ಇಂಥ ಹೀರೋ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !
ಇರಬಹುದೇನೋ ಅಲ್ವಾ? ಎಷ್ಟೋ ಬಾರಿ ಹೀಗೆ ಅನಿಸುತ್ತೆ. ನಟ, ನಿರ್ದೇಶಕ, ಅದ್ವಿತೀಯ ಪ್ರತಿಭೆ ಶಂಕರನಾಗ್ ಇದ್ದಿದ್ದರೆ ಇಷ್ಟೆಲ್ಲ ಕ್ರೌರ್ಯ ಸಿನಿಮಾಗಳಲ್ಲಿ ತುಂಬಿರುತ್ತಿತ್ತಾ?
ಇಂಥ ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿಲ್ಲ. ಆದರೆ ಸ್ವಲ್ಪ ಊಹಿಸಬಹುದು. ಬಹುಶಃ ಇರುತ್ತಿರಲಿಲ್ಲ. ಇದ್ದರೂ ಅದೇ ದುಡ್ಡು ಮಾಡುವ ತಂತ್ರವಾಗಿಯೋ, ಜನ ಕೇಳ್ತಾರೆ ಕೊಡ್ತಾ ಇದ್ದೇವೆ ಎನ್ನುವ ಮಾತಿನ ತಂತ್ರಗಾರಿಕೆಯೋ ಇರುತ್ತಿರಲಿಲ್ಲ. ಯಾಕೆಂದರೆ ಶಂಕರನಾಗ್ ಅಂಥ ಧಾಟಿಗೆ ಹೊಸ ಮದ್ದು ಹುಡುಕುತ್ತಿದ್ದರು. ಅದೆಂದರೆ ಒಳ್ಳೆಯ ಸಿನಿಮಾ.
ಶಂಕರನಾಗ್ ಇದ್ದ ಅಲ್ಪ ಆಯುಷ್ಯದಲ್ಲೇ ಬದುಕನ್ನು ಬಸಿದುಕೊಂಡು ಅನುಭವಿಸಿದವರು. ಇಷ್ಟ ಹೆಜ್ಜೆಯಲ್ಲೆಲ್ಲ ಉತ್ಸಾಹದ ಮೈಲುಗಲ್ಲು ನೆಟ್ಟರು. ಇಂದು ಶಂಕರನಾಗ್ ಇರಬೇಕಿತ್ತು ಎಂದು ಸದಾಕಾಲ ನೆನಪಿಸಿಕೊಳ್ಳುವಂತೆ ಬದುಕಿದರು.
IFFI55: ಇಫಿ ಚಿತ್ರೋತ್ಸವಕ್ಕೆ ಸಜ್ಜಾಗಿ; ಪ್ರತಿನಿಧಿಯಾಗಿ ನೋಂದಾಯಿಸಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಮಲ್ಲಾಪುರ ಊರಿನಲ್ಲಿ ಹುಟ್ಟಿದ್ದ ಶಂಕರನಾಗ್ ಕಲಿತದ್ದು ವಾಣಿಜ್ಯ ವಿಷಯದಲ್ಲಿ ಪದವಿ. ಅದೂ ದೂರದ (ಆಗ ದೂರವೇ) ಬೊಂಬಾಯಿಯಲ್ಲಿ.
ರಂಗಭೂಮಿ, ನಟನೆ ಎಂದೆಲ್ಲ ಹುಚ್ಚಿನಲ್ಲಿದ್ದ ಶಂಕರನಾಗ್ ಸಾಯಿ ಪರಾಂಜಪೆ, ಗಿರೀಶ್ ಕಾರ್ನಾಡರಂಥವರಿಂದ ಒಂದಿಷ್ಟು ಕಲಿತರು. ಪ್ರಥಮ ಚಿತ್ರವಾಗಿ ಒಂದಾನೊಂದು ಕಾಲದಲ್ಲಿ ಅಭಿನಯಿಸಿದರು. ಪ್ರಥಮ ಚಿತ್ರದಲ್ಲೇ ತಾವು ಬೆಳಕಿನ ಕಿಡಿ ಎಂಬುದನ್ನು ಸಾಬೀತು ಪಡಿಸಿದರು. ಈ ಸಿನಿಮಾದಲ್ಲಿನ ನಟನೆಗೆ ಹಲವಾರು ಪುರಸ್ಕಾರಗಳು ಸಂದವು. ವಿಶೇಷವಾಗಿ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ) ಯಲ್ಲಿ ಅತ್ಯುತ್ತಮ ನಟನೆಗೆ ರಜತ ಕಮಲ ಪ್ರಶಸ್ತಿ ಪಡೆದರು. ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳು ಅತ್ಯುತ್ತಮ ಚಿತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬಂದವು. ಈ ಸಿನಿಮಾವನ್ನು ಗಿರೀಶ್ ಕಾರ್ನಾಡರು ನಿರ್ದೇಶಿಸಿದ್ದರು. ಅಮೆರಿಕದಲ್ಲೂ ಪ್ರದರ್ಶಿತವಾಗಿತ್ತು. ಜಪಾನಿನ ಸಮುರಾಯ್ ಸಿನಿಮಾಗಳ ಛಾಯೆ ಇದರಲ್ಲಿದೆ ಎಬ ಮಾತು ಕೇಳಿಬಂದಿತು.
Jugari Cross: ಪೂಚಂತೇ ಅವರ ಲೋಕದ ಆರನೇ ಸಿನಿಮಾ ಇದು !
ಇಂಥ ಶಂಕರನಾಗರ ಹೆಸರು ಅವಿನಾಶ. ಹಾಗೆಯೇ ಭವಾನಿ ಶಂಕರ್. ಊರು ನಾಗರಕಟ್ಟೆಯ ನಾಗ್ ಹಾಗೂ ಭವಾನಿ ಶಂಕರ್ ನ ಶಂಕರ್ ಸೇರಿ ಶಂಕರ ನಾಗ್ ಆಗಿ ಚಿರಸ್ಥಾಯಿಯಾಯಿತು. ನಟನಾಗಿ, ನಿರ್ದೇಶಕನಾಗಿ, ಸಂಸ್ಥೆಯೊಂದರ ಸಂಸ್ಥಾಪಕನಾಗಿ ಹತ್ತಾರು ರೀತಿಯಲ್ಲಿ ಸದಾ ಕ್ರಿಯಾಶೀಲರಾಗಿದ್ದ ಶಂಕರನಾಗ್ ಚಿತ್ರರಂಗದಲ್ಲಿ ಮಿಂಚಿದ್ದು ಸೀತಾರಾಮುವಿನಿಂದ, ಮಿಂಚಿನ ಓಟದಿಂದ. ನಿರ್ದೇಶಕರಾದದ್ದೂ ಮಿಂಚಿನ ಓಟದಿಂದಲೇ.
ಈ ಅವಿನಾಶ, ಮಿಂಚಿನ ಓಟ, ಆಕ್ಸಿಡೆಂಟ್, ಒಂದಾನೊಂದು ಕಾಲದಲ್ಲಿ ಎಲ್ಲವೂ ಶಂಕರನಾಗ್ ರ ಬದುಕಿಗೆ ಬರೆದ ಭಾಷ್ಯದಂತೆ ಇಂದು ತೋರುತ್ತಿದೆ. ಸೆಪ್ಟೆಂಬರ್ 30 ಅವರು ನೆನಪಿನ ಕೋಶಕ್ಕೆ ಸೇರಿ ಹೋದ ದಿನ. ಈ ಅವಿನಾಶ-ಭೌತಿಕವಾಗಿ ನಾಶವಾಗಿರಬಹುದು, ಅವರ ಕೆಲಸದಿಂದ, ಉತ್ಸಾಹದಿಂದ ಇಂದಿಗೂ ಅವಿನಾಶನೇ. ಮಿಂಚಿನ ಓಟ ಅವರ ಬದುಕಿನಗಾಥೆ. 1954 ರಲ್ಲಿ ಹುಟ್ಟಿ, 24 ವರ್ಷಗಳ ಬಳಿಕ 1978 ರಲ್ಲಿ ಸಿನಿಮಾ ಪರದೆಗೆ ಬಂದು, 22 ವರ್ಷಗಳಲ್ಲೇ 1990 ರಲ್ಲಿ ನೆನಪಾಗಿ ಉಳಿದವರು. ಅಂದರೆ ಬದುಕಿದ್ದು 35 ವರ್ಷ. ಇದು ಮಿಂಚಿನ ಓಟವಲ್ಲದೇ ಮತ್ತೇನು?
ಸಂಕೇತ್ ಸ್ಟುಡಿಯೋ ನಿರ್ಮಾಣ, ಮಾಲ್ಗುಡಿ ಡೇಸ್ ನಂಥ ಧಾರಾವಾಹಿ ಕೊಟ್ಟಿದ್ದು..ಇಂದಿನ ದಿನಗಳ ಲೆಕ್ಕಾಚಾರಕ್ಕೆ ಹೋಲಿಸಿದರೆ ಖಂಡಿತಾ ಇದು ಒಂದಾನೊಂದು ಕಾಲದ ಮಾತು ಎಂಬಂತೆಯೇ ಅನಿಸುತ್ತದೆ. ಒಬ್ಬ ವ್ಯಕ್ತಿ ಇಷ್ಟೆಲ್ಲ ಮಾಡಲು ಸಾಧ್ಯವೇ ಎಂದೆನಿಸುತ್ತದೆ.
Shambala: ಕಲ್ಕಿಯ ಶಾಂಬಾಲ ನೇಪಾಳದ ಅತ್ಯುತ್ತಮ ಚಿತ್ರವಾಗಿ ಆಸ್ಕರ್ ರೇಸ್‌ಗೆ
ಏನೂ ಮಾಡದೇ ಒಟ್ಟೂ ಬದುಕು ನಡೆಸುವ ಮಂದಿಗೆ ಉತ್ಸಾಹವೆಂಬುದೇ ಅಲ್ಪಾಯುಷಿ. ಆದರೆ ಉತ್ಸಾಹವನ್ನೇ ಮೊಗೆದು ತುಂಬಿಕೊಂಡವರಿಗೆ ಆಯುಷ್ಯವೆ ಅಲ್ಪ ಆಗಿ ಬಿಡುತ್ತದೆ. ಅದೇ ಅತ್ಯಂತ ನೋವಿನ ಸಂಗತಿ. ಶಂಕರನಾಗ್ ಅಂಥ ಉತ್ಸಾಹಿ. ಆಕ್ಸಿಡೆಂಟ್ ಸಿನಿಮಾವೂ ಆಯಿತು, ಅವರ ಬದುಕನ್ನು ಕಥೆಯನ್ನಾಗಿಸಿಯೂ ಬಿಟ್ಟಿತು !
ಒಳ್ಳೆಯದನ್ನು ಕೊಡಬೇಕು, ಒಳ್ಳೆಯದನ್ನು ಮಾಡಬೇಕು, ಒಳ್ಳೆಯ ಅಭಿರುಚಿ ನಿರ್ಮಿಸಬೇಕು ಎಂದೆಲ್ಲ ಯೋಚಿಸುತ್ತಿದ್ದ ಶಂಕರನಾಗ್ ಈಗ ಇದ್ದಿದ್ದರೆ ಎಂದೋ ಪಾನ್ ಇಂಡಿಯಾ ಕಲ್ಪನೆಗಳು ಕೊಚ್ಚಿ ಹೋಗುತ್ತಿದ್ದವು. ದೊಡ್ಡದಾಗಿ ಮಾಡಬೇಕೆಂಬ ಕನಸನ್ನು ಪ್ರತಿ ಕ್ಷಣವೂ ಕಾಣುತ್ತಿದ್ದವರು ಶಂಕರನಾಗ್. ಹೀಗಾಗಿಯೇ ಹೇಳಿದ್ದು. ಒಂದುವೇಳೆ ಅವರು ಇದ್ದಿದ್ದರೆ ಹೀಗೆ ಲಾಂಗು, ಕ್ರೌರ್ಯ, ಅದೇ ಶ್ರೇಷ್ಠತೆ ಎಂದುಕೊಳ್ಳುವ ವ್ಯಸನ ಯಾವುದೂ ಇರುತ್ತಿರಲಿಲ್ಲವೇನೋ? ಹಾಗೇನಿಲ್ಲ, ಅವರು ಇದ್ದಿದ್ದರೂ ಈ ಉಸುಕಿನೊಳಗೆ ಹೂತು ಹೋಗುತ್ತಿದ್ದರು ಎಂದು ಹೇಳುವವರು ಇದ್ದೇ ಇರುತ್ತಾರೆ. ಆದರೆ ಬಹುಶಃ ಹಾಗೆ ಆಗುತ್ತಿರಲಿಲ್ಲ.
ಅಟೋ ರಾಜರಾಗಿ ಇಂದಿಗೂ ಮೆರೆಯುತ್ತಿರುವ ಶಂಕರನಾಗ್ ಜನಸಾಮಾನ್ಯರ ಹೀರೋ ಸಹ. ನೋಡಿ ಸ್ವಾಮಿ ನಾವಿರೋದೇ ಹೀಗೆ ಎಂದು ಹೇಳಿದ, ಬದುಕಿದ ಹೀರೋ ಇಂದು ಯಾರಾದರೂ ಸಿಕ್ಕರೆ ಹುಡುಕಿಕೊಡಿ.