Friday, March 21, 2025
spot_img
More

    Latest Posts

    IFFI 2024: ಇಫಿ ಚಿತ್ರೋತ್ಸವದಲ್ಲಿ ಹೊಸಬರ ದನಿ; ಇದು ಸಪ್ತ ಸುಸ್ವರ

    ಪಣಜಿ (ಗೋವಾ) : 55 ನೇ ಇಫಿ ಚಿತ್ರೋತ್ಸವ (ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ) ಆರಂಭವಾಗಲಿಕ್ಕೆ ಒಂದು ದಿನವಿದೆ. ಅಷ್ಟೇ. ಈಗಾಗಲೇ ಭರದ ಸಿದ್ಧತೆ ನಡೆದಿದೆ. ಪ್ರತಿನಿಧಿಗಳ ನೋಂದಣಿ ಆರಂಭವಾಗಿ ಬಹಳ ದಿನಗಳಾಗಿವೆ. ಸಿನಿಮಾಗಳ ಆಯ್ಕೆ, ಮಾಸ್ಟರ್‌ ಕ್ಲಾಸಸ್‌ ಗಳ ವಿವರ ಎಲ್ಲವನ್ನೂ ಪ್ರಕಟಿಸಲಾಗಿದೆ.

    ಈ ಬಾರಿಯ ಉತ್ಸವ 55 ನೆಯದು. ಮೊದಲ ಬಾರಿಗೆ ಚೊಚ್ಚಲ ಚಿತ್ರಗಳ ನಿರ್ದೇಶಕರ ಚಿತ್ರಗಳಿಗೆಂದೇ ಪ್ರತ್ಯೇಕ ಸ್ಪರ್ಧೆಯಿದೆ. ಇದೊಂದು ಪ್ರತ್ಯೇಕ ವಿಭಾಗ.

    ಈ ಬಾರಿ ಐದು ಅಂತಾರಾಷ್ಟ್ರೀಯ ಹಾಗೂ ಎರಡು ಭಾರತೀಯ ಚಿತ್ರ ನಿರ್ದೇಶಕರ ಚಿತ್ರಗಳು ಪ್ರಶಸ್ತಿಗೆ ಸ್ಪರ್ಧಿಸಿವೆ. ಪ್ರಶಸ್ತಿ ಪುರಸ್ಕೃತರಿಗೆ ಹತ್ತು  ಲಕ್ಷ ರೂ. ನಗದು ಹಾಗೂ ರಜತ ನವಿಲು ಪಾರಿತೋಷಕ, ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತಿದೆ. ಚಿತ್ರ ನಿರ್ದೇಶಕ ಅಶುತೋಷ್‌ ಗೌರೀಕರ ಅಧ್ಯಕ್ಷತೆಯ ಸಮಿತಿಯು ಏಳು ಚಿತ್ರಗಳನ್ನು ಸ್ಪರ್ಧೆಗೆ ಅಂತಿಮಗೊಳಿಸಿದೆ.

    ಬ್ರೆಜಿಲಿಯನ್‌ ನಿರ್ದೇಶಕ ಮಾರ್ಸೆಲೊ ಬೊಟರ ಬೆತನಿಯಾ ಸಿನಿಮಾ ಪ್ರದರ್ಶಿತವಾಗುತ್ತಿದೆ. ಈ ಸಿನಿಮಾ ಬರ್ಲಿನ್‌ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿತ್ತು. ಬ್ರೆಜಿಲಿಯನ್‌ ನ ಪರಂಪರೆಯ ಹಲವು ಸಂಗತಿಗಳೊಂದಿಗೆ ಹೆಣೆದುಕೊಂಡಿದೆ. ಈ ಸಿನಿಮಾ ತನ್ನ ಕುಗ್ರಾಮಕ್ಕೆ ವಿದ್ಯುತ್‌ ಅನ್ನು ತರಲು ದಶಕಗಟ್ಟಲೆ ಕಾಲ ಹೋರಾಡಿದ ಮಾರಿಯಾ ದೊ ಸೆಲ್ಸೊರರ ಜೀವನಗಾಥೆಯನ್ನು ಆಧರಿಸಿದೆ. ಈ ಚಿತ್ರವು ಪರಿಸರ, ಸಮುದಾಯ ಇತ್ಯಾದಿ ಸಂಗತಿಗಳ ಕುರಿತು ಚರ್ಚಿಸುತ್ತದೆ.

    ಮಾಮಿ ಚಿತ್ರೋತ್ಸವ: ಘಟಶ್ರಾದ್ಧ,ಮಾಯಾ ಮೃಗ ಸೇರಿ ನಾಲ್ಕು ಸಿನಿಮಾಗಳ ಅಪರೂಪದ ಪ್ರದರ್ಶನ

    ಚೀನಾದ ಚಿತ್ರ ಹೊ ಕ್ಷಿನ್‌ ರದ್ದು ಬೌಂಡ್‌ ಇನ್‌ ಹೆವನ್.‌ ಚಿತ್ರಕಥೆಗಾರ ಹೊ ರ ಮೊದಲ ಚಿತ್ರ. ಸಾನ್‌ ಸೆಬಾಸ್ಟಿಯನ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಛಾಯಾಗ್ರಹಣಕ್ಕೆ ಫ್ರಿಫೆಸ್ಕಿ ಪ್ರಶಸ್ತಿ ಗಳಿಸಿದ ಚಿತ್ರವಿದು. ಹಿಂಸೆಯ ವರ್ತುಲದೊಳಗೆ ಸಿಲುಕಿಕೊಂಡ ಮಹಿಳೆ ಹಾಗೂ ಅನಾರೋಗ್ಯ ಪೀಡಿತನಾದ ಪುರುಷರೊಬ್ಬನ ನಡುವಿನ ಕಥೆ. ಸಂಕಷ್ಟದಲ್ಲಿರುವ ಎರಡೂ ಜೀವಗಳ ನಡುವಿನ ಸಂಬಂಧದ ನೆಲೆಯ ಕಥೆ.

    ಬ್ರಿಂಗ್‌ ದೆಮ್‌ ಡೌನ್‌ ಮತ್ತೊಂದು ಚಿತ್ರ. ಬ್ರಿಟನ್‌ ಮೂಲದ ಕ್ರಿಸ್ಟೋಫರ್‌ ಆಂಡ್ರ್ಯೂಸ್‌ ನಿರ್ದೇಶಿಸಿರುವ ಚಿತ್ರ. ಥ್ರಿಲ್ಲರ್‌ ಚಿತ್ರವಿದು. ಐರಿಷ್‌ ಕುರಿಗಾಹಿಯೊಬ್ಬನ ಕುಟುಂಬ ಎದುರಿಸುತ್ತಿರುವ ಆಂತರಿಕ ಸಂಘರ್ಷ, ಕುಟುಂಬದೊಳಗೇ ಅನುಭವಿಸುವ ಅನಾಥ ಭಾವ, ನೆರೆಹೊರೆಯವರೊಂದಿಗಿನ ದ್ವೇಷ- ಎಲ್ಲವನ್ನೂ ಸಮ್ಮಿಶ್ರಗೊಂಡದ ಭಾವದ ನೆಲೆಯಲ್ಲೇ ಸಾಂಸ್ಕೃತಿಕ ಪಲ್ಲಟವನ್ನು ಚರ್ಚಿಸುವ ಚಿತ್ರ.

    ಅಮೆರಿಕದ ನಿರ್ದೇಶಕ ಸಾರಾ ಫ್ರೀದ್‌ ಲ್ಯಾಂಡ್‌ ನಿರ್ದೇಶಿಸಿದ ಚಿತ್ರ ಫೆಮಿಲಿಯರ್‌ ಟಚ್.‌ ವೆನಿಸ್‌ ಉತ್ಸವದಲ್ಲಿ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿರುವ ಚಿತ್ರವಿದು. ಇಳಿವಯಸ್ಸಿನ ಮಹಿಳೆಯೊಬ್ಬಳು ತನ್ನ ಮರೆವು, ಆಸೆ ಹಾಗೂ ಸಂಘರ್ಷಮಯವಾದ ಸಂಬಂಧಗಳೊಂದಿಗೆ ಬದುಕನ್ನು ಎದುರಿಸುವ ಎಳೆಯ ಕುರಿತಾದ ಚಿತ್ರವಿದು.

    IFFI55: ಇಫಿ ಚಿತ್ರೋತ್ಸವಕ್ಕೆ ಸಜ್ಜಾಗಿ; ಪ್ರತಿನಿಧಿಯಾಗಿ ನೋಂದಾಯಿಸಿ

    ಟು ಎ ಲ್ಯಾಂಡ್‌ ಅನ್‌ ನೋನ್‌ ಚಿತ್ರ ನಿರಾಶ್ರಿತ ಸೋದರರಿಬ್ಬರು ಉತ್ತಮ ಬದುಕಿಗೆ ನಡೆಸುವ ಕಥೆಯ ಎಳೆಯನ್ನು ಹೊಂದಿದೆ. ಮೆಹದಿ ಫ್ಲೆಫೆಲ್‌ ನ ಚಿತ್ರವಿದು. ಕಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿದೆ.

    ಮರಾಠಿ ಚಿತ್ರ ನಿರ್ದೇಶಕ ಶಶಿ ಚಂದ್ರಕಾಂತ್‌ ಖಂದಾರೆಯವರ ಜಿಪ್ಸಿ ಚಿತ್ರ ಸ್ಥಳಾಂತರ, ಕೊರತೆ ಹಾಗೂ ಹಸಿವಿನ ಬಗ್ಗೆ ಎಳೆಯನ್ನು ಹೊಂದಿರುವ ಚಿತ್ರ. ಅಲೆಮಾರಿ ಕುಟುಂಬವೊಂದರ ಬದುಕಿನ ಕಥೆ.

    ತೆಲುಗಿನ ಇಮಾನಿ ವಿ ಎಸ್‌ ನಂದ ಕಿಶೋರರ ಚಿತ್ರ ಚಿನ್ನ ಕಥಾ ಕಾಡು. ತೆಲುಗಿನ ಕಾದಂಬರಿಕಾರ ನಂದ ಕಿಶೋರ್‌ ರ ಈ ಚಿತ್ರ ಸಕಾರಾತ್ಮಕ ನೆಲೆಯದ್ದು. ಕಥಾನಾಯಕಿ ಕಲಿಕೆಯ ಬದಲು ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಮದುವೆಯನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ಆದರೆ ತನ್ನ ಮಗ ಗಣಿತ ವಿಷಯದಲ್ಲಿ ಕಷ್ಟವನ್ನು ಎದುರಿಸತೊಡಗಿದಾಗ ಅವನಿಗಾಗಿ ಆಕೆ ಮತ್ತೆ ಕಲಿಯಲು ಆರಂಭಿಸುತ್ತಾಳೆ. ಅದರಲ್ಲೂ ಗಣಿತ. ಇದಕ್ಕೆ ಸಾಕಷ್ಟು ಪರಿಶ್ರಮ ಪಡುತ್ತಾಳೆ. ಆದರೆ ಇವಳ ಪ್ರಯತ್ನ-ಹಂಬಲಕ್ಕೆ ಸಿಗುವ ಕುಟುಂಬ ಬೆಂಬಲ, ಸಮುದಾಯದ ಸಹಾಯ ಹಸ್ತ ಎಲ್ಲವೂ ಸಂಕಷ್ಟದ ಹಳ್ಳವನ್ನು ದಾಟಲು ನೆರವಾಗುತ್ತದೆ.

    ಹೊಸಬರ ಚಿತ್ರಗಳು ಹೊಸ ಕಥಾವಸ್ತುಗಳು ಹಾಗೂ ಹೊಸ ನಿರೂಪಣೆ ಕೌಶಲದಿಂದ ರೂಪಿತವಾಗಿವೆ. ಯಾರು ಪ್ರಶಸ್ತಿ ಗಳಿಸುತ್ತಾರೋ ಕಾದು ನೋಡಬೇಕಿದೆ.

    Latest Posts

    spot_imgspot_img

    Don't Miss