂಬ ಉತ್ತರ ಬರ ಬಹುದು. ಇತ್ತ, ಈ ಚಿತ್ರಗಳ ಕಡೆಗೆ ಹಲವರು ತೋರುತ್ತಿರುವ ಆಸಕ್ತಿ-ಹೆಂಡದ ಕಡೆಗೆ ಮದ್ಯಪಾನಿ ತೋರುವ ಹಂಬಲದಂತಿದೆ- ಎಂಬ ಮಾತನ್ನೂ ಹೇಳುವಂತಿಲ್ಲ. ಆ ಒಂದೇ ಕಾರಣದಿಂದ ಚಲನಚಿತ್ರವನ್ನು ತಳ್ಳಿಬಿಡುವಲ್ಲಿ, ಅದೇ ರೀತಿಯ ಮೋಹಕ ಶಕ್ತಿಯುಳ್ಳ, ಯಾವತ್ತು ಲಲಿತಕಲೆಗಳನ್ನೂ ತಳ್ಳಬೇಕಾದೀತು. ಅದು ತೀರ ನವೀನವೆಂಬುದರಿಂದಲೂ ನಾವು ಅದನ್ನು ಅಲ್ಲಗಳೆಯುವುದೂ ಸರಿಯಲ್ಲ. ಆದಿವಾಸಿಗಳ ಜೀವನದಲ್ಲಿ ಮೊದಲು ತಲೆದೋರಿದ ಕಲೆ ಎಂಬುದೇ ನರ್ತನ; ಹಿಂದೆ ಅದೂ ನವೀನ ಎನಿಸಿತ್ತು. ಮುಂದೆ ಗಾಯನ ಕಲೆ ಬಂದಿತು. ಆಗ, ಅದೂ ನವೀನವೆನಿಸಿತ್ತು. ತರುವಾಯ ಶಿಲ್ಪ, ಚಿತ್ರಕಲೆಗಳು ಬಂದುವು. ಆಗ, ಅವೂ ನವೀನವೆನಿಸಿದುವು. ಮಾನವನ ಸಂಸ್ಕೃತಿ ಇನ್ನೂ ಮುಂದೆ ಹೋದಂತೆ, ವಾಸ್ತುಶಿಲ್ಪ ಬಂದಿತು. ಅದೂ, ಆ ಕಾಲಕ್ಕೆ ನವೀನವೇ. ಆದರೆ, ಈ ಕಾಲಕ್ಕೆ ಅವೆಲ್ಲ ಪ್ರಾಚೀನವಾದುವು. ಆದುದರಿಂದ, ಚಲನಚಿತ್ರವು ಈಗ ನಮಗೆ ನವೀನವಾಗಿದೆ ಎಂಬುದರಿಂದ ಅದನ್ನು ಹಳಿಯದೆ, ಅದರಲ್ಲಿ ಕಲಾ ಲಕ್ಷಣಗಳಿವೆಯೇ- ಎಂಬುದನ್ನು ಪರಿಶೀಲಿಸುವುದು ನಮ್ಮ ಕರ್ತವ್ಯ.

    ಐದು ಲಕ್ಷ ಪ್ರೊಡ್ಯೂರ್ಸ್‌ಗಳ ಮಂಥನ್‌ ಮರು ಬಿಡುಗಡೆ; ನೋಡದೇ ಇರಬೇಡಿ

    ಮೊಟ್ಟಮೊದಲು ಕಲೆಯೆಂದರೇನೆಂದು ವಿಚಾರ ಮಾಡುವ. ತನಗುಂಟಾಗುವ ಭಾವ ವಿಶೇಷಗಳನ್ನು ಒಂದು ವಾಹಕ ((medium) ದ ಮೂಲಕ ಪರಿರಿಗುಂಟಾಗುವಂತೆ ಮಾಡುವ ಸಾಧನೆಯೇ ಕಲೆ. ಪೆಟ್ಟು ತಿಂದಾಗ ಮಗು ಅಳುವುದು; ಅದನ್ನು ಕಂಡು ಇತರರಿಗೂ ದುಃಖವುಂಟಾಗುವುದು. ಇದೊಂದು ಕಲೆಯೇ ? ಅಲ್ಲ. ಕಾರಣ, ನೋವಾದವನು ತನಗುಂಟಾಗುವ ವ್ಯಥೆಯನ್ನು ಅಳುವಿನ ಮೂಲಕ ಪ್ರಕಟಗೊಳಿಸುವುದು ಹುಟ್ಟು ಗುಣ. ಆದರೆ, ಕಲೆಯು ನಮ್ಮ ಜೀವನದ ಹುಟ್ಟು ಗುಣ ಇಲ್ಲವೆ ಸ್ವಭಾವವಲ್ಲ, ದುಃಖ ಬಂದಾಗ ಅಳುವುದು, ಹರುಷವಾದಾಗ ನಗುವುದು, ಸಿಟ್ಟು ಬಂದಾಗ ಉದ್ರೇಕಗೊಳ್ಳುವುದು-ಈ ಕ್ರಿಯೆಗಳು ಯಥಾವತ್ತಾಗಿ ಪರರನ್ನು ದುಃಖ, ಹರುಷ, ಕೋಪದಲ್ಲಿ ಮುಳುಗಿಸಬಹುದಾದರೂ, ಅವನ್ನು ಕಲೆಯೆನ್ನಲು ಸಾಧ್ಯವಿಲ್ಲ.

    ಕಲೆಯಲ್ಲೂ ಕೆಟ್ಟ ಗುಣವಿರಬಹುದು. ಆದರೆ, ಅವೆಲ್ಲ ನಮ್ಮ ಸ್ವಾಭಾವಿಕ ಗುಣಗಳಲ್ಲ, ಅದು ಯಾವುದೇ ಸ್ವಭಾವ ಗುಣದ ತಾದ್ರೂಪಿಕ(Realistic)ಅನುಕರಣೆಯೂ ಅಲ್ಲ. ಇನ್ನೊಬ್ಬ ಅತ್ತಂತೆ ಅನುಕರಿಸುವುದು ಕಲೆಯಲ್ಲ. ಕಲೆ ಕೆಲವು ವಿಷಯಗಳಲ್ಲಿ, ಇದ್ದಕ್ಕಿದ್ದಂತೆ ಅನುಕರಿಸುವ ಸ್ವಭಾವದ್ದಾಗಿ ಕಾಣಿಸಿದರೂ, ಕೆಲವೊಂದು ವಿಷಯಗಳಲ್ಲಿ ಅದು ಅಮೂರ್ತ ರೂಪದ್ದು. ಅಮೂರ್ತ ವಿಚಾರ ಊಹಾ ರಾಜ್ಯದ ಉತ್ಪತ್ತಿ; ಮೂರ್ತಿಮಂತವಾಗಿ ಕಾಣಸಿಗದ ವಸ್ತು. ಇವೆರಡನ್ನು ಕೂಡಿ ಉಂಟಾಗುವ ಸೃಷ್ಟಿಯೇ ಕಲೆ. ನಾವು ಯಾವ ಸೃಷ್ಟಿಯನ್ನು ಮಾಡಬೇಕಾದರೂ, ನಮ್ಮ ಇದಿರು ಮೂರ್ತ ವಸ್ತುಗಳು ಬೇಕೆ ಬೇಕು. ಹಾಗೆಯೇ, ಕಣ್ಣಿಗೆ ಕಾಣಿಸುವ ಕ್ರಿಯೆಗಳೂ ಬೇಕು. ಕೇವಲ ಇಷ್ಟನ್ನೇ ಉಪಯೋಗಿಸಿಕೊಂಡರೆ ಅದು ಸೃಷ್ಟಿ-ಕಲೆಯೆನಿಸಲಾರದು. ‘ಒಂದು ವಸ್ತು-ಹೊರಗಿನ ಆಕಾರ, ಅಳತೆ ಮೊದಲಾದವುಗಳ ದೃಷ್ಟಿಯಿಂದ ಎಷ್ಟೇ ಯಥಾವತ್ತಾಗಿದ್ದರೂ, ಅದಕ್ಕೆ ಕಾರಣವಾದ ಮೂಲವಸ್ತು ಕೊಡಬಲ್ಲ ಭಾವಾನಂದಗಳನ್ನು ಕೊಡಲಾರದು. ಒಬ್ಬನ ರೂಪಬಿಂಬ ಆ ಮನುಷ್ಯನ ಸ್ಥಾನವನ್ನು ಎಂದೂ ನಿರ್ವಹಿಸದು. (Paul Rotha P. 40)

    ನಾವೀಗ ಗಾನಸೃಷ್ಟಿಯ ಒಂದು ಚಿಕ್ಕ ಪ್ರಬಂಧ(Composition) ವನ್ನು ಕುರಿತು ಯೋಚಿಸುವ. ಸಪ್ತಸ್ವರಗಳಿಂದ ಅದರ ರಚನೆ ಉಂಟಾಯಿತು. ಈ ಸಪ್ತಸ್ವರಗಳು ನಿಸರ್ಗದಲ್ಲಿ ಕೇಳಸಿಗುವ ಕೆಲವು ಸ್ವರಗಳಂತೆಯೇ ಇವೆ. ಸ್ವರಗಳೇ ಆ ಹಾಡಿನ ವಸ್ತು. ಆದರೆ, ಅದು ಹೊರಗೆ ನಿಸರ್ಗದಲ್ಲಿ ಆಗಾಗ ಕೇಳಿಸುವ ಸ್ವರ ಸಮೂಹವಲ್ಲ. ಸ್ವರಗಳನ್ನು ಕೂಡಿಕೊಂಡ ಅದರ ಒಂದೊಂದು ತುಣುಕೂ ನಿಸರ್ಗದಲ್ಲಿ ಕೇಳಿಬರುವ ಸ್ವರಕುಂಜವಾಗಿರಬಹುದು. ಉದಾ: ಆ ಹಾಡಿನ ಒಂದು ತುಣುಕು ಕೋಗಿಲೆಯ ಕೂಗಿನಂತೆ ಕೇಳಿಸಬಹುದು. ಇನ್ನಿತರ ತುಣುಕುಗಳು ಬೇರೆ, ಬೇರೆ ಪ್ರಾಣಿಗಳು ಹೊರಡಿಸುವ ಧ್ವನಿಗಳಂತಿರಬಹುದು. ಅವುಗಳಿಂದ ಹಾಡಿನ ಸೃಷ್ಟಿ ಅಮೂರ್ತ ವಾದೊಂದು ಭಾವನೆಯನ್ನು ಪ್ರೇರಿಸಬಲ್ಲ ಗುಣವನ್ನು ಪಡೆಯಲು ಬಂದೀತು.

    SFF : ‌ಸಿಡ್ನಿಯ 71 ನೇ ಚಿತ್ರೋತ್ಸವದಲ್ಲಿ197 ಸಿನಿಮಾಗಳು

    ಈಗ, ಒಂದು ಚಿತ್ರದ ಉದಾಹರಣೆಯನ್ನು ಎತ್ತಿಕೊಳ್ಳುವ. ಆ ಚಿತ್ರದ ಬಣ್ಣಗಳು ನಿಸರ್ಗದಲ್ಲಿ ಕಾಣಸಿಗುವವುಗಳೇ. ಅಲ್ಲಿ- ಚಿತ್ರದಲ್ಲಿ ಬರೆದ ಮನುಷ್ಯ, ಪಶು, ನದಿ ಮೊದಲಾದ ವಸ್ತುಗಳ ಅಂಗೋಪಾಂಗಗಳು ಬಹುಮಟ್ಟಿಗೆ ತಾದ್ರೂಪಿಕವಾಗಿರಬಹುದು. ಆದರೆ, ಆ ಚಿತ್ರ ನಮ್ಮಲ್ಲಿ ಪ್ರೇರಿಸುವ ಭಾವ ತೀರ ನವೀನವಾಗಿದ್ದು, ನಿಸರ್ಗದಲ್ಲಿ ಕಾಣಸಿಗದ ಅಮೂರ್ತರೂಪದ್ದೂ ಆಗಿರಲು ಶಕ್ಯವಿದೆ. ಇದೇ ರೀತಿ, ನರ್ತನದ ಅಂಗಭಾಗಗಳನ್ನು ಕುರಿತು ಆಡಬಹುದು.

    ಹೀಗೆ, ಮೂರ್ತ ಇಲ್ಲವೆ ದೃಗ್ಗೋಚರ (Realistic)ಒಡವೆಗಳ ಸಹಾಯದಿಂದ ಭಾವಪ್ರೇರಕ ಅಮೂರ್ತ ಕಲ್ಪನೆಯನ್ನು ಸೃಷ್ಟಿಸುವುದೇ ಕಲೆಯ ಗುರಿ. ಇಂಥ ಸೃಷ್ಟಿಗಳಲ್ಲಿ ತಾದ್ರೂಪಿಕತೆ ಮತ್ತು ಅಮೂರ್ತತೆಗಳು ಯಾವ ಪ್ರಮಾಣದಲ್ಲಿ ಸೇರಬಹುದು ಎಂಬುದು ಆಯಾಯ ಕಲೆಗಳ ಮಾಧ್ಯಮವನ್ನು ಹೊಂದಿಕೊಂಡಿದೆ. ಚಾರ್ಲ್ಸ ಮೇರಿಯಟ್ ಎಂಬವನು ಈ ವಿಷಯದಲ್ಲಿ ಹೀಗೆ ಹೇಳಿದ್ದಾನೆ: ‘ಕಲೆಯ ಸ್ವರೂಪ ಅದರ ಮಾಧ್ಯಮವನ್ನು ಹೊಂದಿದೆ. ನಿಸರ್ಗದ ತಾದ್ರೂಪಿಕ ಅನುಕರಣೆಗೂ, ಅಮೂರ್ತ ಸ್ವರೂಪಕ್ಕೂ ಇರುವ ಮೇಳವೇ ಕಲೆ. ಇದರಲ್ಲಿ ಅಮೂರ್ತತೆಯೆಷ್ಟಿರಬೇಕು, ತಾದ್ರೂಪ್ಯ ಎಷ್ಟಿರಬೇಕು ಎಂಬುದು ನಾವು ಬಳಸುವ ಮಾಧ್ಯಮವನ್ನು ಹೊಂದಿದೆ ಈಗ ನರ್ತನವನ್ನು ಉದಾಹರಣೆ ಗಾಗಿ ಪರಿಶೀಲಿಸುವ. ಇದರಲ್ಲಿ ನೈಸರ್ಗಿಕ ಅನುಕರಣೆ ಕಡಿಮೆ. ನರ್ತನ ಕಾಲದಲ್ಲಿ ತೋರಿಸುವ ಹಾವಗಳೂ (Gestures), ಕುಣಿತದ ತೆರತೆರನ ಅಂಗವಿನ್ಯಾಸಗಳೂ ನಿಸರ್ಗದಲ್ಲಿ ಕಂಡುಬರುವುದಿಲ್ಲ. ಅದರಲ್ಲಿ ಹೆಚ್ಚಿನ ಅಮೂರ್ತತೆಯಿದೆ. ಶಿಲ್ಪ, ಚಿತ್ರಕಲೆಗಳಲ್ಲಿ ಅನುಕರಣೆಯ ಅಂಶ ಅಧಿಕ ಪ್ರಮಾಣದಲ್ಲಿದೆ.

    ಇದೇ ತೆರನ ಯೋಗ್ಯತೆ ಚಲನಚಿತ್ರದಲ್ಲಿ ಇದೆಯೇ- ಎಂದು ವಿಚಾರ ಮಾಡಿದಲ್ಲಿ, ಅಹುದೆಂದು ನಮಗೆ ಹೊಳೆದೀತು. ಈಗ ನಮ್ಮಲ್ಲಿಗೆ ಬರುವ ಚಿತ್ರಗಳಲ್ಲಿ ಹೆಚ್ಚಿನವು ತಾದ್ರೂಪಿಕವಾಗಿದ್ದರೂ, ನಿಜವಾದ ಚಲನಚಿತ್ರ ಇದಕ್ಕಿಂತ ಹೆಚ್ಚಿನ ಅಮೂರ್ತತೆ ತೋರಿಸುವ ನವಸೃಷ್ಟಿಯನ್ನು ರಚಿಸಲು ಸಾಧ್ಯವಿದೆ. ಅದು ಕೇವಲ ವಾಸ್ತವಿಕವಾಗಿರುವ ಬದಲು, ಸೃಜನಶೀಲತೆಯಿಂದ ಸತ್ಯಾತ್ಮಿಕವಾಗಿರಬಹುದು. ‘ಅದಕ್ಕಿರುವ ಪ್ರಬಲ ಕ್ರಿಯಾತ್ಮಕ ಶಕ್ತಿಯೂ, ಭಾವ ಪ್ರೇರಣೆಯ ಬಲವೂ ಇನ್ಯಾವ ಕಲೆಗೂ ಇಲ್ಲ ಎನ್ನಬಹುದು. (Paul Rotha 1 bid p. 45)

    ಚಾರ್ಲಿ ಚಾಪ್ಲಿನ್‌ನೆನ್ನುವಂತೆ- ‘ನಮ್ಮ ಊಹಾಶಕ್ತಿಯನ್ನೂ, ತರಂಗಿತತೆ (rythm) ಮತ್ತು ಬಣ್ಣಗಳಿಗೆ ಇಂದ್ರಿಯಗಳನ್ನು ಉದ್ರೇಕಗೊಳಿಸುವ ಶಕ್ತಿ ಚಲನಚಿತ್ರಗಳಿಗಿದೆ. ಇದರಿಂದಾಗಿ, ಚಲನಚಿತ್ರ ಉದ್ಯಮ ಅಷ್ಟೊಂದು ಭವ್ಯ ಮತ್ತು ಆಕರ್ಷಕ ಸ್ಥಾನವನ್ನು ಗಳಿಸಿದೆ. ಈ ಅದ್ಭುತ ಶಕ್ತಿಯ ರಾಕ್ಷಸನನ್ನು ನಾವು ಸಾಕುತ್ತಿದ್ದೇವೆ. ಆದರೆ, ಅದನ್ನು ತೆಗೆದುಕೊಂಡು ಏನು ಮಾಡಬೇಕೆಂಬ ಅರಿವು ನಮಗೆ ಇದೆಯೇ?

    ಯಾವುದೇ ಕಲೆಯು ಸೃಷ್ಟಿಯಾಗಲು, ಕಲಾವಿದನ ಭಾವಸೃಷ್ಟಿಗೆ ಅನುಕೂಲವಾದ ಮಾಧ್ಯಮ ಬೇಕೇ ಬೇಕು. ನಮ್ಮ ವಿಚಾರಶಕ್ತಿಯನ್ನು ಎಚ್ಚರಗೊಳಿಸಿ, ಭಾವನೆಗಳನ್ನು ಉದ್ರೇಕಗೊಳಿಸುವ ಶಕ್ತಿ ಆ ಮಾಧ್ಯಮಕ್ಕೆ ಇರಬೇಕಷ್ಟೆ. ಚಲನಚಿತ್ರದಲ್ಲಿ ಅಂಥ ಶಕ್ತಿ ಇದೆಯೇ ? ನಿಜಕ್ಕೂ ಧಾರಾಳವಾಗಿದೆ. ಇಲ್ಲಿ, ಅದರ ಮಾಧ್ಯಮ- ಚಿತ್ರಪಟಲದ (film) ತುಣುಕುಗಳು. ಅವುಗಳ ಮೇಲೆ ಸ್ಥಿರ ಮತ್ತು ಚರವಸ್ತುಗಳ ತಾದ್ರೂಪಿಕ ಬಿಂಬಗಳಿರುತ್ತವೆ. ಇವನ್ನು ಜೋಡಿಸಿ, ಭಾವಸೃಷ್ಟಿಗೆ ಬೇಕಾದ ವಸ್ತುಗಳನ್ನು ಸುಲಭದಲ್ಲಿ ನಿರ್ಮಿಸಬಹುದು. ರಷ್ಯಾ ದೇಶದ ಕುಶಲೆವ್ ಎಂಬ ಚಲನಚಿತ್ರ ನಿರ್ದೇಶಕ ಹೀಗೆನ್ನುತ್ತಾನೆ – ‘ಪ್ರತಿ ಕಲೆಯೂ, ಮೂಲತಃ ಒಂದಲ್ಲ ಒಂದು ವಸ್ತು (material) ವಿನಿಂದ ಕೂಡಿದ್ದು, ಆ ವಸ್ತುಗಳ ಸ್ವಭಾವಕ್ಕೆ ಅನುಗುಣವಾಗಿ ಅವನ್ನು ಜೋಡಿಸುವುದರಿಂದ ಅವಕ್ಕೆ ಶಕ್ತಿ ಬರುತ್ತದೆ. ಚಲನಚಿತ್ರದಲ್ಲಿ ಬೆಳಕು ನಿರ್ಮಿಸಿಕೊಡುವ ಬಿಂಬಗಳನ್ನು ಹೊತ್ತಿರುವ ಪಟಲವೇ ಅಲ್ಲಿನ ವಸ್ತು; ಪಟಲದ ಬೇರೆ ಬೇರೆ ತುಣುಕುಗಳನ್ನು ಉದ್ದೇಶಕ್ಕೆ ಸರಿಯಾಗಿ ಜೋಡಿಸಿ ತೋರಿಸುವ ಕೆಲಸವೇ ಅದರ ಸಂಯೋಜನೆ.

    ಆದರೆ, ಪಾಲ್‌ರೋತನೆನ್ನುವಂತೆ ಈ ಚಲನಚಿತ್ರ ನಿರ್ಮಾಣಕ್ಕೆ ಬೇಕಾಗುವಷ್ಟು ವಿವಿಧ ಶಾಸ್ತ್ರಗಳ ಪರಿಚಯ ಇನ್ಯಾವ ಭಾವವಾಹಕಕ್ಕೂ ಬೇಕಾಗುವುದಿಲ್ಲ. ಅದೇಕೆಂದು ಮುಂದೆ ತಿಳಿಯುವಿರಿ- ‘ಚಲನಚಿತ್ರ ಮೂಲತಃ ನಿಸರ್ಗದಿಂದ ಪಡೆಯುವ ವಿವಿಧ ರೀತಿಯ ಬಿಂಬಗಳ ಸಮ್ಮೇಳನದಿಂದ ಪಡೆಯುವ ಒಂದು ಸೃಷ್ಟಿ. (ಈ ಕೆಲಸಕ್ಕಾಗಿ ಉಪಯೋಗಿಸುವ ವಸ್ತುಗಳು ನೈಸರ್ಗಿಕವಾಗಿರಬಹುದು.) ಇಲ್ಲಿನ ಚಿತ್ರಬಿಂಬಗಳೆಲ್ಲವೂ ಬೆಳಕಿನ ಉಪಯೋಗದಿಂದಲೂ, ಚಲನೆಯ ದೃಷ್ಟಿಯಿಂದಲೂ ಪಡೆಯುವ ದೃಶ್ಯಬಿಂಬಗಳ ಮಾಲೆ ಕೇವಲ ಮನಃಶಾಸ್ತ್ರದ ದೃಷ್ಟಿಯಿಂದ ಅಳೆಯುವಂಥದಲ್ಲ. ಕಾಲ್ಪನಿಕ ಬಿಂಬಗಳನ್ನು ಸೃಷ್ಟಿಸಿಯೂ, ಚಲನಚಿತ್ರ ನಿರ್ಮಿಸಲು ಬಂದೀತು.

    NYIFF: ಕನ್ನಡದ ಮಿಥ್ಯದೊಂದಿಗೆ ಭಾರತೀಯ ಚಿತ್ರಗಳ ಸಂಭ್ರಮ ಈ ಸಿನಿಮೋತ್ಸವದಲ್ಲಿ

    ಇನ್ನು, ನಾವು ಈ ಹೊಸ ಮಾಧ್ಯಮದ ಚಿತ್ರಪಟಲದ ಲಕ್ಷಣಗಳನ್ನು ಪರಿಶೀಲಿ ಸುವ. ಅದಕ್ಕಿಂತ ಮೊದಲು, ನಮಗೆ ಈಗಾಗಲೇ ಪರಿಚಿತವೆನಿಸುವ ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ನರ್ತನ ಮೊದಲಾದುವುಗಳಲ್ಲಿನ ವಾಹಕಗಳು ಯಾವ ತೆರನಲ್ಲಿ ಭಾವಸೃಷ್ಟಿಗೆ ಒದಗುತ್ತವೆ-ಎಂಬುದನ್ನು ಪರಿಶೀಲಿಸುವ, ಇವುಗಳಲ್ಲಿ ಚಿತ್ರಕಲೆ, ಶಿಲ್ಪ, ವಾಸ್ತುಗಳು ಸ್ಥಿತ(static) ರೂಪದವು. ಅವು ದೀರ್ಘಕಾಲ ಉಳಿಯಬಲ್ಲವು. ಸಂಗೀತ, ನರ್ತನ, ನಾಟಕಗಳು ಕಾಲಗತಿ ಹೊಂದಿದವು. ಆದರೆ, ಅವುಗಳ ಜೀವನ ತಾತ್ಕಾಲಿಕ. ಒಂದು ಸ್ಥಿತ ಕಲೆಯಲ್ಲಿ ಅಮೂರ್ತ ವಿಷಯಕ್ಕೆ ರೂಪವನ್ನು ಕೊಡಬಲ್ಲ ವಸ್ತುಗಳು: ರೇಖಾ ಪ್ರವಾಹಗಳು, ಸಾಮರಸ್ಯದಿಂದ ಬರೆಯುವ ಇಲ್ಲವೆ ಇರಿಸಲ್ಪಡುವ ಆಕಾರಗಳು ಮತ್ತು ಚಿತ್ರಗತ ಬಿಂಬಗಳು ಸೂಚಿಸುವ ಚಲನೆಗಳು. ಉದಾ: ಚಿತ್ರದಲ್ಲಿ ಕಾಣಿಸುವ ಸಮತಳ (horizontal) ರೇಖೆಗಳು ಶಾಂತಿ, ವಿಶ್ರಾಂತಿ, ಮೊದಲಾದ ಭಾವಗಳನ್ನು ಪ್ರೇರಿಸುತ್ತವೆ. ನೆಟ್ಟಗೆ ನಿಂತ ಲಂಬ (vertical) ರೇಖೆಗಳು- ಗಾಂಭೀರ್ಯ, ಬಲ, ಮೊದಲಾದ ಲಕ್ಷಣ ಸೂಚಿಸುತ್ತವೆ. ಅಲ್ಲಿನ ವಕ್ರರೇಖೆ(curves) ಗಳು ಲಾಲಿತ್ಯ,ಕೋಮಲತೆ,ಆನಂದ ಮೊದಲಾದ ಲಕ್ಷಣಗಳನ್ನು ಪ್ರೇರಿಸುತ್ತವೆ. ಹಾಗೆಯೇ, ಒಂದು ಚಿತ್ರದಲ್ಲಿ ಛಾಯೆಯೇ ಅಧಿಕವಾಗಿದ್ದು, ಬೆಳಗಿದ ಭಾಗ ಕಡಿಮೆಯಾಗಿದ್ದರೆ ಅದು ದುಃಖ ಸೂಚಿಸೀತು; ತೇಜವೇ ಅಧಿಕವಾಗಿದ್ದರೆ ಹರ್ಷ ಕಾಣಿಸೀತು.

    ಇತ್ತ, ಅಲ್ಪ ಕಾಲ ಉಳಿಯುವ ಸಂಗೀತ, ನರ್ತನಗಳಲ್ಲಿ- ತಾಳ, ಲಯ, ಗತಿ, ಸಾಮರಸ್ಯ ಮೊದಲಾದ ಲಕ್ಷಣಗಳು ನಮ್ಮಲ್ಲಿ ಆನಂದ, ದುಃಖ, ಶಾಂತಿ, ತಲ್ಲಣ ಮೊದಲಾದಭಾವಗಳನ್ನು ಮೂಡಿಸಬಲ್ಲುವು.
    ಈ ಎರಡು ವರ್ಗದ ಕಲೆಗಳಿಗಿರುವ ಶಕ್ತಿಗಳು ಚಲನಚಿತ್ರವೊಂದರಲ್ಲಿಯೇ ಸೇರುತ್ತವೆ. ಪ್ರತಿಯೊಂದು ಚಿತ್ರವೂ ತನ್ನ ರೇಖಾವಿನ್ಯಾಸದಿಂದ ಭಾವವನ್ನು ಪ್ರೇರಿಸೀತು. ಅದರಲ್ಲಿನ ಛಾಯಾತೇಜಗಳ ಸಮ್ಮೇಳನ ಅದೇ ಕೆಲಸವನ್ನು ಮಾಡಬಲ್ಲುದು. ಹಾಗೆಯೇ, ನರ್ತನ, ತಾಲ, ಗತಿಗಳ ಸಹಾಯದಿಂದ ಭಾವೋದ್ರೇಕ ಕೊಡಬಲ್ಲುದು. ಚಿತ್ರಗತ ವ್ಯಕ್ತಿ ಇಲ್ಲವೆ ವಸ್ತುಗಳ ವಿಭಿನ್ನ ರೀತಿಯ ಚಲನೆಗಳೂ, ಕೆಮರಾ ಒಡವೆಗಳ ಕಡೆಗೆ ಇಲ್ಲವೆ ಅವುಗಳಿಂದ ದೂರ ಸರಿಯುವ ಚಲನೆಗಳೂ, ವಸ್ತುಗಳನ್ನು ವಿಭಿನ್ನ ಕೋನಗಳಿಂದ ಕಾಣುವಾಗ ಉಂಟಾಗುವ ಸ್ಪಂದನೆಗಳೂ ಭಾವಗಳನ್ನು ಹುಟ್ಟಿಸಬಲ್ಲುವು. ಇದಲ್ಲದೆ, ಚಿತ್ರಪಟಲವು ಚಲಿಸುವುದರಿಂದ ಅದರ ಶಕ್ತಿ ಬೇರೆಯೇ ಇದೆ ! ಸ್ಥಿರ ವಸ್ತುಗಳ ಚಿತ್ರಗಳನ್ನು ಸಹ, ಯೋಗ್ಯ ರೀತಿ ಯಿಂದ ಲಯಬದ್ಧವಾಗಿ, ಒಂದರ ಬಳಿಕಿನ್ನೊಂದನ್ನು ಪ್ರದರ್ಶಿಸುವುದರಿಂದ ಭಾವಗಳನ್ನು ಪ್ರೇರಿಸಬಹುದು. (ಅಂಥ ಕೊನೆಯ ಕ್ರಮದಿಂದ ಭಾವಪ್ರೇರಣೆಯುಂಟಾಗುವ ಬಗೆಯನ್ನು ಕುರಿತು ಮುಂದೆ ಇನ್ನಷ್ಟು ತಿಳಿಸುತ್ತೇವೆ) ಇಷ್ಟೆಲ್ಲ ಅದ್ಭುತ ಸಾಮರ್ಥ್ಯವುಳ್ಳ ಕಲಾ ಮಾಧ್ಯಮವನ್ನು ಕುರಿತು ಚಾರ್ಲಿ ಚೆಪಲೀನನು ‘ಅದ್ಭುತ ರಾಕ್ಷಸ ಎಂದು ಕರೆದುದರಲ್ಲಿ ಆಶ್ಚರ್ಯವಿಲ್ಲ.

    ಆದರೆ, ಈ ಅಪಾರ ಶಕ್ತಿಯ ರಹಸ್ಯ ಅರಿತವರು ಬೇಕು. ಅದರಿಂದ, ನಮ್ಮ ಜನ ಜೀವನದಲ್ಲಿ ಅದ್ಭುತ ಕ್ರಾಂತಿಯನ್ನೇ ಉಂಟು ಮಾಡಲು ಸಾಧ್ಯವಿದೆ. ಕಲೆಗಳಿಗಿರುವ ಹಿರಿಮೆ- ಎಂಬುದು ಅಂಥ ಸಾಮರ್ಥ್ಯವನ್ನು ಹೊಂದಿದೆ. ಆದುದರಿಂದ, ಕಲೆಯ ಪ್ರವಾಹವನ್ನು ತಡೆಯುವುದು ಕಷ್ಟ. ನಿತ್ಯದ ನಮ್ಮ ಎಚ್ಚರವನ್ನೇ ಅದು ನಮ್ಮಿಂದ ತಪ್ಪಿಸಿ, ನಮ್ಮಲ್ಲಿ ಹೊಸ ಭಾವನೆಗಳನ್ನು ಪ್ರೇರಿಸುವ ಶಕ್ತಿ ಅದಕ್ಕಿರುವುದರಿಂದ, ಇಂದಿನ ದಿನಗಳಲ್ಲಿ ಅದರ ಸಾಧನೆಗಳನ್ನು ಕುರಿತು ಅಲಕ್ಷ್ಯ ತೋರಿಸುವಂತಿಲ್ಲ.

    (ಸೌಜನ್ಯ: ಡಾ. ಕೆ. ಶಿವರಾಮ ಕಾರಂತರ ಲೇಖನಗಳು)

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]