ಕಾನ್ಸ್ ಚಿತ್ರೋತ್ಸವದ ಮೇಳ ಮೊನ್ನೆಗೆ ಮುಗಿಯಿತು. ಅಮೆರಿಕದ ಅನೋರಾ ಚಿತ್ರಕ್ಕೆ ಪಾಮ್ ದೋರ್ ಪ್ರಶಸ್ತಿ ಸಂದಾಯವಾದರೂ ಈ ಬಾರಿ ಭಾರತದ ಬೆಳೆಯೇನೂ ಕಡಿಮೆ ಇರಲಿಲ್ಲ. ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಪಾಯಲ್ ಕಪಾಡಿಯ ಅವರ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಸಿನಿಮಾ ಪಡೆದುಕೊಂಡಿತು. ಇದು ದಾಖಲೆ. ಇದುವರೆಗೂ ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ಗಳಿಸಿರಲಿಲ್ಲ. ಅನ್ ಸರ್ಟೇನ್ ರಿಗಾರ್ಡ್ ವಿಭಾಗದಲ್ಲಿ ದಿ ಶೇಮ್ ಲೆಸ್ ಚಿತ್ರದ ನಟನೆಗಾಗಿ ಅನಸೂಯ ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಇದೂ ದಾಖಲೆ. ಇದುವರೆಗೆ ಕಾನ್ಸ್ ನಲ್ಲಿ ನಟನೆಗೆ ಪ್ರಶಸ್ತಿಯನ್ನು ಭಾರತೀಯ ಕಲಾವಿದರು ಪಡೆದಿರಲಿಲ್ಲ. ಇಲ್ಲಿಗೆ ಮುಗಿಯಲಿಲ್ಲ ದಾಖಲೆಯ ಕಥೆ.
ಲಾ ಸಿನೆಫ್ ವಿಭಾಗದಲ್ಲಿ ಮೈಸೂರಿನ ಚಿದಾನಂದ ಎಸ್ ನಾಯಕ್ ಅವರ ಕಿರುಚಿತ್ರ ಸನ್ ಫ್ಲವರ್ಸ್ ವರ್ ದಿ ಫರ್ಸ್ಟ್ ಟು ನೋ ಚಿತ್ರವು ಪ್ರಥಮ ಪ್ರಶಸ್ತಿ ಪಡೆಯಿತು. ಇದರೊಂದಿಗೆ ಭಾರತ ಮೂಲದ ಲಂಡನ್ ನಲ್ಲಿ ಕಲಿಯುತ್ತಿರುವ ಮಾನ್ಸಿ ಮಹೇಶ್ವರಿಯವರ ಬನ್ನಿಹುಡ್ ಸಿನಿಮಾ ಇದೇ ವಿಭಾಗದಲ್ಲಿ ತೃತೀಯ ಪುರಸ್ಕಾರ ಪಡೆಯಿತು. ಹಾಗಾಗಿ ಈ ಬಾರಿ ಭಾರತೀಯ ಸಿನಿಮಾ ಪ್ರತಿಭೆಗಳು ಕಾನ್ಸ್ ಆಕಾಶದಲ್ಲಿ ಬರೀ ಮಿನುಗಲಿಲ್ಲ, ಕೋರೈಸಿದವು.
ಕಾನ್ಸ್ ಚಿತ್ರೋತ್ಸವದಲ್ಲಿ ಬಹಳ ಮುಖ್ಯವಾದ ಪ್ರಶಸ್ತಿಯೆಂದರೆ ಪಾಮ್ ದೋರ್. ಸಮಗ್ರ ರೀತಿಯಲ್ಲಿ ಅತ್ಯುತ್ತಮ ಎನಿಸುವ ಚಿತ್ರಕ್ಕೆ ನೀಡುವ ಪ್ರಶಸ್ತಿ. ಇತ್ತೀಚಿನ ಐದು ವರ್ಷಗಳಲ್ಲಿ ಬಂದಿರುವ ಐದು ಪಾಮ್ ದೋರ್ ಪ್ರಶಸ್ತಿ ಪಡೆದ ಚಿತ್ರಗಳ ಬಗ್ಗೆ ಸಣ್ಣದೊಂದು ವಿವರ ಇಲ್ಲಿದೆ. ಓದಿ, ಸಿನಿಮಾವನ್ನೂ ವೀಕ್ಷಿಸಿ
ಅನೋರಾ (Anora)
2024 ರ ಸಿನಿಮಾ ಅನೋರಾ. ಸೀನ್ ಬೇಕರ್ (Sean Baker) ನಿರ್ದೇಶಿಸಿರುವ ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಪಾಲ್ಮೇದೋರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದೂ ಸಹ ಮಾನವ ಸಂಬಂಧಗಳ ಸುತ್ತ ಹರಿದಾಡುವ ಕಥೆ.
ಆನಿ ನ್ಯೂಯಾರ್ಕ್ ನಗರದ ಸಮುದ್ರ ತೀರದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿರುವವಳು. ಒಮ್ಮೆ ರಷ್ಯಾದ ಶ್ರೀಮಂತ ಹಾಗೂ ಪ್ರಭಾವಿ ಮಗ ವಾನ್ಯಾನೊಂದಿಗೆ ಸ್ನೇಹವಾಗುತ್ತದೆ. ಇಬ್ಬರೂ ರಹಸ್ಯವಾಗಿ ದಿಢೀರನೇ ಮದುವೆಯಾಗುತ್ತಾರೆ. ಈ ಸುದ್ದಿ ತಿಳಿದ ರಷ್ಯಾದಲ್ಲಿದ್ದ ವಾನ್ಯಾನ ಅಪ್ಪ- ಅಮ್ಮ ಈ ಮದುವೆಯನ್ನು ಅಸಿಂಧುಗೊಳಿಸಲು ನ್ಯೂಯಾರ್ಕ್ ಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ನಡೆಯುವ ಕಥೆ.
ಅನಾಟಮಿ ಆಫ್ ಎ ಫಾಲ್ (Anatomy of a Fall)
2023 ರ ಈ ಸಿನಿಮಾ ಜಸ್ಟೀನ್ ಟ್ರೆಟ್ (Justine Traite) ನಿರ್ದೇಶಿಸಿರುವಂಥದ್ದು. ಸಾಂಡ್ರಾ ಹುಲರ್ (Sandra Huiler ) ಮತ್ತು ಸ್ವಾನ್ ಅರಿಯುದ್ (Swan ariyud ) ಹಾಗೂ ಮಿಲೊ ಮಚಾದೊ ಗ್ರಾನರ್ (Milo Machado-Graner) ಪ್ರಧಾನವಾಗಿ ನಟಿಸಿರುವ ಚಿತ್ರ. ಸಾಂಡ್ರಾರ ಅಭಿನಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾದ ಚಿತ್ರವಿದು. ಹಾಗೆಯೇ ಮಿಲೋ ಸಹ ಈ ಚಿತ್ರದ ಬಳಿಕ ಬಹಳ ಜನಪ್ರಿಯರಾದರು.
Cannes 2024 : ಪಾಯಲ್ ಕಪಾಡಿಯರ ಚಲನಚಿತ್ರಕ್ಕೆ ಗ್ರ್ಯಾಂಡ್ ಪ್ರಿಕ್ಸ್ ಪುರಸ್ಕಾರ
ಇದೊಂದು ಕೋರ್ಟ್ ರೂಮಿನ ಕಥೆಯೂ ಹೌದು. ಲೇಖಕಿ ಸಾಂಡ್ರಾ ರ ಪತಿ ಸ್ಯಾಮುಯೆಲ್ ಒಂದು ದಿನ ಮಹಡಿಯಿಂದ ಕೆಳಬಿದ್ದು ಸಾಯುತ್ತಾನೆ. ಸಾವಿನ ಬಗ್ಗೆ ತನಿಖೆ ಆರಂಭವಾದಾಗ ಅದು ಅಸಹಜ ಸಾವೆನ್ನುವ ನೆಲೆಗೆ ಬಂದು ನಿಲ್ಲುತ್ತದೆ. ಅವನು ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಯಾರಾದರೂ ಕೊಂದರೇ? ಸಾಂಡ್ರಾ ಕೊಂದಳೇ ಎಂಬುವುದನ್ನು ತಿಳಿಯುವುದೇ ಕಷ್ಟವಾಗುತ್ತದೆ. ಬದುಕಿನ ಬಗ್ಗೆ ಪರಸ್ಪರ ಪತಿ ಮತ್ತು ಪತ್ನಿ ಹೊಂದಿದ್ದ ಭಿನ್ನ ಅಭಿಪ್ರಾಯವೇ ಈ ದುರಂತಕ್ಕೆ ಕರೆದೊಯ್ಯಿತೇ? ಕೋರ್ಟ್ ನಲ್ಲಿ ನಾನು ಕೊಂದಿಲ್ಲ, ನಾನು ಅಂಥವಳಲ್ಲ ಎಂಬುದನ್ನು ಸಾಬೀತು ಪಡಿಸಲು ಸಾಂಡ್ರಾ ಸಾಹಸ ಪಡುತ್ತಾಳೆ. ಈ ಮಧ್ಯೆ ಅವಳ ಹನ್ನೊಂದು ವರ್ಷದ ಪಾರ್ಶ್ವ ದೃಷ್ಟಿ ದೋಷವುಳ್ಳ ಮಗ ಡೇನಿಯಲ್ ಕೋರ್ಟ್ ಮತ್ತು ಮನೆ ನಡುವೆ ಸಿಕ್ಕಿಹಾಕಿಕೊಳ್ಳುತ್ತಾನೆ. ಒಂದು ಹಂತದಲ್ಲಿ ಸಾವಿನ ಅನುಮಾನ ಮಗ ಮತ್ತು ತಾಯಿ ನಡುವಿನ ಸಂಬಂಧಕ್ಕೂ ಅಡ್ಡಿಯಾಗುತ್ತದೆ.
ಬಹಳ ಸರಳವೆನ್ನಿಸುವ ಅತ್ಯಂತ ಸಂಕೀರ್ಣವುಳ್ಳ ಕಥಾವಸ್ತುವನ್ನು ಜಸ್ಟೀನ್ ಸಮರ್ಥವಾಗಿ ನಿರೂಪಿಸಿದ್ದಾರೆ. ಇದಕ್ಕೆ ಮೆರುಗು ಇಡುವಂತೆ ಸಾಂಡ್ರಾ ಹಾಗೂ ಡೇನಿಯಲ್ ಅಭಿನಯಿಸಿದ್ದಾರೆ. ವ್ಯವಸ್ಥೆ, ಕಾನೂನು ಎಲ್ಲದರ ಮಧ್ಯೆ ಮಾನವ ಸಂಬಂಧವನ್ನು ಉಳಿಸಿಕೊಳ್ಳಲು ಪಡಬೇಕಾದ ಸಾಹಸವನ್ನು ಈ ಸಿನಿಮಾ ಹೇಳಬಲ್ಲದು. 2023 ರಲ್ಲಿ ನಿರ್ಮಾಣವಾದದ್ದು. ಅದೇ ವರ್ಷ ಆಗಸ್ಟ್ ನಲ್ಲಿ ಬಿಡುಗಡೆಯಾಗಿ ಹೆಚ್ಚಿನ ಗಳಿಕೆ ಗಳಿಸಿತು. ಆಸ್ಕರ್ ನಲ್ಲೂ ಪ್ರಶಸ್ತಿಗೆ ಸೆಣಸಿದ್ದ ಚಿತ್ರವಿದು. ಕೊನೆಗೆ ಒರಿಜಿನಲ್ ಸ್ಕ್ರೀನ್ ಪ್ಲೇಗೆ ಪ್ರಶಸ್ತಿ ಪಡೆಯಿತು.
ಟ್ರೈಂಗಾಲ್ ಆಫ್ ಸ್ಯಾಡ್ ನೆಸ್ (Triangle Of Sadness)
2022 ರ ಸಿನಿಮಾ. ರುಬೆನ್ ಒಸ್ಟುಲಂಡ್ (Ruben Östlund ) ನಿರ್ದೇಶಿಸಿದ ಚಿತ್ರ. ಇದೂ ಒಂದು ಬಗೆಯ ವಿಡಂಬನಾತ್ಮಕ ಚಿತ್ರ. ಸೆಲೆಬ್ರಿಟಿ ಮಾಡೆಲ್ ದಂಪತಿ (ಕರ್ಲ್ ಮತ್ತು ಯಾಯಾ) ಅವರಿಗೆ ಒಂದು ವೈಭವೋಪೇತ ಹಡಗಿಗೆ ಅದರ ಸ್ವಲ್ಪ ಮತಿಭ್ರಮಣೆಯ ಕ್ಯಾಪ್ಟನ್ ಆಹ್ವಾನ ನೀಡುತ್ತಾನೆ. ಅದರಂತೆ ದಂಪತಿ ತೆರಳುತ್ತಾರೆ. ಆ ನಂತರ ನಡೆಯುವ ಘಟನಾವಳಿಗಳು ಈ ಸಿರಿವಂತಿಕೆ, ಆಡಂಬರ ಇತ್ಯಾದಿಗಳ ಮಧ್ಯೆ ಜೀವ ದೊಡ್ಡದು ಎನ್ನುವುದನ್ನು ತೋರಿಸುತ್ತದೆ. ಮುಳುಗುವ ಹಡಗಿನಲ್ಲಿ ಬದುಕಿ ಬಂದವನೇ ದೊಡ್ಡಪ್ಪನಾಗುತ್ತಾನೆ.
ಟೈಟಾನೆ (Titane)
2021 ರ ಚಲನಚಿತ್ರ. ಜುಲಿಯಾ ಡಕೊರ್ನೊವ (Julia Ducournau ) ನಿರ್ದೇಶಿಸಿದ ಚಿತ್ರ. ಬಯೋಲಾಜಿಕಲ್ ಹಾರರ್ ಸೈಕಾಲಜಿಕಲ್ ಸಿನಿಮಾವಿದು. ಅಲೆಕ್ಸಿಯಾ ಸಣ್ಣವಳಿರುವಾಗ ಅಪ್ಪನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಘಟಿಸುತ್ತದೆ. ಆಗ ಅವಳು ಗಂಭೀರವಾಗಿ ಗಾಯಗೊಳ್ಳುತ್ತಾಳೆ. ಅವಳ ತಲೆ ಬುರುಡೆಯಲ್ಲಿನ ಮೂಳೆಗೆ ಪೆಟ್ಟಾಗುತ್ತದೆ. ಆ ಬಳಿಕ ಟೈಟಾನಿಯಂ ಪ್ಲೇಟ್ ನ್ನು ಜೋಡಿಸಲಾಗುತ್ತದೆ. ಹೀಗೆ ದಿನ ಕಳೆದು ಅವಳು ಪ್ರಾಪ್ತ ವಯಸ್ಸಿಗೆ ಬರುತ್ತಾಳೆ. ಅವಳು ಮೋಟಾರ್ ಷೋಗಳಲ್ಲಿನ ಷೋ ಗರ್ಲ್ ಅಗಿ ಕೆಲಸ ಮಾಡುತ್ತಿರುತ್ತಾಳೆ. ನಂತರದ ಯಾರಿಗೂ ಗೊತ್ತಿರದ ಬದುಕು ಅನಾವರಣಗೊಳ್ಳುತ್ತದೆ.
2020 ರಲ್ಲಿ ಕೋವಿಡ್ ಕಾರಣದಿಂದ ಕಾನ್ಸ್ ಚಿತ್ರೋತ್ಸವ ನಡೆದಿರಲಿಲ್ಲ.
ಪ್ಯಾರಾಸೈಟ್ (Parasite)
2019 ರ ಕೊರಿಯನ್ ಸಿನಿಮಾ. ಬಾಂಗ್ ಜೂನ್ ಹೂ (Boong Joon Hoo) ಇದರ ನಿರ್ದೇಶಕ. ಆತಿಯಾಸೆ, ಬಡ ಹಾಗೂ ಶ್ರೀಮಂತ ವರ್ಗದ ನಡುವಿನ ತಾರತಮ್ಯ, ಬಡತನ, ಸಿರಿವಂತಿಕೆ, ಕೆಲವರ ಆಡಂಬರ, ಇನ್ನು ಕೆಲವರ ಅಗತ್ಯ-ಹೀಗೆ ಹತ್ತಾರು ಸಣ್ಣ ಸಣ್ಣದೆನಿಸುವ ಸೂಕ್ಷ್ಮ ಸಂಗತಿಗಳನ್ನು ನಾಜೂಕಾಗಿ ಹೆಣೆದ ಚಿತ್ರವಿದು. ಹೇಗೆ ಒಂದು ಬಳ್ಳಿಯು ಮರವನ್ನು ಆಶ್ರಯಿಸಿ ಪರಾವಲಂಬಿಯಾಗುತ್ತದೋ ಅದೇ ರೀತಿಯೇ ಇಲ್ಲಿಯೂ ಪರಾವಲಂಬಿತನವನ್ನೇ ಉಲ್ಲೇಖಿಸಿದೆ. ಮತ್ತೊಂದನ್ನು ನಂಬಿಯೇ ಬದುಕುವ ಹುಳಗಳಂತೆ ಎಂದು ಋಣಾತ್ಮಕ ನೆಲೆಯಲ್ಲಿ ಅರ್ಥೈಸಬಹುದಾದರೂ, ಬದುಕಿನ ಅನಿವಾರ್ಯತೆಗಳನ್ನು ಯಾವ ಬಗೆಯಾದ ಅವಲಂಬಿತನವನ್ನು ನಿರ್ಮಿಸುತ್ತದೆ ಎಂಬುದನ್ನು ಹೇಳಲು ಪ್ರಯತ್ನಿಸಿದ ಚಿತ್ರ.
ಅತ್ಯುತ್ತಮ ಚಿತ್ರವೆಂಬುದೂ ಸೇರಿದಂತೆ ನಾಲ್ಕು ಆಸ್ಕರ್, ಪಾಲ್ಮೆದೋರ್ ಅಲ್ಲದೇ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಚಲನಚಿತ್ರವಿದು. ಬಾಕ್ಸಾಫೀಸಿನಲ್ಲೂ ದೊಡ್ಡ ಕ್ರಾಂತಿ ಮಾಡಿದ ಚಲನಚಿತ್ರ.