ಗ್ರೇ ಗೇಮ್ಸ್ ಗೆದ್ದ ಖುಷಿಯಲ್ಲಿದ್ದಾರೆ ನಟ ವಿಜಯ ರಾಘವೇಂದ್ರ. ಇಪ್ಪತ್ತೈದು ದಿನ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರದ ಬಗ್ಗೆ ನಾಲ್ಕು ಮಾತು ಹಂಚಿಕೊಂಡವರು ವಿಜಯ ರಾಘವೇಂದ್ರ. ಇತ್ತೀಚಿನ ದಿನಗಳಲ್ಲಿ ಒಂದು-ಎರಡು ದಿನ ಸಿನಿಮಾ ಓಡಿದರೆ ಅಬ್ಬಾ ಎಂದು ಅಮೋಘ ಮೂರನೇ ದಿನ ಎಂದು ಸೋಷಿಯಲ್ ಮೀಡಿಯಾ ಪೋಸ್ಟರ್ ಹಾಕುವ ದಿನಗಳಲ್ಲಿ 25 ದಿನ ಸದ್ದಿಲ್ಲದೇ ಓಡುತ್ತಿದೆ ಒಂದು ಚಿತ್ರ ಎನ್ನುವುದಾದರೆ ಜನರಿಗೆ ಚಿತ್ರಗಳ ಬಗ್ಗೆ ಬೇಸರವಿಲ್ಲ ಎಂದಂತಾಯಿತು. ಅದರೊಂದಿಗೆ ನೀವು ಮಾಡಿದ್ದೆಲ್ಲ ಸಿನಿಮಾ ನೋಡಿ ಎಂದು ಒತ್ತಾಯ ಮಾಡಬೇಡಿ. ಹೀಗೆ ಹೇಳುತ್ತಿದ್ದೇವೆಂದು ಬೇಸರ ಪಡಬೇಡಿ ಎಂದು ಪ್ರೇಕ್ಷಕರು ಈ ಸಿನಿಮಾ ಮಾಡೋ ಮಂದಿಗೆ ಹೇಳಿದಂತಿದೆ.
ಗ್ರೇ ಗೇಮ್ಸ್ ಆನಂದ್ ಮುಗದ್ ನಿರ್ಮಿಸಿರುವ ಚಿತ್ರ. ಗಂಗಾಧರ ಸಾಲಿಮಠರದ್ದು ನಿರ್ದೇಶನ. ವಿಜಯ ರಾಘವೇಂದ್ರ ಹಾಗೂ ಭಾವನರಾವ್ ನಟಿಸಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡದ ಸಂಭ್ರಮದಲ್ಲಿ ಕೇಳಿಬಂದ ಮಾತುಗಳೆಂದರೆ, ನಮ್ಮ ಚಿತ್ರ ಇಪ್ಪತ್ತೈದು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 26 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಿದೆ. ಪ್ರೇಕ್ಷಕರು ಒಬ್ಬರಿಂದ ಒಬ್ಬರಿಗೆ ನಮ್ಮ ಚಿತ್ರದ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸುತ್ತಿರುವುದರಿಂದ ಇದು ಸಾಧ್ಯವಾಯಿತು ಎಂದವರು ಗಂಗಾಧರ ಸಾಲಿಮಠ.
ಸಿನಿಮಾ ಮಾಡುವುದು ನನ್ನ ಕನಸ್ಸಾಗಿತ್ತು. ಅದು ಈಡೇರಿದೆ. 25 ದಿನ ಪ್ರದರ್ಶನ ಕಂಡಿರುವುದು ಖುಷಿ ತಂದಿದೆ ಎಂದವರು ಆನಂದ್ ಮುಗದ್. ನನ್ನ ಚಿತ್ರವನ್ನು ಜನ ಮೆಚ್ಚಿಕೊಂಡಿರುವುದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದವರು ವಿಜಯ ರಾಘವೇಂದ್ರ. ಈ ಮಧ್ಯೆ ವಿಜಯ ರಾಘವೇಂದ್ರರ ಹೊಸ ಚಿತ್ರ ಸ್ವಪ್ನ ಮಂಟಪ ಬಿಡುಗಡೆಗೆ ಸಜ್ಜಾಗುತ್ತಿದೆ.
*
ವಸಿಷ್ಠ ಸಿಂಹರ ಲವ್ ಲೀ ಟ್ರೇಲರ್ ಬಿಡುಗಡೆ
ವಸಿಷ್ಠ ಸಿಂಹರ ಚಿತ್ರ ಲವ್ ಲೀ ಸಹ ಜೂನ್ 14 ರಂದೇ ಬಿಡುಗಡೆಯಾಗುತ್ತಂತೆ ಚಿತ್ರ ಮಂದಿರಗಳಲ್ಲಿ. ಇತ್ತೀಚೆಗಷ್ಟೇ ಅದರ ಟ್ರೇಲರ್ ಬಿಡುಗಡೆಯಾಯಿತು. ಅಭುವನಸ ಕ್ರಿಯೇಷನ್ಸ್ ನಡಿ ರವೀಂದ್ರ ಕುಮಾರ್ ನಿರ್ಮಿಸಿದ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶಿಸಿದ್ದಾರೆ. ವಸಿಷ್ಠ ಸಿಂಹ ನಾಯಕರಾಗಿ, ನಾಯಕಿಯಾಗಿ ಸ್ಟೆಫಿ ಪಟೇಲ್ ಅಭಿನಯಿಸಿದ್ದಾರೆ.
ಟ್ರೇಲರ್ ಅನ್ನು ನಟ, ನಿರ್ದೇಶಕ ರಿಷಭ್ ಶೆಟ್ಟಿ ಟ್ರೇಲರ್ ಬಿಡುಗಡೆ ಮಾಡಿದರು. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.
ಹಿರಿಯ ನಟ ದತ್ತಣ್ಣ, ನಟಿ ನಂದು, ಸಮೀಕ್ಷ, ಬೇಬಿ ವಂಶಿಕ ಹಾಗೂ ವಿತರಕರಾದ ಚಂದನ್ ಸುರೇಶ್, ಪೀಟರ್ (ಓವರ್ ಸೀಸ್). ವಿನೋದ್ ಪ್ರಭಾಕರ್, ನವೀನ್ ಶಂಕರ್, ಗರುಡ ರಾಮ್, ಶಿವರಾಜ್ ಕೆ.ಆರ್ ಪೇಟೆ, ಆಶಿಕಾ ರಂಗನಾಥ್, ಪೃಥ್ವಿ ಅಂಬರ್, ಕೆ.ಮಂಜು, ಗುರುದೇಶಪಾಂಡೆ, ನರ್ತನ್(ನಿರ್ದೇಶಕ) ಸೇರಿದಂತೆ ಹಲವಾರು ಮಂದಿ ಶುಭ ಹಾರೈಸಿದರು.