ಕಾನ್ ಚಿತ್ರೋತ್ಸವಕ್ಕೆ ಭರ್ಜರಿ ಸಿದ್ಧತೆ ಆರಂಭವಾಗಿದೆ.
ಮೇ 14 ರಿಂದ 25 ರವರೆಗೆ ಫ್ರಾನ್ಸ್ ನ ಕಾನ್ ನಲ್ಲಿ ನಡೆಯುವ ಚಿತ್ರೋತ್ಸವದ 77 ನೇ ಆವೃತ್ತಿಯಲ್ಲಿ ಹಲವು ಅಚ್ಚರಿಗಳು ಕಾದಂತೆ ತೋರುತ್ತಿದೆ.
ಈಗಾಗಲೇ ಸ್ಪರ್ಧಾ ಚಿತ್ರಗಳ ಆಯ್ಕೆ ಸಮಿತಿಗೆ ಹಾಲಿವುಡ್ ನಟಿ ಹಾಗೂ ಚಿತ್ರ ಸಾಹಿತಿ ಗ್ರೇಟಾ ಗೆರ್ವಿಗ್ ಅವರನ್ನು ಅಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ.
ಏಪ್ರಿಲ್ 11 ರಂದು ಈ ಬಾರಿಯ ಆವೃತ್ತಿಗೆ ವಿವಿಧ ವಿಭಾಗಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ (ಅಫಿಶಿಯಲ್ ಸೆಲೆಕ್ಷನ್) ಚಲನಚಿತ್ರಗಳ ಪಟ್ಟಿಗಳನ್ನು ಕಾನ್ ಚಿತ್ರೋತ್ಸವ ಸಮಿತಿ ಪ್ರಕಟಿಸಲಿದೆ. ಸ್ಪರ್ಧಾ ವಿಭಾಗವಲ್ಲದೇ ಹಲವಾರು ವಿಭಾಗಗಳಿವೆ.
ಕಾನ್ ಚಿತ್ರೋತ್ಸವ ಆರಂಭವಾದದ್ದು ಅತ್ಯುತ್ತಮ ಸೃಜನಶೀಲ ಸಿನಿಮಾಗಳನ್ನು ಗುರುತಿಸಲು, ಬೆಂಬಲಿಸಲು, ಪ್ರೋತ್ಸಾಹಿಸಲು ಹಾಗೂ ಅವುಗಳಿಗೊಂದು ಉತ್ತಮ ಮಾರುಕಟ್ಟೆಯ ಸಾಧ್ಯತೆಯನ್ನೂ ಹುಟ್ಟುಹಾಕಿ ಚಲನಚಿತ್ರೋದ್ಯಮವನ್ನು ಸಾವಯವ ರೀತಿಯಲ್ಲಿ ಬೆಳೆಸುವ ಸಲುವಾಗಿ. ಈ ಹೊತ್ತಿನವರೆಗೂ ತನ್ನ ಧ್ಯೇಯೋದ್ಧೇಶದ ಹಾದಿಯಲ್ಲೇ ಸಾಗುತ್ತಿರುವ ಚಿತ್ರೋತ್ಸವವಾಗಿ ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದೆ.
ಕೆಲವರ ಅಭಿಪ್ರಾಯದ ಪ್ರಕಾರ, ಕಾನ್ ಚಿತ್ರೋತ್ಸವಕ್ಕೆ ಆಯ್ಕೆಯಾಗುವುದು ಬಹುತೇಕ ಆಸ್ಕರ್ ಪ್ರಶಸ್ತಿ ಗಳಿಸಿದಂತೆಯೇ. ಕೆಲವೊಮ್ಮೆ ಅದಕ್ಕಿಂತಲೂ ಕಷ್ಟ ಕಾನ್ ಗೆ ಆಯ್ಕೆಯಾಗುವುದು ಎಂಬ ಅಭಿಪ್ರಾಯವೂ ಇದೆ. ಗುಣಮಟ್ಟದಲ್ಲಿ ಇನ್ನೂ ಸೃಜನಶೀಲತೆಗೆ ಒತ್ತುಕೊಡುತ್ತಿರುವ ಕೆಲವೇ ಉತ್ಸವಗಳಲ್ಲಿ ಇದೂ ಪ್ರಮುಖವಾದುದು.
77 ನೇ ಉತ್ಸವಕ್ಕೆ ಸಜ್ಜಾಗುತ್ತಿರುವ ಕಾನ್ ಉತ್ಸವದಲ್ಲಿ ಸಿನಿಮಾ ಎಂದರೆ ಬರೀ ಒಂದು ಉತ್ಪನ್ನವಾಗಲೀ, ಅಭಿವ್ಯಕ್ತಿಯಾಗಲೀ ಅಷ್ಟೇ ಅಲ್ಲ. ಅದೊಂದು ಸಂಭ್ರಮ. ಮತ್ತೊಂದು ಅಂಶ ಉಲ್ಲೇಖಿಸಬಹುದಾದದ್ದು ಎಂದರೆ, ಉದಯೋನ್ಮುಖ ಚಲನಚಿತ್ರ ಕರ್ಮಿಗಳಿಗೂ ವೇದಿಕೆ ಕಲ್ಪಿಸಿ ಬೆಳಕಿನಲ್ಲಿ ಬಿಂಬಿಸುವುದೂ ಕಾನ್ ನ ಮಹತ್ವದ ಉದ್ದೇಶಗಳಲ್ಲಿ ಒಂದು. ಹಾಗಾಗಿಯೇ ಹೆಕ್ಕಿ ಹೆಕ್ಕಿ ಒಳ್ಳೆಯದೆನ್ನುವ ಹಾಗೂ ಅದನ್ನು ಅಷ್ಟೇ ಖಚಿತತೆಯಿಂದ ಜಗತ್ತಿನ ಚಲನಚಿತ್ರ ಪ್ರೇಮಿಗಳ ಸಮ್ಮುಖದಲ್ಲಿ ಸಾದರ ಪಡಿಸುವುದು ಈ ಉತ್ಸವದ ಹೆಗ್ಗಳಿಕೆಯಲ್ಲಿ ಒಂದು.
ಅಫಿಶಿಯಲ್ ಸೆಲೆಕ್ಷನ್ ವಿಭಾಗವೆಂಬುದೇ ವಿಶಿಷ್ಟವಾದ ಒಂದು ಬೊಕೆ (ಹೂಗುಚ್ಛವಿದ್ದಂತೆ) ಇದ್ದಂತೆ. ಅದರಲ್ಲಿ ಬರೀ ಗುಲಾಬಿಯಾಗಲೀ, ಬೇರೆ ಯಾವುದೇ ಒಂದೇ ವಿಧದ ಹೂವುಗಳು ಇರದು. ಔಟ್ ಆಫ್ ಕಾಂಪಿಟೇಶನ್, ವಿಶೇಷ ಪ್ರದರ್ಶನಗಳು, ಮಧ್ಯರಾತ್ರಿಯ ಪ್ರದರ್ಶನಗಳು, ಕಾನ್ ಪ್ರೀಮಿಯರ್ ಚಲನಚಿತ್ರಗಳು ಹಾಗೂ ಕಾನ್ ಕ್ಲಾಸಿಕ್ಸ್ ಮತ್ತಿತರ ವಿಭಾಗಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಆಯಾ ವರ್ಷದಲ್ಲಿ ಬಂದಿರಬಹುದಾದ ಮಹತ್ವದ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಕೆಲವು ಸಿನಿಮಾಗಳಿಗೆ ಕಾನ್ ಚಿತ್ರೋತ್ಸವ ಒಂದು ವಿಶ್ವ ಸಿನಿಮಾ ಮಂದಿರವಿದ್ದಂತೆ. ಅವುಗಳ ಪ್ರಥಮ ಪ್ರದರ್ಶನ ನಡೆಯುವುದು ಇದೇ ಉತ್ಸವದಲ್ಲಿ. ಹಲವು ಸಿನಿಮಾ ನಿರ್ದೆಶಕರು ಈ ಉತ್ಸವಕ್ಕೆಂದೇ ಸಿನಿಮಾಗಳನ್ನು ರೂಪಿಸುವವರು ಇದ್ದಾರೆ.
ಸದ್ಯದ ಲೆಕ್ಕದಂತೆ ಏಪ್ರಿಲ್ 11 ರಂದು ಕಾನ್ ಚಿತ್ರೋತ್ಸವದ ಅಧಿಕೃತ ಆಯ್ಕೆಯ ಪಟ್ಟಿ ಬಿಡುಗಡೆಗೊಳ್ಳಲಿದೆ.