ಭಾರತೀಯ ಸಿನಿಮಾದಲ್ಲಿ ಬಯೋಪಿಕ್ ಗಳ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಬಯೋಪಿಕ್ ಗಳು ಜೀವನಗಾಥೆಯಷ್ಟೇ ಆಗಿರುವಂಥ ಚಿತ್ರಗಳೂ ಮತ್ತೂ ಕಡಿಮೆ. ಹಲವು ಬಾರಿ ನಮ್ಮ ಸಿನಿಮಾ ನಿರ್ದೇಶಕರು ಜೀವನ ಚರಿತ್ರೆಗೂ ಒಂದಿಷ್ಟು ಹಾಡು-ಹಸೆ ಎಂದು ಹಾಕಿಯೋ ಅಥವಾ ಜನರನ್ನು ರಂಜಿಸಬೇಕೆಂದು (ಥಿಯೇಟರಿಗೆ ಜನರು ಬರೋಲ್ಲ ಎಂದುಕೊಂಡೋ) ಬಯೋಪಿಕ್ ನ ಎಳೆ ಹಿಡಿದುಕೊಂಡು ಅದಕ್ಕೆ ಉಳಿದೆಲ್ಲ ವಾಣಿಜ್ಯಾತ್ಮಕ ಚಿತ್ರದ ಗುಣಾವಗುಣಗಳನ್ನು ಸೇರಿಸಿ ಮತ್ತೊಂದು ರೋಮಿಯೋ ಜೂಲಿಯೆಟ್ ಕಥೆಯನ್ನಾಗಿಯೋ ಅಥವಾ ಹೊಡೆದಾಟದ ಚಿತ್ರವನ್ನಾಗಿಯೋ ಮಾಡುವ ಅಪಾಯವೇ ಜಾಸ್ತಿ. ಅದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಇದಕ್ಕೆ ಅಪವಾದವೆಂಬಂತೆ ಕೆಲವು ಸಿನಿಮಾಗಳು ಬಂದಿವೆ. ಅವು ಅಪರೂಪದ್ದು. ಇವರ ಜೀವನಚರಿತ್ರೆ ಕುರಿತ ಸಿನಿಮಾ ಸಿದ್ಧವಾಗುತ್ತಿರುವುದು ಹಾಗೂ ಅವರಿಗೆ 80 ತುಂಬಿ 81 ಆರಂಭವಾಗಿರುವ ಹೊತ್ತಿನಲ್ಲಿ ಹೀಗೇ ಒಮ್ಮೆ ಇಳಯರಾಜರ ಬಗೆಗಿನ ಫ್ಲ್ಯಾಶ್ ಬ್ಯಾಕ್ ನ್ನು ಸಿನಿಮಾಯೆ ಸಂಕಲಿಸಿ ಇಲ್ಲಿ ಕೊಟ್ಟಿದೆ.
ಈಗ ಸಿದ್ಧವಾಗುತ್ತಿರುವ ಬಯೋಪಿಕ್ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜರದ್ದು. ಇಂದು (ಜೂನ್ 2) ಅವರ ಜನ್ಮದಿನ. 81 ನೇ ಬಾಳವಸಂತಕ್ಕೆ ಕಾಲಿಟ್ಟಿರುವ ಇಳಯರಾಜರು ಇಂದು ಸಂಗೀತ ದಿಗ್ಗಜರು. ಈ ಜನ್ಮದಿನದ ಸಂದರ್ಭದಲ್ಲಿ ತಮಿಳು ಚಿತ್ರ ನಟ ಧನುಷ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಮೊದಲ ಭಿತ್ತಿಚಿತ್ರ (ಪೋಸ್ಟರ್) ಸಹ ಹಂಚಿಕೊಂಡಿದ್ದಾರೆ.
ಜನರಾಶಿಯ ಎದುರು ಒಂದು ಹಾರ್ಮೋನಿಯಂ ಹಿಡಿದುಕೊಂಡು ಟ್ಯೂನ್ ಮಾಡುತ್ತಿರುವ ಚಿತ್ರ ಇಳಯರಾಜರ ಸಂಗೀತದ ಅಗಾಧತೆಯನ್ನು ಒಂದು ಭಿತ್ತಿಚಿತ್ರದಲ್ಲಿ ಕಟ್ಟಿ ಕೊಟ್ಟಂತಿದೆ. ಈ ಚಿತ್ರದಲ್ಲಿ ಧನುಷ್ ಇಳಯರಾಜರ ಪಾತ್ರ ವಹಿಸಲಿದ್ದಾರೆ. ಅರುಣ್ ಮಾಥೇಶ್ವರನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನೆಕ್ಟ್ ಮೀಡಿಯಾ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಚಿತ್ರಕ್ಕೆ ಸ್ವತಃ ಇಳಯರಾಜರದ್ದೇ ಸಂಗೀತ. ಇದು ವಿಶೇಷವೇ ಸರಿ. ತಮಿಳು ಭಾಷೆಯಲ್ಲದೇ ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಇಳಯರಾಜ ಭಾರತೀಯ ಚಿತ್ರಸಂಗೀತದಲ್ಲಿ ದೊಡ್ಡ ಹೆಸರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿವಿಧ ಭಾಷೆಗಳ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರೆ, 7 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಗತ್ತಿನಾದ್ಯಂತ 20 ಸಾವಿರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿರುವವರು ಇಳಯರಾಜ.
Multiflex Mania: ಮಲ್ಟಿಫ್ಲೆಕ್ಸ್ ಗಳು ಅನುಕೂಲಕ್ಕೆ; ಸಿಂಗಲ್ ಸ್ಕ್ರೀನ್ ಅನುಭವಕ್ಕೆ !
ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಾಯವಾಗಿವೆ. ಜ್ಞಾನತೇಸಿಗನ್ ಊರಿನ ಜನರಿಗೆ ರಾಸಯ್ಯನಾಗಿ ಈಗ ಜಗತ್ತಿಗೆ ಇಳಯರಾಜರಾಗಿದ್ದಾರೆ. ಹಾಗೆ ನೋಡಿದರೆ ಸಂಗೀತದಲ್ಲಿ ಈ ಇಳೆಗೆ ರಾಜರೇ!
ಈ ರಾಸಯ್ಯನವರ ಇಳಯರಾಜ ಹೆಸರಿನ ಎರಡೂ ಪದ ಇವರದ್ದಲ್ಲ. ರಾಸಯ್ಯನನ್ನು ರಾಜರಾಗಿಸಿದ್ದು ಅವರ ಸಂಗೀತ ಮೇಸ್ಟ್ರು ಧನರಾಜ್ ಮೇಸ್ಟ್ರು. ಆ ಹೆಸರು ಬದಲಾಗಿದ್ದೇ ತಡ. ರಾಸಯ್ಯ ಸಂಗೀತ ಕ್ಷೇತ್ರದಲ್ಲಿ ರಾಜರಾಗುತ್ತಾ ಬಂದರು. ಇಂದು ರಾಜ. ಹಾಗೆಯೇ ಮೊದಲ ಸಿನಿಮಾ ಅನ್ನಕಿಲಿ ಗೆ (1976) ಗೆ ಕೆಲಸ ಮಾಡುತ್ತಿದ್ದಾಗ ಚಿತ್ರದ ನಿರ್ಮಾಪಕರು ಇವರಿಗೆ ಇಳಯ (ತಮಿಳಿನಲ್ಲಿ ಯುವ- ತಮ್ಮ ಎಂದಂತೆ) ಎಂದ ಹೆಸರಿಟ್ಟರಂತೆ. ಅದು ಕ್ರಮೇಣ ಇಳಯರಾಜರಾಗಿ ಪ್ರಸಿದ್ಧವಾಯಿತು. ಇಂದು ಇಡೀ ಜಗತ್ತಿಗೆ ಆ ಹಳೆಯ ಊರಿನ ರಾಸಯ್ಯ ಮರೆತೇ ಹೋಗಿದ್ದಾನೆ, ಇಳಯರಾಜನಷ್ಟೇ ನೆನಪಿನಲ್ಲಿ ಉಳಿದಿದ್ದಾನೆ.
ತಮ್ಮ ಅಣ್ಣನ ಸಂಗೀತ ತಂಡದೊಂದಿಗೆ ತಿರುಗಾಟಕ್ಕೆಲ್ಲ ಹೋಗುತ್ತಿದ್ದ ಇಳಯರಾಜ ಗಿಟಾರ್ ಗೆ ಮೋಹಗೊಂಡು ಅದನ್ನೂ ಸಿದ್ಧಿಸಿಕೊಂಡರು. ಬಳಿಕ ಸಲೀಲ್ ಚೌಧರಿ, ಜಿ. ಕೆ.ವೆಂಕಟೇಶರಂಥ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದರು. ಜಿ.ಕೆ. ವೆಂಕಟೇಶರೊಂದಿಗೆ ಸುಮಾರು 200 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಕೆಲಸ ಮಾಡಿದರು. ಇವುಗಳಲ್ಲಿ ಕನ್ನಡದ ಚಿತ್ರಗಳು ಹೆಚ್ಚಿದ್ದವು.
ತಮ್ಮ ದೇಸಿ ಸೊಗಡಿನ, ನೆಲದ ಜಾನಪದ ಸಂಗೀತದ ತೀವ್ರ ಮೋಹಿಯಾಗಿದ್ದವರು ಇಳಯರಾಜ. ಹಾಗಾಗಿಯೇ ಅವರ ಹಲವಾರು ಗೀತೆಗಳ ರಾಗ ಸಂಯೋಜನೆಯಲ್ಲಿ ಅದರ ಛಾಯೆ ಎದ್ದು ಕಾಣುತ್ತದೆ. ಜಾನಪದ ಹಾಡುಗಳಿಗೆ ಸ್ವಲ್ಪ ಆಧುನಿಕ ಎನಿಸುವ ಆರ್ಕೆಸ್ಟ್ರಾವನ್ನು ಅಳವಡಿಸಿ ಪ್ರಯೋಗಕ್ಕೆ ಅಣಿಗೊಂಡರು. ಅದು ಖ್ಯಾತಿ ತಂದುಕೊಟ್ಟಿತು. ಭಾರತೀಯ ಶಾಸ್ತ್ರೀಯ, ಜಾನಪದ ನೆಲೆಗೆ ಪಾಶ್ಚಾತ್ಯದ ಗಂಧವನ್ನೂ ಹಚ್ಚಿಸಂಗೀತದ ಪರಿಮಳ ಹೆಚ್ಚಿಸಿದವರು ಇಳಯರಾಜ.
ಸಂಗೀತವೇ ನನ್ನ ಉಸಿರು ಎಂದು ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಯುಗಪುರುಷ ಚಿತ್ರದಲ್ಲಿ ಹಾಡಿದ್ದರು. ಆದರೆ ಇಳಯರಾಜ ಅವರು ಸಂಗೀತವೇ ನನ್ನ ಜೀವನಧರ್ಮ ಎಂದು ಬದುಕುತ್ತಿರುವವರು.
Indian 2 movie : ಕಮಲ್ ರ ಇಂಡಿಯನ್ 2 ಜುಲೈ 12 ರಂದು ಟಾಕೀಸಿಗೆ
ಕನ್ನಡದಲ್ಲೂ ಸಾಕಷ್ಟು ಚಿತ್ರಗಳಿಗೆ ಸಂಗೀತದಿಂದ ಜೀವ ತುಂಬಿರುವ ಇಳಯರಾಜರದ್ದು ಮಾತು ತಪ್ಪದ ಮಗ ಚಿತ್ರದ ಎಂಥ ಸೌಂದರ್ಯ ನೋಡು, ಜನ್ಮ ಜನ್ಮದ ಅನುಬಂಧ ಸಿನಿಮಾದ (ಅನಂತನಾಗ್, ಶಂಕರನಾಗ್, ಜಯಂತಿ, ಜಯಮಾಲ, ಮಂಜುಳಾ ) ಯಾವ ಶಿಲ್ಪಿ ಕಂಡ ಕನಸು, ತಂಗಾಳಿಯಲ್ಲಿ ನೀನು, ಆಕಾಶದಿಂದ ಜಾರಿ, ಗೀತಾ ಚಿತ್ರದ “ಗೀತಾʼ, ಕೇಳದೇ ನಿಮಗೀಗ, ಪಲ್ಲವಿ ಅನುಪಲ್ಲವಿ ಚಿತ್ರದ ನಗುವ ನಯನ, ಡಾ. ರಾಜಕುಮಾರರ ನೀ ನನ್ನ ಗೆಲ್ಲಲಾರೆ ಚಿತ್ರದ ನನ್ನ ನೀನು ಗೆಲ್ಲಲಾರೆ-ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.
ಇಂಥ ರಾಸಯ್ಯ ಇಳಯರಾಜ ಆದ ಬಗೆಯನ್ನು ಸಿನಿಮಾವು ಅಷ್ಟೇ ಸೊಗಸಾಗಿ ಕಟ್ಟಿಕೊಡುವುದೋ, ಧನುಷ್ ಸಾಂಗ್-ಫೈಟ್ ಗಳಲ್ಲಿ ಮುಳುಗಿ ಹೋಗದೇ ಇಳಯರಾಜನಾಗಿ ವಿಜೃಂಭಿಸುತ್ತಾರೋ ಕಾದು ನೋಡಬೇಕಿದೆ. ಸಿನಿಮಾ ಬಿಡುಗಡೆ ಇತ್ಯಾದಿ ಇನ್ನೂ ಘೋಷಣೆಯಾಗಬೇಕಿದೆ.