ಪಣಜಿ: ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಇಫಿ) ದ 55 ನೇ ಅವೃತ್ತಿಗೆ ಇಂದು ತೆರೆ ಬೀಳಲಿದೆ.
ನ. 20 ರಿಂದ ಆರಂಭವಾಗಿದ್ದ ಚಿತ್ರೋತ್ಸವದಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳನ್ನು ಪ್ರದರ್ಶಿಸಲಾಗಿತ್ತು. ನಿರ್ದೇಶಕ ಮಣಿರತ್ನಂ, ನಟ ಅನುಪಮ್ ಖೇರ್, ಮನೋಜ್ ಬಾಜಪೇಯಿ, ಸೇರಿದಂತೆ ಹಲವರ ಮಾಸ್ಟರ್ ಕ್ಲಾಸ್ ಗಳು, ಸಂವಾದಗಳು ಈ ಬಾರಿಯ ಉತ್ಸವದ ವಿಶೇಷತೆಯಾಗಿತ್ತು. ನಿಧಾನವಾಗಿ ಗೋವಾದ್ಯಂತ ಹರಡಿಕೊಳ್ಳುತ್ತಿರುವ ಉತ್ಸವ, ಈ ವರ್ಷ ಇನ್ನೆರಡು ಪ್ರದೇಶಗಳಿಗೆ ವಿಸ್ತರಣೆಯಾಗಿತ್ತು.
ಸಂಜೆ ಡಾ. ಶಾಮ ಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಚಿತ್ರೋತ್ಸವದ ಪ್ರಶಸ್ತಿ ಪ್ರದಾನವಾಗಲಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಟಿ, ಅತ್ಯುತ್ತಮ ಚೊಚ್ಚಲ ನಿರ್ದೇಶನ ಚಿತ್ರ, ಐಸಿಎಫ್ ಟಿ- ಯುನೆಸ್ಕೊ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಪ್ರದಾನವಾಗಲಿವೆ. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸಿನಿಮಾ ನಿರ್ದೇಶಕ ಫಿಲಿಪ ನೋಯೆಯವರಿಗೆ ಸತ್ಯಜಿತ್ ರೇ ಜೀವಿತಾವಧಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇಫಿ ಚಿತ್ರೋತ್ಸವದಲ್ಲಿ ಹೊಸಬರ ದನಿ; ಇದು ಸಪ್ತ ಸುಸ್ವರ
ಸಮಾರೋಪ ಸಮಾರಂಭದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಜಯಪ್ರದಾ, ಶ್ರೀಯಾ ಶರಣ್ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅಲ್ಲು ಅರ್ಜುನ್ ಗೆ ಪುರಸ್ಕಾರ ನೀಡಲಾಗುತ್ತಿದೆ.
ಒಂಬತ್ತು ದಿನಗಳ ಉತ್ಸವದಲ್ಲಿ 75 ಕ್ಕೂ ಹೆಚ್ಚು ದೇಶಗಳ ಸಿನಿಮಾಗಳು ಪ್ರದರ್ಶನವಾದವು. ಭಾರತೀಯ ಪನೋರಮಾದಲ್ಲಿ ವಿಶೇಷವಾಗಿ ಭಾರತೀಯ ಫೀಚರ್ ಹಾಗೂ ನಾನ್ ಫೀಚರ್ ಚಿತ್ರಗಳು ಪ್ರದರ್ಶನಗೊಂಡವು. ಈ ಬಾರಿ ಕಂಟ್ರಿ ಫೋಕಸ್ ವಿಭಾಗದಡಿ ಆಸ್ಟ್ರೇಲಿಯಾದ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಆಸ್ಟ್ರೇಲಿಯಾದಲ್ಲಿ ನಿರ್ಮಿಸಲಾದ ಚಿತ್ರ ಬೆಟರ್ ಮ್ಯಾನ್ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗಿತ್ತು. ಜೆಕೋಸ್ಲೋವೋಕಿಯಾದ ಬೊಹಾದಾನ್ ಸಿಮಾ ನಿರ್ದೇಶಿಸಿದ ಡ್ರೈ ಸೀಸನ್ ಚಿತ್ರ ಸಮಾರೋಪ ಚಿತ್ರವಾಗಿ ಪ್ರದರ್ಶಿತವಾಗುತ್ತಿದೆ.