ಕಾನ್ : ಪ್ರಸಿದ್ಧ ಸಿನೆ ಛಾಯಾಗ್ರಾಹಕ ಸಂತೋಷ್ ಶಿವನ್ ಮುಂಬರುವ ಕಾನ್ ಚಿತ್ರೋತ್ಸವದಲ್ಲಿ ಪಿಯೆರ್ ಆಂಜಿನಿಕ್ಸ್ ಪುರಸ್ಕಾರ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಕಾನ್ ಚಿತ್ರೋತ್ಸವದಲ್ಲಿ 2013 ರಿಂದ ಜಗತ್ತಿನ ಅತ್ಯಂತ ಮಹತ್ವದ ಸಿನೆ ಛಾಯಾಗ್ರಾಹಕರಿಗೆ ಪ್ರತಿ ವರ್ಷದ ಚಿತ್ರೋತ್ಸವ ಸಂದರ್ಭ ಈ ಅತ್ಯುನ್ನತ ಗೌರವ ನೀಡಿ ಅಭಿನಂದಿಸಲಾಗುತ್ತಿದೆ.
ಈ ಸಂಬಂಧ ಪ್ರಕಟಣೆ ನೀಡಿರುವ ಆಯೋಜಕ ಸಮಿತಿ, ಮಾರ್ಚ್ 24 ರಂದು ನಡೆಯುವ 77 ನೇ ಚಿತ್ರೋತ್ಸವ ಸಂದರ್ಭದಲ್ಲಿ ಈ ಪುರಸ್ಕಾರ ನೀಡಿ ಗೌರವಿಸುವುದಾಗಿ ತಿಳಿಸಿದೆ. ಇದರ ಮಧ್ಯೆ ಈ ಗೌರವ ಸ್ವೀಕರಿಸುತ್ತಿರುವ ಮೊದಲ ಭಾರತೀಯ ಸಿನೆ ಛಾಯಾಗ್ರಾಹಕ ಎಂಬ ಅಭಿದಾನಕ್ಕೆ ಸಂತೋಷ್ ಶಿವನ್ ಪಾತ್ರರಾಗಿದ್ದಾರೆ.
ಬರೀ ಪ್ರಶಸ್ತಿ ಪುರಸ್ಕಾರ
ಕ್ಕಷ್ಟೇ ಸಂತೋಷ್ ಶಿವನ್ ಅವರ ಪ್ರತಿಭೆಯನ್ನು ಸೀಮಿತಗೊಳಿಸದ ಉತ್ಸವ ಸಮಿತಿ, ಮಾರ್ಚ್ 23 ರಂದು ಅವರಿಂದ ಮಾಸ್ಟರ್ ಕ್ಲಾಸ್ ಅನ್ನು ಸಹ ಆಯೋಜಿಸಿದೆ. ಸಿನಿಮಾಸಕ್ತರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಸಿನಿ ಉತ್ಸಾಹಿಗಳಿಗೆ ಸಂತೋಷ್ ಶಿವನ್ ಸಿನೆ ಛಾಯಾಗ್ರಹಣದ ಕುರಿತು ಸಲಹೆ ನೀಡುವರು.
ಇದುವರೆಗೂ ಸಿನೆ ಛಾಯಾಗ್ರಹಣದ ಉನ್ನತ ಗೌರವಕ್ಕೆ ಫಿಲಿಫ್ ರಸೆಲೊಟ್, ವಿಲ್ಮೊಸ್ ಸಿಗ್ಮಾಂಡ್, ರೋಜರ್ ಎ ಡೆಕಿನ್ಸ್, ಪೀಟರ್ ಸೂಷಿಟ್ಜ್ಕಿ, ಕ್ರಿಸ್ಟೋಫರ್ ಡಾಯ್ಲೆ, ಎಡ್ವರ್ಡ್ ಲಾಚ್ ಮನ್, ಬ್ರೂನೊ ಡೆಲ್ಬೊನೆಲ್, ಆಗ್ನೆಸ್ ಗೊಡಾರ್ಡ್. ದಾರಿಯಸ್ ಕೊಂಡ್ಲಿ ಹಾಗೂ ಬ್ಯಾರಿ ಅಕ್ವೊಯ್ಡ್ ಭಾಜನರಾಗಿದ್ದರು.
ಜತೆಗೆ 2018 ರಿಂದ ಈ ಗೌರವದ ಜತೆಗೆ ಉದಯೋನ್ಮುಖ ಸಿನೆ ಛಾಯಾಗ್ರಾಹಕರಿಗೂ ಗೌರವ ಸಲ್ಲಿಸಲಾಗುತ್ತಿದೆ. ಈ ವಿಭಾಗದಡಿ ಸಿಸಿಲೆ ಝಾಂಗ್, ಮೊಧುರಾ ಪಾಲಿಟ್, ಪಮೇಲಾ ಅಲ್ಬರಿಯನ್, ಎವೆಲಿನ್ ವಾನ್ ರೆ ಹಾಗೂ ಹಯಾಕೈರತ್ ಅಭಿನಂದಿತರಾಗುತ್ತಿದ್ದಾರೆ.
ಸಂತೋಷ್ ಶಿವನ್ ಒಬ್ಬ ಅತ್ಯದ್ಭುತ ಸಿನೆ ಛಾಯಾಗ್ರಾಹಕರಾಗಿದ್ದು, ದಳಪತಿ, ರರೋಜಾ, ಯೋಧ, ಕಾಲಾಪಾನಿ, ಇರುವರ್, ದಿಲ್ಸೆ, ವಾನಪ್ರಸ್ಥಂ, ಅಶೋಕ ಇತ್ಯಾದಿ ಚಲನಚಿತ್ರಗಳಿಗೆ ಸಿನೆ ಛಾಯಾಗ್ರಹಣ ಒದಗಿಸಿದ್ದಾರೆ.