Friday, March 21, 2025
spot_img
More

    Latest Posts

    Kannada Classics: ಇಂದಿಗೂ ಕ್ಲಾಸಿಕ್‌ ಬೂತಯ್ಯನ ಮಗ ಅಯ್ಯು

    ಕನ್ನಡದ ಕ್ಲಾಸಿಕ್‌ ಚಲನಚಿತ್ರಗಳು ಹಲವು. ಈ ಕ್ಲಾಸಿಕ್‌ ಗಳೆಂದು ಗುರುತಿಸುವಾಗ ಅದರಲ್ಲಿ ವಾಣಿಜ್ಯಾತ್ಮಕ, ಕಲಾತ್ಮಕ, ಬ್ರಿಡ್ಜ್‌ ಸಿನಿಮಾ ಎಂದೆಲ್ಲ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ವಿಭಾಗಗಳ ಗಡಿ ದಾಟಿ ಅ ಕ್ಲಾಸಿಕ್‌ ಸಿನಿಮಾಗಳು ನಿಲ್ಲುತ್ತವೆ. ಆದ್ದರಿಂದ ಯಾವುದೋ ಒಂದು ಗೂಟಕ್ಕೆ ಈ ಕ್ಲಾಸಿಕ್‌ ಸಿನಿಮಾಗಳನ್ನು ನೇತು ಹಾಕಲಾಗುವುದಿಲ್ಲ.

    ಒಳ್ಳೆಯ, ಕನ್ನಡದ ಕಂಪನ್ನು ಸದಾ ಪಸರಿಸುವ ಸಿನಿಮಾಗಳೆಂದು ಹೇಳಬಹುದು. ಅಂಥದ್ದರಲ್ಲಿ ಒಂದು ಸಿದ್ದಲಿಂಗಯ್ಯ ನಿರ್ದೆಶನದ ಬೂತಯ್ಯನ ಮಗ ಅಯ್ಯು. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ವೈಯ್ಯಾರಿ ಕಥೆಯನ್ನು ಆಧರಿಸಿದ್ದ ಚಿತ್ರ.

    1974 ರಲ್ಲಿ ತಯಾರಾಗಿದ್ದದ್ದು. ವಿಷ್ಣುವರ್ಧನ್‌, ಬಾಲಕೃಷ್ಣ,. ಜಯಮಾಲ, ಎಂಪಿ ಶಂಕರ್‌, ಲೋಕೇಶ್‌, ಧೀರೇಂದ್ರ ಗೋಪಾಲ್ ಎಲ್ಲರೂ ಅಭಿನಯಿಸಿದ ಚಿತ್ರ. ಅದರ ಕುರಿತಾದ ಒಂದು ಬರಹ ಇಲ್ಲಿದೆ. ಹಳೆಯ ಪುಸ್ತಕಗಳಿಂದ ಹುಡುಕಿದ್ದು.

    ಮಲೆನಾಡ ಹೆಣ್ಣ ಮೈ ಬಣ್ಣ, ವಿರಸವೆಂಬ ವಿಷಕೆ ಬಲಿಯಾದೆ ಏತಕೆ ?…ಸೋಬಾನೆ ಸೋಬಾನೆ ಸೋಬಾನವೇ..ಹೀಗೆ ಒಂದು ಚಿತ್ರದ ಗೀತೆಗಳು, ಚಿತ್ರ ನೋಡಿದ ಮೂವತ್ತೈದು ವರ್ಷಗಳ ನಂತರವೂ ಸಾಲು ಸಾಲಾಗಿ ನೆನಪಾಗುತ್ತವೆ.

    ದೃಶ್ಯಗಳು ಕಣ್ಮುಂದೆ ಬರುತ್ತವೆ ಎಂದರೆ ಚಿತ್ರ ಮೂಡಿಸಿದ ಪರಿಣಾಮದ ಪ್ರಮಾಣದ ಅರಿವಾಗುತ್ತದೆ.

    Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು ಈಗ ರೂಪಾಂತರದ ಗರಿ

    ಅಷ್ಟೇ ಅಲ್ಲ, ಮಲೆನಾಡ ಹೆಣ್ಣ ನಾಚಿಕೆ, ಸದಾ ಕುದಿಯುವ ಅಯ್ಯು ಪಾತ್ರಧಾರಿಯ ಮುಖ, ಉಪ್ಪಿನಕಾಯಿ ಬೇಡುವ ಲೋಕನಾಥರ (ನಟ) ಪಾತ್ರ ಹೀಗೆ ಬೂತಯ್ಯನ ಮಗ ಅಯ್ಯು ಚಿತ್ರದ ದೃಶ್ಯಗಳು ಕಣ್ಮುಂದೆ ಸಾಲುಗಟ್ಟುತ್ತವೆ. ನೋಡಿರುವ ನೂರಾರು ಚಿತ್ರಗಳ ಮಧ್ಯೆ ಈ ಚಿತ್ರ ಎದ್ದು ಕಾಣುತ್ತದೆ.

    ಬೂತಯ್ಯನ ಮಗ ಅಯ್ಯು ನಮಗೆ ಇಷ್ಟವಾಗೋದು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ; ಕಥೆ, ಹಾಸ್ಯ, ಹಾಡುಗಳು, ಚಿತ್ರದ ತಿರುವುಗಳು ಹುಟ್ಟಿಸುವ ಆತಂಕ, ಹಾಸ್ಯಗಳಿಗಾಗಿ ಈ ಚಿತ್ರ ಮನ ತಾಗುವುದು ತನ್ನ ಸರಳ ಕಥೆಯಿಂದ.

    ಎಲ್ಲರೂ ನೋಡಿ, ಕೇಳಿ, ಪಕ್ಕದ ಮನೆಯ ಕಥೆಯೇನೋ ಎಂಬ ಸಹಜ ಕಥಾ ಹಂದರ. ಹಳ್ಳಿಗಳಲ್ಲಿ ಕಾಣ ಸಿಗುವ ಶೋಷಣೆಯನ್ನು ಆಧರಿಸಿ ಕನ್ನಡ, ಹಿಂದಿ, ತೆಲುಗು ಹೀಗೆ ಭಾರತದ ಅನೇಕ ಭಾಷೆಗಳಲ್ಲಿ ಸಿನಿಮಾಗಳನ್ನು ತೆಗೆದಿರುವುದುಂಟು.

    ಆದರೆ ಬೂತಯ್ಯನ ಮಗ ಅಯ್ಯು ಎಲ್ಲಿಯೂ ಅಬ್ಬರಿಸದೇ, ಹಳ್ಳಿ ಜೀವನದ ಅನೇಕ ಸೂಕ್ಷ್ಮ ಸಂವೇದನೆಗಳನ್ನು ಹಾಡು ಹೇಳಿದಷ್ಟು ಸಲೀಸಾಗಿ ಹೇಳುತ್ತಾ ಹೋಗುತ್ತದೆ.

    ಸಾಮಾಜಿಕ ಕಥೆಯಾದರೂ ಜಾನಪದ ಶೈಲಿಯೇನೋ ಎನ್ನುವ ಹಾಗೆ ಸರಳವಾಗಿ ತೇಲುವ ಚಿತ್ರ ಬೂತಯ್ಯನ ಮಗ ಅಯ್ಯು. ಪ್ರೇಮ, ಪ್ರೀತಿ, ಶೋಷಣೆ, ವಿರಸ, ಜಿದ್ದು, ಜಿಪುಣತನಗಳನ್ನು ಪಾತ್ರಗಳು ನೀರು ಕುಡಿದಷ್ಟು ಸಲೀಸಾಗಿ ಬಿಂಬಿಸಿವೆ.

    ಹಿರಿಯರಿರಲಿ, ಕಿರಿಯರಿರಲಿ ಪಾತ್ರಗಳ ಪೋಷಣೆ ತೀರಾ ಆಪ್ತವಾಗುತ್ತದೆ. ನಟ, ನಟಿಯರ ಗಾತ್ರ ಕೂಡ ಪಾತ್ರಗಳಿಗೆ ಸೂಕ್ತವಾಗಿ ಹೊಂದಿ ಕೊಂಡಿವೆ. ಇದು ಅತ್ಯಂತ ಅಪರೂಪ.

    New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್‌ ಹೆಗಡೆ ತಯಾರಿ

    ಬೂತಯ್ಯನ ಮಗ ಅಯ್ಯು ನಮ್ಮನ್ನು ಮೆಚ್ಚಿಸುವುದು ತನ್ನ ಸಂಭಾಷಣೆಗಳ ಮೂಲಕವೂ ಕೂಡ. ಕಾರಣ, ಚಿತ್ರ ಕಥೆಗೆ ನೇರ ಸ್ಪಂದಿಸುವ , ತಿಣುಕದ, ತೀರಾ ಉದ್ದವಲ್ಲದ, ಚುರುಕಾದ, ಆಡಂಬರವಿಲ್ಲದ ಸಂಭಾಷಣೆ. ಎಲ್ಲೂ ಹಳಿ ತಪ್ಪುವುದಿಲ್ಲ.

    ಗ್ರಾಮೀಣ ಸೊಗಡಿನ ಸಂಭಾಷಣಾ ಸೊಬಗು ಚಿತ್ರದುದ್ದಕ್ಕೂ ಸರಾಗವಾಗಿ ಹರಿಯುತ್ತದೆ. ಸಂಭಾಷಣೆಯಲ್ಲಿ ಹಳ್ಳಿ ಜೀವನದ ಸಾರ-ಸೂಕ್ಷ್ಮಗಳು ಸೂಕ್ತವಾಗಿ ಕೇಳಿಸುತ್ತಾ-ಕಾಣಿಸುತ್ತಾ ಹೋಗುತ್ತವೆ.

    ಕಥೆಯುದ್ದಕ್ಕೂ ಒಂದೆರಡು ದೃಶ್ಯಗಳಲ್ಲಿ ಕಾಣಬರುವ ಪಾತ್ರವಿರಲಿ ಅಥವಾ ಚಿತ್ರದುದ್ದಕ್ಕೂ ಬರುವ ಮುಖ್ಯ ಪಾತ್ರಳಾಗಲಿ, ತೋರುವ ಮುಖ ಭಾವಗಳು (exಠಿಡಿessioಟಿs) ತೀರಾ ವಿಶೇಷ.

    ಹಾಗಾಗಿ ಚಿತ್ರ ನೋಡಿದ ಅನೇಕ ವರ್ಷಗಳ ನಂತರವೂ ಜಿಪುಣತನ, ಜಿದ್ದು, ದ್ವೇಷ, ಅಹಂಕಾರ, ಸೊಕ್ಕುಗಳ ಸಾಕಾರ ಮೂರ್ತಿಯ ಹಾಗೆ ಕಾಣಿಸುತ್ತದೆ ಬೂತಯ್ಯನ ಪಾತ್ರ (ಎಂ.ಪಿ.ಶಂಕರ್). ಅಪ್ಪನಿಗೆ ತಕ್ಕ ಮಗ ಎಂಬಂತೆ ಸದ ಕುಡಿಯುವ ಅಯ್ಯು ಪಾತ್ರಧಾರಿ (ಲೋಕೇಶ್) ಮುಖ, ಹಾಗೆ ತಾರುಣ್ಯದ ಸಿಟ್ಟು, ಸೆಡವು, ಪ್ರೀತಿಗಳನ್ನು ಸರಿ ಪ್ರಮಾಣದಲ್ಲಿ ವ್ಯಕ್ತಪಡಿಸುವ ಗುಳ್ಳ(ವಿಷ್ಣುವರ್ಧನ್) ಪಾತ್ರಧಾರಿಯ ಮುಖ ಭಾವಗಳು ತೀರಾ ವಿಶೇಷ.

    ವಿರಸವೆಂಬುದು ಸದಾ ವಿನಾಶದ ಹಾದಿಯೆ ಎಂಬ ಸೂಕ್ತಿ ಸಾರುವ ಚಿತ್ರ ಇದಾದರೂ-ಚಿತ್ರಕಥೆಯಲ್ಲಿ ಸಾಗಿ ಬರುವ (ಕೂಡಿಸಿರುವ, ಜೋಡಿಸಿರುವ, ತುರುಕಿರುವ ಅಲ್ಲ) ಹಾಸ್ಯ ಸನ್ನಿವೇಶಗಳಂತೂ ಕಥೆಗೆ ತೀರಾ ಆಪ್ತವೆನಿಸಿ ನೋಡುಗನ ಮುಖದ ಗಂಟುಗಳನ್ನು ಆಗಾಗ ಸಡಿಲಿಸುತ್ತವೆ.

    ಹಳ್ಳಿಯ ಸೋಮಾರಿಗಳು ಬಂಗಿ ಸೇದುವ ದೃಶ್ಯವಿರಬಹುದು, ಹೆಂಡತಿ ಇಲ್ಲದಾಗ ಸೀರೆ ಉಟ್ಟು ಹಾಲು ಕರೆಯುವ ಸನ್ನಿವೇಶ..ಹೀಗೆ ಹಾಸ್ಯ ಔಚಿತ್ಯಪೂರ್ಣವಾಗಿ ಬೆರೆಯುತ್ತಾ ಹೋಗುತ್ತದೆ.

    ಒಂದೇ ಫುಲ್‌ಮೀಲ್ ಟಿಕೆಟ್‌ನಲ್ಲಿ ನಾಲ್ಕು ಜನ ಊಟ ಮಾಡುವ ದೃಶ್ಯವಂತೂ ಹೊಟ್ಟೆ ಹುಣ್ಣಾಗಿಸುತ್ತದೆ. ಉಪ್ಪಿನ ಕಾಯಿಗಾಗಿ ಹಲ್ಲು ಗಿಂಜುವ ಚಮ್ಮಾರನ (ಲೋಕನಾಥ) ದೈನ್ಯವೇ ಮೂರ್ತಿವೆತ್ತ ಮುಖ ಕರುಣೆಯ ಜೊತೆ ಹಾಸ್ಯವನ್ನೂ ಉಕ್ಕಿಸುತ್ತದೆ.

    ಅಲ್ಲದೇ ನೋಡುಗನ ಮನಸ್ಸಿನಲ್ಲಿ ಒಂದು ಶಾಶ್ವತ ಚಿತ್ರ ಮೂಡಿಸುತ್ತದೆ. ಹಾಸ್ಯ ಸನ್ನಿವೇಶಗಳಲ್ಲಿ ಅಭಿನಯ, ಸಂಭಾಷಣೆ, ಹಾವಭಾವಗಳು ಎಲ್ಲೂ ದಾರಿ ತಪ್ಪುವುದಿಲ್ಲ. ಎಲ್ಲವೂ ಸರಳ, ಸೂಕ್ತ ಎನಿಸುವಂತಿದೆ.

    Kalki 2898 AD: ಕಲ್ಕಿಯಲ್ಲಿ ತ್ರಿಮೂರ್ತಿಗಳದ್ದೇ ದರಬಾರು

    ಸಂಪೂರ್ಣ ಹೊರಾಂಗಣದಲ್ಲೇ ಚಿತ್ರೀಕರಿಸಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಬೂತಯ್ಯನ ಮಗ ಅಯ್ಯು. ಚಿತ್ರಕ್ಕೆ ತಕ್ಕುದಾದ ಪೃಕೃತಿಯನ್ನೂ ಮನಮೋಹಕವಾಗಿ ಸೆರೆ ಹಿಡಿಯಲಾಗಿದೆ.

    ಹಾಡುಗಳಲ್ಲಿ ಚಿತ್ರೀಕರಿಸಿರುವ ಮಲೆನಾಡ ಸೊಬಗಿಹುದು, ಹಳ್ಳಿಯ ಮನೆ, ಓಣಿಗಳಿರಬಹುದು, ಜಾತ್ರೆಯ ದೃಶ್ಯವಿರಬಹುದು, ಎತ್ತಿನ ಓಟದ ಸ್ಪರ್ಧೆ ಇರಬಹುದು..ಎಲ್ಲವೂ ಅಚ್ಚುಕಟ್ಟು.

    ಸ್ತ್ರೀ ಪಾತ್ರಧಾರಿಗಳಂತೂ ಹಳ್ಳಿಯ ಹೆಂಗಸರ ಭಾವನೆಗಳ ಪಡಿಯಚ್ಚು. ನಟಿಯರಾದ ಎಲ್.ವಿ. ಶಾರದಾ, ಭವಾನಿಯರಂತೂ ವಾತ್ಸಲ್ಯ, ಪ್ರೇಮ, ದೈನ್ಯತೆ, ಹೆದರಿಕೆಗಳ ಪಡಿಯಚ್ಚಿನಂತೆ ಅಭಿನಯಿಸಿದ್ದಾರೆ.

    ಎಲ್ಲೂ ಭಾಷಣಗಳಿಗೆ ಉದ್ದುದ್ದ ಸಂಭಾಷಣೆಗಳಿಗೆ, ನಟ ನಿಷ್ಠ ಮ್ಯಾನರಿಸಂಗಳಿಗೆ, ಪ್ರಾಮುಖ್ಯತೆ ಕೊಡದ ಚಿತ್ರವಿದು. ಪ್ರಾರಂಭದಿಂದ ಕೊನೆಯವರೆಗೂ ನೋಡುಗನನ್ನು ಕಥೆಯ ಭಾಗವಾಗಿಸುತ್ತದೆ.

    ಒಟ್ಟಾರೆ ಹದವರಿತ ತಿರುವುಗಳು, ಚುರುಕಾದ ಸಂಭಾಷಣೆ, ಸಹಜವಾದ ಹಳ್ಳಿಯ, ಹಳ್ಳಿ ಮನೆಯ ವಾತಾವರಣ, ಮಲೆನಾಡ ಪ್ರಕೃತಿಯ ಸಿರಿ, ಉಸಿರು ಬಿಗಿ ಹಿಡಿಸುವ ಕ್ಲೈಮ್ಯಾಕ್ಸ್ ಎಂಥ ನೋಡುಗನಿಗೂ ಬೂತಯ್ಯನ ಮಗ ಅಯ್ಯು ಆಪ್ತವೆನಿಸುತ್ತದೆ. ಅದೇ ಆ ಚಿತ್ರದ ಶ್ರೇಷ್ಠತನ.

    (ಲೇಖಕ : ಸುರೇಂದ್ರನಾಥ ಸಾತ್ವಿಕ್‌, ಲೇಖನ ಕೃಪೆ : ಸಾಂಗತ್ಯ)

    Latest Posts

    spot_imgspot_img

    Don't Miss