ಹದಿನೆಂಟು ನಿಮಿಷಗಳ ಕಥೆಯನ್ನು ಒಂದೇ ಸ್ಥಳದಲ್ಲಿ ನಿಂತು ಹೇಳಲು ಹೊರಟಿರುವುದು ಆಸಕ್ತಿ ಹುಟ್ಟಿಸುತ್ತದೆ. ವಂಚಕನೊಬ್ಬ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅಥವಾ ತಾನೂ ಮನುಷ್ಯನೆಂದು ಸಾಬೀತು ಪಡಿಸಲು ಸಿಗುವ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾನೆಂಬುದೇ ವಿಶೇಷ. ಕಥೆ ಮುಗಿದ ಮೇಲೂ ಅವನು ಮನುಷ್ಯನಾಗಿಯೇ ಇರುತ್ತಾನೆಯೇ ಎಂಬುದೂ ವಿಶೇಷವೇ.
ಕಳ್ಳನಲ್ಲೂ ಒಬ್ಬ ಒಳ್ಳೆಯವನಿರುವ ಅನೇಕ ಸಿನಿಮಾ ಕಥೆಗಳನ್ನು ನೋಡಿದ್ದೇವೆ. ಇಂಥದ್ದೆ ಕಥೆಯ ಆದರೆ, ಅದಕ್ಕೆ ಮಾಹಿತಿ ತಂತ್ರಜ್ಞಾನದ ಹೈಬ್ರೀಡ್ ಸ್ಪರ್ಶ ನೀಡಿರುವ ಕಿರುಚಿತ್ರ “ಸುಷ್ಮಿತಾ‘. ತೆರೆಯ ಮೇಲೆ ಕಾಣಿಸುವುದು ಒಂದೇ ಪಾತ್ರ. ಧ್ವನಿಯಾಗಿ ಕಾಣಿಸಿಕೊಂಡಿದ್ದು ಮೂವರು. ಅಲ್ಲೊಮ್ಮೆ ಇಲ್ಲೊಮ್ಮೆ ಖಳನಾಯಕರ ಎರಡು ದನಿ. ಇವಿಷ್ಟನ್ನೂ ಇಟ್ಟುಕೊಂಡು ಸುಮಾರು 18 ನಿಮಿಷದ ಕಿರುಚಿತ್ರವನ್ನು ರೂಪಿಸಿರುವುದು ಒಂದು ಉತ್ಸಾಹಿ ಗುಂಪು. ಹೆಚ್ಚು ಪರಿಕರಗಳನ್ನು ಬಳಸಿಲ್ಲ. ಒಂದು ಲ್ಯಾಪ್‍ಟ್ಯಾಪ್, ಹೆಡ್‍ಫೋನ್, ಮೊಬೈಲ್, ಒಂದು ಲಾರಿ, ಒಂದೆರಡು ಸನ್ನಿವೇಶಗಳಲ್ಲಿ ಟ್ರಾಫಿಕ್‍ನ ದೃಶ್ಯ ಅಷ್ಟೆ. ಅಷ್ಟರಲ್ಲೇ ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸಿದ್ದಾರೆ.
ಶ್ರೀ ಎಸ್ ಇದರ ನಿರ್ದೇಶಕ ಮತ್ತು ಏಕಪಾತ್ರಧಾರಿಯೂ ಸಹ.
ಎಟಿಎಂ ಪಿನ್ ನಂಬರ್ ಹ್ಯಾಕ್ ಮಾಡುವ ಯುವಕನೊಬ್ಬ (ಪಾತ್ರದ ಹೆಸರು ಶ್ರೀ, ಈತನೇ ಇದರ ನಿರ್ದೇಶಕ/ ಚಿತ್ರಕಥೆಗಾರ) ಸಂಕಷ್ಟಕ್ಕೆ ಸಿಲುಕಿದ ಯುವತಿಯೊಬ್ಬಳನ್ನು ರಕ್ಷಿಸುವುದೇ ಕಥಾ ಹಂದರ. ಮೊದಲ ಮೂರು ನಿಮಿಷ ತಾನು ವಂಚನೆಗಾರ ಎಂಬುದನ್ನು ಸಾಬೀತು ಪಡಿಸಲು ಬಳಸಿಕೊಂಡರೆ, ಉಳಿದ 10 ನಿಮಿಷಗಳು ಸಾಗುವುದು ‘ಸಂರಕ್ಷಕ’ ನೆಂಬ ನಿರೂಪಣೆಗೆ.
ಅಂತರಜಾಲ ಸಹಾಯದಿಂದ ಅಷ್ಟೇನೂ ಸುರಕ್ಷಿತವಲ್ಲದ ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸಿ, ಗ್ರಾಹಕನೊಬ್ಬನಿಗೆ ಫೋನ್ ಮಾಡಿ ತನ್ನನ್ನು ತಾನು ಎಟಿಎಂ ಸುರಕ್ಷತಾ ಏಜೆನ್ಸಿಯವನೆಂದು ಗುರುತಿಸಿಕೊಳ್ಳುತ್ತಾನೆ. ಎಟಿಎಂ ಖಾತೆಯ ಪಿನ್ ಎಲ್ಲವನ್ನೂ ಪಡೆದು ವಂಚಿಸುತ್ತಾನೆ. ಅಂಥದ್ದೇ ಮತ್ತೊಂದು ಮಿಕವನ್ನು ಅಂತರಜಾಲದಲ್ಲಿ ಹುಡುಕುವಾಗ ಆಕಸ್ಮಾತ್ತಾಗಿ ಹುಡುಗಿಯೊಬ್ಬಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಂದ ಕೇಳಿಬರುವ ರಕ್ಷಿಸಿ..ನನ್ನನ್ನು ರಕ್ಷಿಸಿ ಎನ್ನುವ ದನಿ ಅವನನ್ನು ಸಂರಕ್ಷಕನಾಗುವ ಪಾತ್ರದತ್ತ ತಳ್ಳುತ್ತದೆ. ಪೊಲೀಸರನ್ನು ಸಂಪರ್ಕಿಸುವುದು, ಅವರು ಉಡಾಫೆಯಿಂದ ಉತ್ತರಿಸುವುದು, ಆಗ ಈತ ಮಾಧ್ಯಮಗಳೆದುರು ಬಹಿರಂಗಪಡಿಸುವುದಾಗಿ ಹೆದರಿಸುವುದು, ಕ್ರಮೇಣ ಪೊಲೀಸರು ಹುಡುಗಿ ರಕ್ಷಿಸುವುದು- ಇವೆಲ್ಲವೂ ನಡೆಯುವುದು 15 ನಿಮಿಷಗಳಲ್ಲಿ.
ಕಿರುಚಿತ್ರದ ಕಥೆ ಸರಳ ಮತ್ತು ನೇರ. ಬಹಳ ತಿರುವುಗಳೇನೂ ಇಲ್ಲ. ವಂಚಕರ ಬುದ್ಧಿವಂತಿಕೆಯನ್ನು, ಗ್ರಾಹಕರ ತಾಂತ್ರಿಕ ಅಜ್ಞಾನವನ್ನು ತನ್ನ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತುಪಡಿಸುವ ನಿರ್ದೇಶಕ, ಬ್ಯಾಂಕುಗಳು, ಸರಕಾರ ಎಷ್ಟೇ ಬಾರಿ ಎಚ್ಚರಿಸಿದರೂ, ಬುದ್ಧಿ ಹೇಳಿದರೂ ಇಂತ ಗ್ರಾಹಕರು ಇದ್ದೇ ಇರುತ್ತಾರೆ, ಹಾಗಾಗಿ ವಂಚಕರ ಸಂತತಿಯೂ ಮುಂದುವರಿದಿದೆ ಎಂಬುದನ್ನು ವ್ಯಾಖ್ಯಾನಿಸುತ್ತಾರೆ. ಅದೇ ಹೊತ್ತಿನಲ್ಲಿ ಒಬ್ಬ ವಂಚಕನಿಗೂ ಒಂದು ಸಾಮಾಜಿಕ ಹೊಣೆಗಾರಿಕೆ ಇರುತ್ತದೆ ಎಂಬುದನ್ನು ಸ್ಥಾಪಿಸಲು ಹೊರಡುತ್ತಾರೆ ನಿರ್ದೇಶಕ.
ವಿಚಿತ್ರವೆಂದರೆ ಕೊನೆಯ ದೃಶ್ಯದಲ್ಲಿ ಆ ಹೊಣೆಗಾರಿಕೆಯೂ ಯಾಂತ್ರಿಕವಾದುದು. ಅಂದರೆ ಯಂತ್ರದ ಹಾಗೆ, ಒಂದು ಕೆಲಸವಷ್ಟೇ ಎಂಬಂತೆಯೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡುತ್ತಾರೆ. ಕಾರಣ, ಒಂದು ಹುಡುಗಿಯನ್ನು ರಕ್ಷಿಸಲು 15 ನಿಮಿಷ ಹರಸಾಹಸ ಪಡುವ ಒಬ್ಬ ವಂಚಕ, ಆ ಅಸೈನ್ ಮೆಂಟ್ ಮುಗಿದ (ಹುಡುಗಿಯ ರಕ್ಷಣೆಯಾದ ಮೇಲೆ) ಮೇಲೆ ತನಗೂ ಅದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಮತ್ತೊಂದು ಹೊಸ ಮಿಕದ ಸಂಶೋಧನೆಗೆ ತೊಡಗುತ್ತಾನೆ. ಒಂದು ರೊಬೋಟ್ ಮಾಡಿದ ಹಾಗೆ. ಹಾಗಾದರೆ, ಕಿರುಚಿತ್ರ ಹೇಳಲು ಹೊರಟದ್ದು ವಂಚನೆ ನಿರಂತರ ಎನ್ನುವುದನ್ನೋ ಅಥವಾ ಹುಡುಗಿಯೊಬ್ಬಳ ಅಪಹರಣದಂಥ ಕಠಿಣ ಸಂದರ್ಭದಲ್ಲೂ ವ್ಯವಸ್ಥೆಯ ಸ್ಪಂದನೆ ತತ್ ಕ್ಷಣದಲ್ಲಿ ಸಕಾರಾತ್ಮಕವಾಗಿರುವುದಿಲ್ಲವೆಂದೋ ಅಥವಾ ವಂಚಕನಿಗಿರುವ ಸಾಮಾಜಿಕ ಹೊಣೆಗಾರಿಕೆ ಬಗ್ಗೆಯೋ ಎಂಬುದು ಸ್ಪಷ್ಟವಾಗದು. ಹಾಗಾಗಿ ವಂಚಕನೊಬ್ಬನೊಳಗಿನ ಮಾನವೀಯತೆ ಎಂಬುದಕ್ಕೆ ಸ್ಪಷ್ಟ ಚಿತ್ರ ಸಿಗದೇ ಅಸ್ಪಷ್ಟವಾಗಿಯೇ ಮುಂದುವರಿಯುತ್ತದೆ. ಪೊಲೀಸರನ್ನು ಬದಲಾಗುವ ಮುಖ ತೋರಿಸುವ ನಿರ್ದೇಶಕ, ವಂಚಕನನ್ನು ಮತ್ತೆ ಅದೇ ವಂಚನೆಯ ಕೂಪದಲ್ಲೇ ಉಳಿಸುವುದು ವಿಚಿತ್ರ. ಪೊಲೀಸರು ಬದಲಾಗಬೇಕೆನ್ನುವ ವಂಚಕನಿಗೆ ತಾನೂ ಬದಲಾಗಬೇಕೆಂದು ಯಾಕೆ ಎನ್ನಿಸುವುದಿಲ್ಲವೋ? ಹುಡುಗಿಯೊಬ್ಬಳ ಅಪಹರಣ ದೊಡ್ಡ ಅಪರಾಧ, ತನ್ನದು ಸಣ್ಣದು ಎಂಬ ಲೆಕ್ಕಾಚಾರವೋ ತಿಳಿಯದು. ಜೀವ ತೆಗೆದರೆ ಮಾತ್ರ ಅಪರಾಧ ಉಳಿದ ವಂಚನೆ ಸಾಮಾನ್ಯ ಎನ್ನಿಸುವ ಅಪಾಯವೂ ಇದೆ.
ಹುಡುಗಿಯೊಬ್ಬಳು ಕಷ್ಟದಲ್ಲಿದ್ದಾಳೆ ಎಂದು ಪೊಲೀಸರಿಗೆ ದೂರವಾಣಿ ಮಾಡುವ ಕಥಾ ನಾಯಕನಿಗೆ, ‘ಏನಯ್ಯಾ, ನೀನು ಹೇಳುವುದು ನಾನು ಕೇಳಬೇಕಾ? ಅಷ್ಟಕ್ಕೂ ಅವಳೇನು (ಅಪಹರಣವಾದವಳು) ಮಿನಿಸ್ಟರ್ ಮಗಳಾ?’ ಎಂದು ಪೊಲೀಸ್ ಅಧಿಕಾರಿ ಪ್ರಶ್ನಿಸುತ್ತಾನೆ. ಇದು ವ್ಯವಸ್ಥೆಯ ಸಾಮಾನ್ಯ ಪ್ರತಿಕ್ರಿಯೆ ಎಂದೇ ಪರಿಗಣಿಸಬೇಕೋ? ಅಥವಾ ಮಾಧ್ಯಮಕ್ಕೆ ಧ್ವನಿಮುದ್ರಿತ ಕರೆಯ ವಿವರವನ್ನು ನೀಡುವುದಾಗಿ ಹೇಳಿದಾಗ ಸ್ಪಂದಿಸುವ ವ್ಯವಸ್ಥೆ (ಪೊಲೀಸರು) ಯ ಮುಖವನ್ನು ವಿವರಿಸುವುದೋ ತಿಳಿಯದು.
ಸಿನಿಮಾದಲ್ಲಿ ಸಣ್ಣ ಸಣ್ಣ ದೋಷಗಳಿದ್ದರೂ, ಒಂದೇ ಲೊಕೇಷನ್ ನಲ್ಲಿ ನಿಂತು ಕಥೆ ಹೇಳುವುದು ಕೊಂಚ ಆಸಕ್ತಿಕರವಾದುದು. ಒಂದು ಲ್ಯಾಪ್ ಟಾಪ್ ಎದುರು ಇರುವ ಕಥಾನಾಯಕ ಉಳಿದೆಲ್ಲ ಪಾತ್ರಗಳ (ಹುಡುಗಿ, ಪೊಲೀಸರು, ಖಳನಾಯಕರು) ಚಟುವಟಿಕೆಗಳನ್ನು ಬರೀ ಶಬ್ದ ಹಾಗೂ ಒಂದೆರಡು ಸಾಗಿ ಹೋಗುವ ದೃಶ್ಯಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಕಥೆ ಕ್ರೈಮ್ ನ ಎಳೆಯನ್ನು ಹೊಂದಿರುವುದರಿಂದ ಪ್ರೇಕ್ಷಕರಿಗೆ ಬೇಸರವಾಗದು. ಜತೆಗೆ ನಿರೂಪಣೆಯೂ ಸ್ವಲ್ಪ ಸುಲಭವೆನಿಸಿದೆ. ಕ್ರೈಮ‍್ ಹೊರತುಪಡಿಸಿ ಬೇರೆ ಯಾವುದಾದರೂ ವಿಷಯ ಕಥೆಯ ಭಾಗವಾದರೆ ಚಿತ್ರಕಥೆ ಇನ್ನಷ್ಟು ಗಟ್ಟಿಯಾಗಿರಲೇಬೇಕು.
ನಿರ್ದೇಶಕ ಕಥೆ ಹೇಳುವಾಗ ಪರಸ್ಪರ ಸನ್ನಿವೇಶಗಳ ಮಧ್ಯೆ ಉದ್ಭವಿಸಬಹುದಾದ ನಿರ್ವಾತವನ್ನು ಎಚ್ಚರದಿಂದ ನಿಭಾಯಿಸಲು ಪ್ರಯತ್ನಿಸಿದ್ದಾರೆ. ಕಥೆಯ ಸಾಗುವಿಕೆಗೆ ಸಹಜತೆ, ಹರಿವು (ಟೆಂಪೋ) ಮತ್ತು ಕುತೂಹಲ ಹೆಚ್ಚಿಸಲು, ಕರೆಗಳಲ್ಲಿ ನೆಟವರ್ಕ್ ವೀಕ್ ಆಗುವುದು, ಒಂದೆರಡು ಬಾರಿ ಕಾಲ್ ಡ್ರಾಪ್ ಆಗುವುದೆಲ್ಲವನ್ನೂ ತಂತ್ರವಾಗಿ ಬಳಸಿದ್ದಾರೆ.
ಆದರೆ ಕೊನೆಯ ದೃಶ್ಯದಲ್ಲಿ ಇವನು ಸೂಚಿಸುವ ಹಾಗೆ ರಸ್ತೆಯಲ್ಲಿ ಬರುವ ಟ್ರಕ್ ನ್ನು ಪೊಲೀಸ್ ಅಧಿಕಾರಿ ಪರಿಶೀಲಿಸಿದಾಗ ಯಾವ ಶಬ್ದವೂ ಕೇಳಿಸದು (ಟ್ರಕ್ ನಲ್ಲಿ ಕೂಡಿಟ್ಟ ಹುಡುಗಿಗೆ ನಿರ್ದಿಷ್ಟ ಜಾಗ ಬಂದಾಗ ಟ್ರಕ್ ಗೆ ಬಡಿದು ಸದ್ದು ಮಾಡು ಎಂದಿರುತ್ತಾನೆ ವಂಚಕ-ಕಥೆಯ ನಾಯಕ). ಪೊಲೀಸ್ ಅಧಿಕಾರಿ ‘ಇಲ್ಲ ಶ್ರೀ. ಇದರಲ್ಲಿ ಯಾರೂ ಇಲ್ಲ’ ಎಂದು ಟ್ರಕ್ ಗೆ ಹೋಗು ಎನ್ನುತ್ತಾರೆ. “ಹೌದು ಶಬ್ದ ಕೇಳಿಸುತ್ತಿಲ್ಲವಲ್ಲ’ ಎಂದು ಅಭಿಪ್ರಾಯ ಪಡುವ ವಂಚಕ. ಮರು ಕ್ಷಣದಲ್ಲೇ ‘ಸಾರ್, ಏನೋ ಶಬ್ದ ಕೇಳಿಸು್ತ್ತಿದೆ. ಮತ್ತೊಮ್ಮೆ ನೋಡಿ’ ಎಂದು ಪೊಲೀಸರಿಗೆ ತಿಳಿಸುವುದು, ಆಗ ಪೊಲೀಸ್ ಅಧಿಕಾರಿ ಮತ್ತೊಮ್ಮೆ ಟ್ರಕ್ ನೋಡಿ ಹುಡುಗಿಯನ್ನು ರಕ್ಷಿಸುವುದು ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಎತ್ತುತ್ತದೆ. ಮೊದಲನೆಯದಾಗಿ, ಪೊಲೀಸರಿಂದ ತಪ್ಪಿಸಿಕೊಂಡರೆ ಸಾಕೆಂದು ಯೋಚಿಸುವವ ಯಾವುದೇ ಅಪಹರಣಕಾರ, ಪೊಲೀಸರು ಹೋಗುವಂತೆ ಸೂಚಿಸಿದರೂ ಅಲ್ಲೇ ನಿಂತಿರುತ್ತಾನೆಯೆ? ಪೊಲೀಸರು ಮೊದಲು ನೋಡಿದ ಟ್ರಕ್ ಬೇರೆ ? ಹುಡುಗಿ ಸಿಗುವ ಟ್ರಕ್ ಬೇರೆಯೇ? (ಆದರೆ ಚಿತ್ರದಲ್ಲಿ ಕಥೆಯ ನಿರೂಪಣೆಯಲ್ಲಿ ಒಂದೇ ಟ್ರಕ್ ನ್ನು ತೋರಿಸಲಾಗುತ್ತದೆ) ಅಥವಾ ಸ್ಥಳದಲ್ಲಿರುವ ಪೊಲೀಸರಿಗೆ ಕೇಳಿಸದ ಟ್ರಕ್ ಬಡಿಯುವ ಸದ್ದು ಇವನಿಗೆ ದೂರವಾಣಿಯಲ್ಲಿ ಕೇಳಿಸುತ್ತದೆ? ಇತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ. ಕೊನೆಯ ಪ್ರಶ್ನೆಗಾದರೂ, ರಸ್ತೆಯಲ್ಲಿರುವ ಗದ್ದಲ (ಶಬ್ದ)ಗಳ ಮಧ್ಯೆ ಹುಡುಗಿ ಬಡಿಯುವ ಸದ್ದು ಕೇಳಿಸದೆಯೂ ಇರಬಹುದು, ಕ್ಷೀಣವಾಗಿರಬಹುದು. ಆದರೆ ವಂಚಕ ದೂರವಾಣಿಯಲ್ಲಿ ಬೇರೆ ಶಬ್ದಕ್ಕಿಂತ ಹುಡುಗಿ ಟ್ರಕ್ ಬಡಿಯುವ ಶಬ್ದ ಸ್ವಲ್ಪ ಗಟ್ಟಿಯಾಗಿ ಕೇಳಿಸಬಹುದು ಎಂಬ ಸಮರ್ಥನೆ ನೀಡಬಹುದು. ಉಳಿದವುಗಳಿಗೆ ಉತ್ತರವಿಲ್ಲ ಎನಿಸುತ್ತದೆ. ಮುಂದಿನ ಚಿತ್ರಗಳಲ್ಲಿ ಇಂಥ ಸಾಮಾನ್ಯವಾಗಿ ಏಳಬಹುದಾದ ಅನುಮಾನಗಳಿಗೆ ಚಿತ್ರಕಥೆ ಸಂದರ್ಭದಲ್ಲಿ ಒಂದು ಹರಿವು (ಫ್ಲೋ) ಹುಡುಕಿಕೊಳ್ಳುವುದು ಸೂಕ್ತ. ಒಟ್ಟಾಗಿ ಪ್ರಯೋಗಶೀಲತೆಯ ನೆಲೆಯಲ್ಲಿ ಶ್ರೀ ಎಸ್ ಮತ್ತು ತಂಡದ ಪ್ರಯತ್ನ ಅಭಿನಂದನೀಯ.