ನಾಗತಿಹಳ್ಳಿ ಚಂದ್ರಶೇಖರರ ಅಮೆರಿಕಾ ಅಮೆರಿಕ 25 ವರ್ಷಗಳ ಹಿಂದೆ ಸೃಷ್ಟಿಸಿದ ಅಲೆ ಗೊತ್ತೇ ಇದೆ. ಅಮೆರಿಕಾದ ಮೇಲಿನ ಮೋಹವನ್ನೂ ತೋರಿಸುತ್ತಲೇ, ಅಲ್ಲಿನ ಅನಿವಾರ್ಯತೆ ಹಾಗೂ ಅಸಹಾಯಕತೆ ಎರಡನ್ನೂ ನಮ್ಮೆದುರು ತೆರೆದಿಟ್ಟಿದ್ದರು. ಅವರೇ ಹೇಳಿದಂತೆ ಆಗ ಭಾರತದ ಯುವಜನರು ಅಮೆರಿಕದತ್ತ ಕಣ್ಣು ಹಾಯಿಸುತ್ತಿದ್ದ ಕಾಲ.
ಬೆಟ್ಟದ ಮೇಲೆ ನಿಂತು ದೂರದ ಸಮುದ್ರದತ್ತ ಕಣ್ಣು ಹಾಯಿಸುವಾಗ ಕಾಣುವಂತೆಯೇ ನಮ್ಮ ಯುವಜನರಿಗೆ ಅಮೆರಿಕ ತೋರುತ್ತಿತ್ತು. ಪ್ರತಿಭಾ ಪಲಾಯನಕ್ಕೆ ತಡೆ ಇರಲಿಲ್ಲ. ಲಕ್ಷಾಂತರ ಮಂದಿ ಭಾರತೀಯ ಯುವಕರು ಅಮೆರಿಕದ ತೆಕ್ಕೆಗೆ ಸೇರಿದರು. ಅಂಥದೊಂದು ಎಳೆಯನ್ನು ಇಟ್ಟುಕೊಂಡು ನಾಗತಿಹಳ್ಳಿ ಚಂದ್ರಶೇಖರ್ ಕೇಳಿರಬಹುದಾದ, ಗಮನಿಸಿರಬಹುದಾದ ಕಥೆಯನ್ನು ಮತ್ತಷ್ಟು ಸೂಕ್ಷ್ಮವಾಗಿ ವಿಭಿನ್ನವಾಗಿ ಕಟ್ಟಿಕೊಟ್ಟರು.
ವೆನಿಸ್ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರಿಗೆ ಪುರಸ್ಕಾರ
ಹಾಗಾಗಿ ಅಮೆರಿಕಾ ಅಮೆರಿಕ ಸಿನಿಮಾ ಯಶಸ್ಸಿನ ಮೆಟ್ಟಿಲೇರಿತು. ರಾಷ್ಟ್ರೀಯ, ರಾಜ್ಯ ಪುರಸ್ಕಾರವೂ ಸೇರಿದಂತೆ ಹಲವು ಪುರಸ್ಕಾರಗಳಿಗೂ ಭಾಜನವಾಯಿತು. ಇದೇ ಸಂದರ್ಭದಲ್ಲಿ ಈ ಸಿನಿಮಾದಿಂದ ಸಿಕ್ಕ ಮತ್ತೊಂದು ಕೊಡುಗೆ ಎಂದರೆ ಮನೋಮೂರ್ತಿ ಎಂಬ ಸಂಗೀತ ನಿರ್ದೇಶಕರು.
1999 ರಲ್ಲಿ ಬಿಡುಗಡೆಯಾದ ಸಿನಿಮಾ. ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್, ಎಚ್. ಜಿ. ದತ್ತಾತ್ರೇಯ, ವೈಶಾಲಿ ಕಾಸರವಳ್ಳಿ, ಶಿವರಾಂ, ಸಿ.ಆರ್. ಸಿಂಹ ಮತ್ತಿತರರು ತಾರಾಗಣದಲ್ಲಿದ್ದರು. ಒಂದು ಅಂದಾಜಿನಂತೆ ಸುಮಾರು 2 ಕೋಟಿ ರೂ. ಹತ್ತಿರ ಹತ್ತಿರ ಬಜೆಟ್ ಆಗಿರಬಹುದು. ಈಗಿನ ಲೆಕ್ಕದಲ್ಲಿ 20 ರಿಂದ 25 ಕೋಟಿ ಎನ್ನಬಹುದೇನೋ? ಶೇ. 75 ರಷ್ಟು ಚಿತ್ರೀಕರಣ ಅಮೆರಿಕದಲ್ಲೇ ನಡೆದಿತ್ತು. ಎಲ್ಲರೂ ಅಮೋಘವಾಗಿ ಅಭಿನಯಸಿದ್ದರು. ರಮೇಶ್ ಅರವಿಂದ್, ಹೇಮಾ, ಅಕ್ಷಯ್ ಅವರ ನಟನೆಯೂ ಬಹಳ ಚೆನ್ನಾಗಿ ಜನ ಮೆಚ್ಚುಗೆ ಗಳಿಸಿತ್ತು.
ಆಗ ಅಮೆರಿಕವೂ ಇಷ್ಟೊಂದು ಇಂದಿನಂತೆ ಹತ್ತಿರವಾಗಿರಲಿಲ್ಲ. ದೂರದ ಬೆಟ್ಟ. ಕಾಣುತ್ತಿತ್ತು ನುಣ್ಣಗೆ. ನಾವು ಅಂದುಕೊಂಡಂತೆ ನುಣ್ಣಗಿಲ್ಲ ಎಂಬುದು ಬಿತ್ತರವಾಗಿತ್ತು ಚಿತ್ರದಲ್ಲಿ.
ಈಗ ನಾಗತಿಹಳ್ಳಿಯವರು ಎರಡು ವರ್ಷಗಳಿಂದ ಹೊಸ ಚಿತ್ರದ ಸಿದ್ಧತೆಯಲ್ಲಿದ್ದರು. ಚಿತ್ರೀಕರಣ ಆರಂಭಿಸಿದಾಗಲೂ ಯಾವುದಕ್ಕೂ ಇರಲಿ ಎಂದು ಒಂದು ಅಮರ ಮಧುರು ಪ್ರೇಮ ಎಂಬ ಶೀರ್ಷಿಕೆ ಕೊಟ್ಟಿದ್ದರು. ಮುಂದೆ ಇದು ಬದಲಾಗಬಹುದು ಎಂಬ ಸಂಕೇತವನ್ನೂ ರವಾನಿಸಿದ್ದರು. ಅದರಂತೆ ಈಗ ಅದೇ ಬಹುಶಃ ಅಮೆರಿಕ ಅಮೆರಿಕ ಭಾಗ ಎರಡಾಗಲಿದೆ. ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಸ್ತುತಪಡಿಸಿರುವಂತೆ ಅಮೆರಿಕ ಅಮೆರಿಕ 2 ರೂಪುಗೊಳ್ಳುತ್ತಿದೆ.
ಅಮೆರಿಕಾ ಅಮೆರಿಕ ಸಿನಿಮಾಕ್ಕೆ 25 ವರ್ಷಗಳು ತುಂಬಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆಗ ಆ ಕಥೆ ಸೂಕ್ತವೆನಿಸಿತ್ತು. ಆದರೀಗ ಅದು ಸೂಕ್ತವೆನಿಸದು. ಈಗ ಭಾರತದಲ್ಲಿ ಆಗಿನಂತ ಅಮೆರಿಕದ ಬಗೆಗಿನ ಅಭಿಪ್ರಾಯಗಳಿಲ್ಲ (ಕ್ರೇಜ್). ಯುವಜನರ ಆಸಕ್ತಿ ಭಾರತದ ಮೇಲೇ ಇದೆ. ಹಾಗಾಗಿ ಈಗ ಅದೇ ಕಥಾವಸ್ತುವನ್ನು ಸಿನಿಮಾಕ್ಕೆ ಅಳವಡಿಸುವುದು ಕಷ್ಟʼ ಎಂದಿದ್ದರು.
New Movie: ರಮೇಶ್ ಅರವಿಂದ್-ಗಣೇಶರಲ್ಲದೇ ಈ ನಿಮ್ಮ ಪ್ರೀತಿಯ ರಾಮ್ ಯಾರು?
ಈ ಮಾತು ನಾಗತಿಹಳ್ಳಿಯವರ ಅಮೆರಿಕಾ ಅಮೆರಿಕ 2 ರ ಬಗ್ಗೆ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. 25 ವರ್ಷಗಳ ಬಳಿಕ ಅಮೆರಿಕಾದಲ್ಲಿ ನ ಹೊಸ ತಲೆಮಾರು (ಅಮೆರಿಕಕ್ಕೆ ಹೋಗಿ ನೆಲೆಸಿದ ಕನ್ನಡಿಗರ/ಭಾರತೀಯರ ಮಕ್ಕಳು)ಗಳ ಕತೆಯನ್ನು ಹೇಳುತ್ತಾರೋ? ಅಥವಾ ಭಾಷೆ, ಸಂಸ್ಕೃತಿ, ಬದುಕಿನ ಮಧ್ಯೆ ಸಿಲುಕಿರುವ ಹಳೆಯ ತಲೆಮಾರು ಹಾಗೂ ಹೊಸ ತಲೆಮಾರುಗಳ ಅಸ್ತಿತ್ವ ಹಾಗೂ ಆಯ್ಕೆಗಳ ನಡುವಿನ ದ್ವಂದ್ವವನ್ನು ಹೇಳಲು ಬಯುಸುತ್ತಾರೋ ಎಂಬುದನ್ನು ತಿಳಿಯುವ ಕಾತುರ ಎಲ್ಲರಲ್ಲಿದೆ.
ಅಮೆರಿಕಾ ಅಮೆರಿಕ 2 ರಲ್ಲಿ ಪೃಥ್ವಿ ಅಂಬರ್, ಶಾನ್ವಿ ಶ್ರೀ ವಾಸ್ತವ, ನಿರೂಪ್ ಭಂಡಾರಿ ಮತ್ತಿತರರು ನಾಗತಿಹಳ್ಳಿಯವರೊಂದಿಗೆ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ ಅಮೆರಿಕದಲ್ಲಿ. ಬಹುತೇಕ ಚಿತ್ರೀಕರಣ ಮುಗಿಯುವ ಹಂತದಲ್ಲಿದೆಯಂತೆ. ಇದಕ್ಕೂ ಮನೋಮೂರ್ತಿಯವರೇ ಸಂಗೀತ ಒದಗಿಸಲಿದ್ದಾರಂತೆ.
Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !
25 ವರ್ಷಗಳಲ್ಲಿ ಅಮೆರಿಕವೂ ಬದಲಾಗಿದೆ, ಭಾರತವೂ ಬದಲಾಗಿದೆ. ಸಾಕಷ್ಟು ಮೂಲ ಸೌಕರ್ಯ, ಸಂಪರ್ಕಗಳು ಅಭಿವೃದ್ಧಿಗೊಂಡಿವೆ. ಇಂಥ ಹೊತ್ತಿನಲ್ಲಿ ಮತ್ತೊಂದು ಅಲೆಯನ್ನು ಎಬ್ಬಿಸುತ್ತದೆಯೇ ಅಮೆರಿಕಾ ಅಮೆರಿಕ 2 ? ಗೊತ್ತಿಲ್ಲ. ಏಳಿಸಿದರೂ ಏಳಿಸಬಹುದು. ಒಟ್ಟೂ ಒಳ್ಳೆಯ ಸಿನಿಮಾಗಳ ಅಲೆ ಏಳಲಿ.