ಮುಂಬಯಿ : ಸಾಕ್ಷ್ಯಚಿತ್ರ, ಕಿರುಚಿತ್ರ ಹಾಗೂ ಅನಿಮೇಷನ್ ಚಿತ್ರಗಳಿಗೆಂದೇ ರೂಪಿಸಲಾಗಿರುವ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಹಾಗೂ ಹಳೆಯ ಚಲನಚಿತ್ರೋತ್ಸವ ಮುಂಬಯಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಮಿಫ್) ನ 18 ನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿದೆ.
ಜೂನ್ 15 ರಿಂದ 21 ವರೆಗೆ ಮುಂಬಯಿನಲ್ಲಿ ನಡೆಯುವ ಉತ್ಸವ ಸಂಬಂಧ ಈಗಾಗಲೇ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳಿಗೆ ಚಿತ್ರ ನಿರ್ದೇಶಕರಿಂದ ಹಾಗೂ ನಿರ್ಮಾಪಕರಿಂದ ಸಿನಿಮಾಗಳನ್ನು ಅಹ್ವಾನಿಸಿತ್ತು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಎನ್ ಎಫ್ ಡಿಸಿ ಸಂಯುಕ್ತ ಅಶ್ರಯದಲ್ಲಿ ಮಿಫ್ ಸಮಿತಿ ಅಯೋಜಿಸುವ ಉತ್ಸವ ಆರಂಭವಾದದ್ದು 1990 ರಲ್ಲಿ. ಆಗ ಪ್ರಾರಂಭವಾದದ್ದು ಬಿಫ್ ಎಂದು. ಬಳಿಕ ಮಿಫ್ ಎಂದು ಮರು ನಾಮಕರಣ ಮಾಡಲಾಯಿತು.
ಅದುವರೆಗೆ ಕಥಾ ಚಿತ್ರಗಳಿಗೆ ಅಂತಾರಾಷ್ಟ್ರೀಯ, ಏಷ್ಯಾ ಹಾಗೂ ಭಾರತದಲ್ಲಿ ಸಾಕಷ್ಟು ಚಿತ್ರೋತ್ಸವಗಳು ಆರಂಭವಾಗಿದ್ದವು. ಆದರೆ ಕಥೇತರ ಪ್ರಕಾರಗಳ ಸೃಜನಶೀಲ ನಿರ್ಮಾಣಗಳ ಪ್ರದರ್ಶನಕ್ಕೆ ಹಾಗೂ ಪ್ರೋತ್ಸಾಹಕ್ಕೆ ಸೂಕ್ತ ವೇದಿಕೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾರಂಭವಾದದ್ದು ಮಿಫ್.
ಇಂದು ದಕ್ಷಿಣ ಏಷ್ಯಾದ ಮಟ್ಟದಲ್ಲೇ ಬಹಳ ಪ್ರತಿಷ್ಠಿತ ಉತ್ಸವವಾಗಿ ಪರಿಗಣಿಸಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗೂ ತಾಂತ್ರಿಕ ವರ್ಗದವರು ಪಾಲ್ಗೊಳ್ಳುವರು. ಇದಕ್ಕೆ ಸಿನಿ ಉತ್ಸಾಹಿಗಳ ಅನುಸರಣೆಯೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ.
ಈ ಸಿನಿ ಉತ್ಸವ ಬರೀ ಚಿತ್ರ ಪ್ರದರ್ಶನಕ್ಕಷ್ಟೇ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳದೇ, ವಿವಿಧ ಸಿನಿಮಾ ನಿರ್ದೇಶಕರು, ನಿರ್ಮಾಪಕರ ವಿಚಾರ ವಿನಿಮಯ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಸಾಕ್ಷ್ಯ, ಕಿರು ಹಾಗೂ ಅನಿಮೇಷನ್ ಚಿತ್ರಗಳ ಸಹ ನಿರ್ಮಾಣ ಸಾಧ್ಯತೆಗಳನ್ನು ಶೋಧಿಸುವ ಅವಕಾಶವನ್ನೂ ಈ ಚಿತ್ರೋತ್ಸವ ಸಿನಿಮಾ ನಿರ್ದೆಶಕರಿಗೆ, ನಿರ್ಮಾಪಕರಿಗೆ ಒದಗಿಸಲಿದೆ.
ಶಾರ್ಟ್ ಫಿಕ್ಷನ್, ಅನಿಮೇಷನ್ ಸಹ ಬೃಹದಾಕಾರವಾಗಿ ಬೆಳೆಯುತ್ತಿದೆ. ಸಾಕ್ಷ್ಯ ಚಿತ್ರವು ತನ್ನ ವಾಸ್ತವ ನೆಲೆಯಿಂದ ಸಮಾಜದ ಮೇಲೆ ಬೀರುವ ಪರಿಣಾಮ ಅನನ್ಯ. ಇಂಥ ಚಿತ್ರಗಳನ್ನು ಪ್ರೋತ್ಸಾಹಿಸುವ ಉತ್ಸವಗಳು ತೀರಾ ಕಡಿಮೆ.
ಈ ಉತ್ಸವದಲ್ಲಿ ತೀರ್ಪುಗಾರರ ರೆಟ್ರೊಸ್ಪೆಕ್ಟಿವ್, ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರಗಳು, ಕಂಟ್ರಿ ಫೋಕಸ್, ವಿದ್ಯಾರ್ಥಿಗಳ ವಿಭಾಗ ಹೀಗೆ ಹಲವು ವೈವಿಧ್ಯಗಳಿರಲಿವೆ. ಇದರೊಂದಿಗೆ ಕಾರ್ಯಾಗಾರಗಳು, ಮಾಸ್ಟರ್ ಕ್ಲಾಸಸ್ ಗಳನ್ನೂ ಅಯೋಜಿಸಲಾಗುವುದು. ಓಪನ್ ಫೋರಂನ ಅವಕಾಶಗಳೂ ಇರಲಿವೆ.
ಸುವರ್ಣ, ರಜತ ಕಾಂಚ್ ಟ್ರೋಫಿಯಲ್ಲದೇ ನಗದು ಬಹುಮಾನವೂ ಸ್ಪರ್ಧಾ ವಿಭಾಗದ ಅತ್ಯುತ್ತಮ ಚಲನಚಿತ್ರಗಳಿಗೆ ನೀಡಲಾಗುವುದು. ಈ ವರ್ಷದ ಸ್ಪರ್ಧೆಯ ವಿವಿಧ ವಿಭಾಗಗಳಿಗೆ ಒಟ್ಟು 44 ಲಕ್ಷ ರೂ. ಮೌಲ್ಯದ ಬಹುಮಾನಗಳನ್ನು ನಿಗದಿಪಡಿಸಲಾಗಿದೆ.
ಸುಮಾರು 30-40 ಕ್ಕೂ ಹೆಚ್ಚು ದೇಶಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುವವು. ವಿವಿಧ ರಾಜ್ಯಗಳ ಸಿನಿಮಾ ಉತ್ಸಾಹಿಗಳು ಇದರಲ್ಲಿ ಪಾಲ್ಗೊಳ್ಳುವುದು ವಿಶೇಷ. ಈ ವರ್ಷ ಜೂನ್ 15 ರಿಂದ 21 ರವರೆಗೆ 18 ನೇ ಚಿತ್ರೋತ್ಸವ ನಿಗದಿಯಾಗಿದೆ.
2022 ರಲ್ಲಿ ನಡೆದ 17 ನೇ ಚಿತ್ರೋತ್ಸವದಲ್ಲಿ 30 ಕ್ಕೂ ಹೆಚ್ಚು ದೇಶಗಳಿಂದ 800 ಕ್ಕೂ ಹೆಚ್ಚು ಸಿನಿಮಾಗಳು ಪ್ರವೇಶಕ್ಕಾಗಿ ಸಲ್ಲಿಕೆಯಾಗಿದ್ದವು. ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣಾಚರಣೆ ಹಿನ್ನೆಲೆಯಲ್ಲಿ ಅದೇ ದೇಶದ ಸಿನಿಮಾಗಳನ್ನು ಕಂಟ್ರಿ ಫೋಕಸ್ ವಿಭಾಗಕ್ಕೆ ಆಯ್ಕೆ ಮಾಡಲಾಗಿತ್ತು.
ಸುಮಾರು 7 ಸಾವಿರ ಮಂದಿ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಲ್ಲದೇ, ಒಟ್ಟೂ 12 ಸಾವಿರ ಮಂದಿ ಭಾಗವಹಿಸಿದ್ದರು. 30 ದೇಶಗಳ 360 ಕ್ಕೂ ಹೆಚ್ಚು ಸಿನಿಮಾಗಳನ್ನು ಪ್ರದರ್ಶಿಸಲಾಗಿತ್ತು.