ಹೆಸರಾಂತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಸಿನಿಮಾ ಮಂಥನ್ ಜೂನ್ 1 ಮತ್ತು 2 ರಂದು ದೇಶದ 50 ನಗರಗಳಲ್ಲಿ ನೂರಕ್ಕೂ ಹೆಚ್ಚು ಚಲನಚಿತ್ರಮಂದಿರಗಳಲ್ಲಿ ಮರು ಪ್ರದರ್ಶನಗೊಳ್ಳುತ್ತಿದೆ. ಇದರ ವಿಶೇಷವೆಂದರೆ ಇಡೀ ಚಿತ್ರವನ್ನು ಪುನರ್ ರೂಪಣ (ರೆಸ್ಟೋರ್ಡ್) ಮಾಡಿ, ಹೊಸ ಹೊಚ್ಚ ಕಾಪಿಯಾಗಿ ಮುದ್ರಿಸಲಾಗಿದೆ. ಆ ಹೊಚ್ಚ ಹೊಸ ಕಾಪಿ ಸಿನಿ ಪ್ರಿಯರಿಗೆ ವೀಕ್ಷಿಸಲು ಬಿಡುಗಡೆಯಾಗುತ್ತಿದೆ. ಇದು ಐದು ಲಕ್ಷ ಮಂದಿ ರೈತ-ಹೈನುಗಾರರು ನಿರ್ಮಿಸಿದ ಚಿತ್ರ. ಜಗತ್ತಿನಲ್ಲೇ ಒಂದು ಚಿತ್ರಕ್ಕೆ ಇಷ್ಟೊಂದು ಮಂದಿ ನಿರ್ಮಾಪಕರಿರುವುದು ಈ ಸಿನಿಮಾಕ್ಕೆ ಮಾತ್ರ ಅನಿಸುತ್ತದೆ. ಐದು ಲಕ್ಷ ಮಂದಿ ನಿರ್ಮಾಪಕರು ಸೇರಿ ನಿರ್ಮಿಸಿದ ಒಂದು ಸಿನಿಮಾ ಮಂಥನ್. ಅದೇ ಒಂದು ವಿಶ್ವ ದಾಖಲೆ.
ಫಿಲ್ಮ್ ಹೆರಿಟೇಜ್ ಫೌಂಡೇಷನ್ ಈ ಚಿತ್ರವನ್ನು ಪುನರ್ ರೂಪಿಸಿದ್ದು (ರೆಸ್ಟೋರ್), ಸಂಸ್ಥೆಯ ನಿರ್ದೇಶಕ ಶಿವೇಂದ್ರ ಸಿಂಗ್ ಡುಂಗರ್ ಪುರ್ ಅವರು ತಮ್ಮ ಸಂತೋಷವನ್ನು ಮೊನ್ನೆಯಷ್ಟೇ ಮುಗಿದ ಕಾನ್ಸ್ ಚಿತ್ರೋತ್ಸವದಲ್ಲಿ ಹಂಚಿಕೊಂಡಿದ್ದರು. ಈ ವರ್ಷ ಮಂಥನ್ ಅಲ್ಲಿ ಪುನರ್ ರೂಪಿತ ಕ್ಲಾಸಿಕ್ಸ್ ವಿಭಾಗದಲ್ಲಿ ಪ್ರದರ್ಶಿತವಾಗಿತ್ತು. ಶ್ಯಾಮ್ ಬೆನಗಲ್ ಬದಲಾಗಿ ಆ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದ ನಟ ನಾಸಿರುದ್ದೀನ್ ಷಾ ಕಾನ್ಸ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಚಿತ್ರ ಪ್ರದರ್ಶನದ ಬಳಿಕ ಪ್ರೇಕ್ಷಕರ ಸುದೀರ್ಘ ಕರತಾಡನದ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಲಾಗಿತ್ತು.
ಜೂನ್ ಒಂದು ಮತ್ತು 2 ರಂದು ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಮುಂಬಯಿ, ಪುಣೆ, ನಾಗಪುರ, ಸೂರತ್, ಅಹಮದಾಬಾದ್, ವಡೋದರಾ, ಆನಂದ್, ಗಾಂಧಿನಗರ, ಜಾಮ್ ನಗರ, ನಡಿಯಾದ್, ಕೋಲ್ಕತ್ತಾ, ಭುವನೇಶ್ವರ, ಚೆನ್ನೈ, ಡೆಹ್ರಾಡೂನ್, ದಿಲ್ಲಿ, ನೋಯ್ಡಾ, ಗುರುಗ್ರಾಮ, ಲಕ್ನೋ, ಪಾಟ್ನಾ, ಮುಝಾಫರ್ ಪುರ, ಲೂಧಿಯಾನ, ಭಟಿಂಡಾ, ಚಂಡೀಗಢ, ಜಲಂಧರ್, ಕೊಯಮತ್ತೂರು, ಕೊಚ್ಚಿ, ತಿರುವನಂತಪುರಂ, ಹೈದರಾಬಾದ್, ವಿಶಾಖಪಟ್ಟಣಂ, ಕಾಕಿನಾಡ, ರಾಜ್ ಕೋಟ್, ರೂರ್ಕೆಲಾ, ಗುವಾಹತಿ, ಮೊಹಾಲಿ, ಇಂದೋರ್, ಭೋಪಾಲ್, ವಿಜಯವಾಡ ಹಾಗೂ ಜೈಪುರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ನೋಡಿ, ತಪ್ಪಿಸಿಕೊಳ್ಳಬೇಡಿ. ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.
ಬೆಂಗಳೂರಿನ ಪಿವಿಆರ್ ವೆಗಾ ಸಿಟಿ, ಪಿವಿಆರ್ ಮಾರ್ಕೆಟ್ ಸಿಟಿ, ಪಿವಿಆರ್ ಡಿಸಿ ರೆಕ್ಸ್, ಐನಾಕ್ಸ್ ಮಾಲ್ ಆಫ್ ಏಷ್ಯಾ, ಪಿವಿಆರ್ ಓರಿಯಾನ್, ಸಿನೆಪೊಲಿಸ್ ಆರ್ ಎಂಎಂ, ಸಿನೆಪೊಲಿಸ್ ಶಾಂತಿನಿಕೇತನ್, ಸಿ ಸೋಭಾ ಗ್ಲೋಬಲ್ ನಲ್ಲಿ ಪ್ರದರ್ಶಿತವಾದರೆ, ಮಂಗಳೂರಿನಲ್ಲಿ ಪಿವಿಆರ್ ಫೋರಂನಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ. ಹುಬ್ಬಳ್ಳಿಯಲ್ಲಿ ಪಿವಿಆರ್, ಧಾರವಾಡದಲ್ಲಿ ಐನಾಕ್ಸ್ ಸ್ಮಾರ್ಟ್ ಸಿಟಿ, ಮೈಸೂರಿನ ಪಿವಿಆರ್ ಫೋರಂ ಹಾಗೂ ಐನಾಕ್ಸ್ ಎಂಎಫ್ ನಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ.
Manthan at cannes : ಈ ಅಪೂರ್ವ ಘಳಿಗೆಯಲ್ಲಿ ಅವರೆಲ್ಲ ಇರಬೇಕಿತ್ತು
ಮಂಥನ್ 1976 ರಲ್ಲಿ ರೂಪುಗೊಂಡ ಚಿತ್ರ. ಬಹಳ ವಿಶೇಷವಾದ ಪ್ರಯತ್ನವಿದು. ಈಗ ಕ್ರೌಡ್ ಫಂಡಿಂಗ್ ಜನಪ್ರಿಯವಾಗುತ್ತಿರುವ ಪರಿಕಲ್ಪನೆ. ಆದರೆ ಅದನ್ನು ಶ್ಯಾಮ್ ಬೆನಗಲ್ 1976 ರಲ್ಲೇ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಹಾಗಾಗಿ ಈ ಮಂಥನ್ ಚಿತ್ರದ ನಿರ್ಮಾಪಕರು (ಪ್ರೊಡ್ಯೂಸರ್ಸ್) 5 ಲಕ್ಷ ಮಂದಿ. ಪ್ರತಿ ರೈತನೂ ತಲಾ ಎರಡು ರೂ. ಗಳನ್ನು ಈ ಚಿತ್ರ ನಿರ್ಮಾಣದಲ್ಲಿ ಹೂಡಿಕೆ ಮಾಡಿದ್ದಾನೆ. ಚಿತ್ರ ನಿರ್ಮಾಣ ಕಂಪೆನಿ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಕಂಪೆನಿ. ತಾರಾಗಣದಲ್ಲಿ ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಷಾ, ಅನಂತನಾಗ್, ಸ್ಮಿತಾ ಪಾಟೀಲ್, ಅಮರೀಶ್ ಪುರಿ ಮತ್ತಿತರರು ಇದ್ದರು. ಛಾಯಾಗ್ರಹಣ ಗೋವಿಂದ್ ನಿಹಲಾನಿಯವರದ್ದು. ಸಂಗೀತ ವನರಾಜ್ ಭಾಟಿಯಾರದ್ದು. ಇದರ ಶೀಷೀಕೆ ಗೀತೆಗೆ ಪ್ರೀತಿ ಸಾಗರ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಫಿಲ್ಮ್ ಫೇರ್ ಕೊಟ್ಟು ಗೌರವಿಸಿತ್ತು.
ಪುನರ್ ರೂಪಿತ ತಮ್ಮ ಚಲನಚಿತ್ರ ಬಿಡುಗಡೆಯ ಸಂದರ್ಭದ ಖುಷಿಯನ್ನು ಬಹಳ ಭಾವುಕರಾಗಿ ಸಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಶ್ಯಾಮ್ ಬೆನಗಲ್, ಇದೊಂದು ಅವಿಸ್ಮರಣೀಯ ಘಳಿಗೆ. ನನ್ನ ಚಿತ್ರವೊಂದು ಹೊಸದಾಗಿ ಮುದ್ರಿತವಾಗಿ ಜನರ ಎದುರು ಪ್ರದರ್ಶನಕ್ಕೆ ಸಜ್ಜಾಗಿದೆ ಎಂಬುದೇ ಅತ್ಯಂತ ಹರ್ಷದ ಸಂಗತಿ. 48 ವರ್ಷಗಳ ಹಿಂದೆ ಇದನ್ನು ನಾವು ಚಿತ್ರೀಕರಿಸುವಾಗ ನಾನಾ ಸಮಸ್ಯೆಗಳಿದ್ದವು. ಅದರಲ್ಲಿ ಪ್ರಿಂಟ್ ನದ್ದೂ ಸಹ. ಪ್ರಿಂಟ್ ನ ಕೊರತೆಯಿಂದ ಒಂದೇ ಗುಣಮಟ್ಟದ್ದು ಎಂದು ಹೇಳಲಾಗುತ್ತಿಲ್ಲ. ಆದರೆ ಪುನರ್ ರೂಪಿತ ಪ್ರತಿ ಹಾಗಿಲ್ಲ. ಹಿಂದಿನಂತೆಯೇ ಬಹಳ ಚೆನ್ನಾಗಿ, ಗುಣಮಟ್ಟದಿಂದ ಮೂಡಿ ಬಂದಿದೆ. ಚಿತ್ರದ ಗುಣಮಟ್ಟ, ಧ್ವನಿಯ ಗುಣಮಟ್ಟ ಎಲ್ಲವೂ ಅಚ್ಚುಕಟ್ಟಾಗಿದೆʼ ಎಂದು ವಿವರಿಸಿದ್ದಾರೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರಿನ ಸಿನಿ ಪ್ರೇಕ್ಷಕರು ತಮ್ಮ ಹತ್ತಿರದ ಪಿವಿಆರ್, ಐನಾಕ್ಸ್ ಗಳಲ್ಲಿ ಈ ಸಿನಿಮಾ ಲಭ್ಯವಾಗಲಿದೆ. ವೀಕ್ಷಿಸಿ, ವಿಜೃಂಭಿಸಿ. ಯಾಕೆಂದರೆ, ಇದರಲ್ಲಿ ರೈತರೇ ಹೀರೋಗಳು, ರೈತರೇ ನಿರ್ಮಾಪಕರು !