ದಿ ಬೇರ್ ಫೂಟೆಡ್ ಕಿಡ್ (The Barefooted Kid). ಬರಿಗಾಲಿನ ಹುಡುಗ ಎಂದು ಸಲೀಸಾಗಿ ಹೇಳಿ ಮುಗಿಸಬಹುದಾದ ಶೀರ್ಷಿಕೆಯ ಸಿನಿಮಾ ಕೊಂಚ ಭಾವನಾತ್ಮಕವಾಗಿಯೂ, ಸಾಹಸ ಪ್ರಧಾನವಾಗಿಯೂ ಇರುವ ಸಿನಿಮಾ. ಚೀನಾದ ಮ್ಯಾಂಡರಿನ್ ಭಾಷೆಯ ಸಿನಿಮಾದ ನಿರ್ದೇಶಕ ಜಾನಿತೊ (Johnnie To). 1993 ರಲ್ಲಿ ನಿರ್ಮಾಣಗೊಂಡ ಚಿತ್ರವಿದು. ಜನಪ್ರಿಯ ಧಾರೆಯಲ್ಲಿ ಮಾದರಿಯಲ್ಲಿರಬಹುದಾದ ಚಿತ್ರವಿದು. ಹಾಗೆಂದು ತೀರಾ ಅತಿರೇಕವೆನಿಸುವ ಪ್ರಣಯಕ್ಕೋ, ಹೊಡೆದಾಟಕ್ಕೋ ಇಳಿಯುವುದಿಲ್ಲ. ಇದು 1975 ರಲ್ಲಿ ಬಿಡುಗಡೆ ಕಂಡ ‘ಡಿಸಿಪಲ್ಸ್ ಆಫ್ ಶಾವೋಲಿನ್’ ಚಿತ್ರವನ್ನೇ ಆಧರಿಸಿ ಮಾಡಿದ್ದು.
ತನ್ನ ತಂದೆಯ ಮರಣದ ಬಳಿಕ ಅನಕ್ಷರಸ್ಥ ಬಾಲಕನೊಬ್ಬ (Aaron Kwok) ರಾಜಧಾನಿಗೆ ಬದುಕು ಹುಡುಕಿಕೊಂಡು ಬರುತ್ತಾನೆ. ಅಲ್ಲಿ ತನ್ನ ತಂದೆಯ ಗೆಳೆಯನೊಬ್ಬ (Ti Lung) ಸಹಾಯ ಪಡೆದು ನೇಕಾರಿಕೆಯ ಕಂಪನಿ ಕಥಾ ನಾಯಕಿ (Maggie Cheung)ಯ ಫೋರ್ ಸೀಸನ್ಸ್ ವೀವರ್ ನಲ್ಲಿ ಕೆಲಸಕ್ಕೆ ಸೇರುತ್ತಾನೆ. ನಗರದಲ್ಲಿ ರಾಜಕೀಯ ಪರಿಸ್ಥಿತಿ ಕೊಂಚ ಬಿಗುವಾಗಿರುತ್ತದೆ. ಮತ್ತೊಂದು ಕಂಪೆನಿಯ ಮಾಲಕ ಹಾಕ್ ವೊ-ಪೊ (Kenneth Tsang) ತನ್ನ ಪ್ರಭಾವವನ್ನು ಬಳಸಿ ನಗರದಲ್ಲಿ ಎಲ್ಲರನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಿರುತ್ತಾನೆ. ತನ್ನ ಮಾತಿಗೆ ಬಗ್ಗದ ಫೋರ್ ಸೀಸನ್ಸ್ ಕಂಪನಿಯ ನೌಕರರನ್ನು ತನ್ನ ನೌಕರರಿಂದ ಹಲ್ಲೆ ನಡೆಸುತ್ತಿರುತ್ತಾನೆ. ಇವೆಲ್ಲವನ್ನೂ ಅರಿತುಕೊಳ್ಳುವ ಹೊಸ ದಂಡಾಧಿಕಾರಿ ಈ ಹಾಕ್ ನನ್ನು ಸದೆ ಬಡಿಯಲು ಯೋಜಿಸುತ್ತಾನೆ. ಆದರೆ ಅವರಲ್ಲಿ ಸಾಕ್ಷ್ಯದ ಕೊರತೆಯಿಂದ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಈ ಬಾಲಕ ತನ್ನ ಮಾರ್ಷಲ್ ಆರ್ಟ್ಸ್ ಮೂಲಕ ಹಾಕ್ ನ ತೊಂದರೆಯನ್ನು ನಿಭಾಯಿಸುತ್ತಾನೆ. ಇದನ್ನು ಅರಿಯುವ ಹಾಕ್ ಆ ಬಾಲಕನನ್ನೇ ತನ್ನಲ್ಲಿಗೆ ನೇಮಿಸಿಕೊಳ್ಳುವ ಕುತಂತ್ರವೆಸಗುತ್ತಾನೆ. ಇದರ ಮಧ್ಯೆ ಬಾಲಕನ ತಂದೆಯ ಗೆಳೆಯನ ನಿಜರೂಪ ಬಯಲಾಗು (ಅವನು ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿ ಆಡಳಿತಕ್ಕೆ ಬೇಕಾದವ) ತ್ತದೆ. ಹಾಕ್ ಇದೇ ಅವಕಾಶವನ್ನು ಬಳಸಿ ತನ್ನ ಕಾರ್ಮಿಕರಿಂದ ಅವನನ್ನು ಕೊಲ್ಲಿಸುತ್ತಾನೆ. ಇದನ್ನು ತಪ್ಪಿಸಲು ಬಾಲಕ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಎಲ್ಲ ದುರಂತಗಳಿಗೆ ಮೂಕ ಸಾಕ್ಷಿಯಾಗುವ ಬಾಲಕ ತನ್ನಷ್ಟಕ್ಕೇ ಬೇರೆ ಹಾದಿಯನ್ನು ಹಿಡಿಯುತ್ತಾನೆ.
ಸಿನಿಮಾದಲ್ಲಿ ಹತ್ತಾರು ವೈವಿಧ್ಯಮಯ ಪಾತ್ರಗಳಿವೆ. ಜಾನಿತೊ ಅವರ ಚಿತ್ರಗಳಲ್ಲಿ ಇದು ಸಾಮಾನ್ಯ. ಆದರೂ ಕಥಾ ನಾಯಕ ಪಾತ್ರದ ಮೇಲಿನ ಬೆಳಕು ಕಡಿಮೆಯಾಗದಂತೆ ಎಚ್ಚರ ವಹಿಸಲಾಗಿದೆ. ಆದರೆ ಬಾಲಕನ ಪಾತ್ರ ನಿರ್ವಹಿಸಿರುವ ಆರೋನ್ (Aaron) ಸಾಹಸ ಪ್ರಧಾನ ಸನ್ನಿವೇಶಗಳಲ್ಲಿ ಚೆನ್ನಾಗಿ ನಟಿಸಿದಂತೆ ಅನಿಸಿದರೂ ಪಾತ್ರದಲ್ಲಿನ ಮುಗ್ಧತೆಯನ್ನು ಬಿಂಬಿಸುವಲ್ಲಿ ಕೊಂಚ ಸೋತಂತೆ ಅನಿಸುತ್ತದೆ. ಈ ಚಿತ್ರ ಕೇವಲ ಸಾಹಸ ಪ್ರಧಾನವಾದದ್ದಲ್ಲ. ಎರಡು ನೆಲೆಯ ಕಥೆಗಳು ಸಾಗುತ್ತವೆ.
ಐದು ಲಕ್ಷ ಪ್ರೊಡ್ಯೂರ್ಸ್‌ಗಳ ಮಂಥನ್ ಮರು ಬಿಡುಗಡೆ; ನೋಡದೇ ಇರಬೇಡಿ
ಮೊದಲನೆಯದು ಅನಾಥ ಬಾಲಕನ ಕಥೆ. ಇದಕ್ಕೆ ಹಿನ್ನೆಲೆಯಾಗುವ ವಶೀಲಿ-ಪ್ರಭಾವ, ರಾಜಕೀಯ, ಕುತಂತ್ರ ಇತ್ಯಾದಿ. ಅಂತಿಮವಾಗಿ ತನ್ನ ಮುಗ್ಧತೆಯನ್ನು ಕಳೆದುಕೊಳ್ಳುವಂಥ ಬಾಲಕ. ಕಥೆಯ ಕೊನೆಯಲ್ಲಿ ಬರಿಗಾಲಿನ ಬಾಲಕ ಷೂ ವೊಂದನ್ನು ಧರಿಸಲು ಮುಂದಾಗುತ್ತಾನೆ. ಬರಿಗಾಲು ಮತ್ತು ಷೂ ಧರಿಸುವ ಸಂದರ್ಭವನ್ನು ಹೆಣೆಯುವ ಮೂಲಕ ನಿರ್ದೇಶಕ, ಬಾಲಕನ ಮುಗ್ಧತೆ ಮಾಯವಾದ ಬಗೆಯನ್ನು ಉಪಮೆ ರೀತಿಯಲ್ಲಿ ವಿವರಿಸುತ್ತಾನೆ. ಇದು ಇಷ್ಟವಾಗುತ್ತದೆ.
ಮತ್ತೊಂದು ನೆಲೆಯಲ್ಲಿ ಪಾಕ್ ಸಿ ವೂನ್ (Maggie) ಮತ್ತು ಡುಯಾನ್ (Ti Lung) ನಡುವಿನ ಪ್ರೇಮ ಕಥೆ. ಎರಡನೇ ಎಳೆಯಲ್ಲಿ ಪಾಕ್ ಮತ್ತು ಡುಯಾನ್ ಚೆನ್ನಾಗಿ ಅಭಿನಯಿಸಿದ್ದಾರೆ. ಮಿತದ ಬಣ್ಣವುಳ್ಳ ಪ್ರೇಮಕಥೆಗೆ ಎಷ್ಟು ಬೇಕೋ ಅಷ್ಟನ್ನು ಬಹುಮುಖ್ಯವೆನ್ನುವಂತೆ, ಭಾವನಾ ಪ್ರಧಾನವಾಗಿ ಅಭಿನಯಿಸಿದ್ದಾರೆ. ಮಾರ್ಷಲ್ ಆರ್ಟ್ಸ್ ಸನ್ನಿವೇಶಗಳಿಗೆ ಹೇಳಿ ಮಾಡಿಸಿದಂತಿರುವ ಡುಯಾನ್ ತಮ್ಮ ಹೊಡೆದಾಟದ ದೃಶ್ಯಗಳನ್ನೂ ಚೆನ್ನಾಗಿ ನಿರ್ವಹಿಸಿದ್ದಾರೆ. ಕಥಾ ನಾಯಕ ಆರೋನ್ ನ ಅಭಿನಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು. ಪಾತ್ರ ಬಯಸುವುದು ಮೂಲವಾಗಿ ಮುಗ್ಧತೆ. ಆದರೆ, ಪಾತ್ರ ಬಯಸುವುದಕ್ಕಿಂತ ತುಸು ಹೆಚ್ಚು ನಾಟಕೀಯತೆಯ ಅಭಿನಯ ತೋರಿದ ಕಾರಣ ಪಾತ್ರ ಮನಸ್ಸಿನಲ್ಲಿ ಉಳಿಯುವಲ್ಲಿ ಸೋಲುತ್ತದೆ.
NYIFF: ಕನ್ನಡದ ಮಿಥ್ಯದೊಂದಿಗೆ ಭಾರತೀಯ ಚಿತ್ರಗಳ ಸಂಭ್ರಮ ಈ ಸಿನಿಮೋತ್ಸವದಲ್ಲಿ
ಈಗಾಗಲೇ ಜನರಿಗೆ ತಿಳಿದಿರುವ ಕತೆಯಾದ ಕಾರಣ, ಹೊಸತನ ಮತ್ತು ಪ್ರಯೋಗಶೀಲತೆಯನ್ನು ಪ್ರೇಕ್ಷಕರು ಬಯಸುವುದು ಸಹಜ. ಅಂಥದ್ದನ್ನು ಮರು ನಿರ್ಮಿಸುವುದು ಕಷ್ಟದ ಕೆಲಸ. ಅದನ್ನು ಜಾನಿತೊ ನಿಭಾಯಿಸಿದ್ದಾರೆ. ಅವರ ಮಾರ್ಷಲ್ ಆರ್ಟ್ಸ್ ಆಧರಿತ ಚಿತ್ರಗಳ ಸಾಲಿಗೆ ಇದನ್ನೂ ಸೇರಿಸಬಹುದು.
ಸಿನಿಮಾಟೋಗ್ರಾಫರ್ ಹೊರೆಸ್ ವಾಂಗ್ (Horace Wong) ತಮ್ಮ ಕೆಲಸವನ್ನು ಕೌಶಲ್ಯ ಪೂರ್ಣವಾಗಿ ಮಾಡಿದ್ದಾರೆ. ಪ್ರತಿ ದೃಶ್ಯಗಳನ್ನೂ ವರ್ಣಮಯವಾಗಿ ಕಟ್ಟಿ ಕೊಡಲು ಪ್ರಯತ್ನಿಸಿದ್ದಾರೆ. ಸಂಗೀತ ಸಹ ಚೆನ್ನಾಗಿದೆ. ಜಾನಿತೊ ಅವರ ಇತರೆ ಚಿತ್ರಗಳ ಗುಣಮಟ್ಟಕ್ಕೆ ಹೋಲಿಸುವುದು ಕಷ್ಟವೆನಿಸಿದರೂ, ಅವೆಲ್ಲದರ ಮಧ್ಯೆ ಇದನ್ನೂ ಇಟ್ಟುಕೊಂಡು ನೋಡಬಹುದಾದ ಚಿತ್ರವೆನ್ನುವುದರಲ್ಲಿ ಸಂಶಯವಿಲ್ಲ.
ಈ ಸಿನಿಮಾ ಮುಬಿ (MUBI) ಯಲ್ಲಿ ಲಭ್ಯವಿದೆ.
ವಿವರ
ಚಿತ್ರ : ದಿ ಬೇರ್ ಪೂಟೆಡ್ ಕಿಡ್
ನಿರ್ದೇಶನ : ಜಾನಿತೊ (Johnie To)
ಚಿತ್ರಕಥೆ : ಯೂ ನೈಹೊ (yau Nai-hoi)
ಛಾಯಾಗ್ರಹಣ : ಹೊರೆಸ್ ವಾಂಗ್ (Horace Wong)
ಸಂಗೀತ : ವಿಲಿಯಂ ವೂ (William Wu)