ನಟ, ನಿರ್ದೇಶಕ ವಿ. ರವಿಚಂದ್ರನ್ ಅವರ ದಿ ಜಡ್ಜ್ ಮೆಂಟ್ ಚಲನಚಿತ್ರ ಮೇ 24 (ಶುಕ್ರವಾರ) ರಂದು ರಾಜ್ಯದ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ರವಿಚಂದ್ರನ್ ಅವರ ಈ ಸಾಲಿನ ಮೊದಲ ಚಿತ್ರವಿದು. 2023 ರಲ್ಲಿ ನಟಿಸಿದ ಎರಡು ಚಿತ್ರಗಳಲ್ಲಿ ಒಂದು (ಕ್ರಾಂತಿ) ಬಿಡುಗಡೆಯಾಗಿದೆ. ಇನ್ನೊಂದು ಕೆಡಿ-ದಿ ಡೆವಿಲ್ ಅಕ್ಟೋಬರ್ ನಲ್ಲಿ ಬಿಡುಗಡೆಯ ಲೆಕ್ಕಾಚಾರದಲ್ಲಿದೆ. ಈಗ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಒಂದೆಡೆ ಸಿಂಗಲ್ ಥಿಯೇಟರ್ ಗಳು ಮುಚ್ಚುವ ಸಂಕಷ್ಟವಿದ್ದರೆ, ಮತ್ತೊಂದೆಡೆ ಚಲನಚಿತ್ರಗಳನ್ನು ನೋಡಲು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬುದು ಮತ್ತೊಂದು ಸಂಕಷ್ಟ.
ಎರಡರ ಮಧ್ಯೆ ಒಂದಿಷ್ಟು ದಿನ ಸಾಮೂಹಿಕ ರಜೆಗಳನ್ನು ಘೋಷಿಸುವುದು ಸೂಕ್ತವೋ ಎಂಬಂತೆಯೂ ಚಿತ್ರರಂಗದ ಮಂದಿ ಆಲೋಚನೆಯಲ್ಲಿ ಮುಳುಗಿದ್ದಾರೆ. ಗೊತ್ತಿಲ್ಲ, ಏನಾಗುತ್ತದೋ ? ಬಾಲಿವುಡ್ ಸೇರಿದಂತೆ ಬಹುತೇಕ ಕಡೆ ಇದೇ ಅಭಿಪ್ರಾಯವಿದೆ. ಮಲಯಾಳಂ ಚಿತ್ರರಂಗದಲ್ಲಿ ಕೊಂಚ ಭಿನ್ನವಾಗಿದೆ. ಈ ಎಲ್ಲ ಸಂಕಷ್ಟಗಳ ಮಧ್ಯೆ ವಿ. ರವಿಚಂದ್ರನ್ ಅವರ ದಿ ಜಡ್ಜ್ ಮೆಂಟ್ ಸಿನಿಮಾ ಬಿಡುಗಡೆಯಾಗುತ್ತಿದೆ.
ವಿ. ರವಿಚಂದ್ರನ್ ಅವರು ಸಾಮೂಹಿಕವಾಗಿ ಪ್ರೇಕ್ಷಕರ ಮೇಲೆ ಪ್ರಭಾವ ಬೀರಬಲ್ಲ ನಟ. ತಮ್ಮ ಪ್ರಯೋಗಗಳಿಂದಲೇ ಹೆಚ್ಚು ಜನಪ್ರಿಯರಾಗಿರುವ ರವಿಚಂದ್ರನ್ ಸಿನಿಮಾದಲ್ಲಿ ಅಬ್ಬರವನ್ನು ತಂದವರು. ನಿರ್ದೇಶಕನಾಗಿಯೂ, ನಟನಾಗಿಯೂ ಪ್ರೇಕ್ಷಕರ ಪ್ರೀತಿ ಸಂಪಾದಿಸಿದವರು. ಅವರ ಪ್ರೇಮಲೋಕ, ರಣಧೀರ ಚಲನಚಿತ್ರಗಳನ್ನು ಇಂದಿಗೂ ನೆನಪಿಸಿಕೊಳ್ಳುವವರಿದ್ದಾರೆ. ಅದೊಂದೇ ಅಲ್ಲ. ಯುದ್ಧಕಾಂಡ, ಯುಗಪುರುಷ, ಕಿಂದರಿಜೋಗಿ, ಬಣ್ಣದ ಹೆಜ್ಜೆ, ಚಿಕ್ಕೆಜಮಾನ್ರು, ಹಳ್ಳೀ ಮೇಸ್ಟ್ರು, ಅಣ್ಣಯ್ಯದಂಥ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ತಲುಪಿದವರು. ಇತ್ತೀಚಿನ ದಶಮುಖ, ಮಾಣಿಕ್ಯ, ದೃಶ್ಯ ಚಿತ್ರಗಳ ಮೂಲಕ ಮತ್ತೆ ಪ್ರೇಕ್ಷಕರಿಗೆ ಇಷ್ಟವಾದವರು. ಈ ಹಿನ್ನೆಲೆಯಲ್ಲಿ ವಿ. ರವಿಚಂದ್ರನ್ ರ ಸಿನಿಮಾ ನೋಡಬಹುದು ಎನ್ನುವ ನೆಲೆಯಲ್ಲಿ ಇನ್ನೂ ಸದಭಿಪ್ರಾಯ ಉಳಿಸಿಕೊಂಡವರು.
Shyam Benegal : ಸಿನಿಮಾದಿಂದಲ್ಲ ; ಸಿನಿಮಾ ಮಾಧ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ
ಕನ್ನಡ ಚಿತ್ರರಂಗಕ್ಕೆ ದೊಡ್ಡ ಯಶಸ್ಸು ಸಿಗುತ್ತಿಲ್ಲ ಎಂಬ ಕೊರಗು ಕೇಳಿಬರುತ್ತಿರುವ ಮಧ್ಯೆಯೇ ಮತ್ತೊಂದು ಕೋರ್ಟ್ ಹಿನ್ನೆಲೆಯ ಚಲನಚಿತ್ರವಿದು ದಿ ಜಡ್ಜ್ ಮೆಂಟ್. ವಿ. ರವಿಚಂದ್ರನ್ ಜತೆಗೆ ದಿಗಂತ್, ಮೇಘನಾ ಗಾಂವ್ಕರ್, ಧನ್ಯಾ ರಾಂಕುಮಾರ್ ಮತ್ತಿತರರು ತಾರಾಗಣದಲ್ಲಿದ್ದಾರೆ. ಚಿತ್ರತಂಡವೂ ಚೆನ್ನಾಗಿದೆ. ದಿಗಂತ್, ಮೇಘನಾ ಮತ್ತಿತರರೆಲ್ಲ ನಿರೀಕ್ಷೆ ಹುಟ್ಟಿಸಿದವರೇ. ಗುರುರಾಜ್ ಕುಲಕರ್ಣಿ ನಿರ್ದೇಶಿಸಿರುವ ಚಿತ್ರವಿದು. ಒಂದು ರೀತಿಯಲ್ಲಿ ವಿವರಿಸಬಹುದಾದರೆ, ರಾಜ್ಯವನ್ನೂ ಬರ ಕಾಡುತ್ತಿತ್ತು. ಈ ಬರ ಕಾಡುವ ಹೊತ್ತಿನಲ್ಲಿ ಸಣ್ಣಗೆ ಮೋಡ ಕಟ್ಟಿಕೊಂಡರೂ ದೊಡ್ಡ ನಿರೀಕ್ಷೆ ಇರುತ್ತದೆ. ಇನ್ನೇನು ಮಳೆ ಬಂದೇ ಬಿಡಬಹುದು, ಸುರಿದೇ ಬಿಡಬಹುದು. ಬರದ ಬಾಯಿ ಮುಚ್ಚಿಸಬಹುದು..ಹೀಗೆಲ್ಲ. ಕನ್ನಡ ಚಿತ್ರರಂಗದ ಸ್ಥಿತಿಯೂ ಬಹುತೇಕ ಹಾಗೆಯೇ ಇದೆ.
ಹಾಗಾಗಿಯೇ ವಿ. ರವಿಚಂದ್ರನ್ ರ ದಿ ಜಡ್ಜ್ ಮೆಂಟ್ ಮೇಲೂ ಅಂಥದೊಂದು ನಿರೀಕ್ಷೆಯ ಮೋಡ ಕಟ್ಟಿದೆ. ಇನ್ನೊಂದು ನೆಲೆಯಲ್ಲಿ ಚಿತ್ರರಂಗದ ಸಂಕಷ್ಟ ಮುಂದುವರಿಯುವುದೋ ಅಥವಾ ಅದಕ್ಕೊಂದು ಅಲ್ಪವಿರಾಮ (ಪಾಸ್) ನೀಡುವುದೋ ಈ ಚಿತ್ರ ಎಂಬುದು ಪ್ರತಿಯೊಬ್ಬರ ಲೆಕ್ಕಾಚಾರ.
Multiflex Mania: ಮಲ್ಟಿಫ್ಲೆಕ್ಸ್ ಗಳು ಅನುಕೂಲಕ್ಕೆ; ಸಿಂಗಲ್ ಸ್ಕ್ರೀನ್ ಅನುಭವಕ್ಕೆ !
ವಿ. ರವಿಚಂದ್ರನ್ ಅವರು ಕೋರ್ಟ್ ಹಿನ್ನೆಲೆಯ ಚಲನಚಿತ್ರಗಳಲ್ಲಿ ಚೆನ್ನಾಗಿ ಅಭಿನಯಿಸಬಲ್ಲರು. ಅವರ ಅಭಿನಯದ ದಶಮುಖ ಚಿತ್ರವೂ ನಮ್ಮ ಮುಂದಿದೆ. ಈಗ ದಿ ಜಡ್ಜ್ ಮೆಂಟ್ ಚಲನಚಿತ್ರವು ಕನ್ನಡ ಚಿತ್ರರಂಗದ ಬಗೆಗಿನ ಪ್ರಸ್ತುತ ಸ್ಥಿತಿ ಮತ್ತು ಅಭಿಪ್ರಾಯಕ್ಕೆ ತೀರ್ಪು ನೋಡುವುದೋ ಕಾದು ನೋಡಬೇಕಿದೆ. ಕತ್ತಲ ಹಾದಿಯಲ್ಲಿ ಸಿಲುಕಿದಂತಿರುವ ಕನ್ನಡ ಚಿತ್ರರಂಗಕ್ಕೆ ಸಣ್ಣ ಬೆಳಕು ಬೀರಬಹುದೇ? ಎಂಬುದು ಎಲ್ಲರ ನಿರೀಕ್ಷೆ. ಈ ಮಧ್ಯೆ ಪ್ರೇಕ್ಷಕ ಮಹಾಪ್ರಭು ಯಾವ ರೀರ್ತಿಯ ತೀರ್ಪು ನೀಡುತ್ತಾನೋ ಎಂಬ ಕುತೂಹಲವೂ ಇದೆ.
ಚಿತ್ರ ತಂಡಕ್ಕೆ ಒಳ್ಳೆಯದಾಗಲಿ, ಪ್ರೇಕ್ಷಕರೂ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು, ಸಿನಿಮಾ ಪ್ರಯತ್ನವನ್ನು ಬೆಂಬಲಿಸಲಿ.