ಬೆಂಗಳೂರು: ಬದಲಾವಣೆಯೊಂದೇ ಶಾಶ್ವತ. ಇದನ್ನು ಒಪ್ಪಿಕೊಳ್ಳುತ್ತಲೇ ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ನಮ್ಮನ್ನು, ನಮ್ಮ ಅಲೋಚನೆಯನ್ನೂ ಬದಲಾಯಿಸಿಕೊಳ್ಳಬೇಕಾದ ಕಾಲವಿದು ಎಂದವರು ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್.
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಸಿನಿಮಾ ಮಾಧ್ಯಮ ಸ್ಥಿತಿ-ಗತಿ’ ಎಂಬ ವಿಚಾರ ಸಂಕಿರಣದಲ್ಲಿ ತಮ್ಮ ಆಭಿಪ್ರಾಯ ಹಂಚಿಕೊಂಡವರು ರಮೇಶ್.
“ಈ ಬದಲಾವಣೆ ಎನ್ನುವುದು ಯಾವ ಪ್ರಮಾಣದಲ್ಲಿ ಹಾಗೂ ಯಾವ ಹಂತದಲ್ಲಿ ಮಾಡಿಕೊಳ್ಳಬೇಕು ಎಂಬುದು ಮುಖ್ಯ. ನಮ್ಮತನವನ್ನು ಬಿಟ್ಟು ನಾವು ಬದಲಾಯಿಸಿಕೊಳ್ಳುವುದಾಗಲೀ, ಹೊಂದಾಣಿಕೆ ಮಾಡಿಕೊಳ್ಳುವುದಾಗಲೀ ಸೂಕ್ತವಾದುದಲ್ಲ. ಅಗ ನಮ್ಮ ಅಸ್ತಿತ್ವಕ್ಕೇ ಧಕ್ಕೆ ಬರಬಹುದು. ಹಾಗಾಗಿ ನಮ್ಮತನವನ್ನು ಮಾರಾಟ ಮಾಡಿಕೊಳ್ಳದೇ ಈ ಹೊತ್ತಿನ ನೆಲೆಯಲ್ಲಿ ಒಂದಿಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿದೆ. ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಆಸೆ ಮತ್ತು ಗುರಿ ಇರುವವರು ಹೊಸ ಕಾಲಕ್ಕೆ ತಕ್ಕಂತೆ ಒಗ್ಗಿಕೊಳ್ಳುವುದು ಅಗತ್ಯ ಎಂದರು.
‘ಇತ್ತೀಚಿನ ದಿನಗಳಲ್ಲಿ ಒಟಿಟಿ ಮೂಲಕ ಚಿತ್ರಗಳು ಲಭ್ಯವಾಗುವ ಕಾರಣ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆ ಆಗಿರಬಹುದು. ನಾವು ಕುಳಿತಿರುವಲ್ಲೇ ಸಿನಿಮಾ ನೋಡುವುದು ಅನುಕೂಲ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕನ ನಮಗಾಗಿ ನೀಡುವ ಸಮಯಕ್ಕೆ ಗೌರವ ಕೊಡಬೇಕು. ಅಗ ಮಾತ್ರ ಜನ ಮತ್ತೆ ಸಿನಿಮಾ ಮಂದಿರಕ್ಕೆ ಬಂದಾರು ಎಂದರು ರಮೇಶ್.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ. ಶೇಷಾದ್ರಿ ಅವರ ಆಭಿಪ್ರಾಯವೆಂದರೆ, ಚಿತ್ರರಂಗ ಇಂದು ಉದ್ಯಮ. ಕನ್ನಡ ಚಿತ್ರರಂಗಕ್ಕೆ ಒಂಬತ್ತು ದಶಕಗಳಾಗಿವೆ. ಈ ಆವಧಿಯಲ್ಲಿ ಐದೂವರೆ ಸಾವಿರ ಚಿತ್ರಗಳು ತೆರೆಗೆ ಬಂದಿವೆ. ಚಿತ್ರರಂಗ ಸರಿ ಇಲ್ಲ, ನಷ್ಟವೇ ಹೆಚ್ಚು ಎನ್ನುವುದಾಗಿದ್ದರೆ ವರ್ಷಂಪ್ರತಿ ಸುಮಾರು 250ಕ್ಕೂ ಹೆಚ್ಚು ಚಿತ್ರಗಳು ರೂಪುಗೊಳ್ಳುತ್ತಿರಲಿಲ್ಲ. ಆದ ಕಾರಣ ಚಿತ್ರರಂಗದ ಸ್ಥಿತಿ ಚೆನ್ನಾಗಿಯೇ ಇದೆ ಎಂದರು.
ಹಿರಿಯ ಪತ್ರಕರ್ತ ಜೋಗಿ ಅವರ ಪ್ರಕಾರ, ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನು ನೋಡುವ ಬಗೆ ಭಿನ್ನವಾಗಿದೆ. ಚಿತ್ರದ ತುಣುಕು ಬಿಡುಗಡೆಯಾದರೆ ಅದರ ಸುದ್ದಿ ಕೂಡಲೇ ಬರಬೇಕು. ಮರುದಿನದ ಪತ್ರಿಕೆಯಲ್ಲಿ ಪ್ರಕಟವಾಗುವ ಮೊದಲು ಈ ತುಣುಕು ಲಕ್ಷ ಲಕ್ಷ ವೀಕ್ಷಣೆ ಕಂಡಿರುತ್ತದೆ. ಆ ತುಣುಕು ಗುಣಾತ್ಮಕವಾಗಿ ಹೇಗಿದೆ ಎನ್ನುವುದಕ್ಕಿಂತ ಎಷ್ಟು ವೀಕ್ಷಣೆ ಸಿಕ್ಕಿದೆ ಎಂದು ಬರೆಯುವುದೇ ಮುಖ್ಯವಾಗಿರುತ್ತದೆʼ.
ಸಿನಿಮಾದ ಬಿಡುಗಡೆ ಪೂರ್ವ ಪ್ರದರ್ಶನ ಕಂಡು ಹೊರಬರುವ ಪತ್ರಕರ್ತರಿಗೆ ಸಿನಿಮಾ ತಂಡದಿಂದ ತೂರಿ ಬರುವ ಮೊದಲ ಪ್ರಶ್ನೆ ಎಂದರೆ, ಸಿನಿಮಾ ನೋಡಿದ್ರಾ, ಕಥೆ ಹೇಗಿದೆ, ಹೇಗೆ ಮೂಡಿ ಬಂದಿದೆ ಎನ್ನುವುದಲ್ಲ. ಬದಲಾಗಿ ನಮ್ಮ ಚಿತ್ರಕ್ಕೆ ಎಷ್ಟು ಸ್ಟಾರ್ ಕೊಡುತ್ತೀರಿ? ಕನಿಷ್ಟ ಮೂರು ಸ್ಟಾರ್ ಕೊಡಿ ಸಾರ್” ಎಂಬುದು. ಅವರ ಪ್ರಕಾರ ಸಿನಿಮಾದ ವಿಮರ್ಶೆ ಅರಗಿಸಿಕೊಳ್ಳಲಾರದ ಸ್ಥಿತಿ ಇದೆ. ಒಂದುವೇಳೆ ವಿಮರ್ಶೆ ಬಂದಿತೆನ್ನಿ, ಅದು ಸಿನಿಮಾ ಚೆನ್ನಾಗಿದೆ ಎಂದೇ ಬರಬೇಕು. ಇದು ಸದ್ಯದ ಸ್ಥಿತಿ ಎಂದವರು ಜೋಗಿ.
ಸಂಘದ ಅಧ್ಯಕ್ಷ ಬಾ.ನಾ ಸುಬ್ರಹ್ಮಣ್ಯ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.