ಶೆಟ್ಟರ ಅಡುಗೆ ಮನೆಯ ಒಲೆ ಮೇಲೆ ಏನೋ ಬೇಯುತ್ತಿದೆ ! ನಟ ರಿಷಭ್ ಶೆಟ್ಟಿ ಹಲವು ಸಕಾರಾತ್ಮಕ ಕಾರಣಗಳಿಂದಲೇ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ವಿಶೇಷವಾಗಿ ಕಾಂತಾರ ಜಗತ್ತಿನಾದ್ಯಂತ ಸುದ್ದಿ ಮಾಡಿತು. ಆ ಬಳಿಕ ಕನ್ನಡ ಚಿತ್ರರಂಗದ ಕಡೆ ಒಮ್ಮೆ ತಿರುಗಿ ನೋಡುವವರ ಸಂಖ್ಯೆ ಹೆಚ್ಚಾದದ್ದು ಸುಳ್ಳಲ್ಲ. ಹಿಂದೆಯೂ ನೋಡುತ್ತಿರಲಿಲ್ಲ ಎಂದಲ್ಲ.
ನಲವತ್ತು ವರ್ಷಗಳ ಹಿಂದೆಯೂ ಹೀಗೆಯೇ ಕನ್ನಡ ಚಿತ್ರರಂಗದ ಅಡುಗೆ ಮನೆ ಮೇಲೆ ಎಲ್ಲರ ಕಣ್ಣಿರುತ್ತಿತ್ತು. ಯಾಕೆಂದರೆ ಹೊಸ ರುಚಿ ಪ್ರಯೋಗಗಳೆಲ್ಲ ಇಲ್ಲಿಯೇ ನಡೆಯುತ್ತಿತ್ತು. ಅದು ಕಲಾತ್ಮಕ ಸಿನಿಮಾ ಮಂದಿ ಇರಬಹುದು, ಜನಪ್ರಿಯ ಸಿನಿಮಾಗಳ ಮಂದಿ ಇರಬಹುದು.
ಇದನ್ನೂ ಓದಿ : ರಾಷ್ಟ್ರೀಯ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕ ಪ್ರಶಸ್ತಿ ಆರು ವರ್ಷದ ಬಳಿಕ ಹೆಚ್ಚು
ಎರಡೂ ನೆಲೆಯಲ್ಲಿಹಲವರ ಅಡುಗೆ ಮನೆಯ ಚಿಮಣಿಯಲ್ಲಿ ಹೊಗೆ ಚಿಮ್ಮುತ್ತಿತ್ತು. ಅದನ್ನು ಕಂಡ ಕೂಡಲೇ ಹೊಸದೇನೋ ಆಗುತ್ತಿದೆ ಎಂದು ಬಂದು ನೋಡುತ್ತಿರುವ ಮಂದಿ ಹೆಚ್ಚಿದ್ದರು ಎನ್ನಿ. ಕಥಾವಸ್ತುಗಳಿಂದ ಹಿಡಿದು ಸಂಗೀತದವರೆಗೆ, ತಾಂತ್ರಿಕ ಹೊಸ ಸಾಧ್ಯತೆವರೆಗೂ ಹಲವಾರು ಪ್ರಯೋಗಗಳು ಇಲ್ಲಿ ನಡೆಯುತ್ತಿದ್ದವು.
ಇತ್ತೀಚಿನ (2000 ದ ಬಳಿಕವೂ) ದಶಕಗಳಲ್ಲೂ ಹಲವು ಬಾರಿ ಇಂಥದೊಂದು ಒಮ್ಮೆ ಇಡೀ ಭಾರತೀಯ ಚಿತ್ರರಂಗವನ್ನು ನಮ್ಮತ್ತ ತಿರುಗಿಸಿಕೊಂಡ ಪ್ರಸಂಗಗಳಿವೆ. ಕೆಜಿಎಫ್ ಇರಬಹುದು, ಅಂಥ ಹಲವು ಪ್ರಯತ್ನಗಳಿರಬಹುದು. ಆದರೆ ಕಾಂತಾರ ಸ್ವಲ್ಪ ವಿಭಿನ್ನ ಕಾರಣದಿಂದ ಎಲ್ಲರನ್ನೂ ಚಕಿತಗೊಳಿಸಿತು. ಅದಕ್ಕೆ ಭಾರತೀಯ ಪರಂಪರೆಯ ಸ್ಪರ್ಶವೂ ಸಹ.
ಇದನ್ನೂ ಓದಿ : Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !
ಕೆಲವು ದಿನಗಳ ಹಿಂದಷ್ಟೇ ಕಾಂತಾರ ಮತ್ತೆ ಸುದ್ದಿಯಾಗಿದ್ದು, ರಿಷಭ್ ಶೆಟ್ಟಿ ಮಾತಿನ ಹೆದ್ದಾರಿಗೆ ಬಂದಿದ್ದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಾಗ. ಕಾಂತಾರಕ್ಕೆ ಅತ್ಯುತ್ತಮ ಜನಪ್ರಿಯ ಚಿತ್ರ ಹಾಗೂ ಅತ್ಯುತ್ತಮ ನಟ ಪ್ರಶಸ್ತಿ ಘೋಷಿತವಾದಾಗ. 70 ವರ್ಷಗಳಲ್ಲಿ ನಾಲ್ಕೇ ಬಾರಿ ಅತ್ಯುತ್ತಮ ನಟ ಪುರಸ್ಕಾರ ಕನ್ನಡಕ್ಕೆ ಸಿಕ್ಕಿರುವುದು. ಇದೂ ಸಹ ಉಲ್ಲೇಖನೀಯ.
ಮೊನ್ನೆಯಷ್ಟೇ ರಿಷಭ್ ಶೆಟ್ಟಿಯವರು ಚರ್ಚೆಗೆ ಸಿಲುಕಿರುವುದು ಅವರು ಬಾಲಿವುಡ್ ನಲ್ಲಿನ ಕೆಲವರ ದೃಷ್ಟಿ ಬಗೆಗಿನ ಹೇಳಿಕೆಯಿಂದ. ಭಾರತೀಯ ಪರಂಪರೆಯನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನ ಸಾಕಷ್ಟು ಬಾರಿ ಬಾಲಿವುಡ್ ನಲ್ಲಿ ಆಗುತ್ತಿದೆ ಎಂಬುದು ಅವರ ಅಭಿಪ್ರಾಯ. ಈ ಮಾತಿನಲ್ಲೂ ಒಂದಿಷ್ಟು ಸತ್ಯಾಂಶವಿದೆ.
ಇದನ್ನೂ ಓದಿ : New Movie:ರಾಜ್ ಬಿ ಶೆಟ್ಟಿ ಎದುರು ಎಷ್ಟು ಸ್ಟಾರ್ ?
ಈ ಹಿನ್ನೆಲೆಯಲ್ಲೇ ಈಗ ಮತ್ತೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಒಂದು ಚಿತ್ರ ಮತ್ತೆ ಚರ್ಚೆಯನ್ನು ಆರಂಭಿಸಿದೆ. ಬಾಲಿವುಡ್ ಬಗೆಗಿನ ಮಾತು ಈ ಚಿತ್ರ ಪರಸ್ಪರ ಹೆಣೆದುಕೊಳ್ಳುತ್ತಿದೆ ಏನೋ ಎನಿಸತೊಡಗಿದೆ. ಭಾರತೀಯ ಪರಂಪರೆಯ ಸಮರ ಕಲೆಯಾದ ಕಳರಿಯಪಟ್ಟುವಿನ ದೃಶ್ಯವನ್ನು ಹಾಕಿದ್ದಾರೆ. ರಿಷಭ್ ಶೆಟ್ಟಿಯವರೇ ಕಳರಿಯಪಟ್ಟುವಿನ ಭಂಗಿಯಲ್ಲಿ ಕಾಣಿಸಿಕೊಂಡಿರುವುದು ಕುತೂಹಲಕ್ಕೂ ಕಾರಣವಾಗಿದೆ.
ನಿರೀಕ್ಷೆ ಹುಟ್ಟಿಸಿರುವ ಕಾಂತಾರ ಪೂರ್ವಾರ್ಧದಲ್ಲಿ ಈ ಕಳರಿಯಪಟ್ಟುವಿನ ದೃಶ್ಯವಿದೆಯೇ? ಅಥವಾ ರಿಷಭ್ ಶೆಟ್ಟಿ ಕಳರಿಯಪಟ್ಟು ಅಭ್ಯಾಸ ಮತ್ತೊಂದು ಚಿತ್ರದ ಮುನ್ನುಡಿಯೇ? ಅಥವಾ ಸುಮ್ಮನೆ ಹೀಗೇ ಇರಲಿ ಎಂದು ಅಭ್ಯಾಸ ಮಾಡುವ ಚಿತ್ರವೇ? ಇಂಥ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಎಲ್ಲರೂ ಸದ್ಯಕ್ಕೆ ತಳುಕು ಹಾಕುತ್ತಿರುವುದು ಎರಡೇ ಸಂಗತಿಯನ್ನು. ಒಂದು ಕಾಂತಾರ ಮೊದಲನೇ ಭಾಗಕ್ಕೆ. ಮತ್ತೊಂದು ಬಾಲಿವುಡ್ ನ ಕೆಲವರ ಭಾರತೀಯ ಪರಂಪರೆ ಬಗೆಗಿನ ದೃಷ್ಟಿಕೋನದ ಬಗ್ಗೆ.
ಇದನ್ನೂ ಓದಿ : Indian cinema: ವಿಕ್ರಮರ ನಿರೀಕ್ಷೆಯ ಬಲೂನು ಅನುಭವದ ದೃಷ್ಟಿಯಿಂದ ಠುಸ್ಸಾಗಿಲ್ಲ !
ಒಂದು ಮಾತು ಈಗಾಗಲೇ ಸಾಬೀತಾಗಿರುವುದು ಹಾಗೂ ಭಾರತೀಯ ಸಾಧಕರು (ಎಲ್ಲ ಕ್ಷೇತ್ರಗಳಿಂದ ಸಿನಿಮಾ ಇರಬಹುದು ಬೇರೆ ಇರಬಹುದು) ಪ್ರಸಿದ್ಧರಾಗಿರುವುದು ಒಂದೇ ಕಾರಣಕ್ಕೆ – ಜಗತ್ತು ಏನು ನೋಡುತ್ತಿದೆ ಎಂದು ಹೇಳಿದ್ದಕ್ಕಲ್ಲ, ಭಾರತ ಏನು, ಭಾರತ ಏನು ನೋಡುತ್ತಿದೆ ಎಂದು ಹೇಳಿದ್ದಕ್ಕೆ. ಅದಕ್ಕೆ ನಮ್ಮದು, ನಮ್ಮತನ ಎತ್ತಿ ಮೆರೆದಿದ್ದಕ್ಕೆ. ಭಾರತ ಎಂಬುದೇ ಒಂದು ಕುತೂಹಲದ ಕುದಿಬಿಂದು ಆಗಿ ಇಡೀ ಜಗತ್ತಿಗೆ ಇರುವುದೂ ಇದೇ ಕಾರಣಕ್ಕೆ.
ಯಾವುದಕ್ಕೂ ಕಾಯುವ, ಈ ರಿಷಭ್ ಶೆಟ್ಟರ ಹೊಸ ಅಡುಗೆ ಮತ್ತು ಹೊಸ ವೇಷ ಏನು ಎಂದು ತಿಳಿದುಕೊಳ್ಳುವುದಕ್ಕೆ.