ಮರೀನಾ – ಸರಳ ನಿರೂಪಣೆಯಲ್ಲಿ ಬದುಕಿನ ಸರಳತೆಯ ಹೇಳುವ ಚಿತ್ರ

ಕನ್ನಡದಲ್ಲಿ 19 ನೇ ದಶಕದಲ್ಲಿ ಸಿನಿಮಾ ಸೇರಿದಂತೆ ಬಹುತೇಕ ಸೃಜನಶೀಲ ನೆಲೆಗಳ ಕಥಾವಸ್ತುವಾಗಿದ್ದ ಮಧ್ಯಮವರ್ಗ ಈಗ ಬಹುಪಾಲು ಕಳೆದೇ ಹೋಗಿದ್ದಾನೆ. 80 ರ ಆರಂಭದಲ್ಲಿ ಬಡವ ನಮ್ಮ ಸಿನಿಮಾಗಳಲ್ಲಿ ಹೇಗೆ ಪಾತ್ರವಾಗಿದ್ದನೋ, ಹಾಗೇ ಮಧ್ಯಮ ವರ್ಗದ ಶ್ರೀ ಸಾಮಾನ್ಯ ಪಾತ್ರವಾಗಿದ್ದ. ಈಗ ಮೇಲ್ಮಧ್ಯಮ ವರ್ಗವೂ ಸಿನಿಮಾಗಳ ವಸ್ತುವಿಗೆ ಎಟುಕುತ್ತಿಲ್ಲ.

ತಮಿಳಿನಲ್ಲಿ ಇದಕ್ಕೆ ವಿರುದ್ಧವಾದ ಪ್ರಯತ್ನ ನಡೆಯುತ್ತಿದೆ. ಜನಪ್ರಿಯ ನೆಲೆಯಲ್ಲೇ ಬಹಳ ಭಿನ್ನವಾದ ಚಿತ್ರಗಳು ಬರುತ್ತಿವೆ. ಅದರಲ್ಲೂ ಕೆಳವರ್ಗದ (ಇಲ್ಲಿ ಈ ಪದವನ್ನು ಜಾತಿ ಸೂಚಕವಾಗಿ ಬಳಸುತ್ತಿಲ್ಲ, ಬದಲಾಗಿ ಆರ್ಥಿಕ ನೆಲೆಯಲ್ಲಿ ಬಳಸುತ್ತಿರುವೆ), ದನಿಯಿಲ್ಲದವರ, ಕರಗಿ ಹೋದವರ ಚಹರೆಗಳನ್ನು ಹುಡುಕುವ ಪ್ರಯತ್ನ ನಡೆಯುತ್ತಿರುವುದು ಒಂದು ಒಳ್ಳೆಯ ಸೂಚನೆಯೂ ಹೌದು.

ಕನ್ನಡ ಚಿತ್ರರಂಗದ ನಾಯಕ ಮಹಾಶಯ, ಯಾವ ವರ್ಗವನ್ನೂ ಸ್ಪಷ್ಟವಾಗಿ ಪ್ರತಿನಿಧಿಸದೇ ತ್ರಿಶಂಕು ಸ್ವರ್ಗದಲ್ಲಿರುವ ಹೊತ್ತಿನಲ್ಲಿ ನನಗೆ ಈ ಬೆಳವಣಿಗೆ ಅತ್ಯಂತ ವಿಶೇಷವೆನಿಸಿತು. ಈ ಮಾತಿಗೆ ಪುಷ್ಟಿ ನೀಡಿದ್ದು ಮೊನ್ನೆಯಷ್ಟೇ ನೋಡಿದ “ಮರೀನಾ’ ಚಿತ್ರ. ಚಿತ್ರ ನಿರ್ದೇಶಕ ಪಾಂಡಿರಾಜ್. “ಪಸಂಗ’ ಇವರ ಮೊದಲ ಚಿತ್ರ. ಈ ಚಿತ್ರ 2010 ರ ತಮಿಳಿನ ಅತ್ಯುತ್ತಮ ಚಿತ್ರವೆಂದು ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. “ಮರೀನಾ’ ದ ವಿಶೇಷತೆ ವಿವರಿಸುವ ಮುನ್ನ ನಿರ್ದೇಶಕನ ಬಗೆಗೆ ಇನ್ನೆರಡು ವಿವರ ನೀಡಬೇಕು. ಪಾಂಡಿರಾಜ್ ರ ಮೂರನೇ ಚಿತ್ರ ಈ “ಮರೀನಾ’. ಖ್ಯಾತ ನಿರ್ದೇಶಕ ಚೇರನ್ ರಲ್ಲಿ ಸಹಾಯಕ ನಿರ್ದೇಶಕರಾಗಿದ್ದವರು. ಇವರ ಎರಡನೇ ಚಿತ್ರ “ವಂಶಂ’.

marina tamil movie

1988 ರಲ್ಲಿ ಬಿಡುಗಡೆಗೊಂಡು ರಾಷ್ಟ್ರ ಪ್ರಶಸ್ತಿ ಪಡೆದ ಮೀರಾ ನಾಯರ್ ಅವರ “ಸಲಾಂ ಬಾಂಬೆ’ ನನ್ನ ಈ “ಮರೀನಾ’ ಪ್ರೇರಣೆ ನೀಡಿದೆ ಎಂದು ಸ್ವತಃ ನಿರ್ದೇಶಕರೇ ಒಂದೆಡೆ ಉಲ್ಲೇಖಿಸಿದ್ದಾರೆ. ಇರಬಹುದು. ಆದರೆ ಚಿತ್ರದಲ್ಲಿ ನಾಯಕ ನಟ ತನ್ನೂರು ಬಿಟ್ಟು ಚೆನ್ನೈ ಗೆ ಬರುವ ಎಳೆಯೊಂದನ್ನು ಬಿಟ್ಟರೆ, ಉಳಿದೆಲ್ಲವೂ ಸಂಪೂರ್ಣ ಭಿನ್ನ. ಮುಂಬಯಿಯ ಕ್ರೌರ್‍ಯದ ಜಗತ್ತೂ ಆ ಚಿತ್ರದಲ್ಲಿ ಕಥೆಯ ಹಿಂದಿನ ಛಾಯೆಯಾಗಿ ಅನಾವರಣಗೊಂಡರೆ, ಇಲ್ಲಿ ಚೆನ್ನೈ ಅದ್ಯಾವ ರೂಪವೂ ದಟ್ಟವಾಗಿ ಆವರಿಸುವುದಿಲ್ಲ. ಎರಡೂ ಚಿತ್ರಗಳ ಪಯಣ ಒಂದೇ ನೆಲೆಯಲ್ಲಿ ಆರಂಭಗೊಂಡರೂ ಹೋಗಿ ಮುಟ್ಟುವುದು ಬೇರೆ ಬೇರೆ ನೆಲೆಗಳನ್ನೇ-ಗುರಿಗಳನ್ನೇ ಎಂಬುದು ಸ್ಪಷ್ಟ. ಮತ್ತೊಂದು ಪಾತ್ರ ಮತ್ತು ದೃಶ್ಯಕ್ಕೆ “ಚಿಲ್ಲರ್ ಪಾರ್ಟಿ’ ಹಿಂದಿ ಚಿತ್ರವೊಂದರ ಪಾತ್ರದ ಪ್ರೇರಣೆಯೂ ಇದೆ. ಚಿತ್ರದ ಟ್ರೇಲರ್ ಲಿಂಕ್ ಇಲ್ಲಿದೆ.

“ಮರೀನಾ’, ಚೆನ್ನೈನ ಖ್ಯಾತಿಯ ಮರೀನಾ ಬೀಚ್ ಕುರಿತಾದದ್ದೇ. ಪ್ರವಾಸಿಗರ ಅತ್ಯಂತ ಆಕರ್ಷಣೆಯ ಕೇಂದ್ರ ಬಿಂದುವಾದ ಕಡಲ ತೀರದ ಭಿನ್ನ ಭಿನ್ನ ಛಾಯೆಗಳನ್ನು (shಚಿಜes) ಹಿಡಿದಿಡುವ ಪ್ರಯತ್ನ ಈ ಚಿತ್ರದಲ್ಲಿ ನಡೆದಿದೆ. ಇದು ನೇರವಾಗಿ ಅನಿಸುವಂಥದ್ದು. ಆ ಮೂಲಕ ಬದುಕಬೇಕಾದ ಅನಿವಾರ್‍ಯತೆಯೊಳಗೆ ಕರಗಿಹೋದ ಚಿತ್ರಗಳನ್ನು ಹುಡುಕುವ ನೆಲೆ ಬಹಳ ಮನ ಮುಟ್ಟುವಂಥದ್ದು. ಹಾಗಾಗಿಯೇ ಕೆಲವು ಲೋಪದೋಷಗಳ ನಡುವೆಯೂ ಚಿತ್ರ ಮನದೊಳಗೆ ಉಳಿದುಕೊಳ್ಳುತ್ತದೆ.

ಈ ಪೋಸ್ಟ್‌ ಸಹ ನಿಮಗೆ ಇಷ್ಟವಾಗಬಹುದು : ಅಕಿರಾ ಕುರಸೋವಾ: ವಿಶ್ವ ಚಿತ್ರ ಜಗತ್ತಿನ ಪ್ರಖರ ಸೂರ್ಯ

ಅಂಬಿಕಪತಿ (ಪಕೋಡ ಪಾಂಡಿಯನ್) ಹೀಗೇ ದುಡಿಯಲೆಂದು ಚೆನ್ನೈಗೆ ಬರುವ ಬಾಲಕ. ಅಲ್ಲಿ, ಇಲ್ಲಿ ಕೆಲಸ ಹುಡುಕಿ ಎಲ್ಲೂ ಸಿಗದೇ ಮರೀನಾ ಬೀಚ್‌ನಲ್ಲಿ ನೀರಿನ ಪೊಟ್ಟಣ ಮಾರುವ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇವನ ಗೆಳೆಯ ಕೈಲಾಸಂ (ಗೌತಮ್ ಪುರುಷೋತ್) ಸಹ ಹೀಗೇ. ಇವರಿಬ್ಬರೂ ನಾಯಕರೇ. ಮಾಲೀಕನ ಹಿಂಸೆಯಿಂದ ರೋಸಿ, ಭವಿಷ್ಯವನ್ನು ಹುಡುಕುತ್ತಾ, ವಿಚಿತ್ರ ಪ್ರಸಂಗದಲ್ಲಿ ಪೊಲೀಸ್ ಆಫೀಸರ್ ಮಗನ ತಲೆಗೆ ಕಲ್ಲಿನಿಂದ ಹೊಡೆದು, ಅವನು ಸತ್ತನೆಂದೇ ತಿಳಿದು ಈ ಬೀಚ್‌ಗೆ ಬಂದು ತಲೆ ಮರೆಸಿಕೊಂಡಿರುವವನು. ಹೀಗೇ ಹಲವು ಬಾಲಕರಿದ್ದಾರೆ. ಇವರಿಗೆ ಸೂರಿಲ್ಲ, ಪೋಷಕರಿಲ್ಲ, ಹೇಳುವವರು-ಕೇಳುವವರು ಯಾರೂ ಇಲ್ಲ. ಆದರೆ, ಇವರ ಮೂಲಕ ಹಣ ಗಳಿಸುವ ಮಾಲೀಕನಿದ್ದಾನೆ. ರಾತ್ರಿಯೆಲ್ಲಾ ಅಲ್ಲೇ ಒಂದು ಅಂಗಳವೋ, ಕಡಲ ತೀರವೋ ಆಸರೆ. ಚಿತ್ರದ ಕಥೆಯ ಹೂರಣ ಈ ಮಕ್ಕಳು ಮತ್ತು ದನಿಯಿಲ್ಲದ ಪಾತ್ರಗಳು.

ಇವರ ಬದುಕು, ಖುಷಿ-ಸಂತಸವನ್ನು ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ ಎಲ್ಲ ಒಂದೆಡೆ ಕಥೆಯ ಸಾರವಾದರೆ, ಮತ್ತೊಂದೆಡೆ ಮಗಳನ್ನೇ ತನ್ನ ಹಾಡಿಗೆ ಕುಣಿಸಿ ಬದುಕಿನ ಗತಿಗೆ ಹೊಂದಿಕೊಳ್ಳುವ ಅಪ್ಪ, ಮನೆಯಲ್ಲಿನ ತಾತ್ಸಾರವನ್ನು ಧಿಕ್ಕರಿಸಿ ಗತಿಯಿಲ್ಲದೇ ಭಿಕ್ಷೆ ಬೇಡುವ ಮುದುಕ, ಯಾರೂ ಇಲ್ಲದೇ, ಕಡಲ ತೀರದಲ್ಲಿ ಕುದುರೆ ಸವಾರಿ ಮಾಡಿಕೊಂಡು ಬದುಕುತ್ತಿರುವ ಮಧ್ಯವಯಸ್ಕ, ಕಡಲ ತೀರದ ಒಡೆಯನೇ ತಾನೆಂದು ಅದರ ಉಸ್ತುವಾರಿ ವಹಿಸಿರುವ (ಹುಚ್ಚನೆಂದು ಪರಿಗಣಿಸಲ್ಪಟ್ಟವ) ಮತ್ತೊಬ್ಬ..ಹೀಗೇ ಕಥೆಗೆ ಜೀವ ತುಂಬುತ್ತದೆ.

ಇದರ ಮಧ್ಯೆಯೂ ಹೀಗೇ ಎಲ್ಲರಂತೆ ತಾನು ಮತ್ತು ತನ್ನ ಹುಡುಗಿಯೊಂದಿಗೆ ಮರೀನಾ ಬೀಚ್‌ಗೆ ಬರಬೇಕೆಂದು ಪ್ರಯತ್ನಿಸಿ, ಯಶಸ್ವಿಯಾಗಿ, ಮೋಸಹೋಗುವ ಸೆಂದಿಲ್ ನಾಥನ್ (ಶಿವ ಕಾರ್ತಿಕೇಯನ್) ಮತ್ತೊಬ್ಬ ಯುವಕನೂ ಇದ್ದಾನೆ. ಅವನ ಹುಡುಗಿಯಾದವಳು ಸ್ವಪ್ನಸುಂದರಿ (ಒವಿಯಾ). ಈ ಪಾತ್ರಗಳನ್ನು ಸ್ವಲ್ಪ ತಮಾಷೆಯಾಗಿ ಟ್ಟುಕೊಂಡೇ ನಿರ್ವಹಿಸಿದ್ದಾನೆ. ಈ ಮೂಲಕ ನಿರ್ದೇಶಕ, ವಿಷಾದದ ತೀವ್ರತೆಯನ್ನು ಕಡಿಮೆಗೊಳಿಸಲೆತ್ನಿಸುವ ಆಲೋಚನೆ. ಅಷ್ಟೇ ಅಲ್ಲ, ಎಂಟರೇಟ್‌ನ್ಮೆಂಟ್ ಫ್ಯಾಕ್ಟರ್‌ನ್ನು ದುಡಿಸಿಕೊಳ್ಳುವ ಪ್ರಯತ್ನವೂ ಸಹ ಎಂಬುದು ನನ್ನ ಅನಿಸಿಕೆ.

ಎರಡೂ ಕಾಲು ಗಂಟೆಯ ಇಡೀ ಚಿತ್ರದ ಆರಂಭದಲ್ಲಿ ಹಾಡಿನಲ್ಲಿ ಬರುವ ಚೆನ್ನೈ (ಸಿಟಿಸ್ಕೇಪ್ಸ್)ನ ನಗರ ದೃಶ್ಯಗಳನ್ನು ಹೊರತುಪಡಿಸಿದರೆ, ಮಧ್ಯದಲ್ಲಿ ಒಂದೆರಡು ಕಡೆ ರೆಫರೆನ್ಸ್ ಎನ್ನುವ ಹಾಗೆ ನಗರ ದೃಶ್ಯಗಳು ಬರುವುದು ಬಿಟ್ಟರೆ, ಉಳಿದೆಲ್ಲವೂ ಮರೀನಾ ಬೀಚ್‌ನಲ್ಲೇ. ಚಿತ್ರವನ್ನು ಇಡಿಯಾಗಿ ನೋಡಿದಾಗ, ಚಿತ್ರಕಥೆ ಇನ್ನಷ್ಟು ಬಿಗಿಯಾಗಬೇಕಿತ್ತು ಎನಿಸುತ್ತದೆ. ಸುಮಾರು ಕಡೆ ಬರುವ ಪುನರಾವರ್ತಿತ ದೃಶ್ಯಗಳು ಕಥೆಯ ಓಘಕ್ಕೆ ಕೊಂಚ ತಡೆಯೊಡ್ಡುವುದು ನಿಜ. ಆ ಪುನರಾವರ್ತಿತ ದೃಶ್ಯಗಳಿಂದ ಆ ಪಾತ್ರಗಳ ಬದುಕಿನ ಛಾಯೆಯನ್ನು ಇನ್ನಷ್ಟು ದಟ್ಟವಾಗಿ ತೋರಿಸಲೆತ್ನಿ ಸುತ್ತಿದ್ದಾರೆ ಎಂದೆನಿಸಿದರೂ, ಅದು ಉದ್ದೇಶ ರಹಿತ ಪುನರಾವರ್ತಿತ ದೃಶ್ಯಗಳೆಂದೇ ಅನಿಸುತ್ತವೆ. ಜತೆಗೆ ಸಂಕಲಿಸುವಾಗ (ಎಡಿಟಿಂಗ್) ನಲ್ಲೂ ಇನ್ನಷ್ಟು ಸೂಕ್ಷ್ಮತೆ ಕಂಡುಕೊಂಡಿದ್ದರೆ ಚಿತ್ರ ಮತ್ತಷ್ಟು ಬಿಗಿ ಹಾಗೂ ಗಟ್ಟಿಯಾದ ಹಂದರವನ್ನು ಹೊಂದುತಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.

ಇವುಗಳನ್ನೂ ಓದಿ : ಕಾನ್‌ ಚಲನಚಿತ್ರೋತ್ಸವ 2024 : ಈ ಬಾರಿ ಕನ್ನಡಿಗರದ್ದೇ ಹವಾ

ಈ ಲೋಪದೋಷಗಳನ್ನು ಹೊರತುಪಡಿಸಿಯೂ, ಚಿತ್ರದ ಛಾಯೆ ವೀಕ್ಷಕನ ಮೇಲೆ ತಣ್ಣಗಿನ ಪರಿಣಾಮ ಬೀರದಿರದು. ಅಸ್ತಿತ್ವವೇ ಇಲ್ಲದವರ ಬದುಕಿನ ಚಹರೆಯನ್ನು ಗುರುತಿಸುವ ನಿರ್ದೇಶಕರ ಪ್ರಯತ್ನ ಹಲವು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂಗಡಿಯೊಂದರ ಎದುರು ಟಿವಿ ಯಲ್ಲಿ ಕ್ರಿಕೆಟ್ ಮ್ಯಾಚ್‌ನ್ನು ನೋಡುವ ಹುಡುಗರು, ತಾವೇ ಒಂದಿಷ್ಟು ಹಣ ಹಾಕಿಕೊಂಡು ಪಂದ್ಯವಾಡಿ “ಕಪ್’ ನ್ನು ಕೊಟ್ಟುಕೊಳ್ಳುವುದು, ಮತ್ತೊಂದು ರನ್ನಿಂಗ್ ರೇಸ್‌ನ ಸಂದರ್ಭದಲ್ಲಿ ಗೆದ್ದವರಿಗೆ ಕಪ್ ನೀಡಬೇಕೆಂದು ಆಹ್ವಾನದ ನಿರೀಕ್ಷೆಯಲ್ಲಿರುವ ಮುದುಕ, ಕುದುರೆ ಸವಾರ, ನೃತ್ಯಗಾರ್ತಿಯ ಅಪ್ಪ-ಹುಡುಗರು ಇವರೆಲ್ಲರನ್ನೂ ಬಿಟ್ಟು ಫೋಟೋ ತೆಗೆಯುತ್ತ ಬಂದ ವಿದೇಶಿ ಹುಡುಗಿಯರಿಂದ ಕಪ್ ಪಡೆಯುವುದು, ಪೊಲೀಸನ ಮನೆಯ ದೃಶ್ಯ-ಎಲ್ಲವೂ ಅದನ್ನೇ ಉಲ್ಲೇಖಿಸುತ್ತದೆ.

ನಗರದೊಳಗೆ ಇಂತಹ ಚಿತ್ರಗಳು ಸಾಮಾನ್ಯ. ಅದರಲ್ಲೂ ಎಲ್ಲರಿದ್ದೂ, ಎಲ್ಲವಿದ್ದೂ ಅನಾಥರಂತಾಗಿ ಬದುಕುವ ಬದಿಯಲ್ಲಿ ಇರಬಹುದಾದ ಅಸ್ತಿತ್ವದ ಹುಡುಕಾಟದ ತೀವ್ರತೆ ಬಹಳ ದಟ್ಟವಾದುದು. ಅದನ್ನು ಮುದುಕನ ಪಾತ್ರದಲ್ಲಿ ಹೆಚ್ಚು ಹತ್ತಿರವಾಗುವಂತೆ ನಿರ್ದೇಶಕ ಕಟ್ಟಿಕೊಡುತ್ತಾರೆ.

ಇನ್ನು ನಿರ್ದೇಶಕರಿಗೆ ನಗರ ಬಗೆಗಿನ ನಿಲುವು ಬಹಳ ನಕಾರಾತ್ಮಕವಾಗಿ ಇಲ್ಲ. ಇಡೀ ಚಿತ್ರದ ನಿರೂಪಣೆಯಲ್ಲಿ ಇಂಥ ದನಿಯಿಲ್ಲದವರಿಗೆ ನಗರದಂಥ ಪ್ರದೇಶ ಅನಿವಾರ್‍ಯವೆನ್ನುವಂತಿದೆ. ಈ ಮಾತಿಗೆ ಸಾಕ್ಷಿಯೆಂಬಂತೆ ಆರಂಭದಲ್ಲೇ ಶುರುವಾಗುವ ಹಾಡು ನಗರವನ್ನು ಪರಿಚಯಿಸುತ್ತಲೇ, “ಇಂಥ ಚೆನ್ನೈನಲ್ಲಿ ನಿನಗೊಂದು ಜಾಗವಿಲ್ಲವಾ?, ಇದೆ’ ಎನ್ನುವ ಸಮಾಧಾನದ ಧಾಟಿಯನ್ನು ಅಂಬಿಕಪತಿಯಲ್ಲಿ ಮೂಡಿಸುತ್ತದೆ. ಚಿತ್ರದ ಕೊನೆಯಲ್ಲಿ ಇಂಥ ಮಕ್ಕಳೆಲ್ಲಾ ಶಾಲೆಗೆ ಹೋಗಬೇಕೆಂಬ ಸಂದೇಶದೊಂದಿಗೆ ಮುಗಿಯುತ್ತದೆ. ಈ ಸಂದೇಶವೆಲ್ಲೂ ಬಲವಂತ ಎಂದೆನಿಸುವುದಿಲ್ಲ. ಒಂದು ಒಳ್ಳೆಯ ಪ್ರಯತ್ನ ಮತ್ತು ಅನುಭವ ಕಟ್ಟಿಕೊಡುವ ಯತ್ನ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

 

LEAVE A REPLY

Please enter your comment!
Please enter your name here

spot_img

More like this

Kalki 2898 AD: ಕಲ್ಕಿಯಲ್ಲಿ ತ್ರಿಮೂರ್ತಿಗಳದ್ದೇ ದರಬಾರು

ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳಾಗಿವೆ. ಹಲವೆಡೆ ಬಾಕ್ಸ್‌ ಪೆಟ್ಟಿಗೆಗೆ ಹಣ ಹರಿದು ಬರತೊಡಗಿದೆ. ನಾಗ್‌ ಅಶ್ವಿನ್‌ ನಿರ್ದೇಶಿಸಿದ ಚಿತ್ರದಲ್ಲಿ...

IFFLA: ಲಾಸ್‌ ಎಂಜಲೀಸ್‌ ನಲ್ಲಿ ಭಾರತೀಯ ಸಿನಿಮಾಗಳ ಉತ್ಸವ ಜೂನ್‌ 27...

ಲಾಸ್‌ ಎಂಜಲೀಸ್‌: ಲಾಸ್‌ ಎಂಜಲೀಸ್‌ ದಿ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ (IFFLA) ಸಿನಿ ರಸಿಕರಿಗೆ ಭಾರತೀಯ ಚಲನಚಿತ್ರಗಳ ರಸದೌತಣ ಬಡಿಸಲು ಸಜ್ಜಾಗುತ್ತಿದೆ. 22...

Kannappa Movie : ಕಣ್ಣಪ್ಪ…ಕಣ್ಣಪ್ಪ…ಬೇಗ ಬಾರಪ್ಪ

ಕನ್ನಡದಲ್ಲಿ ಬೇಡರ ಕಣ್ಣಪ್ಪ ಇರುವಾಗ ಮತ್ತೊಂದು ಕಣ್ಣಪ್ಪ ಏನಪ್ಪ ಎಂದು ಪ್ರಶ್ನೆ ಕೇಳುವವರಿದ್ದಾರೆ. ಡಾ. ರಾಜಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ನಮ್ಮೊಳಗೆ ಉಳಿದ...