Wednesday, February 5, 2025
spot_img
More

    Latest Posts

    ಕಾನ್ ಸಿನಿಮೋತ್ಸವದಲ್ಲಿ ಮೂರು ಭಾರತೀಯರ ಚಿತ್ರಗಳು

    ಫ್ರಾನ್ಸ್‌ ನ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಮೂರು ಭಾರತೀಯ ಸಿನಿಮಾಗಳು ಹಾಗೂ ಭಾರತೀಯರ ಸಿನಿಮಾಗಳು ಪ್ರಮುಖ ವಿಭಾಗಗಳಲ್ಲಿ ಪ್ರದರ್ಶಿತವಾಗುತ್ತಿರುವುದು ವಿಶೇಷ. ಮುಖ್ಯವಾಗಿ ಮೂವತ್ತು ವರ್ಷಗಳ ಬಳಿಕ ಕಾನ್‌ ನ ಪ್ರತಿಷ್ಠಿತ ಪ್ರಶಸ್ತಿ ಪಾಲ್ಮೆದೋರ್‌ ಗೆ ಭಾರತೀಯ ಸಿನಿಮಾ ಸೆಣಸುತ್ತಿರುವುದು ಹೆಮ್ಮೆಯ ಸಂಗತಿ. ಭಾರತೀಯ ಚಿತ್ರಕ್ಕೆ ಕಾನ್‌ ಕಿರೀಟ ಬರಲಿ ಎಂಬುದು ಸದಾಶಯದ ಮಾತು.

    All We Imagine as Light
    All We Imagine as Light

    ಪುಣೆ ಎಫ್‌ ಟಿ ಐಐ ನ ಪ್ರತಿಭೆ ಪಾಯಲ್‌ ಕಪಾಡಿಯಾರ ʼಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ʼ ಚಿತ್ರ ಹಲವು ಪ್ರತಿಷ್ಠಿತ ವಿಶ್ವದ ನಿರ್ದೇಶಕರ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಇದಲ್ಲದೇ ಅನ್‌ ಸರ್ಟೈನ್‌ ರಿಗಾರ್ಡ್‌ ನ ವಿಭಾಗದಲ್ಲೇ ಭಾರತೀಯ ಮೂಲದ ಸಂಧ್ಯಾ ಸೂರಿಯವರ ʼಸಂತೋಷ್‌ʼ ಚಿತ್ರ ಪ್ರದರ್ಶಿತವಾಗಲಿದೆ. ಸಂಧ್ಯಾ ಸೂರಿ ಸಹ ಅತ್ಯುತ್ತಮ ಕಿರುಚಿತ್ರಗಳಿಗೆ ಹೆಸರುವಾಸಿಯಾಗಿದ್ದು, ದಿ ಫೀಲ್ಡ್‌, ಐ ಫಾರ್‌ ಇಂಡಿಯಾ, ಅರೌಂಡ್‌ ಇಂಡಿಯಾ ವಿಥ್‌ ಅ ಮೂವಿ ಕ್ಯಾಮೆರಾ ಚಿತ್ರಗಳು ನಿರ್ಮಿತವಾಗಿವೆ.

    ಇದಲ್ಲದೇ ಬಲ್ಗೇರಿಯನ್‌ ನಿರ್ದೇಶಕ ಕೊಂಟಾಸ್ಟಿನ್‌ ಬೊಜನೊವ್‌ ನಿರ್ದೇಶನದ ದಿ ಶೇಮ್‌ ಲೆಸ್‌ ಚಿತ್ರದಲ್ಲಿ ಭಾರತದ ಒಮರ್‌ ಶೆಟ್ಟಿ ಹಾಗೂ ಅನಸೂಯಾ ಸೇನ್‌ ಗುಪ್ತಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

    ಮಾರ್ಚ್‌ 14 ರಿಂದ 25 ರವರೆಗೆ ಚಿತ್ರೋತ್ಸವ ನಡೆಯಲಿದ್ದು, ಭರ್ಜರಿ ಸಿದ್ಧತೆ ನಡೆದಿದೆ.‌ ಮೂವತ್ತು ವರ್ಷಗಳ ಹಿಂದೆ ಮಲಯಾಳಂ ಚಿತ್ರನಿರ್ದೇಶಕ ಷಾಜಿ ಎನ್‌ ಕರುಣ್‌ ಅವರ “ಸ್ವಾಹಂʼ ಚಿತ್ರವು 1994 ರಲ್ಲಿ ಇದೇ ಸ್ಥಾನವನ್ನು ತಲುಪಿತ್ತು. ಭಾರತೀಯ ಚಿತ್ರರಂಗದ ದಿಗ್ಗಜರಾದ ಸತ್ಯಜಿತ್‌ ರೇ, ಮೃಣಾಲ್‌ ಸೇನ್‌ ರ ಪರಂಪರೆಯನ್ನು ಷಾಜಿ ಮುಂದುವರಿಸಿದ್ದರು. ಈಗ ಆ ಅವಕಾಶ ಪಾಯಲ್‌ ಅವರಿಗೆ ದೊರೆತಿದೆ.

    ಮುಂಬಯಿ ಮೂಲದ ಪಾಯಲ್‌ ಈಗಾಗಲೇ ಸ್ವತಂತ್ರ ಸಿನಿಮಾ ನಿರ್ದೇಶನದಲ್ಲಿ ಹೆಸರು ಮಾಡಿದ್ದಾರೆ. ಅವರ ಇತ್ತೀಚಿನ ಕಿರುಚಿತ ಎ ನೈಟ್‌ ಆಫ್‌ ನೋಯಿಂಗ್‌ ನಥಿಂಗ್‌ʼ ಚಿತ್ರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿತ್ತು. ಕಾನ್‌ ನ ಡೈರೆಕ್ಟರ್ಸ್‌ ಫೋರ್ಟ್‌ ನೈಟ್‌ ವಿಭಾಗದಲ್ಲಿ ಪ್ರಶಸ್ತಿ ಗಳಿಸಿತ್ತು.

    ಇವುಗಳನ್ನೂ ಓದಿ : ದ ಸಿಕ್ಸ್ತ್ ಸೆನ್ಸ್ : ದ್ವಿಸಂಧಾನ ನಿರೂಪಣೆಯ ವಿಶಿಷ್ಟ ಚಿತ್ರ

    ಈಗ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಚಿತ್ರದ ಮೂಲಕ ಬದಲಾಗುತ್ತಿರುವ ಭಾರತೀಯ ಸಮಾಜದಲ್ಲಿ ಯುವಜನರು ಎದುರಿಸುತ್ತಿರುವ ಸಂಕೀರ್ಣತೆಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ.  ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿರುವ ಚಿತ್ರ ಇದಾಗಿದ್ದು, ಕೇರಳದ ಇಬ್ಬರು ದಾದಿಯರ ಮೂಲಕ ಕಥೆ ಹೇಳಲು ಪ್ರಯತ್ನಿಸಿದ್ದಾರೆ. ಕಣಿ ಕಸ್ರುತಿ ಹಾಗೂ ದಿವ್ಯ ಪ್ರಭಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

    1994 ರಲ್ಲಿ ಷಾಜಿ ಎನ್.‌ ಕರುಣ್‌ ಅವರ ಸ್ವಾಹಂ ಪ್ರಶಸ್ತಿಯ ಸೆಣಸಿಗೆ ಆಯ್ಕೆಯಾದಾಗ ಭಾರತೀಯ ಚಿತ್ರದ ಸಾಧನೆಯ ಜೊತೆಗೆ ಪ್ರಶಸ್ತಿ ಗಿಟ್ಟಿಸಿಕೊಳ್ಳಬಹುದೆಂಬ ನಿರೀಕ್ಷೆ ಹುಟ್ಟಿತ್ತು. ಆಗ ಷಾಜಿಯೊಂದಿಗೆ ಪ್ರಶಸ್ತಿಗೆ ಪೊಲಿಷ್‌ ಚಿತ್ರ ನಿರ್ದೇಶಕ ಕ್ರಿಸ್ತೋಫ್‌ ಕಿಲೋಸ್ಕಿ ತಮ್ಮ ಥ್ರಿಈ ಕಲರ್ಸ್‌ ; ರೆಡ್‌ ಚಿತ್ರದೊಂದಿಗೆ, ಇರಾನಿಯನ್‌ ಚಿತ್ರ ನಿರ್ದೇಶಕ ಅಬ್ಬಾಸ್‌ ಕಿರೋಸ್ತಮಿ ಆಲಿವ್‌ ಟ್ರೀಸ್‌ ನೊಂದಿಗೆ, ಚೀನಾದ ನಿರ್ದೇಶಕ ಝಾಂಗ್‌ ಯೂಮು ಅವರು ಟು ಲಿವ್‌ ಚಿತ್ರದೊಂದಿಗೆ ಪ್ರಶಸ್ತಿಗೆ ಸೆಣಸುತ್ತಿದ್ದರು. ಮೂರೂ ಚಿತ್ರಗಳು ಅದ್ಭುತವಾದವುಗಳೇ. ಇದರ ಮಧ್ಯೆ ಅಮೆರಿಕದ ಕ್ವಿಂಟಿನ್‌ ಟರಂಟಿನೊ ತಮ್ಮ ಚೊಚ್ಚಲ ಚಿತ್ರ ಪಲ್ಪ್‌ ಫಿಕ್ಷನ್‌ ಮೂಲಕ ಪ್ರಶಸ್ತಿ ಬಾಚಿಕೊಂಡು ಹೋಗಿದ್ದರು. ಪಲ್ಪ್‌ ಫಿಕ್ಷನ್‌ ಸಹ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿತ್ತು.

    ಈ ಬಾರಿಯೂ ಪಾಯಲ್‌ ಕಪಾಡಿಯರ ಹಾದಿ ಸುಗಮವಾಗಿಲ್ಲ. ಚೀನಾದ ಜಿಯಾ ಝಾಂಗ್ಕೆ, ಫ್ರಾನ್ಸ್‌ ನ ಜಾಖ್ವೆಸ್‌ ಅಡಿಯಾರ್ಡ್‌, ಇಟಲಿಯ ಪೊಲೊ ಸೊರೆಂಟಿನೊ, ಅಮೆರಿಕದ ಫ್ರಾನ್ಸಿಸ್‌ ಫೋರ್ಡ್‌ ಕೊಪ್ಪೊಲ, ಪೌಲ್‌ ಸ್ರೆಡರ್‌, ಕೆನಡಾದ ಡೇವಿಡ್‌ ಕ್ರೋನ್‌ ಬರ್ಗ್‌ರಂಥವರು ಪ್ರಶಸ್ತಿಗೆ ಸೆಣಸುತ್ತಿದ್ದಾರೆ.

    ಇವುಗಳನ್ನೂ ಓದಿ : ಅಕ್ಟೋಬರ್‌ 2 ರಿಂದ ಬೂಸಾನ್‌ ಚಿತ್ರೋತ್ಸವ ಆರಂಭ

    ಸತ್ಯಜಿತ್‌ ರೇ ಅವರ ಪಥೇರ್‌ ಪಾಂಚಾಲಿ ಸಹ 1956 ರಲ್ಲಿ ಕಾನ್‌ ಪರಿಣಿತರ ಹುಬ್ಬೇರುವಂತೆ ಮಾಡಿತ್ತಾದರೂ ಪಾಲ್ಮೇದೊರ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಭಾರತೀಯ ಚಿತ್ರಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಇನ್ನೂ ಸಂದಾಯವಾಗಬೇಕಿದೆ.

    omar shetty and anasuya sengupta in the shameless movie

    ಪಾಯಲ್‌ ಕಪಾಡಿಯಾ ಅವರ ಕಿರುಚಿತ್ರ ಆಫ್ಟರ್‌ ನೂನ್‌ ಕ್ಲೌಡ್ಸ್‌ 2017 ರಲ್ಲಿ ಕಾನ್‌ ಸಿನಿಮೋತ್ಸವದ ಫಿಲ್ಮ್‌ ಸ್ಕೂಲ್‌ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾಗಿತ್ತು.

    ಈ ಬಾರಿಯೂ ತಮ್ಮ ಸಿನಿಮಾದ ಮೂಲಕ ಹೊಸದೇನನ್ನೋ ಹೇಳಲು ಹೊರಟಿರುವ ಪಾಯಲ್‌, ಮುಂಬಯಿನ ಆಸ್ಪತ್ರೆಯೊಂದರಲ್ಲಿನ ಎರಡು ಕೇರಳ ಮೂಲದ ದಾದಿಯರ ಕಥೆಯ ಮೂಲಕ ದೇಶದಲ್ಲಿನ ಲಿಂಗ ಹಾಗೂ ಸಾಂಸ್ಕೃತಿಕ ರಾಜಕಾರಣದ ಎಳೆಗಳನ್ನು ಶೋಧಿಸಲು ಪ್ರಯತ್ನಿಸಿದ್ದಾರೆ. ಎಲ್ಲ ದಿಗ್ಗಜರನ್ನು ಮೀರಿ ಭಾರತೀಯ ಸಿನಿಮಾ ಕಾನ್‌ ಕಿರೀಟವನ್ನು ಧರಿಸಿತೇ ಕಾದು ನೋಡಬೇಕಿದೆ.

    Latest Posts

    spot_imgspot_img

    Don't Miss