ಶಿವಮ್ಮ- ಸದ್ಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಸುದ್ದಿ ಮಾಡುತ್ತಿರುವ ಕನ್ನಡ ಚಲನಚಿತ್ರ. ನಿರ್ದೇಶನ – ಹೊಸ ಹುಡುಗ ಜೈಶಂಕರ್ ಆರ್ಯರ್. ನಿರ್ಮಾಣ – ನಟ, ನಿರ್ದೇಶಕ ರಿಷಭ್ ಶೆಟ್ಟಿಯವರ ಸಂಸ್ಥೆ ರಿಷಭ್ ಶೆಟ್ಟಿ ಫಿಲಂಸ್ ನದ್ದು. ಶಿವಮ್ಮ ಗ್ರಾಮೀಣ ಸೊಗಡಿನ ಕಥೆ. ಅದರಲ್ಲೂ ಗ್ರಾಮೀಣ ಸೊಗಡಿನಲ್ಲಿ ಆಧುನಿಕತೆಯ ಗಾಳಿ ಬೀಸಿದಾಗ ಆಗುವ ಪಲ್ಲಟಗಳ ಕಥೆಯೂ ಹೌದು, ಅದೇ ಸಂದರ್ಭದಲ್ಲಿ ಅದೇ ಗಾಳಿಯನ್ನು ಅವಕಾಶವಾಗಿ ಬಳಸಿಕೊಂಡು ಮೇಲೇರಲು ಹೋಗಿ ʼಕಪಟʼತೆಗಳು ಗೊತ್ತಿಲ್ಲದೇ ಮಧ್ಯದಲ್ಲಿ ಸಿಲುಕಿಕೊಳ್ಳುವವರ ಕಥೆಯೂ ಹೌದು. ಪಾನ್ ಇಂಡಿಯಾದ ಗೋಜಲಿಲ್ಲದ ಅಪ್ಪಟ ಕನ್ನಡ ನೆಲದ ಕಥೆಯ ಚಿತ್ರ.
ಈ ಚಿತ್ರ ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ವಿಶೇಷವೆಂದರೆ ಬೂಸಾನ್ ಚಲನಚಿತ್ರೋತ್ಸವ ಪ್ರಶಸ್ತಿಯಲ್ಲದೇ ಹಲವಾರು ಪ್ರಶಸ್ತಿಗಳನ್ನೂ ಗಳಿಸಿದೆ. ಇಂಥ ಶಿವಮ್ಮ ಕನ್ನಡ ಚಲನಚಿತ್ರವು ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ವಿಭಿನ್ನ ಕಥಾವಸ್ತು ಮತ್ತು ಶೈಲಿಯ ಚಲನಚಿತ್ರವನ್ನು ಸಿನಿ ಪ್ರೇಕ್ಷಕರು ನೋಡಲು ಲಭ್ಯವಾಗಲಿದೆ.
Ilayaraja : ಸಂಗೀತ ಸಾಮ್ರಾಟ ರಾಸಯ್ಯ ಈ ಇಳೆಯ ರಾಜ !
ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಲಾಯಿತು. ನಿರ್ದೇಶಕ ಜೈಶಂಕರ್ ತನ್ನದೇ ಊರಿನ (ಉತ್ತರ ಕರ್ನಾಟಕದ ಯರೇಹಂಚಿನಾಳ) ಎಳೆಯೊಂದನ್ನುಕಥೆಯನ್ನಾಗಿಸಿದ್ದಾರೆ. “ಜೈಶಂಕರ್ ಸಿಕ್ಕಿದ್ದು ಒಂದು ಕಿರುಚಿತ್ರೋತ್ಸವದಲ್ಲಿ. ಪರಿಚಯವಾಗಿ ನಮ್ಮ ಕಥಾ ಸಂಗಮದ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾಗಿ ಸೇರಿಕೊಂಡರು. ಅವರು ಹೇಳಿದ್ದ ಈ ಶಿವಮ್ಮ ಕಥೆ ಇಷ್ಟವಾಗಿತ್ತು. ಕೋವಿಡ್ ಗೂ ಮುನ್ನವೇ ಇದರ ಆರಂಭ ನಡೆದಿತ್ತು. ಅದೀಗ ನಿಮ್ಮ ಮುಂದಿದೆʼ ಎಂದವರು ರಿಷಭ್ ಶೆಟ್ಟಿ.
ಈ ಚಿತ್ರದಲ್ಲಿ ಮತ್ತೊಂದು ವಿಶೇಷವೆಂದರೆ ಶಿವಮ್ಮ ಪಾತ್ರದಾರಿ ಶರಣಮ್ಮ ಚಟ್ಟಿ ಅದೇ ಯರೇಹಂಚಿನಾಳದವರು. ತಮ್ಮದೇ ಊರಿನ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶಕರು ಈ ಸಿನಿಮಾ ರೂಪಿಸಿದ್ದಾರೆ.
ಜನರಿಗೂ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುವ ರಿಷಭ್ ಶೆಟ್ಟಿ, ನಾನು ಈ ಚಿತ್ರ ನೋಡಿದ್ದೇನೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾಗೆ ಮೆಚ್ಚುಗೆ ಕಂಡು ಖುಷಿಯಾಯಿತು. ಹಾಗಾಗಿ ಒಂದು ಒಳ್ಳೆಯ ಚಿತ್ರ ವೀಕ್ಷಕರಿಗೆ ಲಭ್ಯವಾಗಲೆಂದು ಜೂನ್.14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. “ಶಿವಮ್ಮ” ಎಂಬ ಹೊಸ ನಾಯಕಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದವರು ಈ ಚಿತ್ರದ ನಿರ್ಮಾಪಕ ರಿಷಭ್ ಶೆಟ್ಟಿ.
Indian cinema : ಹೊಂದಿಕೆಯೋ? ಹೊಂದಾಣಿಕೆಯೋ? ಆಂಖೋನ್ ದೇಖಿ ನೋಡಿ
ಜೈಶಂಕರ್ ಮೂಲತಃ ಐಟಿ ಉದ್ಯೋಗಿ. ಬೆಳೆದಿದ್ದು ಬೆಂಗಳೂರಿನಲ್ಲೇ. ಮೂಲ ಯರೇಹಂಚಿನಾಳದವರು. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದವರು. ಅವರ ಊರಿನ ಬಗ್ಗೆ ಸಿನಿಮಾ ಮಾಡುವ ಆಸೆಯಾಗಿ ಒಮ್ಮೆ ಊರಿಗೆ ಹೋದರು. ಕೋವಿಡ್ ಸಮಯ. ಒಂದು ವರ್ಷ ಅಲ್ಲೇ ತಳ ಊರಿದಾಗ ಊರಿನವರ ಸಂಸ್ಕೃತಿ, ಬದುಕಿನ ಕ್ರಮ ಎಲ್ಲವೂ ಅವರ ಅರಿವಿಗೆ ಬಂದಿತು. ಅಲ್ಲಿ ಒಬ್ಬ ಶಿವಮ್ಮ ಸಿಕ್ಕಳಂತೆ. ರಿಷಭ್ ಶೆಟ್ಟಿ ಅವರು ನಿರ್ಮಾಣಕ್ಕೆ ಮುಂದಾದಾಗ ಖುಷಿಯಾಯಿತಂತೆ. ಅದೇ ಊರಿನ ಶರಣಮ್ಮ ಚಟ್ಟಿಯವರು ಶಿವಮ್ಮರಾದರು. ಅವರೊಂದಿಗೆ ಉಳಿದವರೂ ಸೇರಿಕೊಂಡರು. ಚಿತ್ರ ನಿರ್ಮಾಣವಾಯಿತು.- ಇದು ನಿರ್ದೇಶಕ ಜೈಶಂಕರ್ ಹಾಗೂ ಶಿವಮ್ಮ ರ ಕಥೆ.
ಶರಣಮ್ಮ ಚಟ್ಟಿಯಲ್ಲಿ ಶಿವಮ್ಮಳನ್ನು ಹುಡುಕಿಕೊಂಡು ನಿರ್ದೇಶಕರು ಅವರ ಬಳಿ ಹೋದಾಗ ಅಚ್ಚರಿಗೆ ಒಳಗಾದರಂತೆ ಶರಣಮ್ಮ. ನಮಗೆ ಅದೆಲ್ಲ ಹೊಸತು, ಎಲ್ಲೋ ಅಪರೂಪಕ್ಕೆ ಸಿನಿಮಾ ನೋಡಿದ್ದೇನೆಯೇ ಹೊರತು ಅಕ್ಟಿಂಗ್ ಎಲ್ಲ ಮಾಡಿಲ್ಲ ಅಂದರಂತೆ. ಆಮೇಲೆ ಮನೆಯವರ ಹಾಗೂ ಊರಿನ ಹಿರಿಯರ ಜತೆ ಮಾತನಾಡಿ ಶಿವಮ್ಮ ಆಗಲು ಒಪ್ಪಿದರಂತೆ ಶಿವಮ್ಮ. ಇವತ್ತು ಶರಣಮ್ಮ ಕಥಾ ನಾಯಕಿ.
ಮಾಮಿ- ಮುಂಬಯಿ ಫಿಲ್ಮ್ ಫೆಸ್ಟಿವಲ್ ಗೆ ಸಿನಿಮಾಗಳಿಗೆ ಆಹ್ವಾನ
ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶೃತಿ ಕೊಂಡೇನಹಳ್ಳಿ ಮತ್ತಿತರರು ತಾರಾಗಣದಲ್ಲಿದ್ದಾರೆ. ನಟ ಪ್ರಮೋದ್ ಶೆಟ್ಟಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಒಂದು ಸದಭಿರುಚಿಯ ಚಿತ್ರ ಬಂದಾಗ ಬೆಂಬಲಿಸೋಣ, ಮತ್ತಷ್ಟು ಅಂಥ ಚಿತ್ರಗಳ ಸಂಸ್ಕೃತಿಯ ಬೆಳೆಸೋಣ, ಒಳ್ಳೆಯ ಚಲನಚಿತ್ರಗಳ ಸಂತತಿ ಸಾವಿರವಾಗಲಿ.