Thursday, April 24, 2025
spot_img
More

    Latest Posts

    Indian 2 movie : ಕಮಲ್‌ ರ ಇಂಡಿಯನ್‌ 2 ಜುಲೈ 12 ರಂದು ಟಾಕೀಸಿಗೆ

    ಪ್ರಸಿದ್ಧ ನಟ ಕಮಲಹಾಸನ್‌ ಅವರ ಇಂಡಿಯನ್‌ 2 ಬಿಡುಗಡೆಯಾಗುತ್ತಿರುವುದು ಜುಲೈ 12 ರಂದು. ಇಂಡಿಯನ್‌ ಮೊದಲ ಭಾಗ ಕೇವಲ ತಮಿಳಿನಲ್ಲಿ ಬಿಡುಗಡೆಯಾಗಿತ್ತು. ಆಗ ಈ ಇಂಡಿಯಾ ಪಾನ್‌, ಡಬ್ಬಿಂಗ್‌, ರೀಮೇಕ್‌, ಒಟಿಟಿ ಇತ್ಯಾದಿ ಇತ್ಯಾದಿ ಯಾವುದೂ ಇರಲಿಲ್ಲ. ಅಂದಾಜಿನ ಪ್ರಕಾರ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ. ತಮಿಳುನಾಡಿನ ಹಲವಾರು ಚಿತ್ರಮಂದಿರಗಳಲ್ಲಿ ತಿಂಗಳುಗಟ್ಟಲೆ ಸಿನಿಮಾ ಓಡಿತ್ತು. ಬಾಕ್ಸ್‌ ಆಫೀಸ್‌ ನಲ್ಲಿ 50 ಕೋಟಿ ರೂ. ಗೂ ಹೆಚ್ಚು ಗಳಿಕೆ ಮಾಡಿತ್ತು. ಇವೆಲ್ಲ 1996 ರ ಕಥೆ. ಅಂದರೆ 28 ವರ್ಷಗಳ ಹಿಂದಿನದ್ದು. ಇಂಡಿಯನ್‌ ಮೊದಲ ಭಾಗ ರಾಷ್ಟ್ರೀಯ ಪ್ರಶಸ್ತಿಯಲ್ಲದೇ ಹತ್ತಾರು ಪುರಸ್ಕಾರಗಳನ್ನು ಗೆದ್ದಿತ್ತು. ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಚಿತ್ರ.

    ಇಂದಿನ ಲೆಕ್ಕಾಚಾರ ಹಾಕಿದರೆ (ಈ ಯೂಟ್ಯೂಬ್‌, ಮ್ಯೂಸಿಕ್‌, ಒಟಿಟಿ, ಸೆಟಲೈಟ್‌ ಇತ್ಯಾದಿ ಲೆಕ್ಕ ಬಿಟ್ಟು) ಬರೀ ಚಿತ್ರಮಂದಿರಗಳಲ್ಲಿ 250 ಕೋಟಿ ರೂ. ಗೂ ಹೆಚ್ಚು ಗಳಿಕೆ ಮಾಡಿತ್ತೆನ್ನಬಹುದು. ಇನ್ನೂ ವಿಶೇಷವೆಂದರೆ ಕಮಲ್‌ ಹಾಸನ್‌ ಅಭಿನಯವನ್ನು ಇಡೀ ಭಾರತದ ಜನರು ಪಾನ್‌ ಇಂಡಿಯಾ ಸಿನಿಮಾ ಎಂಬಂತೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಸ್.‌ ಶಂಕರ್‌ ಕಥೆ ಬರೆದು ನಿರ್ದೇಶಿಸಿದ್ದರು. ಮನೀಷಾ ಕೊಯಿರಾಲ ನಾಯಕಿ ನಟಿ. ಎ. ಆರ್.‌ ರೆಹಮಾನ್‌ ರದ್ದು ಸಂಗೀತ.

    ಈಗ ಬಿಡುಗಡೆಯಾಗುತ್ತಿರುವುದು ಎರಡನೇ ಭಾಗ. ಮೂರನೇ ಭಾಗ ಸಿದ್ಧವಾಗಿದೆಯಂತೆ. 2025 ಕ್ಕೆ ಬಿಡುಗಡೆಯಾಗುತ್ತದಂತೆ. ಎರಡನೇ ಭಾಗದಲ್ಲಿ ಮನೀಷಾ ಕೊಯಿರಾಲ ಇಲ್ಲ. ಬದಲಾಗಿ ಕಾಜಲ್‌ ಅಗರವಾಲ್‌ ಇದ್ದಾರೆ. ಸಿದ್ದಾರ್ಥ್‌ ಮತ್ತು ರಕುಲ್‌ ಪ್ರೀತ್‌ ಸಿಂಗ್‌ ಸೇರಿಕೊಂಡಿದ್ದಾರೆ.

    ಎ.ಆರ್‌ ರೆಹಮಾನ್‌ ಬದಲಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿರ್ದೇಶನ ಎಂದಿನಂತೆ ಎಸ್.‌ ಶಂಕರ್‌ ರದ್ದು. ಲೈಕಾ ಪ್ರೊಡಕ್ಷನ್ಸ್‌ ಮತ್ತು ರೆಡ್‌ ಜಾಯಿಂಟ್‌ ಮೂವೀಸ್‌ ಒಟ್ಟಾಗಿ ಈ ಚಿತ್ರವನ್ನು ನಿರ್ಮಿಸಿದೆ.  ತಾರಾಗಣದಲ್ಲಿ  ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್‌ ಮುಂತಾದವರಿದ್ದಾರೆ.

    ಎರಡನೇ ಭಾಗ ಆಲೋಚನೆ ಪ್ರಾರಂಭವಾಗಿದ್ದು 2015 ರಲ್ಲಿ. 2017 ರಲ್ಲಿ ಚಿತ್ರ ರೂಪಿಸುವ ಅಧಿಕೃತ ಘೋಷಣೆ ಹೊರಬಿದ್ದಿತು. ಮೊದಲು ವೆಂಕಟೇಶ್ವರ ಕ್ರಿಯೇಷನ್ಸ್‌ ಸಿನಿಮಾ ನಿರ್ಮಾಣಕ್ಕೆ ಮುಂದಾಯಿತು. ಆದರೆ ವೆಚ್ಚದ ಲೆಕ್ಕ ನೋಡಿ ಸ್ವಲ್ಪ ಹಿಂಜರಿಯಿತು. ಆಗ ಲೈಕಾ ಪ್ರೊಡಕ್ಷನ್ಸ್‌ ಮುಂದೆ ಬಂದಿತು. 2019 ರಲ್ಲಿ ಚಿತ್ರೀಕರಣ ಇತ್ಯಾದಿ ಕೆಲಸಗಳು ಪ್ರಾರಂಭವಾದವು. ಅದರ ಮಧ್ಯೆ ಬಂದ ಕೋವಿಡ್‌, ಸಿನಿಮಾ ಸೆಟ್‌ ನಲ್ಲಿ ಆದ ಕೆಲವು ಅವಘಡ, 2019 ರ ಚುನಾವಣೆಯಲ್ಲಿ ಸ್ಪರ್ಧಿಸುವ ಕಮಲ್‌ ಹಾಸನ್‌ ರ ಲೆಕ್ಕಾಚಾರ ಎಲ್ಲವೂ ಸಿನಿಮಾ ಪೂರ್ತಿಗೊಳ್ಳುವಲ್ಲಿ ಸವಾಲಾಗಿ ಪರಿಣಮಿಸಿದವು. ಕೊನೆಗೂ ಅಂತಿಮವಾಗಿ ಸಿನಿಮಾ ಸಿದ್ಧವಾಗಿದೆ.

    ಚೆನ್ನೈ, ರಾಜಮುಂಡ್ರಿ, ಭೋಪಾಲ್‌, ಗ್ವಾಲಿಯರ್‌, ತಿರುಪತಿ, ವಿಜಯವಾಡ, ಜೋಹಾನ್ಸ್‌ ಬರ್ಗ್‌, ತೈವಾನ್‌ ಮತ್ತಿತರ ಕಡೆ ಚಿತ್ರೀಕರಣ ಕೈಗೊಳ್ಳಲಾಗಿದೆ. ಒಟ್ಟು 250 ಕೋಟಿ ರೂ. ವೆಚ್ಚದ ಚಿತ್ರ.

    Latest Posts

    spot_imgspot_img

    Don't Miss