ಹತ್ತಿರದ ನೇಪಾಳದಲ್ಲೂ ಭಾರತದ್ದೇ ಹವಾ..!
ಹೀಗೆ ಹೇಳಿದರೆ ತಪ್ಪಾಗದು. ನೇಪಾಳ ದೇಶದಲ್ಲೂ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾದ ಲೆಕ್ಕ ತೆಗೆದರೆ ಸಿಗುವುದು ಭಾರತದ್ದೇ.
ಅಲ್ಲಿನ ಅಂಕಿಅಂಶಗಳ ಪ್ರಕಾರ ಎಸ್. ಎಸ್. ರಾಜಮೌಳಿಯವರ ಬಾಹುಬಲಿ ಭಾಗ ಎರಡು ಅತ್ಯಂತ ಹೆಚ್ಚು ಗಳಿಕೆ ಕಂಡಿದೆ. ಈ ಗಳಿಕೆ ಸ್ಥಳೀಯ ನೇಪಾಳಿ ಸಿನಿಮಾಗಳಿಗಿಂತಲೂ ಹೆಚ್ಚು. 2017 ರಲ್ಲಿ ಬಾಹುಬಲಿ ಬಿಡುಗಡೆಯಾದ ಸಂದರ್ಭದಲ್ಲಿ ಆ ವರ್ಷ ನೇಪಾಳಿ ಸಿನಿಮಾ ರಂಗದಲ್ಲೇ ಈ ಸಿನಿಮಾವೇ ಅತಿ ಹೆಚ್ಚು ಗಳಿಕೆ ಮಾಡಿತ್ತಂತೆ. ಸುಮಾರು 23 ಕೋಟಿ ರೂ. ಗಳು.
ನೇಪಾಳಿ ನೆಲದಲ್ಲಿ ವಿದೇಶಿ ಸಿನಿಮಾಗಳಿಗೆ ಬೇಡಿಕೆ ಇದೆ. ಅದರಲ್ಲೂ ಹಾಲಿವುಡ್ ಗಿಂತಲೂ ನಮ್ಮದೇಶದ ಸಿನಿಮಾಗಳಿಗೆ ಹೆಚ್ಚು ಬೇಡಿಕೆ ಇದೆ. ಒಟ್ಟೂ ನೇಪಾಳಿ ನೆಲದ ವಿದೇಶಿ ಸಿನಿಮಾಗಳ ಯಶಸ್ಸು ಕಂಡರೆ ರಾಜಮೌಳಿಯವರ ಬಾಹುಬಲಿ ಅನಂತರದ ಸ್ಥಾನ ಇರುವುದು ಪ್ರಶಾಂತ್ ನೀಲ್ ನಿರ್ದೇಶಿಸಿ ಯಶ್ ಅಭಿನಯಿಸಿದ ಕನ್ನಡದ ಕೆಜಿಎಫ್ 2. ಅದು 2022 ರಲ್ಲಿ 19 ಕೋಟಿ ರೂ. ಗಳಿಸಿತ್ತಂತೆ.
45 : ಚಿತ್ರೀಕರಣ ಮುಗೀತು? ಬಿಡುಗಡೆ ದೀಪಾವಳಿಗೋ? ಸಂಕ್ರಾಂತಿಗೋ?
ಉಳಿದ 8 ಸ್ಥಾನಗಳಲ್ಲಿ ಎರಡು ತೆಲುಗು ಹಾಗೂ ಆರು ಹಿಂದಿ ಸಿನಿಮಾಗಳಿಗೆ ದಕ್ಕಿದೆ. ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ 15 ಕೋಟಿ ರೂ. ಗಳಿಸಿದರೆ, ರಾಜಮೌಳಿಯ ಆರ್ ಆರ್ ಆರ್ 13 ಕೋಟಿ ರೂ. ಗಳಿಸಿತ್ತು. ಸಿದ್ಧಾರ್ಥ್ ಆನಂದರ ಪಠಾಣ್ ಸಹ 13 ಕೋಟಿ ರೂ. ಗಳಿಸಿದರೆ, ಅತ್ಲಿಕುಮಾರ್ ರ ಜವಾನ್ 12 ಕೋಟಿ ರೂ., ನಿತೇಶ್ ತಿವಾರಿಯ ದಂಗಲ್ 12 ಕೋಟಿ ರೂ, ಸಂದೀಪ್ ರೆಡ್ಡಿಯ ಅನಿಮಲ್ ಹಾಗೂ ರಾಜ್ ಕುಮಾರ್ ಹಿರಾನಿಯ ಪಿಕೆ 10 ಕೋಟಿ ರೂ. ಗಳಿಸಿವೆ.
ಹಾಗೆ ನೋಡಿದರೆ ಹಾಲಿವುಡ್ ಸಿನಿಮಾಗಳಲ್ಲಿ ಅವತಾರ್ ಹಾಗೂ ಸ್ಪೈಡರ್ ಮ್ಯಾನ್ ಸಿನಿಮಾ ಅನುಕ್ರಮವಾಗಿ 8 ಹಾಗೂ 7 ಕೋಟಿ ರೂ. ಗಳನ್ನು ಗಳಿಸಿವೆ. ಹಿಂದಿ ಬಿಟ್ಟರೆ ತೆಲುಗಿನ ಸಿನಿಮಾ ಸ್ವಲ್ಪ ಹೆಚ್ಚು ಸದ್ದು ಮಾಡಿದೆ. ಪ್ರಶಾಂತ್ ನೀಲ್ ರ ಸಲಾರ್ ಸಹ ಇಲ್ಲಿ ಸ್ವಲ್ಪ ಸದ್ದು ಮಾಡಿತ್ತು. ಇದು ಪ್ರಭಾಸ್ ಗೆ ಸದ್ದು ಮಾಡಿತೋ ಅಥವಾ ಒಟ್ಟೂ ಸಿನಿಮಾವಾಗಿಯೋ ಸ್ಪಷ್ಟವಾಗಿ ಮಾಹಿತಿ ಇಲ್ಲ. ಆದರೆ ಇದುವರೆಗೆ ಹಿಟ್ ಆಗಿರುವ 4 ತೆಲುಗು ಸಿನಿಮಾಗಳಲ್ಲಿ ಆರ್ ಆರ್ ಆರ್ ಹೊರತುಪಡಿಸಿದರೆ ಉಳಿದೆಲ್ಲವೂ ಪ್ರಭಾಸ್ ಅಭಿನಯದ್ದು. ಆರ್ ಆರ್ ಆರ್ ನಲ್ಲಿ ಮಾತ್ರ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯವಿದೆ.
MAMI: ಮಾಮಿ ವೇದಿಕೆ ಸಜ್ಜು; ಅಕ್ಟೋಬರ್ 19-24 ದಕ್ಷಿಣ ಏಷ್ಯಾದ ಪ್ರಮುಖ ಸಿನಿಮೋತ್ಸವ
ನೇಪಾಳಿ ಚಿತ್ರರಂಗ ತರುಣ ಪ್ರಾಯದ್ದು. ಹಿಂದೆ ಸರಕಾರವೇ ಸಿನಿಮಾಗಳನ್ನು ನಿರ್ಮಿಸುವ, ಹಂಚಿಕೆ ಮಾಡುವ ಹೊಣೆ ವಹಿಸಿಕೊಂಡಿತ್ತು. ಈಗೀಗ ಸ್ವತಂತ್ರ ಹಾಗೂ ಸಾಂಸ್ಥಿಕ ನೆಲೆಯಲ್ಲಿ ಸಿನಿಮಾ ನಿರ್ಮಾಣ ಆರಂಭವಾಗಿದೆ.
ಹಿಂದಿ ಹೊರತುಪಡಿಸಿದಂತೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ನೇಪಾಳದಲ್ಲಿ ಚಿಗುರುತ್ತಿರುವುದು ಎರಡೇ. ಒಂದು ತೆಲುಗು, ಮತ್ತೊಂದು ಕನ್ನಡ ಎಂಬುದು ವಿಶೇಷ.