ಸರಸಮ್ಮನ ಸಮಾಧಿ!
ಲೇಖಖ, ಕಾದಂಬರಿಕಾರ ಡಾ. ಕೆ. ಶಿವರಾಮಕಾರಂತರ ಕಾದಂಬರಿಯ ಶೀರ್ಷಿಕೆಯಷ್ಟೇ ಆಲ್ಲ; ಸಿನಿಮಾದ ಹೆಸರೂ ಸಹ. ಇದರ ನಿರ್ದೆಶಕರು ಕೆ. ಎನ್. ಟಿ. ಶಾಸ್ತ್ರಿ.
ಭಾರತದಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಅಚರಣೆಯಲ್ಲಿದ್ದ ʼಸತಿ ಸಹಗಮನ’ ಎಂಬ ಕುರುಡು ಆಚರಣೆಗೆ ಬಲಿಯಾದವಳು ಸರಸಮ್ಮ. ಸಮಾಜ ಸುಧಾರಣೆಯ ಸಮಯದಲ್ಲಿ ಈಕೆಯ ಬಲಿದಾನ ಈಕೆಗೆ ಪತಿವ್ರತೇ ಎಂಬ ಪಟ್ಟವನ್ನು ತಂದುಕೊಡುತ್ತದೆ. ಅದರ ಫಲವಾಗಿ ಈಕೆಯ ಸಮಾಧಿ ಇರುವ ಸ್ಥಳ ಒಂದು ಪೂಜಾ ಸ್ಥಳವಾಗಿ ಮಾರ್ಪಡುತ್ತದೆ. ಸಂಸಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳವಿದ್ದರೆ, ಕೋಪ, ಹಠದಿಂದ ಇಬ್ಬರ ನೆಮ್ಮದಿ ಕೆಡುತ್ತಿದ್ದರೆ, ಸರಸಮ್ಮನ ಸಮಾಧಿಯ ಬಳಿ ಪ್ರತಿ ಗುರುವಾರ ರಾತ್ರಿ ಬಂದು ಪೂಜೆ ಸಲ್ಲಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ ಬೆಳೆದಿರುತ್ತದೆ. ತಮ್ಮ ಸಂಸಾರ ತಾಪತ್ರಯಗಳಿಗೆ ಪರಿಹಾರ ಹುಡುಕಿಕೊಂಡು ಸರಸಮ್ಮನ ಸಮಾಧಿಯ ಬಳಿ ಬರುವವರ ಸುತ್ತವೇ ಕತೆ ಅರಳುತ್ತದೆ.
ತವರುಮನೆ ಸೇರಿರುವ ಹೆಂಡತಿ ಭಾಗೀರಥಿಯನ್ನು ಮತ್ತೆ ತನ್ನ ಮನೆಗೆ ಕರೆತರಲು ಬಯಸುವ ಹಿರಣ್ಯ….ಕೇವಲ ದುಡ್ಡು, ದೇಹ ಬಯಸುವ ಗಂಡನನ್ನು, ಸೊಸೆ ಓದು-ಬರಹ ಕಲಿತಿರುವುದೇ ಅಪರಾಧವೆಂಬಂತೆ ನಡೆದುಕೊಳ್ಳುವ ಅತ್ತೆಯನ್ನೂ ಪಡೆದಿರುವ ಸುನಾಲಿನಿ…ಮಗಳ ಮದುವೆ ತಡವಾಗುತ್ತಿದೆ, ಗಂಡು ಸಿಗುತ್ತಿಲ್ಲ ಎಂದು ಚಿಂತಿಸುವ ಜಾನಕಿ, ಹೀಗೆ ಎಲ್ಲರೂ ಸರಸಮ್ಮನ ಸಮಾಧಿಯ ಮೊರೆ ಹೋಗುವವರೆ. ಜೊತೆಗೆ, ದೆವ್ವ, ಭೂತಗಳ ಅಸ್ತಿತ್ವದ ಬಗ್ಗೆ ಸದಾ ಪ್ರಶ್ನಿಸುತ್ತಾ, ಸರಸಮ್ಮನ ಸಮಾಧಿಯನ್ನೇ ಒಂದು ರೀತಿ ತನ್ನ ಅಧ್ಯಯನ ಕೇಂದ್ರ ಮಾಡಿಕೊಳ್ಳುವ, ವಿದ್ಯಾವಂತ, ವಿಚಾರವಂತ ಯುವಕ ಚಂದ್ರು ಒಂದು ಕಡೆಯಾದರೆ, ಸಮಾಧಿಯ ಬಳಿ ಪೂಜೆಗೆ ಬರುವ ಗಂಡಸರ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಮಾಡಲೆತ್ನಿಸುವ ಬೆಳ್ಳಕ್ಕ ಹಾಗೂ ಅವಳ ಸಾಕು ಮಗಳು ಗುಲಾಬಿ ಮತ್ತೊಂದು ಕಡೆ. ಇಷ್ಟು ಜನರ/ಪಾತ್ರಗಳ ನಡುವೆ ಹೇಗೆ ನಂಟು ಉಂಟಾಗುತ್ತದೆ..?! ಅವರ ಸಂಸಾರದಲ್ಲಿನ ತೊಂದರೆಗಳು ಕರಗುತ್ತವೆಯಾ..? ಸರಸಮ್ಮನ ಸಮಾಧಿ ನಿಜಕ್ಕೂ ಒಂದು ಶಕ್ತಿ ಕೇಂದ್ರವಾ ಅಥವಾ ಭೂತ ಪ್ರೇತಗಳ ಕೊಂಪೆಯಾ..?! ಅದನ್ನು ನಾವು ಸಿನಿಮಾ ನೋಡಿಯೋ ಅಥವಾ ಕಾದಂಬರಿ ಓದಿಯೋ ತಿಳಿಯಬೇಕು.
ಸಮಾಜದ ಕಟ್ಟುಪಾಡುಗಳಿಂದ, ಅರ್ಥವಿಲ್ಲದ ಆಚರಣೆಗಳಿಂದ ಬಂಧಿತಳಾಗಿದ್ದ ಸರಸಮ್ಮ, ತಾನು ಬದುಕಿದ್ದ ವೇಳೆ ಜೀವಂತ ಶವದಂತಿದ್ದವಳು. ಆದರೆ, ತಾನು ಸತ್ತ ನಂತರ ಇತರರ ನಂಬಿಕೆಗಳಿಂದ ಇನ್ನೂ ಬದುಕಿರುವವಳು!! ಈ ಒಂದು ಹಿನ್ನೆಲೆಯೊಂದಿಗೆ ಕಥೆಯನ್ನು ಗಮನಿಸಿದಾಗ, ಇಲ್ಲಿ ಬರುವ ಹೆಣ್ಣು ಪಾತ್ರಗಳೆಲ್ಲಾ ಜೀವಂತ ಪ್ರೇತಗಳೆ! ತಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ವ್ಯಕ್ತಪಡಿಸಲಾಗದೆ, ಬದುಕಿದ್ದು ಸತ್ತಂತೆ ಇರುವ ಅತೃಪ್ತ ಜೀವಾತ್ಮಗಳು. ಈ ಪಾತ್ರಗಳು / ಹೆಣ್ಣು ಅರ್ಥವಿಲ್ಲದ ಸಮಾಜದ ಈ ಬಂಧನದಿಂದ ಹೊರಬಂದು, ತಮ್ಮ ತೃಪ್ತಿಯನ್ನು, ತಮ್ಮ ಸ್ಥಾನವನ್ನು ಪಡೆಯಲಿ ಎಂಬುದೇ ಕಥೆಯ ಆಶಯ.
ಲಕ್ಷ್ಮೀ ಹೆಗಡೆಯವರ ಅಭಿನಯ ಗಮನ ಸೆಳೆಯುತ್ತದೆ. ಛಾಯಾಗ್ರಹಣ ಕೆಲವು ಕಡೆ ಪಾತ್ರಗಳ ತಲೆ ಎಗರಿಸಿದ್ದರೆ, ಹಲವು ಕಡೆ ಫೋಕಸ್ ಕಳೆದುಕೊಂಡಿದೆ. ಸಂಕಲನದ ಕತ್ತರಿ ಇನ್ನೂ ಹರಿತವಾಗಿರಬೇಕಿತ್ತು. ಚಿತ್ರಕ್ಕಾಗಿ ಆರಿಸಿರುವ ಹಿನ್ನೆಲೆ ಪರಿಸರ ಅಚ್ಚುಕಟ್ಟಾಗಿದೆ. ಹವ್ಯಕ ಕನ್ನಡ ಶೈಲಿಯಲ್ಲಿರುವ ಸಂಭಾಷಣೆ, ಇದ್ದಕ್ಕಿದ್ದಂತೆ ಕೆಲವು ಕಡೆ ಮೈಸೂರು ಕನ್ನಡ ರೂಪ ಪಡೆಯುತ್ತದೆ. ತಾಂತ್ರಿಕವಾಗಿ ಚಿತ್ರವನ್ನು ನೋಡೆಬಲ್ ಆಗಿ ಮಾಡಿದ್ದರೆ, ಚಿತ್ರಕಥೆಯಲ್ಲಿ ಇನ್ನು ಸ್ವಲ್ಪ ಬಿರುಸು ತಂದಿದ್ದರೆ ಚಿತ್ರ ಮತ್ತಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿತ್ತು. ಆದರೆ, ಹಲವು ನೂನ್ಯತೆಗಳ ನಡುವೆಯು ಚಿತ್ರವನ್ನು ನೋಡಿಸಿಕೊಂಡು ಹೋಗುವುದು ಚಿತ್ರದ ಗಟ್ಟಿ ಕಥೆ. ಅದೇ ಈ ಚಿತ್ರದ ಜೀವಾಳ!!
(ಲೇಖನ ಸೌಜನ್ಯ ; ಸಾಂಗತ್ಯ ಬ್ಲಾಗ್. ಲೇಖಕ : ಎಚ ಎಸ್ ರೋಹಿತ)