ಆಂಖೋನ್ ದೇಖಿ ವಿಶಿಷ್ಟವಾದ ಸಿನಿಮಾ. ನಮ್ಮೊಳಗಿನ ಅಗತ್ಯಗಳೇ ಬೇರೆ, ನಾವು ಬರಿಯ ಹೊರಗಿನ ಅಗತ್ಯಗಳನ್ನು ಹೊಂದಿಸಿಕೊಳ್ಳುವುದರಲ್ಲೆ ಕಳೆದು ಹೋಗುತ್ತೇವೆ ಎನ್ನುವುದನ್ನು ಮನದಟ್ಟು ಮಾಡುವ ಚಿತ್ರ. ರಜತ್ ಕಪೂರ್ ನಿರ್ದೇಶನದಲ್ಲಿ 2013 ರಲ್ಲಿ ಬಂದ ಚಿತ್ರ. ಆಂಖೋನ್ ದೇಖಿ ಹಿಂದಿಯಲ್ಲಿ ತೆರೆಕಂಡ ಸಿನಿಮಾ. ರಜತ್ ಕಪೂರ್ ನಿರ್ದೇಶಿಸಿದ ಸಿನಿಮಾ. ಒಂದು ಕುಟುಂಬದ ಕಥೆ. ಅದರಲ್ಲೂ ಮಧ್ಯಮ ವರ್ಗದ ಕಥೆ.
ಒಂದು ನಗರದಲ್ಲಿ ತುಂಬು ಕುಟುಂಬವೊಂದು (ಅಪ್ಪ, ಅಮ್ಮ, ಚಿಕ್ಕಪ್ಪ, ಅಣ್ಣ, ತಮ್ಮ, ತಂಗಿ ಹೀಗೆ) ಬದುಕು ನಡೆಸುತ್ತಿರುತ್ತದೆ. ಅಪ್ಪನದು ನಿರ್ಲಿಪ್ತ ಬದುಕು. ಇದ್ದದರಲ್ಲೆ ಬದುಕು ಕಳೆದುಕೊಂಡು ಹೋಗಲು ಬಯಸುವ ಮನಸ್ಸು. ಹಾಗಾಗಿ ಎಲ್ಲವನ್ನೂ ದಕ್ಕಿಸಿಕೊಳ್ಳಬೇಕೆಂಬ ಹಠವೂ ಇಲ್ಲ, ಬೇರೆಯವರಿಗೆ ದಕ್ಕಿತಲ್ಲ ಎಂಬ ದುಃಖವೂ ಇಲ್ಲ.
ಅಣ್ಣ ಅಪ್ಪನ ನೆರಳಿನಲ್ಲಿದ್ದರೂ, ಅತ್ತಿಗೆಯದು ಬಯಕೆಗಳ ಪಟ್ಟಿ ಇದೆ. ಕಥಾನಕದಲ್ಲಿ ಅವಳು ಹೇಳಿದಂತೆ ಕೇಳಲೇಬೇಕಾದ ಸ್ಥಿತಿ ಅಣ್ಣನಿಗೆ ಉದ್ಭವಿಸುತ್ತದೆ. ತಂಗಿಗೆ ತನ್ನ ಬದುಕು, ಪ್ರೀತಿ ಇತ್ಯಾದಿ ಮಧ್ಯೆ ಕಳೆದು ಹೋಗಿದ್ದಾಳೆ. ಇವೆಲ್ಲವನ್ನೂ ನಡೆಸಿಕೊಂಡು ಹೋಗಬೇಕಾದ ಹೊಣೆ ಅಮ್ಮನದು. ಈ ಹಿನ್ನೆಲೆಯಲ್ಲಿ ಕೊಂಚ ಸಿಡುಕು, ಕೋಪ ಇದ್ದದ್ದೇ. ನಗರದ ಖರ್ಚಿನ ಬಾಬ್ತಿನಲ್ಲಿ ಬದುಕುವ ಪ್ರಕ್ರಿಯೆ ಹೇಳುವುದೇ ಈ ಸಿನಿಮಾದ ಕಥಾವಸ್ತು.
ಇಲ್ಲಿ ಹೀರೋಗಳಿಲ್ಲ, ಕಥೆಯೇ ಹೀರೋ. 2013 ರಲ್ಲಿ ಬಂದ ಸಿನಿಮಾ. ರಜತ್ ಕಪೂರ್ ಸಹಿತ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಆದರೆ ಕಥೆ ಸಾಗುವುದು ಬಾವುಜಿ (ಸಂಜಯ್ ಮಿಶ್ರಾ)ಯವರ ನೆಲೆಯಲ್ಲೇ.
ಎಷ್ಟೋ ಬಾರಿ ಸಿನಿಮಾ ನೋಡಿ ಮುಗಿದ ಮೇಲೆ ನಮ್ಮೊಳಗೆ ಅದರ ಒಂದು ಎಳೆಯಾದರೂ ಉಳಿಯಿತೇ? ಬಿತ್ತಿತೇ? ಎಂದು ಹುಡುಕುತ್ತೇವೆ. ಕೆಲವು ಸಿನಿಮಾಗಳಲ್ಲಿ ಅಂಥದೊಂದು ಸಣ್ಣ ಎಳೆ ಉಳಿದಿರುತ್ತದೆ, ಬೀಜ ಬಿತ್ತಿರುತ್ತದೆ. ಇನ್ನು ಕೆಲವು ಸಿನಿಮಾಗಳಲ್ಲಿ ತೀರಾ ಗಾಢವಾಗಿರುತ್ತದೆ. ಬಹುತೇಕ ಸಿನಿಮಾಗಳಲ್ಲಿ ಅಂಥದ್ದೇನೂ ಇರುವುದಿಲ್ಲ.
ಆಂಖೋನ್ ದೇಖೆ ಮೊದಲ ವರ್ಗದ ಸಿನಿಮಾ. ಕತ್ತಲೆ ಸರಿದು ಬೆಳಕು ಹರಿದ ಮೇಲೂ ನಮ್ಮೊಳಗೆ ಸಿನಿಮಾ ಬೆಳೆಯತೊಡಗುತ್ತದೆ. ನಿಧಾನವಾಗಿ ಆಲೋಚಿಸಲು ಆರಂಭಿಸುತ್ತೇವೆ. ಆ ಬಗೆಯ ಅಪರೂಪದ ಸಿನಿಮಾವಿದು.
ಕಥೆ ಈಗಾಗಲೇ ಹೇಳಿದಂತೆ ಸರಳ ಮತ್ತು ಸಾಮಾನ್ಯ. ಯಾಕೆಂದರೆ ಮಧ್ಯಮ ವರ್ಗದ ಸಂಕಷ್ಟಗಳ ರೀತಿ ಒಂದೇ ಎನಿಸಬಹುದು, ಆದರೆ ರೂಪಗಳು ಬೇರೆ ಬೇರೆ. ಇದೂ ಅದಕ್ಕಾಗಿಯೇ ಇಷ್ಟವಾಗುವುದು.
ರಜತ್ ಕಪೂರ್ ನಿರ್ದೇಶನದ ಜತೆಗೆ ಚಿತ್ರಕಥೆ ಮತ್ತು ಸಂಭಾಷಣೆಗೂ ಒತ್ತುಕೊಟ್ಟ ಕಾರಣ ಸಿನಿಮಾ ಒಟ್ಟೂ ಸುಂದರವಾಗಿ ಮೂಡಿ ಬರಲು ಸಾಧ್ಯವಾಗಿದೆ. ಪೂರಕವಾಗಿ ಛಾಯಾಗ್ರಹಣ ಮತ್ತು ಸಂಗೀತವಿದೆ. ಇವೆಲ್ಲವೂ ಚಿತ್ರದ ಹೆಚ್ಚುಗಾರಿಕೆಯನ್ನು ಹೆಚ್ಚಿಸುತ್ತದೆ.
ಸಂಜಯ್ ಮಿಶ್ರಾ ಕುಟುಂಬದ ಮುಖ್ಯಸ್ಥನಾಗಿ ಒಂದು ಬಗೆಯ ತತ್ವಜ್ಞನ ಧೋರಣೆಯಲ್ಲಿ ಬದುಕನ್ನು ಆಸ್ವಾದಿಸುತ್ತಾ, ಸ್ವೀಕರಿಸುತ್ತಾ ಹೋಗುವುದು ವಿಚಿತ್ರವೆನಿಸಿದರೂ, ದುಸ್ಸಾಧ್ಯವೆನಿಸುತ್ತದೆ. ಆದರೂ ಅಂಥದೊಂದು ಅಭ್ಯಾಸ ಮಧ್ಯಮವರ್ಗದ ನಮಗೆ ಅನಿವಾರ್ಯ ಎಂದೂ ಮನದಟ್ಟು ಮಾಡಿಕೊಡುತ್ತದೆ. ಸೀಮಿತ ಪಾತ್ರವರ್ಗಗಳಲ್ಲಿ ಮಾನವ ಭಾವನೆಗಳು ಮತ್ತು ಸಂಬಂಧಗಳನ್ನು ಕಟ್ಟಿಕೊಡಲು ಪ್ರಯತ್ನಿಸುವುದೇ ಈ ಸಿನಿಮಾದ ವಿಶೇಷ.
ಬಾವುಜಿ ನಿವೃತ್ತಿಗೆ ಹತ್ತಿರವಿದ್ದಾನೆ. ಧಾವಂತದ ಬದುಕಿನಿಂದ ಯಾವಾಗಲೂ ಸ್ವಯಂ ನಿವೃತ್ತಿ ಪಡೆದವನಂತೆ ತೋರುತ್ತಾನೆ. ಅವನಿಗೆ ಅವನದ್ದೇ ಒಂದು ಸಣ್ಣ ಜಗತ್ತಿದೆ. ಅದಷ್ಟೇ ಸಾಕು ಬದುಕುವುದಕ್ಕೆ. ದೊಡ್ಡ ಜಗತ್ತು ಖಂಡಿತಾ ಬೇಡವೇ ಬೇಡ ಎಂದು ನಿರಾಕರಿಸಿರುವಂಥ ಜೀವಿ. ತನ್ನ ಜಗತ್ತಿನೊಳಗೆ ಖುಷಿಯಾಗಿದ್ದುಕೊಂಡು, ಹೊರಗಿನ ಜಗತ್ತಿನವರೆಲ್ಲ ಅವರು ಹೇಗಿದ್ದಾರೋ ಹಾಗಿದ್ದರೆ ನನಗೇನು ತೊಂದರೆ ಎಂದು ಯೋಚಿಸುವವ. ಇದೇ ಕಾರಣಕ್ಕಾಗಿ ಎಲ್ಲವನ್ನೂ ಸರಿಪಡಿಸುತ್ತೇನೆ ಎನ್ನುವುದಾಗಲೀ, ಎಲ್ಲವನ್ನೂ ಸರಿಯಾಗಿ ನಡೆಸುತ್ತೇನೆ ಎನ್ನುವ ಅಹಂ ನನ್ನಾಗಲೀ ಹೊತ್ತುಕೊಳ್ಳುವುದಿಲ್ಲ. ಇದು ಬೇಜವಾಬ್ದಾರಿಯವ ಎಂಬ ಟೀಕೆಯನ್ನೂ ತಂದುಕೊಡುತ್ತದೆ. ಅದರ ಬಗ್ಗೆಯೂ ಆತನಿಗೆ ಸುತರಾಂ ಬೇಸರವಿಲ್ಲ.
Sun Children: ಮಕ್ಕಳ ಕನಸಿನ ಬಣ್ಣ ಬಣ್ಣಿಸಲಿಕ್ಕೆ ಈ ಇರಾನ್ ಸಿನಿಮಾ
ಜನ ಅಂದುಕೊಳ್ಳುವುದು ಅವರಿರುವ ಜಗತ್ತಿನ ಬಗ್ಗೆಯೇ ಹೊರತು ನನ್ನ ಜಗತ್ತಿನ ಬಗ್ಗೆಯಲ್ಲ ಎಂದು ಸದಾ ಅಂದುಕೊಳ್ಳುತ್ತಾ ಬದುಕಿನ ಸಾಗರದಲ್ಲಿ ತೇಲಿಕೊಂಡು ಇರುವವ. ತನ್ನ ಮಗಳು ಒಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ತಿಳಿದ ಮೇಲೆ ಅಲ್ಲೋಲ ಕಲ್ಲೋಲವಾಗುತ್ತದೆ. ಆಗಲೂ ಬಾವುಜಿ ವರ್ತಮಾವನ್ನು ಒಪ್ಪಿಕೊಳ್ಳುತ್ತಲೇ ಭವಿಷ್ಯವನ್ನು ಮೃದುವಾಗಿ ನಿರ್ವಹಿಸಲು ಪ್ರಯತ್ನಿಸುತ್ತಾನೆ. ಮಗಳಿಗೆ ಊಟ ಉಣಿಸಿ ಸಮಾಧಾನಿಸುತ್ತಾ ಪರವಾಗಿ ನಿಲ್ಲುತ್ತಾನೆ. ಮಗಳ ಪ್ರಿಯಕರ ಕೆಟ್ಟವ ಎಂಬ ಆರೋಪಕ್ಕೆ ‘ನಾನು ಅಂಥದ್ದನ್ನು ಕಂಡಿಲ್ಲ’ ಎಂದು ಹೇಳುತ್ತಾ ಹೊರಗಿನವರ ಜಗತ್ತನ್ನು ಖುಲ್ಲಾಂಖುಲ್ಲ ನಿರಾಕರಿಸಿಬಿಡುತ್ತಾನೆ. ಇದು ಬಾವುಜಿಯ ಅನುಭವ ಸತ್ಯದ ಪ್ರಪಂಚವನ್ನು ಪರಿಚಯಿಸುತ್ತದೆ. ಕೇಳಿದ್ದು ಸುಳ್ಳಾಗಬಹುದು, ಕಂಡಿದ್ದೂ ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವ ತಿಳಿಯುವುದು..ಈ ಮಾತು ಬಾವುಜಿ ಪಾತ್ರಕ್ಕೆ ಹೇಳಿ ಮಾಡಿಸಿದ್ದು.
ತನ್ನೊಳಗನ್ನು ತೆರೆದುಕೊಂಡು ನೋಡುತ್ತಾ ಕುಳಿತ ಬಾವುಜಿ ಕೆಲವು ಸನ್ನಿವೇಶಗಳಲ್ಲಿ ಪ್ರೇಕ್ಷಕರಿಗೆ ಕ್ಷುಲ್ಲಕವೆನಿಸುವುದೂ ಉಂಟು, ಇನ್ನೂ ಕೆಲವು ಸಂದರ್ಭಗಳಲ್ಲಿ ಪ್ರಬುದ್ಧ ಪಂಡಿತನೆಂದೂ ತೋರುವುದು ಉಂಟು. ಅನುಭವವೇ ಸತ್ಯ ಎಂದುಕೊಳ್ಳುವವರ ಸಹಜ ನಡವಳಿಕೆ ಇದೇ ಎನಿಸುತ್ತದೆ. ಸಂಜಯ್ ಮಿಶ್ರಾ ಈ ಪಾತ್ರವನ್ನು ಅತ್ಯಂತ ಪ್ರಬುದ್ಧವಾಗಿ ನಿರ್ವಹಿಸಿದ್ದಾರೆ. ಸಿನಿಮಾ ಇಷ್ಟವಾಗುವುದೇ ಬಾವುಜಿಯ ಪಾತ್ರದ ಏರುಪೇರುಗಳಿಂದ.
Ilayaraja : ಸಂಗೀತ ಸಾಮ್ರಾಟ ರಾಸಯ್ಯ ಈ ಇಳೆಯ ರಾಜ !
ಪ್ರತಿಯೊಬ್ಬರ ಬದುಕಿನ ಆಸೆಯೆಂದರೆ ಹಕ್ಕಿಯಂತೆ ಹಾರಾಡಬೇಕೆಂಬುದು. ಅದರರ್ಥ ಸ್ವಾತಂತ್ರ್ಯ. ಬಾವುಜಿಯದ್ದೂ ಅದೇ. ಚಿತ್ರದ ಮೊದಲ ಸನ್ನಿವೇಶ ಆರಂಭವಾಗುವುದೇ ಇಂಥದೊಂದು ಬಯಕೆಯಿಂದ. ಬದುಕು ಪೂರ್ತಿ ಅನುಭವಗಳ ಶೋಧನೆಯಲ್ಲಿ ತೊಡಗಿಸಿಕೊಳ್ಳುವ ಬಾವುಜಿ, ಸ್ವಾತಂತ್ರ್ಯವನ್ನು ಬಯಸುತ್ತಾ, ಪ್ರಯತ್ನಿಸುತ್ತಾ ಹಾರಾಡುತ್ತಾನೆ. ಎಲ್ಲಿಯೂ ಸೋತೆನೆಂದು ಕೆಳಗಿಳಿಯುವುದಿಲ್ಲ. ನಿವೃತ್ತಿಯ ನಂತರ ಏನು ಎಂಬ ಪ್ರಶ್ನೆಗಳಿಗೂ ಸಹಜ ಉತ್ತರಗಳನ್ನು ಹುಡುಕಿಕೊಂಡು ಬದುಕಲೆತ್ನಿಸುತ್ತಾನೆ.
ಬದುಕು ಇರುವುದು ಅನುಭವಕ್ಕಾಗಿ. ಅದೇ ಯಶಸ್ಸು. ಜಾತ್ರೆಯಲ್ಲಿ ಪೀಪಿ ಊದುವವನ ಮುಂದೆಯೋ, ಸರ್ಕಸ್ ನ ಅಂಗಡಿ ಎದುರೋ, ತಿರುಗುಚಕ್ರಗಳ ಎದುರೋ ನಿಂತುಬಿಟ್ಟರೆ ಉತ್ಸವದ ನಿಜವಾದ ಸಂಭ್ರಮ ತಪ್ಪಿಸಿಕೊಳ್ಳುತ್ತೇವೆ ಎಂದು ಎಚ್ಚರಿಸುವ ಚಿತ್ರ.
ಸಂಜಯ್ ಮಿಶ್ರಾ, ರಜತ್ ಕಪೂರ್, ಸೀಮಾ ಪಹ್ವಾ, ಬೃಜೇಂದ್ರ ಕಾಳ ಮತ್ತಿತರರು ಅಭಿನಯಿಸಿದ್ದಾರೆ. ರಫೇ ಮೊಹಮ್ಮದ್ ಛಾಯಾಗ್ರಹಣ ನಿರ್ವಹಿಸಿದ್ದರೆ, ಸಂಗೀತ ಸಾಗರ್ ದೇಸಾಯಿ, ಸಂಕಲನ ಸುರೇಶ್ ಪೈ ಅವರದ್ದು.
ನಮ್ಮೊಳಗಿನ ಅಗತ್ಯಗಳೇ ಬೇರೆ, ನಾವು ಬರಿಯ ಹೊರಗಿನ ಅಗತ್ಯಗಳನ್ನು ಹೊಂದಿಸಿಕೊಳ್ಳುವುದರಲ್ಲೆ ಕಳೆದು ಹೋಗುತ್ತೇವೆ ಎನ್ನುವುದನ್ನು ಮನದಟ್ಟು ಮಾಡುವ ಚಿತ್ರ. ಎರಡೂ ನೆಲೆಗಳನ್ನು ಎದುರು ಬದುರು ಇಟ್ಟು ನಮಗೆ ಮನದಟ್ಟು ಮಾಡಿಸುವಂಥ ಚಿತ್ರ.