ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳಾಗಿವೆ. ಹಲವೆಡೆ ಬಾಕ್ಸ್ ಪೆಟ್ಟಿಗೆಗೆ ಹಣ ಹರಿದು ಬರತೊಡಗಿದೆ. ನಾಗ್ ಅಶ್ವಿನ್ ನಿರ್ದೇಶಿಸಿದ ಚಿತ್ರದಲ್ಲಿ ನಟ ಪ್ರಭಾಸ್ ಜೊತೆಗೆ ಘಟಾನುಘಟಿ ನಟರೆಲ್ಲ ಅಭಿನಯಿಸಿದ್ದಾರೆ. ಅಮಿತಾಭ್ ಬಚ್ಚನ್ ನಂಥ ಹಿರಿಯ ನಟನೂ ಅಶ್ವತ್ಥಾಮನಾಗಿ ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ಸಹ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಬಗೆಗೆ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಲಾಗಿತ್ತು. ಒಂದೆಡೆ ಬಜೆಟ್ (ಆರುನೂರು ಕೋಟಿ ರೂ.ಗೂ ಹೆಚ್ಚು), ಇನ್ನೊಂದೆಡೆ ಎಲ್ಲ ಘಟಾನುಘಟಿ ನಟರು-ನಟಿಯರು ಇತ್ಯಾದಿ. ಇವೆಲ್ಲ ಕಾರಣಗಳಿಂದ ಪ್ರೇಕ್ಷಕರು ಹೊಸ ಅನುಭವವನ್ನು ನಿರೀಕ್ಷಿಸಿದ್ದರು.
ಈಗ ಚಿತ್ರ ಬಿಡುಗಡೆಯಾಗಿ ಎರಡು ದಿನಗಳಾದ ಹಿನ್ನೆಲೆಯಲ್ಲಿ ಮೆಲ್ಲಗೆ ಕಣ್ಣು ಹಾಯಿಸಿದರೆ ಸಮ್ಮಿಶ್ರ ಅಭಿಪ್ರಾಯ ಸಿಗತೊಡಗಿದೆ. ಒಟ್ಟೂ ಸಿನಿಮಾಗಿಂತ ಒಂದು ವಿಭಿನ್ನವಾದ ಅನುಭವಕ್ಕೆ ನೋಡಬಹುದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಮತ್ತೊಂದೆಡೆ ಇಲ್ಲ ಸಿನಿಮಾ ಚೆನ್ನಾಗಿದೆ. ಮನೋರಂಜನೆ ನೀಡುತ್ತದೆ. ನಾವು ಅಂದುಕೊಂಡಂತೆ ಸಿನಿಮಾ ಬಂದಿದೆ ಎನ್ನುವವರೂ ಇದ್ದಾರೆ. ಟ್ರೇಲರ್ ಇಲ್ಲಿದೆ
ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್, ದಿಶಾ ಪಟಾಣಿ, ಶಾಶ್ವತ ಚಟರ್ಜಿ, ಬ್ರಹ್ಮಾನಂದಂ, ವಿಜಯ್ ದೇವರಕೊಂಡ ಇತ್ಯಾದಿ.
ಮೂರು ಬಿಂದುಗಳು ಸೇರಿದರೆ ಒಂದು ತ್ರಿಕೋನವಾಗಬಲ್ಲದು. ಅದು ಸಾಮಾನ್ಯ ಹಾಗೂ ಪುನರಾವರ್ತಿತ ಎನಿಸುವ ಚೌಕಾಕಾರಕ್ಕಿಂತ ಭಿನ್ನವಾದುದು. ಒಂದು ವೇಳೆ ಮೂರು ಬಿಂದುಗಳು ಸಾಲಾಗಿ ನಿಂತರೆ ಸರಳ ರೇಖೆ. ಆದರೆ ಈ ಕಲ್ಕಿ ಸಿನಿಮಾದಲ್ಲಿ ಮೂರು ಮುಖ್ಯಸ್ಥಾನದಲ್ಲಿ ನಿಲ್ಲುತ್ತಾರೆ ಮೂವರು ನಟರು. ಅಲ್ಲಿ ಗೆರೆ ಎಳೆದರೆ ತ್ರಿಕೋನ ಮಾರ್ಪಟ್ಟು ವಿಶೇಷ ಎನಿಸುತ್ತದೆ.
ಇದನ್ನೂ ಓದಿ : Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ
ತ್ರಿಮೂರ್ತಿಗಳದ್ದೇ ದರಬಾರು
ಕಲ್ಕಿ ಸಿನಿಮಾಕ್ಕೂ ಈ ಮಾತು ಅನ್ವಯ. ಕಲ್ಕಿ ಸಿನಿಮಾದ ಕಥೆಯನ್ನು ಎರಡನೇ ಆದ್ಯತೆಯಾಗಿ ನೋಡೋಣ. ಮೊದಲನೇ ಆದ್ಯತೆ ಈ ಮೂರು ಬಿಂದುಗಳ ಕಥೆಗಳು ಹಾಗೂ ಅದನ್ನು ಪ್ರಸ್ತುತ ಪಡಿಸಿದ ರೀತಿ. ಈ ಸಿನಿಮಾದಲ್ಲಿ ಆ ಮೂರು ಬಿಂದುಗಳಾಗಿರುವುದು ಅಮಿತಾಭ್ ಬಚ್ಚನ್, ಪ್ರಭಾಸ್ ಹಾಗೂ ಕಮಲ್ ಹಾಸನ್. ಪ್ರಭಾಸ್ ಕಥಾನಾಯಕ, ಬೇಟೆಗಾರನ ಪಾತ್ರ. ಅಮಿತಾಭ್ ಬಚ್ಚನ್ ಭವಿಷ್ಯವನ್ನು ಭೂತದಿಂದ ಬೆಸೆಯುವ ಪ್ರಮುಖ ಬಿಂದು. ಮಹಾಭಾರತದ ಅಶ್ವತ್ಥಾಮ. ಮೂರನೇ ಬಿಂದು ಕಮಲ್ ಹಾಸನ್ ಅಭಿನಯಿಸಿರುವಂಥ ಪಾತ್ರ ಕಲಿ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಖಳನಾಯಕ.
ಕಾಶಿಯಲ್ಲಿ ನಡೆಯುವಂಥ ಕಥೆ. ಮಹಾಭಾರತ ಯದ್ಧ ಮುಗಿದು ಹಲವು ವರ್ಷಗಳಾಗಿವೆ. ಅಶ್ವತ್ಥಾಮ ಆ ಬರಡಾದ ಗಂಗೆಯ ಒಡಲಿನ ಕಾಶಿಯಲ್ಲಿ ಉಳಿದಿರುವ ಚಿರಂಜೀವಿ. ಭೈರವನಾಗಿರುವ ಪ್ರಭಾಸ್ ಒಬ್ಬ ಬೇಟೆಗಾರ. ಅತ್ಯುತ್ತಮ ಬದುಕನ್ನು ಬಯುಸುತ್ತಿರುವವ. ಯಾಸ್ಕಿನ್ ಅಥವಾ ಕಲಿಯಾಗಿರುವ ಕಮಲ್ ಹಾಸನ್, ಭವಿಷ್ಯದ ಸುಸಜ್ಜಿತ ಬದುಕಿನ ಸಾಧ್ಯತೆಯನ್ನು ತನ್ನ ಮುಷ್ಟಿಯಲ್ಲಿಟ್ಟು ಹಿಡಿದುಕೊಂಡು ಪ್ರಯೋಗದಲ್ಲಿ ತೊಡಗಿರುವಾತ. ಸುಮತಿಯಾಗಿರುವ ದೀಪಿಕಾ ಪಡುಕೋಣೆ ಶಾಂಬಲ ನಗರದ ಪ್ರಜೆ. ಹೀಗೆ ಇಡೀ ಸಿನಿಮಾದಲ್ಲಿ ಪರದೆಯನ್ನು ಆವರಿಸಿಕೊಳ್ಳುವುದು ತ್ರಿಮೂರ್ತಿಗಳೇ.
ಪುರಾಣದ ಒಂದು ಕಥೆಯನ್ನು ಭವಿಷ್ಯದ ನೆಲೆಯಲ್ಲಿ ನೋಡುತ್ತಾ, ಕಾಲ್ಪನಿಕ ಸಂಗತಿಗಳನ್ನು ಸೃಷ್ಟಿಸಿ ಒಂದಕ್ಕೊಂದು ಬೆಸೆಯುತ್ತಾ ಒಂದು ಆಕಾರವನ್ನು ಪಡೆಯಲು ಯತ್ನಿಸಿರುವುದೇ ಕಲ್ಕಿ ಸಿನಿಮಾ. ಒಟ್ಟು ಮೂರು ಗಂಟೆ ಒಂದು ನಿಮಿಷದ ಸಿನಿಮಾದಲ್ಲಿ ತ್ರಿಮೂರ್ತಿಗಳು ತಮ್ಮ ನಟನೆಯಲ್ಲಿ ಗೆದ್ದಿದ್ದಾರೆ. ಅಭಿಮಾನಿಗಳನ್ನು ತುತ್ತತುದಿಯಲ್ಲಿ ಕುಳ್ಳಿರಿಸುವಷ್ಟು ಅವಕಾಶ ಹಾಗೂ ಸಾಧ್ಯತೆ ಎರಡೂ ಮೂರೂ ಪಾತ್ರಗಳಿಗೆ ಇರುವುದು ವಿಶೇಷ. ಹಾಗೆಯೇ ಮೂವರೂ ನಟರು ಅದನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ.
ಇಷ್ಟವಾಗಬಹುದು, ಓದಿ : Ilayaraja : ಸಂಗೀತ ಸಾಮ್ರಾಟ ರಾಸಯ್ಯ ಈ ಇಳೆಯ ರಾಜ !
ಭೂತ ಮತ್ತು ಭವಿಷ್ಯತ್
ವರ್ತಮಾನದ ಪರದೆಯನ್ನು ಬದಿಗೆ ಸರಿಸಿ, ಭೂತ ಮತ್ತು ಭವಿಷ್ಯತ್ ನಡುವಿನ ಕಥೆಯನ್ನು ಪ್ರದರ್ಶಿಸಿದ ಸಿನಿಮಾವಿದು. ನಾಗ್ ಅಶ್ವಿನ್ ತಮ್ಮೊಳಗಿನ ಆಲೋಚನೆಯನ್ನು ಅಕ್ಷರಶಃ ತೆರೆಗೆ ತರುವಲ್ಲಿ ಯಶಸ್ವಿಯಾಗದಿದ್ದರೂ ಶೇ. 70 ರಷ್ಟು ಯಶಸ್ಸಿಯಾಗಿರುವುದು ಸ್ಪಷ್ಟ.
ಕಥೆಯ ಎಳೆಯನ್ನು ಹಿಡಿದು ಅಳೆದು ತೂಗುವುದಕ್ಕಿಂತ ಸಿನಿಮಾವನ್ನು ತಮ್ಮೆದುರು ನಡೆಯುತ್ತಿರುವ ಒಂದು ಘಟನೆ ಎನ್ನುವಂತೆ (ವರ್ತಮಾನವೆಂಬಂತೆ) ಕಂಡರೆ ಮನರಂಜನೆ ಹಾಗೂ ವಿಶಿಷ್ಟವಾದ ಅನುಭವ ಸಿಕ್ಕಬಲ್ಲದು.
ಪೂರ್ವಾರ್ಧ ಪಾತ್ರಗಳ ಅನಾವರಣಕ್ಕೆ, ಮುಖ್ಯವಾಗಿ ಭೈರವನ ಅನಾವರಣಕ್ಕೆ ವಿನಿಯೋಗಿಸಿದರೂ, ಸ್ವಲ್ಪ ಚುರುಕುತನ ಬೇಕು ಎನ್ನಿಸುತ್ತದೆ. ಮಂದಗತಿಯ ಹರಿವು ಕೆಲವು ಕ್ಷಣಗಳಲ್ಲಿ ಕಥೆ ಹರಿಯುತ್ತಿಲ್ಲ, ನಿಂತಿದೆ ಎನ್ನಿಸುವುದುಂಟು. ಮೂರು ಗಂಟೆಯ ಲೆಕ್ಕ ಇಟ್ಟುಕೊಳ್ಳದೇ ನಿರ್ದೇಶಕ ಹಾಗೂ ಸಂಕಲನಕಾರ ಸ್ವಲ್ಪ ನಿಷ್ಣುರತೆ ಪ್ರದರ್ಶಿಸಿದ್ದರೆ ಪೂರ್ವಾರ್ಧದಲ್ಲೂ ಕೊಂಚ ಬಿಗಿ ಹೆಚ್ಚುತ್ತಿತ್ತು. ಉತ್ತರಾರ್ಧದಲ್ಲಿ ಈ ಕೊರತೆ ಕಾಣುವುದಿಲ್ಲ.
ತ್ರಿಮೂರ್ತಿಗಳೇ ಪರದೆಯನ್ನು ಆವರಿಸಿಕೊಳ್ಳುವ ಶಕ್ತಿ ಇರುವಾಗಲೂ ಮಧ್ಯೆ ಮಧ್ಯೆ ಸಿನಿಮಾದಲ್ಲಿ ಬರುವ ಅತಿಥಿ ಅವತಾರಗಳು ಅಗತ್ಯವಿತ್ತೇ ಎನ್ನುವ ಪ್ರಶ್ನೆ ಉದ್ಭವಿಸುವುದುಂಟು. ಕಥೆಯ ಓಘಕ್ಕೆ ಈ ಪಾತ್ರಗಳನ್ನು ಸೃಷ್ಟಿಸಲಾಗಿದೆ ಎಂಬ ಕಾರಣ ಕೊಟ್ಟುಕೊಂಡರೂ ಪ್ರೇಕ್ಷಕನ ಚಿತ್ತದ ಮೇಲೆ ಉಳಿದುಕೊಳ್ಳುವುದಿಲ್ಲ.
ವಿಶ್ವ ಸಿನಿಮಾದ ಈ ಪೋಸ್ಟ್ ಓದಿ : ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್: ಸಂತಸದ ಶೋಧನೆಯ ಹಾದಿ
ದೀಪಿಕಾ ಪಡುಕೋಣೆ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರೊಂದಿಗೆ ಭೈರವ ಮತ್ತು ಅವನ ವಾಹನ ಭುಜ್ಜಿಯ ಸಖ್ಯ ರಂಜನೆ ನೀಡುವುದರಲ್ಲಿ ಸೋಲುವುದಿಲ್ಲ. ಖುಷಿಯಾಗುವುದು ಸಂತೋಷ್ ಶಿವನ್ ಅವರ ಸಂಗೀತದ ಹಿನ್ನೆಲೆ. ಜೋರ್ಡಿ ಸ್ಟೊಜಿಕೊವಿಕ್ ರ ಛಾಯಾಗ್ರಹಣ ಸಿನಿಮಾದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ಒಂದು ವೈಜ್ಞಾನಿಕ ಹಿನ್ನೆಲೆಯ ಕಥಾಚಿತ್ರದಂತೆ ಮಾಡಲು ಪ್ರಯತ್ನಿಸಿರು ವುದನ್ನು ಮೆಚ್ಚಬೇಕು.
ಮೂರು ಗಂಟೆಯ ಸಿನಿಮಾ ನೋಡಿ ಹೊರಗೆ ಬರುವಾಗ ಚಿತ್ತದಲ್ಲಿ ಮೊದಲು ಬರುವುದು ಅಶ್ವತ್ಥಾಮ !