ಮಾಮಿ– ಮುಂಬಯಿ ಫಿಲ್ಮ್ ಫೆಸ್ಟಿವಲ್‌ನ ಹೊಸ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 19 ರಿಂದ 24, 2024 ರವರೆಗೆ ಸಿನಿಮೋತ್ಸವ ನಡೆಯಲಿದೆ. ಈಗಾಗಲೇ ಸಿನಿಮಾಗಳ ಆಯ್ಕೆಗಳೆಲ್ಲವೂ ಮುಗಿದಿದೆ. ಈ ವರ್ಷ 45 ರಾಷ್ಟ್ರಗಳ 50 ಕ್ಕೂ ಹೆಚ್ಚು ಭಾಷೆಗಳ 110 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
IFFI55: ಇಫಿ ಚಿತ್ರೋತ್ಸವಕ್ಕೆ ಸಜ್ಜಾಗಿ; ಪ್ರತಿನಿಧಿಯಾಗಿ ನೋಂದಾಯಿಸಿ
ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಚಿತ್ರೋತ್ಸವವಾಗಿ ಗುರುತಿಸಿಕೊಂಡಿರುವ ಮಾಮಿಯಲ್ಲಿ ಈ ಬಾರಿಯೂ ದಕ್ಷಿಣ ಏಷ್ಯಾದ ಅತ್ಯುತ್ತಮ ಚಿತ್ರಕ್ಕೆ ಪುರಸ್ಕಾರವಿರಲಿದೆ. ದಕ್ಷಿಣ ಏಷ್ಯಾದ ಸಿನಿಮಾಕರ್ತರ ಧ್ವನಿಯನ್ನು ಪ್ರಧಾನವಾಗಿ ಪ್ರತಿಧ್ವನಿಸುವುದಕ್ಕೆ ಇದು ವೇದಿಕೆಯಾಗಲಿದೆ.
ಈ ವರ್ಷ ಪ್ರಶಸ್ತಿಯ ಸ್ಪರ್ಧೆಯಲ್ಲಿ 11 ಸಿನಿಮಾಗಳು ಇವೆ. ದಕ್ಷಿಣ ಏಷ್ಯಾದ ವಿವಿಧ ರಾಷ್ಟ್ರಗಳ 7 ಹಾಗೂ ಭಾರತದ 4 ಸಿನಿಮಾಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ 11 ರಲ್ಲಿ ಐದು ಸಿನಿಮಾಗಳನ್ನು ಚಿತ್ರ ನಿರ್ದೇಶಕಿಯರು ಪ್ರತಿನಿಧಿಸಿದ್ದಾರೆ. ಕಥಾಚಿತ್ರ, ಸಾಕ್ಷ್ಯಚಿತ್ರ, ಅನಿಮೇಷನ್ ಎಲ್ಲದಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೇ ಎರಡು ಚಿತ್ರಗಳು ಈಗಾಗಲೇ ಆಯಾ ದೇಶಗಳಿಂದ ಮುಂದಿನ ಆಸ್ಕರ್ ಗೆ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಗೆ ಸ್ಪರ್ಧಿಸಲು ನಾಮ ನಿರ್ದೇಶನಗೊಂಡಿವೆ.
Oscar: ಆಸ್ಕರ್ ನಾಮನಿರ್ದೇಶನದ ಪಟ್ಟಿಯಲ್ಲಿ ಒಂದೂ ಕನ್ನಡ ಚಿತ್ರವಿಲ್ಲ
ದಕ್ಷಿಣ ಏಷ್ಯಾದ ಸಿನಿಮಾಗಳಲ್ಲಿ ಕಥಾ ಚಿತ್ರ, ಕಥೇತರ ಚಿತ್ರಗಳೂ ಸೇರಿವೆ. ಸ್ಪರ್ಧೆಯಲ್ಲಿರದ ಚಿತ್ರಗಳೂ ಸಾಕಷ್ಟು ಕುತೂಹಲ ಮೂಡಿಸಿವೆ. ಮುಖ್ಯವಾಗಿ ದಕ್ಷಿಣ ಏಷ್ಯಾಕ್ಕೆ ಸೇರದ ಇಬ್ಬರು ನಿರ್ದೇಶಕರು ದಕ್ಷಿಣ ಏಷ್ಯಾದ ವಿಷಯಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ರೂಪಿಸಿದ್ದಾರೆ. ಹಾಗಾಗಿ ಈ ಬಾರಿ ಒಟ್ಟೂ ಚಿತ್ರೋತ್ಸವದಲ್ಲಿನ ಚಿತ್ರಗಳು ವಿಭಿನ್ನ ಅನುಭವವನ್ನು ನೀಡಲಿವೆ ಎನ್ನುತ್ತಾರೆ ಸಂಘಟನಕಾರರು.
ವಿಶ್ವ ಸಿನಿಮಾ ವಿಭಾಗದಲ್ಲೂ ಈ ವರ್ಷದ ಅತ್ಯಂತ ಪ್ರಮುಖ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪೆದ್ರೊ ಅಲ್ಮೊದವರ್ ನ ದಿ ರೂಮ್ ನೆಕ್ಟ್ಸ್ ಡೋರ್, ಜಾಕ್ವೆಸ್ ಅಡಿಯಾರ್ ನ ಎಮಿಲಿಯಾ ಪೆರೆಜ್, ಕೊರೆಲ್ ಫಾಗೆಟ್ ನ ದಿ ಸಬ್ ಸ್ಟ್ಯಾನ್ಸ್, ಅರೋನ್ ಶಿಂಬರ್ಗ್ ನ ಎ ಡಿಫ್ರೆಂಟ್ ಮ್ಯಾನ್, ಅಥಿನಾ ರಚೆಲ್ ಸಂಗಾರಿಯ ಹಾರ್ವೆಸ್ಟ್, ಒಲಿವರ್ ಅಸಾಯಸ್ ನ ಸಸ್ಪೆಂಡೆಡ್ ಟೈಮ್, ಗೈ ಮಾಡಿನ್ ನ ರೂಮರ್ಸ್, ಡೆ ಕುಲುಂಬೆಗಶ್ವಿಲಿಯ ಎಪ್ರಿಲ್ ಹಾಗೂ ಮ್ಯಾಥ್ಯೂ ರಂಕಿನ್ ರ ಯೂನಿವರ್ಸಲ್ ಸಿನಿಮಾ ಪ್ರಮುಖವಾಗಿವೆ. ಕಾನ್ ಚಿತ್ರೋತ್ಸವ, ಬರ್ಲಿನ್ ಚಿತ್ರೋತ್ಸವ, ಸಂಡೇಸ್, ವೆನಿಸ್ ಸಿನಿಮೋತ್ಸವ ಸೇರಿದಂತೆ ವಿವಿಧ ಚಿತ್ರೋತ್ಸವಗಳಲ್ಲಿ ಪುರಸ್ಕಾರ ಪಡೆದ ಚಿತ್ರಗಳೂ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.
From Ground Zero: ಪ್ಯಾಲೆಸ್ತೀನ್ ನ ಪ್ರಸ್ತುತ ಸ್ಥಿತಿಗೆ ಈ 22 ಸಿನಿಮಾ ಕನ್ನಡಿ
ಇದರೊಂದಿಗೆ 2024 ರ ಅಸ್ಕರ್ ಗೆ ನಾಮ ನಿರ್ದೇಶನಗೊಂಡಿರುವ ಅರ್ಜೆಂಟೈನಾ, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಐರ್ಲ್ಯಾಂಡ್, ಜಪಾನ್, ನೇಪಾಳ, ನಾರ್ವೆ ಹಾಗೂ ಬ್ರಿಟನ್ ನ ಚಿತ್ರಗಳೂ ಪ್ರದರ್ಶನಕ್ಕೆ ಸಿದ್ಧವಾಗಿವೆ. ಉಳಿದ ಎಲ್ಲ ಸಿದ್ಧತೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.