ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಆಕ್ಷನ್ ಕಟ್ ಹೇಳುತ್ತಿದ್ದಾರೆಂಬುದೇ ದೊಡ್ಡ ಸುದ್ದಿ. ಹಾಗೆ ನೋಡಿದರೆ ಈ ಬಾರಿ ಗಿರೀಶ್ ಕಾಸರವಳ್ಳಿಯವರ ಎರಡು ದೊಡ್ಡ ಸುದ್ದಿಗಳು ಇವೆ. ಒಂದು ಚಿತ್ರ ನಿರ್ದೇಶನ, ಮತ್ತೊಂದು ಚಿತ್ರ ಪ್ರದರ್ಶನ. ಹಾಗಾಗಿ ಎರಡೂ ಕಾರಣಕ್ಕೆ ಕಾಸರವಳ್ಳಿಯವರು ಮತ್ತೆ ಸುದ್ದಿಯಲ್ಲಿದ್ದಾರೆ.
2020 ರಲ್ಲಿ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (ಕಥೆಗಾರ ಜಯಂತ ಕಾಯ್ಕಿಣಿ ಕಥೆ ಆಧರಿತ) ಚಿತ್ರವನ್ನು ನಿರ್ದೇಶಿಸಿದ್ದ ಗಿರೀಶ್ ಕಾಸರವಳ್ಳಿಯವರು ನಾಲ್ಕು ವರ್ಷಗಳ ಕಾಲ ಎಲ್ಲವನ್ನೂ ಬದಿಗಿಟ್ಟು, ಧ್ಯಾನಾಸಕ್ತರಾಗಿದ್ದರು. ಹೊಸ ಚಿತ್ರ ಯಾವುದು ಮಾಡುತ್ತಿದ್ದೀರಿ ಸರ್, ಎಂದು ಪ್ರಶ್ನೆ ಕೇಳಿದಾಗಲೆಲ್ಲ, ʼನೋಡೋಣʼ ಎಂದಷ್ಟೇ ಒಂದು ಮುಗುಳ್ನಗೆ ತೇಲಿ ಬಿಡುತ್ತಿದ್ದರು. ಆದರೆ ಮುಗುಳ್ನಗೆಗಷ್ಟೇ ಸೀಮಿತವಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಹೊಸ ಸಿನಿಮಾ ಯಾವುದೂ ಅವರದ್ದು ಬರಲಿಲ್ಲ.
ಈಗ ಮತ್ತೆ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ. ಕಥೆಗಾರ ಯು. ಆರ್. ಅನಂತಮೂರ್ತಿಯವರ ʼಆಕಾಶ ಮತ್ತು ಬೆಕ್ಕುʼ ಕಥೆಯನ್ನು ಚಿತ್ರಕ್ಕೆ ಅಳವಡಿಸುತ್ತಿದ್ದಾರೆ ಗಿರೀಶ್. ಸೆಪ್ಟೆಂಬರ್ ನಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗುವ ಸಂಭವವಿದೆ.
New Movie : ಭೈರತಿ ರಣಗಲ್ ಸೆಪ್ಟೆಂಬರ್ ನಲ್ಲಿ ತೆರೆಗೆ
ಈ ಬಾರಿಯ ವಿಶೇಷವೆಂದರೆ ಚಿತ್ರ ರೂಪುಗೊಳ್ಳುತ್ತಿರುವುದು ಗಿರೀಶರ ಊರಲ್ಲಿ. ಅಷ್ಟೇ ಅಲ್ಲ; ಚಿತ್ರದಲ್ಲಿ ಭಾಗವಹಿಸುವವರೆಲ್ಲರೂ ಅದೇ ಊರಿನವರು. ಕಲಾವಿದರಿಂದ ಹಿಡಿದು ತಂತ್ರಜ್ಞರವರೆಗೂ ಎಲ್ಲರೂ ಅದೇ ಊರಿನವರಂತೆ. ಗಿರೀಶರಂತೂ ಅದೇ ಊರಿನವರು. ಹಾಗಾಗಿ ಈ ಚಿತ್ರ ತೀರ್ಥಹಳ್ಳಿಯದ್ದು, ತೀರ್ಥಹಳ್ಳಿಯವರದ್ದು ಎನ್ನಬಹುದು.
ಅನ್ವೇಷಣೆ ಚಿತ್ರ ಸಂಸ್ಥೆ ಈ ಸಿನಿಮಾವನ್ನು ರೂಪಿಸುತ್ತಿದೆ. ಬಾಲರಾಜರ ಛಾಯಾಗ್ರಹಣ, ಶಮಿತಾ ಮಲ್ನಾಡರ ಸಂಗೀತ, ಮನು ಶೆಡ್ಗಾರ್ ರ ಸಂಕಲನ, ರವಿ ಸಂತೆಹಕ್ಲು ಅವರ ಕಲಾನಿರ್ದೇಶನ ಚಿತ್ರಕ್ಕೆ ಮತ್ತಷ್ಟು ಸೊಗಸು ತುಂಬಲಿದೆ. ವಿಶೇಷವೆಂದರೆ ಈ ಚಿತ್ರ ಯೋಜನೆಯನ್ನು ರೂಪಿಸಿರುವ ಕೋಡ್ಲು ರಾಮಕೃಷ್ಣ ಅವರೂ ಒಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Kannada Classics: ಇಂದಿಗೂ ಕ್ಲಾಸಿಕ್ ಬೂತಯ್ಯನ ಮಗ ಅಯ್ಯು
ಮತ್ತೊಂದು ಸುದ್ದಿಯೆಂದರೆ ಚಿತ್ರ ಪ್ರದರ್ಶನದ್ದು. ವೆನಿಸ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಜಗತ್ತಿನ ಪ್ರಥಮ ಚಿತ್ರೋತ್ಸವವೆಂಬ ಹೆಗ್ಗಳಿಕೆಗೆ ಕಾರಣವಾಗಿದೆ. 1932 ರಲ್ಲಿ ಆರಂಭವಾದ ಉತ್ಸವವಿದು. ಇಂದಿಗೂ ಅತ್ಯಂತ ಸಂಭ್ರಮದಿಂದ ನಡೆಯುತ್ತಿರುವ ಅತ್ಯಂತ ಹಳೆಯ ಉತ್ಸವವಿದು.
ಆಗಸ್ಟ್ 28 ರಿಂದ ಸೆಪ್ಟೆಂಬರ್ 7, 2024 ರವರೆಗೆ 81 ನೇ ಚಿತ್ರೋತ್ಸವ ನಡೆಯುತ್ತಿದೆ. ಈ ಉತ್ಸವದಲ್ಲಿ ಸೆಪ್ಟೆಂಬರ್ 2 ರಂದು ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧ ರೀಸ್ಟೋರ್ಡ್ ವರ್ಲ್ಡ್ ಕ್ಲಾಸಿಕ್ಸ್ ವಿಭಾಗದಲ್ಲಿ ಪ್ರದರ್ಶನವಾಗಲಿದೆ. ಈ ಅವಿಸ್ಮರಣೀಯ ಕ್ಷಣಕ್ಕೆ ಗಿರೀಶರು ಸಾಕ್ಷಿಯಾಗಲಿದ್ದಾರೆ. 1977 ರಲ್ಲಿ ರೂಪಿತವಾಗಿದ್ದ ಸಿನಿಮಾಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿತ್ತು.
ದಿ ಫಿಲಂ ಫೌಂಡೇಷನ್ ವರ್ಲ್ಡ್ ಸಿನಿಮಾ ಹಾಗೂ ಫಿಲಂ ಹೆರಿಟೇಜ್ ಫೌಂಡೇಷನ್ ಗಳು ಈ ಸಿನಿಮಾವನ್ನು ಪುನರ್ ರೂಪಿಸಿವೆ. ಅತ್ಯಂತ ಹಳೆಯ ಚಿತ್ರೋತ್ಸವದಲ್ಲಿ ಗಿರೀಶರ ಮೊದಲ ಚಿತ್ರ ಹೊಸ ಚಿತ್ರ ಸಿದದ್ಧವಾಗುವ ಸಂಭ್ರಮವನ್ನು ಇಮ್ಮಡಿಗೊಳಿಸಿರುವುದು ವಿಶೇಷ. ಇನ್ನೂ ವಿಶೇಷವೆಂದರೆ ಘಟ ಶ್ರಾದ್ಧ ಸಹ ಯು. ಆರ್. ಅನಂತಮೂರ್ತಿಯವರ ಕಥೆಯಾಗಿತ್ತು.
ಈಗ ಹೊಸ ಚಿತ್ರದ ಕಥೆಯೂ ಇವರದ್ದೇ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯೂ ಸೇರಿದಂತೆ ೧೪ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಗಿರೀಶರ ಚಿತ್ರಕ್ರಾಂತಿ ಮತ್ತೆ ಆರಂಭವಾಗಲಿ.