ಎನಿ ಡೇ ನೌ 2020 ರಲ್ಲಿ ಬಿಡುಗಡೆಗೊಂಡ ಫಿನ್ನಿಷ್, ಪರ್ಸಿಯನ್ ಭಾಷೆಯ ಚಲನಚಿತ್ರ. ಒಟ್ಟು ಎಂಬತ್ತೆರಡು ನಿಮಿಷಗಳಲ್ಲಿ ಬದುಕಿನ ಬಗೆಗಿನ ಧನಾತ್ಮಕ ದೃಷ್ಟಿಕೋನವನ್ನು ಹರಳುಗಟ್ಟಿಸಿ ಕೊಡುವಂಥ ಮೆಲುದನಿಯ ಚಿತ್ರ. ಬದುಕನ್ನು ಧನಾತ್ಮಕವಾಗಿ ಹೇಗೆ ಸ್ವೀಕರಿಸಬೇಕೆಂಬುದನ್ನು ಕುಟುಂಬವಿಡೀ ಕುಳಿತು ನೋಡಬಹುದಾದ ಅಪರೂಪದ ಚಿತ್ರ. ನಾಳೆ ದೊಡ್ಡ ಸಂಕಟ ಬಂದೀತೆಂಬ ಆತಂಕದಿಂದಲೇ ಇಂದು ಹೇಗೆ ಕಳೆಯಬಹುದು? ಈ ಕ್ಷಣವಷ್ಟೇ ನಮ್ಮದು, ಅನುಭವಿಸುವ ಪರಿ ಎಂಥದ್ದು ಎನ್ನುವುದನ್ನು ಸಿನಿಮಾ ಹೇಳಲು ಇಷ್ಟಪಡುತ್ತದೆ. ಅದನ್ನು ಅಚ್ಚುಕಟ್ಟಾಗಿ, ಲವಲವಿಕೆಯಿಂದ ಹೇಳಿರುವ ಸಿನಿಮಾ ಮುಗಿದ ಬಳಿಕ ನಮ್ಮೊಳಗೆ ಉಳಿಯುವುದು ಅವರ ನಗೆ ಮತ್ತು ಬದುಕಿನ ಬಗೆ.
ಅತ್ಯಂತ ದುಃಖದಿಂದ ಎಂದೆನಿಸಿಕೊಂಡರೆ ಅಲ್ಲ ಅದು ಬಂದ ಹಾಗೆಯೇ ಸ್ವೀಕರಿಸಬೇಕು. ಅದೇ ಸಂತಸವಾದದ್ದು. ಅದೇ ವರ್ತಮಾನವನ್ನು ಅನುಭವಿಸುವುದು. ಭವಿಷ್ಯದ ಚಿಂತೆಯಲ್ಲಿ ವರ್ತಮಾನವನ್ನು ಏಕೆ ಸುಟ್ಟುಕೊಳ್ಳಬೇಕು. ಇಂಥದೊಂದು ಕಥಾ ಎಳೆಯ ಮೇಲೆ ರೂಪುಗೊಂಡ ಸಿನಿಮಾ ‘ಎನಿ ಡೇ ನೌ’.
ಹೆಮಿ ರಮೇಝಾನ್ (Hamy Ramezan) ಅತ್ಯಂತ ಮನೋಜ್ಞವೆನ್ನುವಂತೆ ಕಟ್ಟಿಕೊಟ್ಟ ಒಂದು ವರ್ತಮಾನದ ಕಥನ. ಹೆಮಿ ಫಿನ್ ಲ್ಯಾಂಡ್-ಇರಾನಿನ ನಿರ್ದೇಶಕ. ಕಿರುಚಿತ್ರಗಳಲ್ಲಿ ನಿಷ್ಣಾತ. ಅವನ ಲಿಸನ್ (Kuuntele) 13 ನಿಮಿಷಗಳ ಕಿರುಚಿತ್ರ ಚಿತ್ರವಲಯದ ಹುಬ್ಬೇರಿಸಿತ್ತು. ಆ ಬಳಿಕ ಕೀಸ್ ಆಫ್ ಹೆವನ್, ರೆಫ್ಯೂಜಿ ಅನ್ ನೋನ್ ಇತ್ಯಾದಿ ಚಿತ್ರಗಳನ್ನು ಮಾಡಿದ್ದ.
ಹೆಮಿ ಮೂಲತಃ ನಿರಾಶ್ರಿತ. ಇರಾನಿನ ಯುದ್ಧಕಾಲದಲ್ಲಿ ಫಿನ್ ಲ್ಯಾಂಡ್ ನತ್ತ ವಲಸೆ ಹೋಗಿ, ಯುಗೋಸ್ಲಾವಿಯಾದ ನಿರಾಶ‍್ರಿತರ ಶಿಬಿರಗಳಲ್ಲಿ ತಮ್ಮ ಬಾಲ್ಯವನ್ನು ಕಳೆದವರು. ತಮ್ಮ ಕುಟುಂಬದ ಅನುಭವವನ್ನೇ ಕಥೆಯಾಗಿ ಕಟ್ಟಿಕೊಟ್ಟಿದ್ದು ಎನಿ ಡೇ ನೌ (Ensilumi) ಯಲ್ಲಿ.
ಎನಿ ಡೇ ನೌ ಒಂದು ಭಾವನಾತ್ಮಕ ಬಂಧವಿರುವ ಚಲನಚಿತ್ರ. ಇಲ್ಲಿ ಫೈಟಿಂಗ್, ರೊಮ್ಯಾನ್ಸ್ ಎಂಬುದಿಲ್ಲ. ಸಂಬಂಧಗಳಿವೆ. ಬಹ್ಮಾನ್ ಮತ್ತು ಮೆಹ್ತಾಬ್ ತಮ್ಮ ಇಬ್ಬರು ಮಕ್ಕಳೊಂದಿಗೆ (ರಮೀನ್ ಮತ್ತು ದೋನ್ಯಾ) ಫಿನ್ ಲ್ಯಾಂಡ್ ನ ಒಂದು ಪುಟ್ಟ ಪಟ್ಟಣದ ನಿರಾಶ್ರಿತರ ಕೇಂದ್ರದಲ್ಲಿ ಇದ್ದಾರೆ. ಈಗಾಗಲೇ ನಿರಾಶ್ರಿತರೆಂದು ಪರಿಗಣಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ಸ್ಥಳೀಯ ಆಡಳಿತದಿಂದ ತಿರಸ್ಕೃತವಾಗಿದೆ. ಇನ್ನೊಮ್ಮೆ ಅಂತಿಮ ಮನವಿ ಸಲ್ಲಿಸಲಾಗಿದೆ. ಅದರ ಫಲಿತಾಂಶ ಪ್ರಕಟವಾಗಬೇಕಷ್ಟೇ. ಆತಂಕ ಮತ್ತು ಅನಿಶ್ಚಿತತೆ ಎಂಬ ಕೆಂಡಗಳನ್ನು ಈ ಕುಟುಂಬ ಮಡಿಲಿನಲ್ಲಿ ಕಟ್ಟಿಕೊಂಡಿವೆ. ಯಾವಾಗ ಬೇಕಾದರೂ ಬದುಕನ್ನು ಸುಡಬಹುದು.
Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ
ತನ್ನ ಸುತ್ತಲಿನಲ್ಲೂ ಸಾಕಷ್ಟು ಮಂದಿ ಹೀಗೆಯೇ ನಿರಾಶ್ರಿತರ ಸ್ಥಾನಮಾನ ಕೋರಿ ಅರ್ಜಿ ಸಲ್ಲಿಸಿದವರೇ. ರಮೀನ್ ಹೊಸ ಶಾಲೆಗೆ ಸೇರುತ್ತಾನೆ. ಜತೆಗೆ ದೋನ್ಯಾ ಸಹ. ಬಹ್ಮನ್ ನ ಆಲೋಚನಾ ಕ್ರಮ ಹೇಗಿತ್ತೆಂದರೆ, ‘ಸರಿ, ತಿರಸ್ಕೃತವಾದರೆ ಇನ್ನೊಂದು ಊರು. ಅಲೆಮಾರಿಗೆ ಯಾವೂರಾದರೆ ಏನು?’ ಎಂಬ ಮನಸ್ಥಿತಿ. ಅತ್ಯಂತ ಧನಾತ್ಮಕವಾಗಿ ದಿನವನ್ನು ಕಳೆಯಲು ಇಡೀ ಕುಟಂಬ ಇಚ್ಛಿಸುತ್ತದೆ.
ಸಿನಿಮಾದಲ್ಲಿ ವಿಶೇಷ ತಿರುವುಗಳನ್ನು ತಂದು ತುರುಕಿಲ್ಲ. ಬದಲಾಗಿ ನಿತ್ಯದ ಬದುಕನ್ನೇ ರಸವತ್ತಾಗಿ, ಪಾಸಿಟಿವ್ ನೆಲೆಯಲ್ಲಿ, ಖುಷಿ ಖುಷಿಯಾಗಿ ಕಟ್ಟಿಕೊಟ್ಟಿದ್ದಾನೆ ನಿರ್ದೇಶಕ. ಮಕ್ಕಳ ಮುಗ್ಧತೆ, ಲವಲವಿಕೆ, ಮಕ್ಕಳ ನಡುವಿನ ಸಂಬಂಧ ಎಲ್ಲವನ್ನೂ ತಾಜಾ ನೆಲೆಯಲ್ಲೇ (ಆತಂಕದ ಹಿನ್ನೆಲೆಯಿಲ್ಲದೇ) ಒಂದು ಕಡೆ ವಿವರಿಸುತ್ತಾ ಸಂಬಂಧಗಳು ಭೌಗೋಳಿಕ ಗಡಿ ಮೀರಿದವು ಎಂಬುದನ್ನು ಒಂದೆಡೆ ಸಾಬೀತು ಪಡಿಸುತ್ತಾನೆ. ಅದರ ಮಧ್ಯೆಯೇ ಬದುಕಿನಲ್ಲಿ ಅನಿಶ್ಚಿತತೆ ತಂದೊಡ್ಡಬಹುದಾದ ಅನಿವಾರ್ಯತೆಯನ್ನೂ ಬಹಳ ಸೂಕ್ಷ್ಮವಾಗಿ ವಿವರಿಸುತ್ತಾನೆ. ಅದಕ್ಕೆ ಸಿದ್ಧವಾಗಬೇಕಾದ ಮನಸ್ಥಿತಿಯನ್ನೂ ಉಲ್ಲೇಖಿಸುತ್ತಾನೆ.
ಬಹ್ಮನ್ ತನ್ನ ಎದುರು ಅನಿಶ್ಚಿತತೆಯ ಬೆಟ್ಟವನ್ನು ಇಟ್ಟುಕೊಂಡರೂ ಆ ದಿನದ ಯಾವ ಕ್ಷಣವನ್ನೂ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅವನಿಗೆ ಒಪ್ಪುವಂಥ ಪತ್ನಿ ಮೆಹ್ತಾಬ್. ಬಹ್ಮನ್ ಇರುವ ವಸತಿ ಸಮುಚ್ಚಯದಲ್ಲೇ ಮತ್ತೊಂದು ನಿರಾಶ್ರಿತ ಕುಟುಂಬವೊಂದು ವಿಚಿತ್ರವೆನಿಸುವ ಷರತ್ತು ವಿಧಿಸುತ್ತದೆ. ‘ಹೆಚ್ಚು ಶಬ್ದ ಮಾಡುವಂತಿಲ್ಲ. ರಾತ್ರಿ ಹೊತ್ತು ಗದ್ದಲ ಮಾಡುವಂತಿಲ್ಲ, ಸಂಗೀತ ಜೋರಾಗಿ ಕೇಳುವಂತಿಲ್ಲ ಇತ್ಯಾದಿ’. ಆ ಷರತ್ತುಗಳನ್ನು ಯಾವ ಆಕ್ರೋಶವೂ ಇಲ್ಲದೇ ಒಪ್ಪಿಕೊಳ್ಳುತ್ತಾನೆ.
MIFF: 59 ದೇಶಗಳು,61 ಭಾಷೆಗಳು, 314 ಚಿತ್ರ ಕೃತಿಗಳ ಪ್ರದರ್ಶನ
ಒಂದುದಿನ ದೋನ್ಯಾಳ ಹುಟ್ಟುಹಬ್ಬ. ತನ್ನ ಸಂಬಂಧಿಕರೂ ಬಂದಿರುತ್ತಾರೆ. ಹಾಡು,ಕುಣಿತ ಸಾಮಾನ್ಯ. ಪಕ್ಕದ ಮನೆಯವರ ಷರತ್ತು ವಿವರಿಸಿದಾಗ ಉಳಿದವರು ಅದು ಹೇಗೆ ಸಾಧ್ಯ ಎನ್ನುವ ಹಾಗೆ ಪ್ರಶ್ನಿಸುತ್ತಾರೆ. ಆದರೆ ಬಹ್ಮನ್ ಅವರನ್ನೂ ನಿಭಾಯಿಸುತ್ತಾನೆ. ಇರುವಷ್ಟು ಹೊತ್ತಿನ ಪ್ರತಿ ಮಿನಿ ಸೆಕೆಂಡುಗಳನ್ನೂ ಅನುಭವಿಸಬೇಕೆಂದು ಬಯಸುವ ಕುಟುಂಬ ಒಂದು ದಿನ ದುರಂತಕ್ಕೆ ಬಂದು ನಿಂತುಕೊಳ್ಳುತ್ತದೆ.
ಮೇಲ್ಮನವಿಯೂ ಸಹ ತಿರಸ್ಕೃತಗೊಳ್ಳುತ್ತದೆ. ರಮೀನ್ ಶಾಲೆ ಮತ್ತು ದೋನ್ಯಾ ಶಾಲೆಗೆ ಸ್ಥಳೀಯ ಪೊಲೀಸರು ಬರುತ್ತಾರೆ. ಇಬ್ಬರೂ ಮಕ್ಕಳ ಲವಲವಿಕೆ ಮತ್ತು ಸ್ನೇಹಪರ ಗುಣ ಶಾಲೆಯ ಹಲವರ ಕಣ್ಣಲ್ಲಿ ಹನಿ ತಂದು ನಿಲ್ಲಿಸುತ್ತದೆ. ಶಿಕ್ಷಕಿಯೊಬ್ಬಳಂತೂ ಗದ್ಗದಿತಳಾಗುತ್ತಾಳೆ.
ಕೊನೆಯ ರಾತ್ರಿ. ವಾಪಸು ತನ್ನೂರಿಗೆ ವಾಪಸಾಗಬೇಕಾದ ದಿನ. ನಿರಾಶ್ರಿತರ ಕೇಂದ್ರದಲ್ಲಿ ಕುಟುಂಬ ಮತ್ತೆ ಅದೇ ಬೆಳಗಿನ ಉತ್ಸಾಹ, ಲವಲವಿಕೆಯಿಂದಲೇ ಕಳೆಯುತ್ತದೆ. ಎಲ್ಲಿಯೂ ಕೊರತೆ ಮಾಡುವುದಿಲ್ಲ. ಬೆಳಗ್ಗೆ ಆ ಊರಿನಲ್ಲಿ ಮತ್ತೊಂದು ಸೂರ್ಯೋದಯ ನೋಡಲಾರೆವು ಎಂಬ ಕಹಿಸತ್ಯ ತಿಳಿದಿದ್ದರೂ ಹಿಂದಿನ ದಿನದ ಸೂರ್ಯಾಸ್ತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಮನದುಂಬಿಕೊಳ್ಳಲು ಮರೆಯುವುದಿಲ್ಲ.
world cinema: ಅಪರಿಮಿತ ಸಾಹಸದಲ್ಲಿ ಕಳೆದು ಹೋದ ಹುಡುಗ
ಎಲ್ಲೂ ರೋಚಕತೆಯನ್ನು ತಾರದೇ, ಕೌಟುಂಬಿಕ ಕಥಾನಕವನ್ನು ಎಲ್ಲೂ ಯಾವ ಬಗೆಯ ಅತಿರೇಕಕ್ಕೂ ಹೋಗದೇ ಒಂದು ಸವಿಘಳಿಗೆಯೆನ್ನುವಂತೆ ಚಿತ್ರಿಸಿರುವುದು ನಿರ್ದೇಶಕನ ಹೆಚ್ಚುಗಾರಿಕೆ.
ಬಹ್ಮನ್ ಪಾತ್ರದಲ್ಲಿ ಶಹಬ್ ಹೊಸೇನಿ (Shahab Hosseini), ಶಬನಮ್ ಗೊರ್ಬಾನಿ (Shabanam Ghorbani), ರಮೀನ್ ಆಗಿ ಅರನ್ ಸಿನಾ ಕೇಶ್ವಾರಿ (Aran-Sina Keshvari) ಹಾಗೂ ದೋನ್ಯಾಳಾಗಿ ಕಿಮಿಯ ಎಸ್ಕಂದಾರಿ (Kimiya Eskandari) ಅಭಿನಯಿಸಿದ್ದಾರೆ. ಒಬ್ಬರ ಅಭಿನಯ ಮತ್ತೊಬ್ಬರಿಗಿಂತ ಚೆಂದ. ಶಹಬ್ ಅಭಿನಯವಂತೂ ಬಹಳ ಚೆನ್ನಾಗಿದೆ. ಜತೆಗೆ ದೋನ್ಯಾಳ ಮುಗ್ಧತೆ ಇಷ್ವವಾಗುತ್ತದೆ. ಶಬನಮ್ ಮತ್ತು ಅರನ್ ಅವರ ಅಭಿನಯವೂ ಕಡಿಮೆ ಇಲ್ಲ.
ಸಿನಿಮಾ ಸಾಗುವ ಗತಿಗೆ ಹೊಂದುವಂಥ ಹೆಚ್ಚು ಏರಿಳಿತವಿಲ್ಲದ ಸಂಗೀತ ಒದಗಿಸಿರುವುದು ಭಾವುಕತೆಯನ್ನು ಹೆಚ್ಚಿಸುತ್ತದೆ. ಸಂಗೀತ ತೌಮಸ್ ನಿಕ್ಕಿನೇನ್ ಅವರದ್ದು. ಛಾಯಾಗ್ರಹಣ Arsen Sarkisiants ರದ್ದು.
ಒಂದು ಸಂಗೀತದ ಅನುಭವ ನೀಡುವ ಸಿನಿಮಾ. ವಲಸೆ, ನಿರಾಶ್ರಿತರೆಂಬ ಗಂಭೀರವಾದ ವಿಷಯವನ್ನು ಭಾವೋದ್ರೇಕತೆಗೆ ಒಳಗಾಗಿಸದೇ ಎಲ್ಲ ಜನರಿಗೂ ತಲುಪಿಸುವ ಪ್ರಯತ್ನ ಮೆಚ್ಚುವಂಥದ್ದು.
ಈ ಸಿನಿಮಾ ವಿವಿಧ ಚಿತ್ರೋತ್ಸವಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದೆ. ಬೀಜಿಂಗ್ ಚಿತ್ರೋತ್ಸವದಲ್ಲಿ ಶಹಬ್ ಅತ್ಯುತ್ತಮ ನಟನೆಗೆ ಪ್ರಶಸ್ತಿ ಪಡೆದಿದ್ದರೆ, ತೌಮಸ್ ನಿಕ್ಕಿನೇನ್ ಸಂಗೀತಕ್ಕೆ ಪ್ರಶಸ್ತಿ ಪಡೆದಿದ್ದರು. ಜುಸ್ಸಿ ಪ್ರಶಸ್ತಿಯಲ್ಲೂ ಶಹಬ್ ನಟನೆಗೆ ಪಡೆದಿದ್ದರು. ಬರ್ಲಿನ್ ಚಿತ್ರೋತ್ಸವ ಸೇರಿದಂತೆ ಹಲವು ಉತ್ಸವಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಇದರ ಅಂತಾರಾಷ್ಟ್ರೀಯ ಮೊದಲ ಪ್ರದರ್ಶನ ಬರ್ಲಿನ್ ಚಿತ್ರೋತ್ಸವದಲ್ಲಿ ನಡೆದಿತ್ತು.