ತಮಿಳು ನಟ ವಿಕ್ರಮ್‌ರ ತಂಗಲನ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕೊನೇ ಕ್ಷಣದ ಯಾವುದೇ ಸಮಸ್ಯೆ ಎದುರಾಗದಿದ್ದರೆ ತಂಗಲನ್ ಸ್ವಾತಂತ್ರ್ಯ ದಿನದಂದು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಚಿತ್ರ ಬಿಡುಗಡೆ ವಿಳಂಬವಾಗಿದೆ. ಮೊದಲನೇ ಅಂದಾಜಿನ ಪ್ರಕಾರ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿತ್ತು. ಈಗ ಬಿಡುಗಡೆಗೆ ಸಜ್ಜಾಗಿದೆ.
ವಿಕ್ರಮ್ ಸ್ವತಃ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ ಅವರಿಗೂ ಇದು ಅತ್ಯಂತ ನಿರೀಕ್ಷೆ ಇರುವ ಚಿತ್ರ. ಅನ್ನಿಯನ್ ಇತ್ಯಾದಿ ಚಿತ್ರಗಳು ಈ ತಂಗಲನ್ ಮುಂದೆ ಏನೇನೂ ಅಲ್ಲವಂತೆ. ತಮ್ಮ ಹಿಂದಿನ ಬಹುತೇಕ ಚಿತ್ರಗಳನ್ನು ಮೀರಿಸುವಂಥ ಚಿತ್ರವಿದು ಎಂದಿದ್ದಾರೆ ವಿಕ್ರಮ್. ಚಿತ್ರದಲ್ಲಿನ ಪ್ರಧಾನ ಪಾತ್ರದ ನಟನೇ ತನ್ನ ಹಿಂದಿನ ರೂಪಗಳನ್ನು ಕಂಡು ಅದಕ್ಕಿಂತ ಇದು ಬಹಳ ಮಹತ್ವದ್ದು ಎಂದಿರುವುದು ಪ್ರೇಕ್ಷಕರಲ್ಲೂ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದ ಟ್ರೇಲರ್ ಸಹ ವಿಭಿನ್ನವಾಗಿ ಮೂಡಿ ಬಂದಿದೆ.
ಈ ಸಾಲಿನಲ್ಲಿ ಸದ್ಯಕ್ಕೆ ಒಪ್ಪಿಕೊಂಡ ಚಿತ್ರ ಇದೊಂದೇ. ಹಿಂದಿನ ವರ್ಷ ಪೊನ್ನಿಯನ್ ಸೆಲ್ವಂ ಎರಡು ಭಾಗದಲ್ಲಿ ಕ್ರಿಯಾಶೀಲರಾಗಿದ್ದರು. ಈ ವರ್ಷ ಪಟ್ಟಿಯಲ್ಲಿರುವ ಇನ್ನೆರಡು ಚಿತ್ರಗಳೆಂದರೆ ಧ್ರುವ ನಕ್ಷತ್ರಂ ಹಾಗೂ ಯುದ್ಧ ಕಾಂಡಂ-1. ಹಾಗಾಗಿ ವಿಕ್ರಮ್ ರಿಗೂ ತಂಗಲನ್ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ : Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !
ಪಾ. ರಂಜಿತ್ ಈ ಚಿತ್ರದ ನಿರ್ದೇಶಕ. ರಂಜಿತ್ ಆಟ್ಟಕಥಿ, ಕಾಬಾಲಿ, ಕಾಳ, ಮದ್ರಾಸ್ ಇತ್ಯಾದಿ ಚಿತ್ರಗಳನ್ನು ನಿರ್ದೇಶಿಸಿದವರು. ಸ್ಟುಡಿಯೋ ಗ್ರೀನ್ ನೀಲಂ ಪ್ರೊಡಕ್ಷನ್ಸ್, ಜಿಯೋ ಸ್ಟುಡಿಯೋಸ್ ಸೇರಿ ಈ ಚಿತ್ರವನ್ನು ನಿರ್ಮಿಸಿವೆ. ಕೆ ಜ್ಞಾನವೇಲು ರಾಜು ಇದರ ನಿರ್ಮಾಪಕರು.
ವಿಕ್ರಮ್ ಜತೆಗೆ ಮಾಳವಿಕಾ ಮೋಹನನ್, ಪಾರ್ವತಿ ಥಿರುವೊತು, ಡೇನಿಯಲ್ ಕಲ್ಟಗಿರೊನ್ ಮತ್ತಿತರರು ಅಭಿನಯಿಸುತ್ತಿದ್ದಾರೆ. ಬ್ರಿಟಿಷ್ ಕಾಲದ ಸಿನಿಮಾ. ನಿರ್ದೇಶಕರು ಹೇಳುವಂತೆ ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಕಥೆ. ಕೋಲಾರದ ಹಿನ್ನೆಲೆಯನ್ನೇ ಇಟ್ಟುಕೊಂಡು ಸ್ವಲ್ಪ ದೊಡ್ಡ ಕ್ಯಾನ್ ವಾಸ್ ನಲ್ಲಿ ಚಿನ್ನದ ಗಣಿ ಕಾರ್ಮಿಕರ ಬದುಕಿನ ಬಗ್ಗೆ ಹೇಳಲು ಈ ಸಿನಿಮಾ ಪ್ರಯತ್ನ ಪಡುತ್ತಿದೆಯಂತೆ.
ಒಂದು ಬುಡಕಟ್ಟಿನ ನಾಯಕನ ಕತೆಯೂ ಹೌದಂತೆ. ತಂಗಲನ್ ಒಂದು ಬುಡಕಟ್ಟು ಜನಾಂಗದವನು. ಅವನು ಮತ್ತು ಅವನ ಜನಾಂಗ ಬ್ರಿಟಿಷ್ ಅಧಿಕಾರಿಗೆ ತಮ್ಮ ಹಳ್ಳಿಯಲ್ಲಿ ಚಿನ್ನದ ಗಣಿ ಪತ್ತೆಗೆ ಸಹಾಯ ಮಾಡುವುದು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ಕುತೂಹಲಕಾರಿ ತಿರುವುಗಳು ಹಾಗೂ ಸಂದರ್ಭಗಳು ಈ ಸಿನಿಮಾವನ್ನು ಬೆಳೆಸಿವೆ.
2014 ರಲ್ಲಿ ಮದ್ರಾಸ್ ಸಿನಿಮಾ ನಿರ್ದೇಶಿಸುತ್ತಿದ್ದಾಗ ರಂಜಿತ್ ರಲ್ಲಿ ಈ ಕಥೆ ಹೊಳೆದಿತ್ತಂತೆ. ಅದನ್ನುಸಿನಿಮಾ ಮಾಡಲು ಯೋಚಿಸಿದ್ದರು. ನಟ ವಿಕ್ರಮ್ ಜತೆಗೆ ಹಂಚಿಕೊಂಡಿದ್ದರೂ ಸಹ. 2021 ರಲ್ಲಿ ಚಿತ್ರ ನಿರ್ಮಾಣದ ಬಗ್ಗೆಯೂ ತೀರ್ಮಾನವಾಯಿತು. ಸ್ಟುಡಿಯೋ ಗ್ರೀನ್ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿತು.
ಇದನ್ನೂ ಓದಿ : New Movie : ಭೈರತಿ ರಣಗಲ್ ಸೆಪ್ಟೆಂಬರ್ ನಲ್ಲಿ ತೆರೆಗೆ
ಮೊದಲಿಗೆ ಚಿತ್ರದ ಹಾಡುಗಳನ್ನು ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶಿಸುವುದು ಇತ್ತು. ಅಂತಿಮವಾಗಿ ಜಿ ವಿ ಪ್ರಕಾಶ ಕುಮಾರ್ ಅವರ ಪಾಲಾಯಿತು. ಹಾಗೆಯೇ ಡಿಸೆಂಬರ್ ನಲ್ಲಿ ಚಿತ್ರ ನಿರ್ಮಾಣದ ಬಗ್ಗೆ ಪ್ರಕಣೆಯೂ ಹೊರ ಬಿದ್ದಿತು. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುವ ಸಾಧ್ಯತೆ ಇತ್ತು. ಆದರೆ ಇತರೆ ಚಿತ್ರಗಳ ಶೂಟಿಂಗ್ ನ ಒತ್ತಡದಿಂದ ರಶ್ಮಿಕಾ ಹಿಂದೆ ಸರಿದರು. ಆ ಅವಕಾಶ ಮಾಳವಿಕಾ ಮೋಹನನ್ ಅವರ ಪಾಲಾಯಿತು.
ಇದೊಂದು ಐತಿಹಾಸಿಕ ಕಥೆಯೂ ಆಗಿತ್ತು. ಇಷ್ಟರಲ್ಲಿ ಬಿಡುಗಡೆಯಾದ ಕನ್ನಡದ ಕೆಜಿಎಫ್ ಸರಣಿ ಚಿತ್ರಗಳು ಸ್ವಲ್ಪ ತಂಗಲನ್ ಕಥೆಯನ್ನೇ ಹೋಲುವ ಸಾಧ್ಯತೆ ಇದ್ದ ಕಾರಣ ರಂಜಿತ್ ಗೊಂದಲಕ್ಕಾದರು. ಅಂತೂ ಕೊನೆಯಲ್ಲಿ ಮೂಲ ಚಿತ್ರಕಥೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ತಂಗಲನ್ ನಿರ್ಮಾಣಕ್ಕೆ ಸಿದ್ಧರಾದರು. ಇದು ವಿಶೇಷವೇ ಸರಿ.
ಇದನ್ನೂ ಓದಿ : Ilayaraja : ಸಂಗೀತ ಸಾಮ್ರಾಟ ರಾಸಯ್ಯ ಈ ಇಳೆಯ ರಾಜ !
ಈ ಸಿನಿಮಾಕ್ಕೆ ಮೊದಲು ಇಟ್ಟ ಹೆಸರು ಚಿಯಾನ್ 61. ವಿಕ್ರಮ್ ಅವರ 61 ನೇ ಸಿನಿಮಾವೂ ಸಹ ಇದು. ಬಳಿಕ ಸಿನಿಮಾ ಶೀರ್ಷಿಕೆಯನ್ನು ತಂಗಲನ್ ಎಂದು ಬದಲಾಯಿಸಲಾಯಿತು. ಚೆನ್ನೈ, ಆಂಧ್ರ ಪ್ರದೇಶ, ಮಧುರೈ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ 2 ಡಿ ಹಾಗೂ 3 ಡಿ ವಿಧದಲ್ಲಿ ಬಿಡುಗಡೆಯಾಗಲಿದೆ.
ಶೀರ್ಷಿಕೆ ಗೀತೆಯಲ್ಲದೇ ಮತ್ತೆರಡು ಹಾಡುಗಳು ಚಿತ್ರದಲ್ಲಿರಲಿವೆ. ಎ. ಕಿಶೋರ್ ಕುಮಾರ್ ರದ್ದು ಛಾಯಾಗ್ರಹಣ ಹಾಗೂ ಸಂಖಲನ ಸೆಲ್ವ ಆರ್. ಕೆ. ಅವರದ್ದು. ಸುಮಾರು 100- 150 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿತ್ರ ಇದು.
ವಿಕ್ರಮ್ ರ ಬಹು ನಿರೀಕ್ಷೆಯ ಚಿತ್ರ ಯಾವ ರೀತಿಯ ಅನುಭವವನ್ನು ಪ್ರೇಕ್ಷಕನಿಗೆ ಒದಗಿಸಬಲ್ಲದು ಎಂಬುದು ಸದ್ಯದ ಕುತೂಹಲದ ಸಂಗತಿ.