ಈ ಕಿರುತೆರೆಯ ರಿಯಾಲಿಟಿ ಷೋಗಳಿಂದ, ಧಾರಾವಾಹಿಗಳಿಂದ ನಟ ನಟಿಯರಾಗಿರುವವರಿಗೆ ಕೊರತೆ ಇಲ್ಲ. ಒಂದೇ, ಎರಡೇ ನೂರಾರು ಹೆಸರುಗಳನ್ನು ಉಲ್ಲೇಖಿಸಬಹುದು. ನಟ ಗಣೇಶ್ ಸಹ ಕಿರುತೆರೆಯ ಪ್ರತಿಭೆ. ಹಾಗೆಂದು ಬಂದವರೆಲ್ಲ ಬಾವಿ ನೀರು ಸೇದಿಲ್ಲ, ಕೆಲವರು ಇನ್ನೂ ಹಗ್ಗ ಹಿಡಿದುಕೊಂಡೇ ನಿಂತಿದ್ದಾರೆ, ಇನ್ನು ಕೆಲವರು ಹಗ್ಗವನ್ನು ಬಾವಿಗೆ ಬಿಟ್ಟು ಕೊಡದಲ್ಲಿ ನೀರು ತುಂಬುವುದನ್ನು ಕಾಯುತ್ತಾ ಕುಳಿತಿದ್ದಾರೆ, ಇನ್ನು ಕೆಲವರ ದುರಾದೃಷ್ಟವೋ, ಅದೃಷ್ಟವೋ ಗೊತ್ತಿಲ್ಲ.
ಬಾವಿಗೆ ಹಗ್ಗ ಬಿಟ್ಟು, ಕೊಡ ತುಂಬಿ ಮೇಲಕ್ಕೆ ಸೆಳೆದುಕೊಳ್ಳಬೇಕೆನ್ನುವಷ್ಟರಲ್ಲಿ ಕಂಠ ಜಾರಿ ಕೊಡವೇ ಬಾವಿಗೆ ಬಿದ್ದ ಪ್ರಸಂಗಗಳೂ ಇವೆ. ಖುಷಿಯ ಸಂಗತಿಯೆಂದರೆ ಇಷ್ಟರ ಮಧ್ಯೆಯೂ ಬಾವಿಗೆ ಬರುವವರ ಸಂಖ್ಯೆ ನಿಂತಿಲ್ಲ, ಹಗ್ಗ ಹಾಕುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಬಾವಿಗೆ ಕೊಡವನ್ನು ಬಿಡುವವರೂ, ಮೇಲಕ್ಕೆ ಸೆಳೆದುಕೊಳ್ಳುವ ನಿರೀಕ್ಷೆಯಲ್ಲಿ ನಿಲ್ಲುವವರ ಸಂಖ್ಯೆಯೂ ಕುಸಿದಿಲ್ಲ.
ಇದೂ ಇಷ್ಟವಾಗಬಹುದು, ಓದಿ: New Release : ಇಬ್ಬನಿ ತಬ್ಬಿದ ಇಳೆಯಲಿ; ಅಲ್ಲಿ ಇಲ್ಲಿ ನೋಡಬೇಡಿ, ಚಿತ್ರಮಂದಿರಕ್ಕೆ ಬನ್ನಿ
ಈ ಮಧ್ಯೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಷೋನ ಮತ್ತೊಂದು ಪ್ರತಿಭೆ ಹಿರಿ ತೆರೆಗೆ ಬರುತ್ತಿದ್ದಾರೆ. ಮಡೆನೂರ್ ಮನು ಈ ಪ್ರತಿಭೆ. ಇವರು ಅಭಿನಯಿಸುತ್ತಿರುವ ಸಿನಿಮಾ ಕುಲದಲ್ಲಿ ಕೀಳ್ಯಾವುದೋ.
ಈಗಾಗಲೇ ಚಿತ್ರದ ಮೊದಲ ನೋಟವಾಗಿ ಟೀಸರ್ ಬಿಡುಗಡೆಯಾಗಿದೆ. ತಾರಾಗಣದಲ್ಲಿ ಮನು ಜತೆಗೆ ಸೋನಾಲ್ ಮೊಂತೆರೊ, ಮೌನ ಗುಡ್ಡೆಮನೆ, ರಂಗಾಯಣ ರಘು, ದಿಗಂತ್ ಶರತ್ ಲೋಹಿತಾಶ್ವ, ಸೋನಾಲ್ ಮೊಂತೆರೊ ಮತ್ತಿತರರು ಇದ್ದಾರೆ. ಯೋಗರಾಜ್ ಸಿನಿಮಾಸ್ ಮತ್ತು ಪರ್ಲ್ ಸಿನಿ ಕ್ರಿಯೇಷನ್ಸ್ ನಡಿ ರೂಪುಗೊಳ್ಳುತ್ತಿರುವ ಚಿತ್ರವಿದು.
ಸಂತೋಷ್ ಕುಮಾರ್ ಎ ಕೆ ಮತ್ತು ವಿದ್ಯಾ ನಿರ್ಮಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸಕಲೇಶಪುರ, ಹಾಸನ, ರಾಮನಗರ, ಬೆಂಗಳೂರು ಮತ್ತಿತರ ಕಡೆ ನಡೆಯಲಿದೆ. ಈ ತಿಂಗಳೇ ಭರದಿಂದ ಚಿತ್ರೀಕರಣ ನಡೆಸುವ ಅಂದಾಜಿದೆ. ಹೀಗೆ ನೋಡಿದರೆ ದೀಪಾವಳಿಗೆ ಚಿತ್ರ ಬಿಡುಗಡೆಯಾಗಬಹುದೇನೋ?
ಇದೂ ಇಷ್ಟವಾಗಬಹುದು, ಓದಿ: Laughing Buddha: ಶೆಟ್ಟರಿಬ್ಬರು ನಗಲಿಕ್ಕೆ ಮತ್ತೊಂದು ಭರ್ಜರಿ ವೀಕೆಂಡ್
ಚಿತ್ರಕ್ಕೆ ಕಥೆ ಬರೆದಿರುವವರು ಯೋಗರಾಜ್ ಭಟ್ ಮತ್ತು ಇಸ್ಲಾಮುದ್ದೀನ್. ಚಿತ್ರಕ್ಕೆ ಯೋಗರಾಜ ಭಟ್ ಹಾಗೂ ಕವಿ ಜಯಂತ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಂದ ಮೇಲೆ ಒಟ್ಟೂ ಚಿತ್ರ ಹೇಗಿರುತ್ತದೋ ಏನೋ? ಒಂದಿಷ್ಟು ಹಾಡುಗಳು ಹಾಗೂ ಸಂಗೀತ ಮನಕ್ಕೆ ಮುದ ನೀಡಬಹುದು.
ಇದೂ ಇಷ್ಟವಾಗಬಹುದು, ಓದಿ: New Movie:ದೀಪಾವಳಿ ಮಾಸದಲ್ಲಿ ಭೈರತಿ ರಣಗಲ್ ಬಿಡುಗಡೆ : ನ. 15 ರಂದು ಪಟಾಕಿ ಶಬ್ದ ಮಾಡುತ್ತಾ?
ಕಥೆಯನ್ನು ಬೆಟ್ಟಕ್ಕೆ ಹತ್ತಿಸುವುದು ನಿರ್ದೇಶಕ ಹಾಗೂ ನಾಯಕ ನಟನ ಕೆಲಸ. ಅದು ಎಷ್ಟರಮಟ್ಟಿಗೆ ಆಗುತ್ತದೋ ಅಷ್ಟರ ಮಟ್ಟಿಗೆ ಕಥೆ ಬೆಟ್ಟ ಹತ್ತುತ್ತದೆ. ಇಲ್ಲದಿದ್ದರೆ ಎತ್ತೂ ನೀರಿಗೇ ಎಳೆಯುತ್ತದೆ, ಕೋಣವೂ ಸಹ ಎಳೆಯುವುದು ನೀರಿಗೇ, ಏರಿಗಲ್ಲ.
ಆದರೆ ಈ ಪ್ರತಿಭೆಯ ಹಿಂದೆ ಗಜಗಣವೇ ಇದೆ. ಹಾಗಾಗಿ ಮೆರವಣಿಗೆ ಅಬ್ಬರವಾಗಿರುತ್ತದೆಯೋ, ಮದುವೆಯೇ (ಅಂದರೆ ಸಿನಿಮಾ) ಅದ್ದೂರಿಯಾಗಿರುತ್ತದೆಯೋ ಕಾದು ನೋಡಬೇಕು.