ಹದಿನಾಲ್ಕು ವರ್ಷಗಳ ಹಿಂದೆ ಜಪಾನಿನ ಖ್ಯಾತ ನಿರ್ದೇಶಕ ಅಕಿರಾ ಕುರಸೋವಾರ ಜನ್ಮಶತಮಾನೋತ್ಸವ ಆಚರಿಸಲಾಯಿತು. ಆ ಸಂದರ್ಭದಲ್ಲಿ ವಿಮರ್ಶಕ ಮನು ಚಕ್ರವರ್ತಿಯವರು ಕನ್ನಡ ಪ್ರಭ ಪತ್ರಿಕೆಗೆ ಕುರಸೋವಾರ ಬಗ್ಗೆ ಬರೆದ ಲೇಖನ ನೆನಪಾಯಿತು. ಅದಕ್ಕೇ ಸಿನಿಮಾಯೆ ಇಲ್ಲಿ ಪ್ರಕಟಿಸಿದೆ. ಅಕಿರಾ ಕುರಸೋವಾ ಜಗತ್ತಿನ ಸಿನಿಮಾ ಜಗತ್ತು ಕಂಡ ಅತ್ಯಂತ ಅಪರೂಪದ ಹಾಗೂ ಅದ್ಭುತ ನಿರ್ದೇಶಕ. ಇಡೀ ಪಾಶ್ಚಾತ್ಯ ಸಿನಿಮಾ ಜಗತ್ತನ್ನು ತನ್ನತ್ತ ತಿರುಗಿಸಿಕೊಂಡ ಚಿತ್ರ ಸೂರ್ಯ.
ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್’ ಕುರೋಸಾವಾನ ‘ಥ್ರೋನ್ ಆಫ್ ಬ್ಲಡ್’ ಆದರೆ ಮ್ಯಾಕ್ಸಿಮ್ ಗಾರ್ಕಿಯ ‘ಲೋವರ್ ಡೆಪ್ತ್’ ಅದೇ ಹೆಸರಿನ ಚಿತ್ರವಾಯಿತು. ಈ ಎರಡೂ ಚಿತ್ರಗಳಲ್ಲಿ ಕುರೋಸಾವಾ ಮಾಡಿಕೊಂಡಿರುವ ರೂಪಾಂತರಗಳು ಕೇವಲ ಚಿತ್ರಕಥೆಗೆ ಸಂಬಂಧಪಟ್ಟದ್ದಲ್ಲ. ಬದಲಾಗಿ ಜೈವಿಕ ಸಾವಯವ ಸಂಬಂಧಗಳು ನಶಿಸಿ ಆಕ್ರಮಣಕಾರಿ ಮನಃಸ್ಥಿತಿಗಳನ್ನು ಒಳಗೆ ಕಂಡುಕೊಳ್ಳುವ ಸಾಮುದಾಯಿಕ ಬದುಕನ್ನು ಕುರೋಸಾವಾ ಇಲ್ಲಿ ಸೆರೆ ಹಿಡಿಯುತ್ತಿದ್ದಾನೆ. ಅಲ್ಲದೆ ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಾಗಿ ವ್ಯಕ್ತಿಯಲ್ಲಿ ಆಗುವ ಮಾನಸಿಕ ತೊಳಲಾಟಗಳು ಮತ್ತು ಸಮುದಾಯದಲ್ಲಿ ಆಗುವ ಪಲ್ಲಟಗಳನ್ನು ಕೂಡ ಕುರೋಸಾವಾ ಜಪಾನೀ ಸಮಾಜದಲ್ಲಾಗುತ್ತಿರುವ ಸ್ಥಿತ್ಯಂತರಗಳಿಗೆ ಅನ್ವಯವಾಗುವಂತೆ ರೂಪಕವಾಗಿ ನಮ್ಮ ಮುಂದೆ ಇಡುತ್ತಾನೆ. ಹೀಗೆ ಮಾಡುವಾಗ ಕುರೋಸಾವಾ ಕೇವಲ ಒಂದು ಶತಮಾನದ ಅಥವಾ ಒಂದು ನಿರ್ದಿಷ್ಟ ದಶಕದ ಕಥೆ ಹೇಳುತ್ತಿಲ್ಲ. ಅವನಲ್ಲಿ ಕಾಲಗಳು ಮೇಳೈಸುತ್ತವೆ.
ಆದರೆ ಇತಿಹಾಸದ ಚಲನೆಯನ್ನು ಮರೆತು ಬಿಡುವ ಕಾಲಾತೀತ, ದೇಶಾತೀತ, ಐತಿಹಾಸಿಕ ಪ್ರಜ್ಞೆ ಇದಲ್ಲ. ಬದಲಾಗಿ ಇತಿಹಾಸ, ಸಮಾಜ ನಾಗರೀಕತೆ ಎಂಬ ಪರಿಕಲ್ಪನೆಗಳು ಹೇಗೆ ಪ್ರಕ್ರಿಯಾತ್ಮಕವಾಗಿ ಮುನ್ನಡೆಯುತ್ತವೆ ಎಂದು ಸೂಚಿಸುವ ವಿಶಿಷ್ಟವಾದ ಸೃಜಲಶೀಲ ನೋಟ ಇದು. ಅಂದರೆ ಆದಿ, ಅಂತ್ಯಗಳು ಎಂಬ ಸಂಕುಚಿತ ನಿಲುವನ್ನೂ ಮೀರಿದ ಪರಿಕಲ್ಪನೆ ಇದಾಗಿದೆ. ಇದನ್ನು ಕೋಬಯಾಶಿ ತನ್ನ ‘ರೆಬೆಲಿಯನ್’ ಚಿತ್ರದಲ್ಲಿ ಸಾಧಿಸಿರುವುದು. ಮಧ್ಯ ಯುಗಗಳ ಕಥೆಯೊಂದರ ಮೂಲಕ ಕೋಬಯಾಶಿ ಸಮಕಾಲೀನ ಬದುಕಿನ ಅವಸ್ಥೆಗಳನ್ನು, ಐತಿಹಾಸಿಕ ಪ್ರಜ್ಞೆಯೊಂದಿಗೆ ನಮಗೆ ಕಟ್ಟಿಕೊಡುತ್ತಾನೆ. ಈ ರೀತಿಯ ಅಭಿವ್ಯಕ್ತಿಯ ಶ್ರೇಷ್ಟ ಉದಾಹರಣೆ ನಮಗೆ ಕಂಡು ಬರುವುದು ಕೆಂಜಿ ಮಿಚೋಗೂಚಿಯ ‘ಸ್ಯಾನ್‌ಶೋದ ಬೇಲಿಫ್’ ಚಿತ್ರದಲ್ಲಿ. ಭೂತವನ್ನೂ ವರ್ತಮಾನವನ್ನೂ ಬೆಸೆದು ಹಿಂಸೆ, ಕ್ರೌರ‍್ಯ, ರಕ್ತಪಾತ, ಅಮಾನವೀಯ ವ್ಯವಸ್ಥೆ, ಅಧಿಕಾರ ದಾಹ, ಶೋಷಣೆ, ನೋವು, ಸಂಕಟಗಳೇ ಪ್ರಧಾನವಾಗಿರುವ ಮಾನವ ನಾಗರೀಕತೆಯ ಕಥನವಿದು. ನಾನಾ ಕಾಲಘಟ್ಟಗಳ, ವಿವಿಧ ರೀತಿಯ ಸನ್ನಿವೇಶಗಳು ಹಲವಾರು ಬಗೆಯ ಅನುಭವಗಳ ಮೇಲೆ ರಚಿತವಾಗಿರುವ ಈ ಚಿತ್ರಗಳು ನನ್ನ ಪ್ರಕಾರ ಮನುಷ್ಯ ಪ್ರಜ್ಞೆಯ ವಿಕಾಸದ ಕಥೆಯನ್ನೇ ಹೇಳುತ್ತಿರುವುದು.
ಒಂದೇ ಬಗೆಯ ಸತ್ಯವಿರಲು ಸಾಧ್ಯವೇ, ಒಂದೇ ಘಟನೆಯ ಹಿಂದೆ ಒಂದೇ ರೀತಿಯ ಬುದ್ದಿ ಇರಲು ಸಾಧ್ಯವೇ, ಮಾನವ ಅನುಭವವನ್ನು ಏಕಮುಖಿ ನೆಲೆಯಲ್ಲಿ ಕಟ್ಟಲು ಸಾಧ್ಯವೇ ಎಂಬ ಪ್ರಶ್ನೆಗಳನ್ನು ತಾತ್ವಿಕವಾಗಿ, ಸೈದ್ದಾಂತಿಕವಾಗಿ ಅನುಭವದ ಚೌಕಟ್ಟಿನಲ್ಲಿ ಕೋಬಯಾಶಿ, ಮಿಚೋಗೂಚಿ ಮತ್ತು ಕುರೋಸಾವಾ ನಾನಾ ಶೈಲಿಗಳಲ್ಲಿ ಕಥನ ಕ್ರಮಗಳ ಮುಂದೆ ಪ್ರಸ್ತುತಪಡಿಸುತ್ತಾರೆ ಎನ್ನುವುದೇ ನನ್ನ ಪ್ರಮೇಯ. ಇದು ಆಕಸ್ಮಿಕವೂ ಅಲ್ಲ, ಪೂರ್ವ ನಿರ್ಧಾರಿತವೂ ಅಲ್ಲ. ಕೇವಲ ಪ್ರೇರಣೆಗಳ, ಪ್ರಭಾವಗಳ ನೇರ ಪ್ರವಾಹವೂ ಅಲ್ಲ ಎಂಬುದು ಕೂಡಾ ನನ್ನ ವಾದ. ಜಪಾನೀ ಚಲನಚಿತ್ರದ ಒಂದು ದೊಡ್ಡ ತಾತ್ವಿಕ ಸಂವೇದನೆಯನ್ನೇ ಇದು ಸೂಚಿಸುತ್ತದೆ ಎಂಬುದು ನನ್ನ ನಿಲುವು.
ವಿವರಿಸಿ ಹೇಳುವುದಾದರೆ ಸತ್ಯ, ಜ್ಞಾನ, ವ್ಯವಸ್ಥೆ, ಅನುಭವ, ಪ್ರಭುತ್ವ, ಇಂತಹ ವಿಷಯಗಳಿಗೆ ಜಪಾನಿನ ಚಲನಚಿತ್ರ ಸಂಸ್ಕೃತಿಯ ಸಂವೇದನೆ ವಿಶಾಲಾರ್ಥದಲ್ಲಿ ಬೌದ್ಧ ಧರ್ಮದ ಕಾಣ್ಕೆಯಿಂದ ರೂಪಿತಗೊಂಡಿದೆ ಎಂಬುದೇ ನನ್ನ ನಿಲುವು. ಬೌದ್ಧ ಧರ್ಮದ ದರ್ಶನವೇ ಈ ಅಭಿವ್ಯಕ್ತಿಯ ತಳಹದಿ. ಮಿಚೋಗೂಚಿಯ ‘ಸ್ಯಾನ್ ಶೋದ ಬೇಲಿಫ್’ನಲ್ಲಿ ಇದು ನೇರವಾಗಿ. ತೀಕ್ಷ್ಣವಾಗಿ ಮೂಡಿ ಬಂದರೆ ಕುರೋಸಾವಾ ಮತ್ತು ಕೋಬಯಾಶಿಯವರ ಚಿತ್ರಗಳಲ್ಲಿ ಈ ಕಾಣ್ಕೆ ಕಥನ ಕ್ರಮದಲ್ಲಿ ಬೆಸೆದುಗೊಂಡು ಪರೋಕ್ಷವಾಗಿ ಗೋಚರಿಸುತ್ತದೆ. ಪಾಶ್ಚಿಮಾತ್ಯ ಚಿಂತನೆಗಳ, ತಾತ್ವಿಕ ನೆಲೆಗಳ ಮೂಲಕವೇ ಅರ್ಥೈಸುವ ನಮ್ಮ ಸನ್ನಿವೇಶದಲ್ಲಿ ಪರ‍್ಯಾಯ ಮೀಮಾಂಸೆಯನ್ನೂ, ತಾತ್ವಿಕ/ಸೈದ್ಧಾಂತಿಕ ಮಾದರಿಗಳನ್ನು ನಾವು ಕಟ್ಟಿಕೊಳ್ಳುವ ಅಗತ್ಯವನ್ನೂ ಜಪಾನೀ ಚಲನಚಿತ್ರಗಳು ತೋರಿಸಿಕೊಡುತ್ತವೆ. ಅದು ತೃತೀಯ ಜಗತ್ತೆಂದು ಕರೆಸಿಕೊಳ್ಳುವ ನಮ್ಮಂತಹ ಸಮಾಜಗಳ ಮೂಲ ಅಗತ್ಯ ಕೂಡ.
ಕುರೋಸಾವಾನ ‘ಡರ್ಸೂ ಉಜಾಲ’ ಚಿತ್ರವನ್ನೇ ತೆಗೆದುಕೊಳ್ಳೋಣ. ತನ್ನ ವಿಶ್ವವಿಖ್ಯಾತ ಚಿತ್ರಗಳನ್ನು ಮಾಡಿ ಆದ ಮೇಲೆ ಕುರೋಸಾವಾ ಈ ಚಿತ್ರವನ್ನು ತಯಾರಿಸಿದ. ಇದರ ಶ್ರೇಷ್ಠತೆಯನ್ನು, ಮಿತಿಯನ್ನು ಚರ್ಚಿಸುವ ಅಗತ್ಯ ಇಲ್ಲಿ ಇಲ್ಲ. ಆದರೆ ಅವಶ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೊನೆಯ ಹಂತದಲ್ಲೂ ಕುರೋಸಾವಾ ತನ್ನ ಕಥನದಲ್ಲಿ ನಮ್ಮೆಲ್ಲರ ಅನುಭವಕ್ಕೆ ದಕ್ಕುವಂತೆ ಹೇಳುವುದು ಆಧುನಿಕ ಜಗತ್ತಿನ ಪ್ರಜ್ಞೆಯ ಮಿತಿಗಳ ಬಗ್ಗೆ. ಪ್ರಕೃತಿಯ ಜೊತೆ ಜೈವಿಕ ಸಂಬಂಧ ಇಟ್ಟುಕೊಂಡೇ ಬದುಕಿ ಉಳಿದ ವ್ಯಕ್ತಿಯ ಮತ್ತು ಅಂತಹ ಜೀವಂತಿಕೆಯನ್ನೂ ಕಾಪಾಡಿದ ಸಮುದಾಯದ ಕಥನವೂ ಇದು. ಅಳಿಸಿ ಹೋಗುತ್ತಿರುವ ಬದುಕಿನ ಕ್ರಮವೊಂದನ್ನು ಕುರೋಸಾವಾ ತನ್ನ ಕೃತಿಯ ವಿಷಯವನ್ನಾಗಿಸಿಕೊಳ್ಳುವುದು ಸಮಷ್ಟಿಯ ಪ್ರಜ್ಞೆಯಿಂದ, ಸಮುದಾಯ ಬದುಕಿನ ಬಗ್ಗೆ ಇರುವ ಪ್ರೀತಿಯ ಸ್ಮೃತಿಯಿಂದ. ಕೇವಲ ವೈಯಕ್ತಿಕ ನೆಲೆಯಲ್ಲಿ ಕುರೋಸಾವಾ ತನ್ನ ಪಾತ್ರಗಳನ್ನೂ, ಕಥೆಯ ಹಂದರವನ್ನೂ ಕಟ್ಟುವುದೇ ಇಲ್ಲ.
ಇವುಗಳನ್ನೂ ಓದಿ : ಸಂಕಥನದ ಮೊದಲು – ಗಿರೀಶ ಕಾಸರವಳ್ಳಿಯವರ ಬಿಂಬ ಬಿಂಬನ
ಈ ರೀತಿಯ ಸೃಜಲಶೀಲತೆಯಲ್ಲಿ ನನಗೆ ಗೋಚರಿಸುವುದು ಒಂದು ಸಂಸ್ಕೃತಿಯ ಸಂವೇದನೆ ಮತ್ತು ಧಾರ್ಮಿಕತೆ. ಈ ಧಾರ್ಮಿಕ ನೋಟ ಸಾಂಸ್ಕೃತಿಕ ನೆಲೆಯಿಂದ ಬಂದಿರದ ಕಾರಣ ಇದಕ್ಕೆ ಒಂದು ರೀತಿಯ ‘ಆಧ್ಯಾತ್ಮಿಕ ಸ್ವಾತಂತ್ರ್ಯ’ ಲಭ್ಯವಾಗುತ್ತದೆ. ಈ ‘ಆಧ್ಯಾತ್ಮಿಕ ಸ್ವಾತಂತ್ರ್ಯ’ಕ್ಕೆ ದಿನನಿತ್ಯ ಬದುಕಿನ ಕ್ಷುದ್ರತೆ, ಯಾಂತ್ರಿಕ ಕ್ರಿಯೆಗಳೂ ಬುನಾದಿ. ಯಾವುದೋ ಅಮೂರ್ತವಾದ, ಕಲ್ಪಿತ ಲೋಕದಲ್ಲಿ ಇದು ಒದಗಿ ಬರುವುದಿಲ್ಲ. ಕುರೋಸಾವಾನ ಈ ಬಗೆಯ ಬದುಕಿನ ದರ್ಶನವನ್ನೂ ಕಣೆಟೋ ಶಿಂದೋವಿನ ‘ದ ಐಲೆಂಡ್’ ಮತ್ತು ಯುಸುಜಿರೋ ಓಜುವಿನ ‘ಟೋಕ್ಯೋಕೋರಸ್’, ‘ಆನ್ ಆಟಂ ಆಫ್ಟರ್‌ನೂನ್’, ‘ಟೋಕಿಯೋ ಸ್ಟೋರಿ’, ‘ಈಕ್ವಿನಾಕ್ಸ್ ಫ್ಲವರ್’ ಚಿತ್ರಗಳಲ್ಲೂ ಕಾಣಬಹುದು. ಸ್ಥಿರವಾದ, ಸ್ತಬ್ಧವಾದ, ಅಬ್ಬರವಿಲ್ಲದ, ಗದ್ದಲವಿಲ್ಲದ, ಸ್ಫೋಟಗೊಳ್ಳದ, ಸಂಯಮದ ನೆಲೆಗಳಲ್ಲಿ ಒಂದು ಪ್ರಜ್ಞಾಲೋಕವನ್ನೇ ಈ ಚಿತ್ರಗಳ ಮೂಲಕ ನಾವು ಗ್ರಹಿಸಬಹುದು. ಆಧುನಿಕ ಜಗತ್ತಿನ ರೀತಿ ನೀತಿಗಳಿಗೆ ವಿರುದ್ಧ ದಿಕ್ಕಿನಲ್ಲಿ ನಡೆಯುವ ಕ್ರಿಯೆ ಇದು.
‘ದ ಸೆವೆನ್ ಸಮುರಾಯ್’ ಚಿತ್ರದಲ್ಲಿ ಕುರೋಸಾವಾ ದಾಳಿಗೆ ಒಳಗಾದ ಒಂದು ಸಮುದಾಯ ತನ್ನ ಆತ್ಮಸಂರಕ್ಷಣೆಗಾಗಿ ತನ್ನ ಪರವಾಗಿ ಹೋರಾಡುವ ಸಾಮರ್ಥ್ಯವಿರುವ ಪರಿಣಿತ ಯೋಧರ ಪಡೆಯನ್ನು ಕಟ್ಟಲು ಹೆಣಗುತ್ತದೆ. ದುಡ್ಡಿಗಾಗಿ ತಮ್ಮ ಸೇವೆಯನ್ನು ಯಾರಿಗಾದರೂ ಮಾರಲು ಸಿದ್ಧರಿರುವ ಈ ಯೋಧರು ತಮ್ಮನ್ನು ಕಲೆಹಾಕಿದ ಸಮುದಾಯದ ಒಳಗೆ ಬಂದು ಅಲ್ಲಿಯ ಜೀವನ ಕ್ರಮವನ್ನು ನೋಡುತ್ತಾ ಅದರ ಒಂದು ಅವಿಭಾಜ್ಯ ಅಂಗವಾಗಿ ಬಿಡುತ್ತಾರೆ. ಸುಖ, ಸಂತೋಷ, ದುಃಖ, ಕಷ್ಟ, ಕಾರ್ಪಣ್ಯಗಳೆಲ್ಲವನ್ನೂ ನೋಡುತ್ತ, ಅನುಭವಿಸುತ್ತಾ ಈ ಯೋಧರು ಮಾನವ ಸಮಾಜದ, ಮನುಷ್ಯರ ಅನುಭವದ ಎಲ್ಲಾ ಆಯಾಮಗಳನ್ನೂ ತಮ್ಮ ಅಂತರಂಗದಲ್ಲಿ ಸ್ವೀಕರಿಸತೊಡಗುತ್ತಾರೆ. ಹೊರಗಿನಿಂದ ಬಂದ, ದುಡ್ಡಿಗಾಗಿ ಹೋರಾಡುವ ಯೋಧರು ಒಂದು ಸಮುದಾಯದ ಬದುಕಿನ ಅಸ್ತಿತ್ವವನ್ನು ನೋಡುತ್ತ, ಅನುಭವಿಸುತ್ತಾ ರೂಪಾಂತರಗೊಳ್ಳುತ್ತಾರೆ, ಆತ್ಮದಲ್ಲಿ ಅರಳುತ್ತಾರೆ. ಕುರೋಸಾವಾನ ಚಿತ್ರ ಭೂತದ ಕಥೆಯನ್ನು ಮಾತ್ರ ಹೇಳುತ್ತಿಲ್ಲ. ಐತಿಹಾಸಿಕ ಸನ್ನಿವೇಶವನ್ನು ಯಾಂತ್ರಿಕವಾಗಿ ದಾಖಲಿಸುತ್ತಿಲ್ಲ. ಬದಲಾಗಿ ಛಿದ್ರಗೊಂಡಿರುವ ಆಧುನಿಕ ಜಗತ್ತಿಗೆ, ಮುರಿದು ಹೋಗುತ್ತಿರುವ ಸಮುದಾಯಗಳಿಗೆ ಸಹಬಾಳ್ವೆಯ ಬಗ್ಗೆ ಒಂದು ರೂಪಕವನ್ನು ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದಾನೆ.
ಇವುಗಳನ್ನೂ ಓದಿ : ಕನಸೆಂಬೋ ಕುದುರೆಯನ್ನೇರಿ
ಹೊರಗಿನಿಂದಲೇ ಆಗಲಿ, ಒಳಗಿನಿಂದಲೇ ಆಗಲಿ ಆಕ್ರಮಣಗಳು ನಡೆದಾಗ ಸಮಾಜಗಳು, ರಾಷ್ಟ್ರಗಳು ಬಳಸುವ ತಂತ್ರಗಳ ಕಥನವೂ ಇದು. ಈ ರೀತಿಯ ಕಥನವು ಹುಟ್ಟಲು ಕಾರಣಗಳೇನು ಎಂದು ಅರಿಯುವ ಅಗತ್ಯವಿದೆ. ರಾಷ್ಟ್ರವಾಗಿ ಜಪಾನ್ ಸಾಮ್ರಾಜ್ಯಶಾಹಿಯನ್ನು ವಿಭಿನ್ನ ನೆಲೆಗಳಲ್ಲಿ ಅನುಭವಿಸಿತು. ಆಕ್ರಮಣಕ್ಕೆ ಒಳಗಾದ ಜಪಾನ್ ಬೇರೆ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುವ ಶತ್ರುವೂ ಆಗಿತ್ತು. ಜಪಾನ್‌ಗೂ ಕೊರಿಯಾಗೂ ಇರುವ ಬದ್ಧ ದ್ವೇಷ ವರ್ತಮಾನದ ಸತ್ಯವೂ ಹೌದು. ಇದು ಇತಿಹಾಸದ ವಿವರ. ಇವೆಲ್ಲವನ್ನೂ ಒಂದು ಭೂತದ ಚೌಕಟ್ಟಿನಲ್ಲಿ ಕುರೋಸಾವಾನ ಚಿತ್ರ ಅಭಿವ್ಯಕ್ತಿಸುತ್ತದೆ. ಇದು ಒಂಟಿಯಾಗಿ ನಿಲ್ಲುವ ಚಿತ್ರವಲ್ಲ. ‘ದ ಸೆವೆನ್ ಸಮುರಾಯ್’ಗೆ ಪೂರಕವಾಗಿ ನಾವು ನಗೀಸಾ ಓಶಿಮಾ ನಿರ್ದೇಶಿಸಿದ ‘ಡೆತ್ ಬೈ ಹ್ಯಾಂಗಿಂಗ್’ ಚಿತ್ರವನ್ನೂ ನೋಡಬಹುದು. ಜಪಾನ್ ದೇಶದ ಒಳಗೆ ಇರುವ ಕೊರಿಯನ್ ಜನಾಂಗದ ಬಗ್ಗೆ ಪಾಪಪ್ರಜ್ಞೆ, ಆತ್ಮಸಾಕ್ಷಿ, ನ್ಯಾಯ, ಧರ್ಮ, ನೀತಿ, ಅನೀತಿಗಳ ಸಂಕೀರ್ಣ ಪ್ರಶ್ನೆಗಳೊಂದಿಗೆ ‘ಡೆತ್ ಬೈ ಹ್ಯಾಂಗಿಂಗ್’ ಚಿತ್ರ ತನ್ನ ತಾತ್ವಿಕತೆಯನ್ನು, ಸೈದ್ದಾಂತಿಕ ನೆಲೆಗಳನ್ನು ಅನಾವರಣಗೊಳಿಸುತ್ತದೆ. ಈ ಚಿತ್ರವು ಜಪಾನ್ ಚಲನಚಿತ್ರ ಪರಂಪರೆಯ ತನ್ನ ಮುನ್ನೊಲವುಗಳನ್ನೂ, ಕಾಳಜಿಗಳನ್ನೂ ಅಭಿವ್ಯಕ್ತಿಸಲು ಅನೇಕ ಹೊರ ಸಂಪ್ರದಾಯಗಳನ್ನು ಅನ್ಯ ಶೈಲಿಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದನ್ನು ನಾವು ಕಾಣಬಹುದು. ‘ಡೆತ್ ಬೈ ಹ್ಯಾಂಗಿಂಗ್’ ಚಿತ್ರದಲ್ಲಿ ಒಂದು ಅನನ್ಯ ಪ್ರಯೋಗಶೀಲತೆಯನ್ನೂ ನಾವು ಕಾಣಬಹುದು. ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್‌ನ ತಂತ್ರಗಳನ್ನು ಬಳಸಿಕೊಂಡು ಈ ಚಿತ್ರ ನಿರ್ಲಿಪ್ತವಾಗಿ ತನ್ನ ತಾತ್ವಿಕ ನೆಲೆಯನ್ನು ನಮ್ಮ ಮನಸ್ಸಿನಾಳದೊಳಗೆ ಇಳಿಬಿಡುತ್ತದೆ.
ಕುರೋಸಾವಾ ಆಗಲಿ ಇತರ ನಿರ್ದೇಶಕರಾಗಲಿ ಒಂದು ವಿಶಾಲವಾದ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಇತಿಹಾಸದ ಎಲ್ಲ ಪ್ರಕ್ರಿಯೆಗಳಲ್ಲೂ ಭಾಗಿಗಳಾಗುತ್ತ ಸಮಕಾಲೀನ ಪ್ರಜ್ಞೆಯನ್ನು ವೃದ್ಧಿಗೊಳಿಸಿಕೊಳ್ಳುತ್ತ ತಮ್ಮ ಸೃಜಲಶೀಲತೆಯನ್ನು ವಿಸ್ತರಿಸುತ್ತ ಬಂದರು. ಎಲ್ಲಕ್ಕಿಂತ ಮಿಗಿಲಾಗಿ ಪಾಶ್ಚಿಮಾತ್ಯ ಪ್ರಭಾವಗಳಿಗೆ, ಪ್ರೇರಣೆಗಳಿಗೆ ತಮ್ಮನ್ನು ಮುಕ್ತವಾಗಿ ತೆರೆದುಕೊಂಡು ತಮ್ಮ ದೇಸೀತನವನ್ನು ಸ್ಥಾಪಿಸಿಕೊಂಡರು.
ಅನೇಕ ರೀತಿಯ ಪಾಶ್ಚಿಮಾತ್ಯ ಮಾದರಿಗಳು, ಮೀಮಾಂಸೆಗಳು ಬಂದು ಪ್ರಬಲ ಏಕರೂಪ ಸಂಸ್ಕೃತಿಯನ್ನು ಕಟ್ಟುತ್ತಿರುವ ಈ ಕಾಲದಲ್ಲಿ ಜಪಾನ್ ಚಲನಚಿತ್ರ ಪರಂಪರೆಯು ವಿಭಿನ್ನ ರೀತಿಯಲ್ಲಿ ಪರ್ಯಾಯ ಆಲೋಚನಾ ಕ್ರಮವನ್ನು ಕಟ್ಟಿಕೊಡಲು ಸಹಾಯ ಮಾಡುತ್ತವೆ. ಜಾಗತೀಕರಣದ ಹೊಡೆತ ತಡೆದುಕೊಳ್ಳಲಾಗದ ಈ ಸನ್ನಿವೇಶದಲ್ಲಿ ಬೇರೊಂದು ಪ್ರಜ್ಞಾಲೋಕದ ಶಕ್ತಿಯನ್ನು ಈ ಪರಂಪರೆ ನಮಗೆ ಪರಿಚಯ ಮಾಡಿಕೊಡುತ್ತದೆ. ಜಾಗತಿಕ ಬಂಡವಾಳಶಾಹಿಯ ಶಕ್ತಿಯ ಎದುರು ವಿಕೇಂದ್ರೀಕರಣದ ಗಟ್ಟಿತನವನ್ನು, ಸ್ಥಳೀಯ ಸಂಸ್ಕೃತಿಗಳ ಸ್ವತಂತ್ರ ಮಾರ್ಗಗಳನ್ನೂ ಈ ಚಲನಚಿತ್ರ ಪರಂಪರೆ ಆತ್ಮೀಯವಾಗಿ ನಮಗೆ ದಾರಿದೀಪಗಳಾಗಿ ತೋರಿಸುತ್ತದೆ. ಈ ಕಾರಣಕ್ಕಾಗಿಯೇ ಕುರೋಸಾವನ ಬಗ್ಗೆ ಬರೆಯುವಾಗ, ಇನ್ನಿತರ ಜಪಾನೀ ಚಲನಚಿತ್ರ ನಿರ್ದೇಶಕರ ಬಗ್ಗೆ ಬರೆಯುವಾಗ ಎಲ್ಲರನ್ನೂ ಒಟ್ಟುಗೂಡಿಸಿ ಒಂದು ಅದ್ಬುತವಾದ ಬಹುಮುಖಿ ನೆಲೆಯ ಸಂಸ್ಕೃತಿಯ ಬಗ್ಗೆಯೇ ಬರೆಯಬೇಕಾದ ಅನಿವಾರ್ಯತೆ ನಮಗೆ ಎದುರಾಗುವುದು. ಇಂತಹ ಒಂದು ಚಿಕ್ಕ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದ್ದೇನೆ.
ಲೇಖನ ಕೃಪೆ : ಕನ್ನಡ ಪ್ರಭ