ಕ್ರಿಕೆಟ್ ಮತ್ತು ಕಾವ್ಯ. ಫುಟ್ ಬಾಲ್ ಮತ್ತು ಮಾತು. ಒಟ್ಟಿನಲ್ಲಿ ಕ್ರೀಡೆ ಮತ್ತು ಕಾವ್ಯ ಎಂದು ಬಿಟ್ಟರೆ ಮುಗಿಯಬಹುದೇನೋ?
ಕ್ರೀಡೆಯೊಂದಿಗೆ ಸ್ವಲ್ಪ ಕಾವ್ಯ ಬೆರೆಸಿಕೊಂಡರೆ ಕಿಕ್ ಕೊಡಲೂ ಬಹುದು, ಜಾಸ್ತಿ ಸುರಿದುಕೊಂಡರೆ ಕಿರಿಕ್ ಸಹ ಆಗಬಹುದು.
ಕೆಲವರಿದ್ದಾರೆ ಕವಿಗಳು. ರಾತ್ರಿ ಕಾವ್ಯದ ಜತೆ ಮತ್ತುಏನೋ ಬೆರೆಸಿಕೊಂಡು ಮಧ್ಯರಾತ್ರಿ ಮುಗಿದು ಬೆಳಗಿನ ಜಾವ ಬರುವವರೆಗೂ ಸಿಕ್ಕ ದೋಸ್ತಿಗಳಿಗೆಲ್ಲ ಫೋನ್ ಮಾಡಿ, ಕಾವ್ಯ ಓದಲು ಶುರು ಮಾಡುವ, ವಿಮರ್ಶೆ ಆರಂಭಿಸುವವರು. ಇದು ಎರಡನೆಯದ್ದರ ಪರಿಣಾಮ ಇರಬಹುದು.
ಇಷ್ಟಕ್ಕೂ ಈ ಕ್ರಿಕೆಟ್, ಫುಟ್ ಬಾಲ್, ಕ್ರೀಡೆ ಮತ್ತು ಕಾವ್ಯವನ್ನು ಒಟ್ಟಿಗೇ ಒಂದೇ ತಟ್ಟೆಯಲ್ಲಿ ಇಡುತ್ತಿರುವುದಕ್ಕೆ ಇರುವ ಕಾರಣವೊಂದೇ. ಅದು ಇಬ್ಬನಿ ತಬ್ಬಿದ ಇಳೆಯಲಿ.
ಇದನ್ನೂ ಓದಿ : Rishab Shetty:ರಿಷಭ್ ಶೆಟ್ಟರ ಹೊಸ ಅಡುಗೆ ಮತ್ತು ನವ ವೇಷ
ನಟ ರಕ್ಷಿತ್ ಶೆಟ್ಟಿಯವರ ಪರಮ್ ವ್ಹಾ ಸ್ಟುಡಿಯೋ ನಿರ್ಮಿಸಿರುವ ಚಿತ್ರ ಇಬ್ಬನಿ ತಬ್ಬಿದ ಇಳೆಯಲಿ. ಸೆಪ್ಟೆಂಬರ್ 5 ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ವೀಕ್ಷಕರಿಗೆ ನೋಡಲಿಕ್ಕೆ.
ಚಂದ್ರಜಿತ್ ಬೆಳ್ಳಿಯಪ್ಪ ಬರೆದು ನಿರ್ದೇಶಿಸುತ್ತಿರುವ ಚಿತ್ರವಿದು. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಹಾನ್ ಗೌಡ, ಅಂಕಿತಾ ಅಮರ್, ಗಿರಿಜಾ ಶೆಟ್ಟರ್, ಮಯೂರಿ ನಟರಾಜ ಮತ್ತಿತರರು ನಟಿಸಿದ್ದಾರೆ. ಗಗನ್ ಬಡೇರಿಯಾರದ್ದು ಸಂಗೀತ. ಶ್ರೀ ವತ್ಸನ್ ಸೆಲ್ವರಾಜನ್ ರದ್ದು ಛಾಯಾಗ್ರಹಣ.
ಇದೊಂದು ಪ್ರೇಮ ಕಥೆ ಎಂಬುದು ಪ್ರತಿ ದೃಶ್ಯಗಳಲ್ಲೂ ಕಾಣುತ್ತದೆ. ಜೊತೆಗೆ ಪ್ರತಿ ದೃಶ್ಯವನ್ನೂ ಕಾವ್ಯಾತ್ಮಕ ಎಂಬಂತೆ ಪೋಣಿಸಲಿಕ್ಕೆ ಪಟ್ಟ ಪ್ರಯತ್ನವೂ ಕಾಣುತ್ತದೆ ಟ್ರೇಲರ್ ನಲ್ಲಿ. ಈ ಮಾತು ಇಲ್ಲಿ ಯಾಕೆಂದರೆ, ಎಷ್ಟೋ ಬಾರಿ ನಮ್ಮ ಪ್ರಣಯ ಕಾವ್ಯಗಳು ವಿಡಂಬನಾ ಪ್ರಸಂಗವಾಗಿಯೋ, ತೀರಾ ವಾಚ್ಯ ಎನ್ನಿಸುವಷ್ಟು ಮಾತುಕತೆಯೋ, ಬೈದಾಟವೋ, ಕೊನೆಗೆ ಹೊಡೆದಾಟದ ಅತಿರೇಕಕ್ಕೆ ಹೋಗುವುದಿದೆ.
ಇದನ್ನೂ ಓದಿ :New Movie:ರಾಜ್ ಬಿ ಶೆಟ್ಟಿ ಎದುರು ಎಷ್ಟು ಸ್ಟಾರ್ ?
ಆದರೆ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಟ್ರೇಲರ್ ಕಂಡರೆ ಎಂದಿನಂತೆ ಎಲ್ಲ ಪ್ರಣಯ ಕಥೆಯಲ್ಲಿರುವಂತೆಯೇ ಆಕರ್ಷಣೆ, ಅನುರಾಗ, ವಿಯೋಗ ಮತ್ತೆ ಸಂಯೋಗ ಇರುವಂತಿದೆ. ಹಾಗೆಯೇ ಒಂದಿಷ್ಟು ಮಳೆ, ನೆನಪು ಎಲ್ಲದರಲ್ಲೂ ಒದ್ದೆಯಾದಂತಿದೆ. ಬಹುತೇಕ ಪ್ರಣಯ ಕಥೆಗಳ ಕ್ಲೈಮ್ಯಾಕ್ಸ್ ದುಃಖಾಂತ್ಯಗೊಳಿಸಲು ಪ್ರಯತ್ನಿಸುವುದೇ ಹೆಚ್ಚು. ಆದರೆ ಈ ಇಬ್ಬನಿ ತಬ್ಬಿದ ಇಳೆಯಲಿ ಏನೋ ಗೊತ್ತಿಲ್ಲ. ಅದು ಹೇಗಾದರೂ ಇರಲಿ, ಒಮ್ಮೆ ನೋಡಬೇಕು. ಕ್ರೀಡೆ-ಕಾವ್ಯ-ಕಥೆ-ಪ್ರಣಯದ ಕಾಂಬಿನೇಷನ್ ಹೇಗಿದೆ ಎಂಬ ಕುತೂಹಲವಿದೆ. ಹಾಡುಗಳು ಈಗಾಗಲೇ ಒಂದಿಷ್ಟು ಮುದ ನೀಡಿವೆ.
ರಕ್ಷಿತ್ ಶೆಟ್ಟಿ ಸ್ವಲ್ಪ ವಿಭಿನ್ನವಾದ ಕಥೆಗಳನ್ನು ಹೆಕ್ಕಿಕೊಂಡು ತೋರಣ ಕಟ್ಟುವ ಜಾತಿಗೆ ಸೇರಿದವರು. ಅವರ ಬಹುಪಾಲು ಚಿತ್ರಗಳು ಹೀಗೇ ತೋರಣದ ಎಲೆಗಳಂತೆಯೇ. ಈಗ ತಮ್ಮ ಸಂಸ್ಥೆಯಿಂದ ಪ್ರಸ್ತುತಪಡಿಸುತ್ತಿರುವ ರಕ್ಷಿತ್ ಶೆಟ್ಟಿ, ಅದೇ ಮಾನದಂಡವನ್ನೂ ಈ ಚಿತ್ರಕ್ಕೂ ಅನ್ವಯಿಸಿದಂತಿದೆ. ಟ್ರೇಲರ್ ಗಳಲ್ಲಿ ಆ ಗುಣ ಕಂಡಿದೆ.
ಅಥವಾ ಮನರಂಜನಾತ್ಮಕ ಚಿತ್ರಗಳು ಎಂಬ ಲೆಕ್ಕಾಚಾರದಲ್ಲಿ ಸಿನಿಮಾದಲ್ಲಿ ಇದ್ದವರೆಲ್ಲ ಲಾಂಗು ಹಿಡಿದು ರಸ್ತೆಯಲ್ಲೆಲ್ಲ ಓಡಿಸಿಕೊಂಡು ಹೋಗುವಾಗ ಜೋರಾಗಿ ಮಳೆ ಸುರಿಯ ತೊಡಗಿ, ಅದರಲ್ಲಿ ಹೀರೋ ಒದ್ದೆಯಾಗಿ, ಉಳಿದವರೂ ಒದ್ದೆಯಾಗಿ ತಣ್ಣಗಾದಂತೆ ಎನಿಸದಿರೂ ಅವರ ಕೈಯಲ್ಲಿನ ಲಾಂಗುಗಳು ತಣ್ಣಗಾಗದೇ ಝಳಪಿಸತೊಡಗಿ, ಕೊನೆಗೆ ರಕ್ತ ಯಾವುದು, ಕೆಸರು ಯಾವುದೋ ತಿಳಿಯದೇ ಪ್ರೇಕ್ಷಕರು ಕಂಗಾಲಾಗುವುದು ಈಗ ಸಾಮಾನ್ಯ ದೃಶ್ಯ.
ಎಲ್ಲ ಹೊಸಬರೂ ಸಿನಿಮಾ ರಂಗಕ್ಕೆ ಪ್ರವೇಶವಾಗುವುದು ಈ ಲಾಂಗುಗಳನ್ನು ಹಿಡಿದೇ. ಒಂದೆರಡು ವರ್ಷಗಳ ಹಿಂದೆ ಒಬ್ಬ ನಟರು ಹೊಸ ನಟನಿಗೆ ಲಾಂಗು ಹೇಗೆ ಹಿಡಿಯಬೇಕು ಎಂದು ತಾಲೀಮು ಕೊಟ್ಟಿದ್ದುಂಟು. ಅಷ್ಟರಮಟ್ಟಿಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಿನಿಮಾಕ್ಕೆ ಕಥೆಗಿಂತ ಲಾಂಗುಗಳು ಮುಖ್ಯವಾಗಿದೆ ಎಂದರೆ ತಪ್ಪೇನೂ ಇಲ್ಲ.
ಇದನ್ನೂ ಓದಿ :ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕ ಪ್ರಶಸ್ತಿ ಆರು ವರ್ಷದ ಬಳಿಕ ಹೆಚ್ಚು
ಇಂಥ ವಾತಾವರಣದ ಮಧ್ಯೆ ಯಾರೋ ಒಬ್ಬರು ಸ್ವಲ್ಪ ವಿಭಿನ್ನವಾದ ಕ್ಲಾಸಿಕ್ ಚಿತ್ರ ಮಾಡಿದರೆ ಒಮ್ಮೆ ನೋಡಿ ಬೆಂಬಲಿಸಬೇಕು. ಇಲ್ಲವಾದರೆ ಈ ಜಾತಿಯೋರೇ ಕಾಣೆಯಾಗಿ ಬಿಡುತ್ತಾರೆ. ಇದು ನಮಗೆ ಗೊತ್ತೇ ಇದೆಯಲ್ಲ.
ಇಂಥದ್ದೇ ನಿರೀಕ್ಷೆ ಈಗ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಮೇಲಿದೆ. ಒಳ್ಳೆಯ ಚಿತ್ರಗಳು ಬಂದರೆ, ಇಷ್ಟವಾಗುವಂತಿದ್ದರೆ ಜನ ನೋಡುತ್ತಾರೆ, ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವುದಕ್ಕೆ ಮೊನ್ನೆಯಷ್ಟೇ ಬಿಡುಗಡೆಯಾದ ನಟ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ಯಶಸ್ಸಿನ ಹಾದಿ ಹಿಡಿಯುತ್ತಿರುವುದು ಸಾಕ್ಷಿ.
ಇದನ್ನೂ ಓದಿ :ವಿಕ್ರಮರ ನಿರೀಕ್ಷೆಯ ಬಲೂನು ಅನುಭವದ ದೃಷ್ಟಿಯಿಂದ ಠುಸ್ಸಾಗಿಲ್ಲ !
1994 ರಲ್ಲಿ ಕೆ.ವಿ. ಜಯರಾಮ್ ನಿರ್ಮಿಸಿ ನಿರ್ದೇಶಿಸಿದ ಚಿತ್ರ ರಶ್ಮಿ. ಅಭಿಜಿತ್, ಶ್ರುತಿ ಮತ್ತಿತರರು ಅಭಿನಯಿಸಿದ ಚಿತ್ರ. ಅಗಸ್ತ್ಯ ಇದಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಕವಿ ದೊಡ್ಡರಂಗೇಗೌಡರು ಬರೆದ ಇಬ್ಬನಿ ತಬ್ಬಿದ ಇಳೆಯಲಿ ರವಿ ತೇಜ ಕಣ್ಣ ತೆರೆದು..ಎಂಬ ಹಾಡಿದೆ. ಬಹಳ ಜನಪ್ರಿಯವಾಗಿದ್ದ ಹಾಡದು.
ರಕ್ಷಿತ್ ಶೆಟ್ಟಿಯವರು ಪ್ರಸ್ತುತಪಡಿಸುತ್ತಿರುವ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಚಿತ್ರ ಕಾಡು ಹಕ್ಕಿ ಕೂಗಿ ಇಂಪಾದ ಗಾನವು ಕೇಳಿಸುತ್ತದೋ ಕಾದು ನೋಡಬೇಕು.