ಇರಾನಿ ಚಿತ್ರ ನಿರ್ದೇಶಕ ಮಜಿದ್ ಮಜಿದಿ ಮಕ್ಕಳ ಬಗೆಗಿನ ಚಿತ್ರಗಳನ್ನು ಮಾಡುವುದರಲ್ಲಿ ಹೆಸರುವಾಸಿ. ಅವರ ಬಹುತೇಕ ಚಿತ್ರಗಳು ಮಕ್ಕಳ ಬಗ್ಗೆಯೇ ಇದೆ. ಚಿಲ್ಡ್ರನ್ ಆಫ್ ಹೆವನ್ ನಿಂದ ಆರಂಭಿಸಿ ಸನ್ ಚಿಲ್ಡ್ರನ್ ವರೆಗಿರಬಹುದು. ಸನ್ ಚಿಲ್ಡ್ರನ್ ಕುರಿತಾದ ಬರಹ ಇಲ್ಲಿದೆ. ಬಾಲ ಕಾರ್ಮಿಕರ ಸಮಸ್ಯೆ ಮತ್ತು ಜಗತ್ತಿನಾದ್ಯಂತ ಹತ್ತಾರು ಕಾರಣಗಳಿಂದ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಮಕ್ಕಳ ಬಗೆಗಿನ ಚಿತ್ರ. 2020 ರಲ್ಲಿ ನಿರ್ಮಾಣವಾದದ್ದು. ಆ ವರ್ಷದ ಆಸ್ಕರ್ ಪ್ರಶಸ್ತಿಗೂ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಇರಾನಿನಿಂದ ನಾಮ ನಿರ್ದೇಶನಗೊಂಡಿತ್ತು.
ಈ ಚಿತ್ರದ ನಿರ್ದೇಶಕ ಮಜಿದ್ ಮಜಿದಿ. ಮಜಿದ್ ಮಜಿದಿ ಮಕ್ಕಳ ಕೋಮಲ ಮನಸ್ಸಿನ ತಲ್ಲಣಗಳನ್ನು ವಿಭಿನ್ನವಾಗಿ ಕಟ್ಟಿಕೊಡುತ್ತಾ, ಸಮಾಜದ ಹೊಣೆಗಾರಿಕೆ, ಮೌಲ್ಯಗಳ ಪತನ, ಒಟ್ಟೂ ಸಮಾಜ ಸಾಗುತ್ತಿರುವ ಗತಿ ಎಲ್ಲವನ್ನೂ ಚಿತ್ರಿಸುತ್ತಾ ಹೋಗುವುದು ಅವರ ವಿಶೇಷತೆ.
ಪ್ರತಿ ಸಿನಿಮಾ ಪ್ರೇಕ್ಷಕನಿಗೂ ಇಷ್ಟವಾಗುವ ಚಿಲ್ಡ್ರನ್ ಆಫ್ ಹೆವನ್, ಕಲರ್ ಆಫ್ ಪ್ಯಾರಡೈಸ್ ಹೀಗೆ ಹಲವಾರು ಚಿತ್ರಗಳು ಮಜಿದ್ ಮಜಿದಿಯ ಕೌಶಲ್ಯ ಮತ್ತು ಸಿನಿಮಾ ಹೇಳುವ ವಿಧಾನವನ್ನು ವಿವರಿಸಬಲ್ಲದು. ಎಲ್ಲೂ ರೌದ್ರತೆಗೆ ಇಳಿಯದೇ, ರಭಸತೆಯನ್ನು ಆವಾಹಿಸಿಕೊಳ್ಳದೇ, ಮೆಲ್ಲಗೆ ಆದರೆ ಗಟ್ಟಿ ಮತ್ತು ಸ್ಪಷ್ಟ ದನಿಯಲ್ಲಿ ಹರಿದು ಸಾಗುವ ನದಿಯಂತೆ ಇವರ ಹಲವು ಸಿನಿಮಾಗಳು ತೋರುತ್ತವೆ.
ಸನ್ ಚಿಲ್ಡ್ರನ್ ಸಿನಿಮಾ ದಿ ಸನ್ ಎಂದೂ ಹೆಸರುವಾಸಿ. ಕಥೆ ಬಹಳ ಸರಳವಾದದ್ದು. ಬೀದಿ ಬದಿಯಲ್ಲಿರುವ ಕೆಲವು ಬಾಲಕರು ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಬದುಕುತ್ತಿರುತ್ತಾರೆ. ಒಮ್ಮೆ ಆ ಬಾಲಕರಲ್ಲಿ ಆಲಿಗೆ (ಕಥಾ ನಾಯಕ) ಶಾಲೆಯೊಂದರ ಸುರಂಗದಲ್ಲಿರುವ ನಿಧಿ ಶೋಧನೆಯ ಗುತ್ತಿಗೆಯನ್ನು ಒಬ್ಬ ಖದೀಮ ನೀಡುತ್ತಾನೆ.
ಅದನ್ನು ಶೋಧಿಸುವ ಸಲುವಾಗಿ ಬೀದಿ ಬದಿಯ ಮಕ್ಕಳು ಹಾಗೂ ಬಾಲ ಕಾರ್ಮಿಕರಿಗೆ ಕಲಿಸುವ ಶಾಲೆಗೆ ಸೇರಿಕೊಳ್ಳುವ ಅನಿವಾರ್ಯತೆ ಕಥಾನಾಯಕ ಮತ್ತು ಅವನ ಗೆಳೆಯರಿಗೆ ಉಂಟಾಗುತ್ತದೆ. ಶಾಲೆಗೆ ಸೇರಿಕೊಳ್ಳುವ ಆಲಿ ಮತ್ತು ಅವನ ಗೆಳೆಯರಿಗೆ ಹೊಸ ಅನುಭವ. ಇವರಲ್ಲಿ ಇಬ್ಬರ ಪ್ರತಿಭೆ ಅನಾವರಣಗೊಳ್ಳುತ್ತದೆ. ಆದರೆ ಆಲಿಗೆ ಶಾಲೆಯ ಕೆಳಗೆ ಹರಿದು ಹೋಗುವ ಸುರಂಗ (ಒಳಚರಂಡಿ ಮಾದರಿ)ದಲ್ಲಿ ಇರುವ ನಿಧಿಯ ಶೋಧನೆ. ಕುತೂಹಲ ಭರಿತವಾಗಿ ಸಾಗುವ ಇಡೀ ಚಿತ್ರ, ರೋಚಕತೆಯನ್ನೂ ಹೊಂದಿದೆ.
world cinema: ಅಪರಿಮಿತ ಸಾಹಸದಲ್ಲಿ ಕಳೆದು ಹೋದ ಹುಡುಗ
ಅನಾರೋಗ್ಯ ಅಮ್ಮನಿಗೆ ಒಂದು ಮನೆಯನ್ನು ಕಲ್ಪಿಸಲು ಈ ನಿಧಿಯಲ್ಲಿ ಸಿಗುವ ಚಿನ್ನ ಸಹಾಯ ಮಾಡಬಹುದು ಎಂಬುದು ಆಲಿಯ ಲೆಕ್ಕಾಚಾರ. ಇನ್ನೊಬ್ಬನಿಗೆ ಈ ಶಾಲೆಯಿಂದ ತಾನು ಅಪ್ಘನ್ನರ ನಿರಾಶ್ರಿತ ಶಿಬಿರ ಸೇರುವುದು ತಪ್ಪೀತೆಂಬ ಲೆಕ್ಕಾಚಾರ. ಹೀಗೆ ಪ್ರತಿಯೊಬ್ಬರೂ ತಮ್ಮದೇ ಬದುಕಿನ ಗತಿಯಲ್ಲಿ ಸಾಗಿ ಕೊನೆಗೆ ಸಂದರ್ಭಗಳು ಸೃಷ್ಟಿಸುವ ಸನ್ನಿವೇಶಗಳಲ್ಲಿ ಬಂಧಿಯಾಗುವುದು ಸಿನಿಮಾದ ಕಥಾನಕ.
ಮಜಿದ್ ಮಜಿದಿಯ ಕೌಶಲವೆಂದರೆ, ಕೆಲವು ವಾಸ್ತವ ಸನ್ನಿವೇಶಗಳಿಗೆ ಕಲ್ಪಿತ ಸಂದರ್ಭಗಳನ್ನು ಸೃಷ್ಟಿಸಿ ಹೆಣೆಯುವುದು. ತಮ್ಮೊಳಗಿನ ಕಥೆಗಾರ ಸಿನಿಮಾ ಮೂಲಕ ಹೇಳಲು ಬಯಸುವುದಕ್ಕೆ ವೇದಿಕೆ ಕಲ್ಪಿಸುವುದೇ ಈ ಮೂಲಕ. ಇದರೊಂದಿಗೆ ಎರಡರ ಸಮ್ಮಿಶ್ರಣದಲ್ಲಿ ಮುಗ್ಧತೆ ಎಂಬುದು ಕಳೆದುಹೋಗದಿರಲೆಂದು ಸದಾ ಎಚ್ಚರ ವಹಿಸುತ್ತಾರೆ. ಎಲ್ಲಿ ಸಂಪೂರ್ಣ ವೃತ್ತಿಪರತೆ ಈ ಮುಗ್ಧತೆಯ ಸಾಧ್ಯತೆಯನ್ನು ಕೊಂದು ಬಿಡುವುದೋ, ನಾಟಕೀಯತೆ ಎನಿಸಿಬಿಡುವುದೋ ಎಂಬ ಅವ್ಯಕ್ತ ಭಯದಿಂದಲೇ ಮಜಿದ್ ಮಜಿದಿ ತಮ್ಮ ಸಿನಿಮಾಗಳಿಗೆ ವೃತ್ತಿಪರರಲ್ಲದ ಮಕ್ಕಳನ್ನು ಹುಡುಕಿ ಬಯಸುತ್ತಾನೆ. ಇದು ಚಿಲ್ಡ್ರನ್ಸ್ ಆಫ್ ಹೆವನ್ ನಿಂದ ಕಾಣಬಹುದು.
ಬಾಲ ಕಾರ್ಮಿಕ ಸಮಸ್ಯೆಯನ್ನು ತನ್ನ ಹೃದಯದಲ್ಲಿಟ್ಟುಕೊಂಡ ಸಿನಿಮಾ, ಅದರೊಂದಿಗೆ ವ್ಯವಸ್ಥೆಯ ಸಿದ್ಧರೂಪದಲ್ಲಿನ ಹಲವು ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ. ಸಂದರ್ಭದ ಕ್ರೌರ್ಯದ ಜತೆಗೆ ವ್ಯವಸ್ಥೆಯ ಉದಾಸೀನತೆ, ಒಂದು ಸಮಸ್ಯೆಯ ಬಗೆಗಿನ ಗಂಭೀರ ನೋಟಗಳ ಕೊರತೆ ಎಲ್ಲವನ್ನೂ ಸಿನಿಮಾ ಹೇಳುತ್ತದೆ.
ಸನ್ ಚಿಲ್ಡ್ರನ್ ಚಿತ್ರದ ಆಲಿ ಮತ್ತು ಇತರೆ ಮಕ್ಕಳಲ್ಲೂ ಈ ನಟನಾ ಸಾಧ್ಯತೆಯನ್ನು ಗಮನಿಸಬಹುದು. ವಿಶೇಷವೆಂದರೆ ಈ ಚಿತ್ರದ ಕಥಾ ನಾಯಕ ಅಲಿ (Rouhollah Zamani) ಮತ್ತು ಝಹ್ರಾ (Shamila Shirzad) ಇಬ್ಬರೂ ಬಾಲ ಕಾರ್ಮಿಕರಿಗಾಗಿ ನಡೆಸುವ ಶಾಲೆಯಿಂದ ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡ ಮಕ್ಕಳೇ. ಶಮೀಲಾಳ ಸೋದರ ಸಹ (Abolfazl Shirzad) ಈ ಚಿತ್ರದಲ್ಲಿ ನಟಿಸಿದ್ದಾನೆ. ಮಜಿದ್ ಮಜಿದಿ ಸುಮಾರು ಮೂರು ಸಾವಿರ ಮಕ್ಕಳಲ್ಲಿ ಈ ಚಿತ್ರದಲ್ಲಿನ ಬಾಲ ಕಲಾವಿದರನ್ನು ಪತ್ತೆ ಹಚ್ಚಿದ್ದರು. ಆಲಿ ಮತ್ತು ಝಹ್ರಾ ಇಬ್ಬರೂ ಸಿನಿಮಾ ಪೂರ್ತಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಶಮೀಲಾಳ ಮುಗ್ಧತೆಯಂತೂ ಹೃದಯ ತುಂಬಿ ಬರುವಂತೆ ಮಾಡುತ್ತದೆ. ಆಲಿ ಸಹ ಬಾಲ ಕಾರ್ಮಿಕ. ಜತೆಗೆ ಶಮೀಲಾ ಅಫ್ಘನ್ ನಿರಾಶ್ರಿತರು. ಆಲಿಗೆ ವೆನಿಸ್ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟನೆಗೆ ವಿಶೇಷ ಪ್ರಶಸ್ತಿ ಲಭಿಸಿದೆ.
ಐದು ಲಕ್ಷ ಪ್ರೊಡ್ಯೂರ್ಸ್‌ಗಳ ಮಂಥನ್ ಮರು ಬಿಡುಗಡೆ; ನೋಡದೇ ಇರಬೇಡಿ
ಇದೊಂದು ದೊಡ್ಡ ದುರಂತ. ಒಂದು ದೇಶದ್ದಲ್ಲ; ಇಡೀ ವಿಶ್ವದ್ದು. 150 ದಶಲಕ್ಷಕ್ಕಿಂತಲೂ ಹೆಚ್ಚಿನ ಬಾಲ ಕಾರ್ಮಿಕಹೊಂದಿರುವ ವಿಶ್ವದ ಎಲ್ಲ ರಾಷ್ಟ್ರಗಳೂ ಈ ಸಮಸ್ಯೆಯನ್ನು ಬಗೆಹರಿಸಲು ಗಮನಹರಿಸಬೇಕೆಂಬುದು ನಿರ್ದೇಶಕ ಮಜಿದ್ ಮಜಿದಿಯ ಚಿತ್ರದಲ್ಲಿನ ಆಗ್ರಹ.
ಪಾತ್ರಗಳು ಹಾಗೂ ಸಂದರ್ಭಗಳು, ತಿರುವುಗಳು ಕೊಂಚ ಹೆಚ್ಚಾಗಿ ಕೆಲವೊಂದೆಡೆ ಪ್ರೇಕ್ಷಕನಲ್ಲಿ ಸಣ್ಣ ಮಟ್ಟಿದ ಗೊಂದಲವನ್ನು ಮೂಡಿಸುವ ಅಪಾಯವೂ ಈ ಚಿತ್ರದಲ್ಲಿದೆ. ಆದರೂ ಪ್ರೇಕ್ಷಕನನ್ನು ಒಳಗೊಳ್ಳುತ್ತಾ, ಒಂದು ಗಂಭೀರ ಸಮಸ್ಯೆಯ ಬಗ್ಗೆ ಕ್ಷಣ ಆಲೋಚಿಸುವಂತೆ ಮಾಡುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಛಾಯಾಗ್ರಹಣ ಹಾಗೂ ಸಂಗೀತ ನಿರ್ದೇಶಕನ ಲೆಕ್ಕಾಚಾರಕ್ಕೆ ಪೂರಕವಾಗಿರುವುದು ಸಂತೋಷ.
ಮಾಮಿ- ಮುಂಬಯಿ ಫಿಲ್ಮ್ ಫೆಸ್ಟಿವಲ್ ಗೆ ಸಿನಿಮಾಗಳಿಗೆ ಆಹ್ವಾನ
ಬೀದಿ ಬದಿಯ ಮಕ್ಕಳಲ್ಲಿನ ಪ್ರತಿಭೆ ಕುರಿತೂ ಬೆಳಕು ಚೆಲ್ಲುತ್ತಲೇ ಬಾಲ ಕಾರ್ಮಿಕ ಸಮಸ್ಯೆ ಬಗೆಗಿನ ಆತಂಕ ವ್ಯಕ್ತಪಡಿಸಿ, ಇದರ ಬಗ್ಗೆ ಕ್ರಿಯಾಶೀಲವಾಗಲು ಇದು ಸಕಾಲ ಎಂದು ನೆನಪಿಸುವ ಸಿನಿಮಾವಿದು.
ವಿವರ
ಚಿತ್ರ : ಸನ್ ಚಿಲ್ಡ್ರನ್ (ಪರ್ಷಿಯನ್ : ಖೊರ್ಷಿದ್)
ನಿರ್ದೇಶಕ : ಮಜಿದ್ ಮಜಿದಿ
ನಿರ್ಮಾಣ : ಮಜಿದ್ ಮಜಿದಿ/ಅಮಿರ್ ಬನಾನ್
ವರ್ಷ/ದೇಶ/ಭಾಷೆ/ಅವಧಿ : 2020/ಇರಾನ್/ಪರ್ಷಿಯನ್/99 ನಿಮಿಷಗಳು
ಛಾಯಾಗ್ರಹಣ : Hooman Behmanesh
ಸಂಗೀತ : Ramin Kousha
ತಾರಾಗಣ
- Ali Nassirian as Hashem
- Javad Ezzati as School Vice Principal
- Tannaz Tabatabaei as Ali’s mother
- Rouhollah Zamani as Ali
- Shamila Shirzad as Zahra
- Seyed Mohammad Mehdi Mousavi Fard as Mamad
- Abolfazl Shirzad as Abolfazl
- Mani Ghafouri as Reza
- Safar Mohammadi as School Janitor
- Ali Ghabeshi as School Principal
ಪ್ರಶಸ್ತಿಗಳು
ಅತ್ಯುತ್ತಮ ಚಿತ್ರ/ಚಿತ್ರಕತೆ/ಕಲಾ ನಿರ್ದೇಶನ- ಫಜ್ರ್ ಸಿನಿಮೋತ್ಸವ
ಅತ್ಯುತ್ತಮ ನಟನೆ- Rouhollah Zamani ಗೆ ವೆನಿಸ್ ಚಿತ್ರೋತ್ಸವದಲ್ಲಿ Marcello Mastroianni Award/Lanterna Magica Award
ಇದಲ್ಲದೇ ಮಿಯಾಮಿ ಸಿನಿಮೋತ್ಸವ, ಮುನಿಶ್ ಸಿನಿಮೋತ್ಸವ, ಮಾಸ್ಕೋ ಸಿನಿಮೋತ್ಸವ, ಫನ್ಫ್ ಸಿನಿಮೋತ್ಸವ, ಏಷ್ಯನ್ ಸಿನಿ ಪ್ರಶಸ್ತಿಗಳಿಗೆ ವಿವಿಧ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು. 2020 ರಲ್ಲಿ ಆಸ್ಕರ್ ಪ್ರಶಸ್ತಿಗೂ ಇರಾನಿನಿಂದ ನಾಮ ನಿರ್ದೇಶನಗೊಂಡಿತ್ತು.