ಶರಣ್ ಅಭಿನಯದ “ಛೂ ಮಂತರ್” ಚಿತ್ರದ ಬಿಡುಗಡೆ ಮುಂದೂಡಲಾಗಿದೆ. ನವನೀತ್ ನಿರ್ದೇಶಿಸಿರುವ ಚಿತ್ರವಿದು. ಈ ಮೊದಲ ಮೇ 10 ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಸದ್ಯಕ್ಕೆ ಮುಂದೂಡಲಾಗಿದೆ ಎಂದು ಹೇಳಿರುವ ಚಿತ್ರತಂಡ ಹೊಸ ದಿನಾಂಕ ಶೀಘ್ರವೇ ಪ್ರಕಟಿಸುವ ನಿರೀಕ್ಷೆಯಿದೆ.
ಚಿತ್ರವನ್ನು ವೀಕ್ಷಿಸಿರುವ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ವಿತರಕರು, ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಹಾರರ್ ಚಿತ್ರ, ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರಂತೆ.
ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತಯಾರಾಗುತ್ತಿರುವ ಚಿತ್ರವನ್ನು ನಿರ್ಮಿಸಿರುವವರು ಮಾನಸ ತರುಣ್ ಹಾಗೂ ತರುಣ್ ಶಿವಪ್ಪ.
ಈಗಾಗಲೇ ಟೀಸರ್, ಟ್ರೇಲರ್ ಬಿಡುಗಡೆಯಾಗಿದ್ದು, ಜನಪ್ರಿಯವಾಗಿದೆ. ತಾರಾಬಳಗದಲ್ಲಿ ಶರಣ್ ಜತೆ ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದವರಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ “ಛೂ ಮಂತರ್” ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಅವರ ಹಿನ್ನೆಲೆ ಸಂಗೀತವಿದೆ.
ಇವುಗಳನ್ನೂ ಓದಿ : ಬೆಟ್ಟದ ಜೀವ : ನಗರಗಳು ತುಂಬಿಕೊಳ್ಳುವ ಹೊತ್ತಿನಲ್ಲಿ ಹಳ್ಳಿಯ ಚಿತ್ರಣ
**
ಬಿಎಂ ಗಿರಿರಾಜರ ಹೊಸ ಚಿತ್ರದಲ್ಲಿ ರಾಗಿಣಿ ದ್ವಿವೇದಿ
ಬಿ.ಎಂ.ಗಿರಿರಾಜ್ ಹೊಸ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಜಟ್ಟ, ಮೈತ್ರಿ ಚಿತ್ರಗಳ ಮೂಲಕ ಜನಪ್ರಿಯರಾದ ಗಿರಿರಾಜ್ ರ ಹೊಸ ಚಿತ್ರಕ್ಕೆ ನಾಯಕಿ ರಾಗಿಣಿ ದ್ವಿವೇದಿ.
ಚಿತ್ರದ ನಿರ್ಮಾಪಕರು ರಾಮಕೃಷ್ಣ ನಿಗಾಡಿ. ಇತ್ತೀಚಿಗೆ ಚಿತ್ರದ ಮೊದಲ ನೋಟ ಬಿಡುಗಡೆಯಾಯಿತು. ಚಿತ್ರಸಂತೆ ಪತ್ರಿಕೆಯ ಸಂಪಾದಕ ಗಿರೀಶ್ ವಿ ಗೌಡರ ನೇತೃತ್ವದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.
“ಕೌಂಡಿನ್ಯ” ಅವರು ನನ್ನ ನೆಚ್ಚಿನ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ರಾಗಿಣಿ ಅವರ ಜೊತೆ ಇದು ನನ್ನ ಮೊದಲ ಸಿನಿಮಾ ಎಂದರು ನಿರ್ದೇಶಕ ಬಿ.ಎಂ.ಗಿರಿರಾಜ್.
ಚಿತ್ರದ ಹೆಸರು ಶೀಘ್ರವೇ ಪ್ರಕಟವಾಗಲಿದೆ. ಮೇ 24 ರಂದು ರಾಗಿಣಿಯವರ ಹುಟ್ಟು ಹಬ್ಬವಿದ್ದು, “ಚಿತ್ರಸಂತೆ” ಪತ್ರಿಕೆ ರಾಗಿಣಿಯವರ ಕುರಿತಾಗಿಯೇ ಮುಖಪುಟ ರೂಪಿಸಿದೆ. ಅರುಣ್ ಗುರೂಜಿ, ಭಾಸ್ಕರ್ ಗುರೂಜಿ , ಮೋಕ್ಷಗುಂಡಂ ಗುರೂಜಿ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಮತ್ತಿತರರು ಶುಭ ಕೋರಿದರು.